ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೆನಾಗೇವಲ್ಲಿ ಸಮೀಪದ ಕ್ವಾರೆಯಲ್ಲಿ ಜಿಲೆಟಿನ್ ಸ್ಫೋಟಗೊಂಡು ದುರಂತದ ಬಗ್ಗೆ ಜೆಡಿಎಸ್ ನಾಯಕ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಇದು ಸರ್ಕಾರದ ಶಾಮೀಲು ಮತ್ತು ಬೇಜವಬ್ದಾರಿತನ, ಅಧಿಕಾರಿಗಳ ಪ್ರೋತ್ಸಾಹದಿಂದ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಸರ್ಕಾರಕ್ಕೆ ಜನರ ಜೀವ ರಕ್ಷಣೆ ಮಾಡುವ ಜವಬ್ದಾರಿಯಿದ್ದರೆ ತನಿಖೆ ನಡೆಸಿ ಕ್ರಮಕೈಗೊಳ್ಳಲಿ, ಅದು ಬಿಟ್ಟು ಘಟನೆ ಸಂಭವಿಸಿದ ವೇಳೆ ಮಾಧ್ಯಮಗಳ ಮುಂದೆ ತಾತ್ಕಾಲಿಕ ಹೇಳಿಕೆಗಳನ್ನು ನೀಡಬೇಡಿ ಎಂದು ಸಿಎಂ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬ್ರಹ್ಮರವರ್ಷಿಣಿ ಕಲ್ಲುಕ್ವಾರಿಯಲ್ಲಿ ಅಕ್ರಮಗಣಿಗಾರಿಕೆಯ ಪರಿಶೀಲನೆಯ ನಂತರವೇ ಈ ರೀತಿಯ ಘಟನೆ ನಡೆದಿದೆ ಎಂದರೆ ಮಾಹಿತಿ ಮೊದಲೇ ಗೊತ್ತಿತ್ತು ಎಂದರ್ಥ, ಇಂತಹ ಘಟನೆಗಳಿಂದ ಅಮಾಯಕರ ಜೀವಗಳು ಬಲಿಯಾಗುತ್ತಿವೆ. ಸರ್ಕಾರದ ಜನಪ್ರತಿನಿಧಿಗಳೆ ಪ್ರತ್ಯೆಕ್ಷವಾಗಿ, ಪರೋಕ್ಷವಾಗಿ ಬೆಂಬಲ ಕೊಡುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಕಠಿಣವಾದ ಕ್ರಮಕೈಗೊಳ್ಳಬೇಕೆಂದು ಹೆಚ್ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇತ್ತೀಚೆಗೆ ರಾಜ್ಯದೆಲ್ಲೆಡೆ ಅಕ್ರಮಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಅಧಿಕಾರಿಗಳು ಹಣಕ್ಕೆ ಆಸೆಪಟ್ಟು ಹಾಗು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಕ್ರಮಗಣಿಗಾರಿಕೆಗೆ ಅನುಮತಿ ನೀಡುತ್ತಿರುವುದು ದುರಾದೃಷ್ಟಕರ ಎಂದು ಅಧಿಕಾರಿಗಳ ಮತ್ತು ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಸರ್ಕಾರ ಕೇವಲ ಹೇಳಿಕೆ ಕೊಡುವುದಲ್ಲ ಮುಂದೆ ಈ ರೀತಿಯಾಗದಂತೆ ಕಠಿಣ ಕ್ರಮಕೈಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.
ಈಗಿನ ಯಡಿಯೂರಪ್ಪ ಸರ್ಕಾರಕ್ಕೆ ಹಣಲೂಟಿ ಮಾಡುವುದೊಂದು ಬಿಟ್ಟು ಬೇರೆಯೇನೂ ಗೊತ್ತಿಲ್ಲ, ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡಬೇಕೆಂಬ ಯೋಚನೆ ಇಲ್ಲ, ಇವತ್ತಿನ ಸರ್ಕಾರದಲ್ಲಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತಹ ಅಂಶಗಳನ್ನು ಕಾಣಲು ಸಾಧ್ಯವಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸದೆ ಇರುವುದರ ಬಗ್ಗೆ ಟೀಕಿಸಿದ್ದಾರೆ.