ಯತ್ನಾಳ್‌ ವಿರುದ್ದ ಸಿಡಿದೆದ್ದ ಬಿಜೆಪಿ ನಾಯಕರು; ಏಕವಚನದಲ್ಲಿ ವಾಗ್ದಾಳಿ

ಬಿಜಾಪುರದಿಂದ ಶಾಸಕನಾಗಿದ್ದರೆ ಅದಕ್ಕೆ ಕಾರಣ ಯಡಿಯೂರಪ್ಪನವರು ಮತ್ತು ಸಂಘ ಪರಿವಾರದ ಕಾರ್ಯಕರ್ತರು. ಸಂಘಪರಿವಾರ ಅಥವಾ ಯಡಿಯೂರಪ್ಪನವರ ಕುರಿತು ಮಾತನಾಡುವ ನೈತಿಕತೆ ಇದ್ದರೆ, ಮೊದಲು ರಾಜಿನಾಮೆ ಕೊಟ್ಟು ಆಚೆ ಬಾ, ಎಂದು ಯತ್ನಾಳ್‌ ವಿರುದ್ದ ಮುರುಗೇಶ ನಿರಾಣಿ ಅವರು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್‌ ವಿರುದ್ದ ಸಿಡಿದೆದ್ದ ಬಿಜೆಪಿ ನಾಯಕರು; ಏಕವಚನದಲ್ಲಿ ವಾಗ್ದಾಳಿ

ಪಂಚಮಸಾಲಿ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರಿಸುವ ಬೇಡಿಕೆಯನ್ನಿಟ್ಟುಕೊಂಡು ಬೃಹತ್‌ ಸಮಾವೇಶ ನಡೆಸಿರುವುದು ಈಗ ರಾಜ್ಯ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಮುಖ್ಯವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರು, ಬಿಜೆಪಿ ನಾಯಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಭಾಷಣ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿದೆ.

ಯತ್ನಾಳ್‌ ಹಾಗೂ ವಿಜಯೇಂದ್ರ ಕಾಶಪ್ಪನವರ್‌ ಅವರ ಹೋರಾಟ ಕೇವಲ ರಾಜಕೀಯ ಪ್ರೇರಿತ ಎಂದು ಗಣಿ ಸಚಿವರಾದ ಮುರುಗೇಶ ನಿರಾಣಿ ಅವರು ಆರೋಪಿಸಿದ್ದಾರೆ. ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಿರಾಣಿ ಅವರು, ಯತ್ನಾಳ್‌ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“60 ವರ್ಷದಿಂದ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ದಕ್ಷಿಣ ಭಾರತದಲ್ಲಿ ಏಕೈಕ ಬಿಜೆಪಿ ಸರ್ಕಾರ ರಚಿಸಿದ ವ್ಯಕ್ತಿ ಯಡಿಯೂರಪ್ಪನವರು. ಅವರ ಆಶಿರ್ವಾದದಿಂದ ನೀನು ಕೇಂದ್ರದಲ್ಲಿ ಸಚಿನಾಗಿದ್ದೆ. ಬಿಜಾಪುರದಿಂದ ಶಾಸಕನಾಗಿದ್ದರೆ ಅದಕ್ಕೆ ಕಾರಣ ಯಡಿಯೂರಪ್ಪನವರು ಮತ್ತು ಸಂಘ ಪರಿವಾರದ ಕಾರ್ಯಕರ್ತರು. ಮೊದಲು ನೀನು ರಾಜಿನಾಮೆ ಕೊಡು. ಸಂಘಪರಿವಾರ ಅಥವಾ ಯಡಿಯೂರಪ್ಪನವರ ಕುರಿತು ಮಾತನಾಡುವ ನೈತಿಕತೆ ಇದ್ದರೆ, ಮೊದಲು ರಾಜಿನಾಮೆ ಕೊಟ್ಟು ಆಚೆ ಬಾ,” ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ್‌ ಅವರು ಕಳೆದ 25 ವರ್ಷಗಳಿಂದ ಯಾರಾದರೂ ಹಿರಿಯ ಮೇಲೆ ವಾಗ್ದಾಳಿ ಮಾಡುತ್ತಾ ಬಂದಿದ್ದಾರೆ. ಬೇರೆ ಪಕ್ಷಗಳ ನಾಯಕರನ್ನು ಟೀಕೆ ಮಾಡಿದ್ದಕ್ಕಿಂತ ಹೆಚ್ಚಾಗಿ ಅವರು ಬಿಜೆಪಿ ನಾಯಕರ ಮೇಲೆ ಟೀಕೆ ಮಾಡಿದ್ದಾರೆ. ಇವರು ಕಾಂಗ್ರೆಸ್‌ನ ಬಿ ಟೀಮ್‌ ಆಗಿ ಕೆಲಸ ಮಾಡುತ್ತಾ ಇದ್ದಾರೆ, ಎಂದು ನಿರಾಣಿ ಆರೋಪಿಸಿದ್ದಾರೆ.

“ನಾವು ರಾಜಿನಾಮೆ ಕೊಡಬೇಕು ಎಂದು ಅವರು ಕೇಳಿದ್ದಾರೆ. ನಾವು ಶಾಸಕರಾಗಿದ್ದು ಕ್ಷೇತ್ರದ ಜನತೆಯ ಆಶಿರ್ವಾದದಿಂದ. ನಾವು ಸಚಿವರಾಗಿದ್ದು ರಾಜ್ಯ ಮತ್ತು ಕೇಂದ್ರ ಹೈಕಮಾಂಡ್‌ ಕಾರಣದಿಂದ. ಶಾಸಕ ಸ್ಥಾನದ ರಾಜಿನಾಮೆಯನ್ನು ನಮ್ಮ ಮತದಾರರು ಕೇಳಲಿ. ಸಚಿವ ಸ್ಥಾನದ ರಾಜಿನಾಮೆಯನ್ನು ಮುಖ್ಯಮಂತ್ರಿ ಕೇಳಲಿ. ಇವರಯ ಯಾರು ನಮ್ಮ ರಾಜಿನಾಮೆ ಕೇಳಲು? ಪಕ್ಷೇತರನಾಗಿ ಆರಿಸಿ ಬರಲು ಎಷ್ಟು ಜನರ ಕಾಲಿಗೆ ಬಿದ್ದಿದ್ದೆ ಎಂಬುದನ್ನು ನೆನಪು ಮಾಡ್ಕೋ. ಯಡಿಯೂರಪ್ಪನವರ, ಪಕ್ಷದ ಆಶಿರ್ವಾದ ಇಲ್ಲದೇ ಗೆಲ್ಲುವ ವಿಶ್ವಾಸ ಇದೆಯಲ್ಲಾ. ರಾಜಿನಾಮೆ ಕೊಡು. ಆಚೆ ಬಂದು ಗೆದ್ದು ಆಮೇಲೆ ಮಾತನಾಡು.”

ವಿಜಯಾನಂದ ಕಾಶಪ್ಪನವರ್‌ ಅವರ ಅಪ್ಪ ಪಂಚಮಸಾಲಿ ಸಮಾಜದ ಅಧ್ಯಕ್ಷರಾಗಿದ್ದು, ಸರ್ಕಾರದ ಸಚಿವರೂ ಆಗಿದ್ದರೂ, ಆಗ ಯಾಕೆ ಈ ಕಲಸ ಮಾಡಿಲ್ಲ. ಅವಾಗ ಎಲ್ಲಿ ಹೋಗಿತ್ತು ನಿನ್ನ ಬಾರುಕೋಲು? ಅವಾಗ ಎಲ್ಲಿ ಹೋಗಿತ್ತು ನಿನ್ನ ಪಾದಯಾತ್ರೆ? ಸ್ವಲ್ಪ ಮೈಮೇಲೆ ಜ್ಞಾನ ಇಟ್ಕೊಂಡು ಮಾತನಾಡಬೇಕು, ಎಂದು ಕಿಡಿಕಾರಿದ್ದಾರೆ

2ಎ ಪ್ರವರ್ಗಕ್ಕೆ ಸೇರಿಸಲು ಅದರದ್ದೇ ಆದ ಪ್ರಕ್ರಿಯೆಗಳಿವೆ. ಆ ಪ್ರಕ್ರಿಯೆಗಳು ಮುಗಿಯುವವರೆಗೂ ಕಾಯಬೇಕಿದೆ, ಎಂದು ಹೋರಾಟಗಾರರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ನಿರಾಣಿ ಅವರು ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಇನ್ನೋರ್ವ ಸಚಿವ ಸಿ ಸಿ ಪಾಟೀಲ ಅವರು, ಅರ್ಥಪೂರ್ಣವಾಗಿ ನಡೆಯಬೇಕಾದ ಸಮಾರಂಭವನ್ನು ಕೆಲವು ವ್ಯಕ್ತಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಪಂಚಮಸಾಲಿ ಸಮಾಜವನ್ನು ದುರ್ಬಳಕೆ ಮಾಡಿಕೊಂಡಿರುವುದು ನಿಜಕ್ಕೂ ದುರದೃಷ್ಟಕರ. ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗಿದೆ, ಎಂದಿದ್ದಾರೆ.

“2ಎ ಪ್ರವರ್ಗಕ್ಕೆ ಪಂಚಮಸಾಲಿ ಸಮಾಜವನ್ನು ಸೇರಿಸುವುದು ಸಮಾವೇಶದ ಉದ್ದೇಶವಾಗಿತ್ತು. ಮುಖ್ಯಮಂತ್ರಿಗಳು ಹಿಂದುಳಿದ ವರ್ಗಗಳ ಆಯೋಗಕ್ಕೆ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಕುರಿತು ಅಧ್ಯಯ ನಡೆಸುವಂತೆ ಸೂಚಿಸಿದ್ದಾರೆ. ಪಂಚಮಸಾಲಿ ಸಮಾಜಕ್ಕೆ ಅದರದ್ದೇ ಗೌರವ ಇದೆ. ಆದರೆ, ಇದರ ಪರಿವೇ ಇಲ್ಲದೇ ಸಮಾವೇಶದಲ್ಲಿ ಮಾತನಾಡಿದ್ದು, ಸಮಾಜಕ್ಕೆ ಗೌರವ ತರುವಂತದ್ದು ಅಲ್ಲ,” ಎಂದಿದ್ದಾರೆ.

ವಿಜಯಾನಂದ ಕಾಶಪ್ಪನವರ್‌ ಅವರೇ, ತಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಈ ಸಮಾಜಕ್ಕೆ ನೀಡಿದ ಕೊಡುಗೆ ಏನು? ಯಡಿಯೂರಪ್ಪನವರು ಪಂಚಮಸಾಲಿ ಸಮಾಜವನ್ನು 3ಬಿ ವರ್ಗಕ್ಕೆ ಸೇರಿಸಿದ್ದಾರೆ. ನಿನ್ನೆ ನಡೆದ ಕೆಲವು ಘಟನೆಗಳು ದುರದೃಷ್ಟಕರ. ಯಡಿಯೂರಪ್ಪನವರು ಈ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಯಾರೂ ಮರೆಯಬಾರದು, ಎಂದು ಸಿಎಂ ಪರ ಸಿ ಸಿ ಪಾಟೀಲ ಅವರು ಬ್ಯಾಟ್‌ ಬೀಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com