ವಿಶಿಷ್ಟ ಸಂಸ್ಕೃತಿಯ ಪುಟ್ಟ ಜಿಲ್ಲೆ ಕೊಡಗು ತನ್ನ ಪ್ರಕೃತಿ ಸೌಂದರ್ಯದಿಂದ ಹೆಸರುವಾಸಿ ಆಗಿದೆ. ಇದೇ ಕಾರಣದಿಂದ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದ್ದು, ಕೊಡಗನ್ನು ಸರ್ಕಾರ ಪ್ರವಾಸೀ ಜಿಲ್ಲೆ ಎಂದೇ ಘೋಷಿಸಿದೆ. ಬಹುಶಃ ರಾಜ್ಯ ರಾಜಧಾನಿಗೆ ಅತ್ಯಂತ ಸಮೀಪದ ಗಿರಿಧಾಮವೂ ಇದಾಗಿರುವುದರಿಂದ ಅಲ್ಲಿಂದ ವೀಕೆಂಡ್ ಕಳೆಯಲು ಬರುವ ಐಟಿಬಿಟಿ ಉದ್ಯೋಗಿಗಳ ಸಂಖ್ಯೆ ನೂರಾರು ಆಗಿದೆ. ಜಿಲ್ಲೆಯ ಎಲ್ಲ ಭಾಗದಲ್ಲೂ ಇದೀಗ ಹೋಂ ಸ್ಟೇ ಗಳ ಸಂಖ್ಯೆ ಹೆಚ್ಚಾಗಿದ್ದು ಪ್ರವಾಸೋದ್ಯಮ ದಾಪುಗಾಲಿಡುತ್ತಾ ಸಾಗಿದೆ.
ಈ ಪ್ರವಾಸಿ ಜಿಲ್ಲೆಯಲ್ಲಿ ಎಲ್ಲಿ ಹೋದರೂ ಹಚ್ಚ ಹಸಿರಿನ ಕಾಫಿ ತೋಟಗಳು ನಿಮ್ಮ ಕಣ್ಮುಂದೆ ಬರುತ್ತವೆ. ಇಲ್ಲಿನ ದಟ್ಟಾರಣ್ಯಗಳಲ್ಲಿ ಅಸಂಖ್ಯಾತ ಮೊಲ ,ಜಿಂಕೆ , ಕಾಡು ಹಂದಿ, ಸೀಮಿತ ಪ್ರಮಾಣದ ಹುಲಿ ,ಚಿರತೆ ವಾಸಿಸುತ್ತಿವೆ. ಜಿಲ್ಲೆಯ ಗಡಿಗೆ ತಾಗಿಕೊಂಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವೈವಿದ್ಯಮಯ ಕಾಡು ಪ್ರಾಣಿಗಳ ಅವಾಸಸ್ಥಾನ ಆಗಿದೆ.
ಆದರೆ ಈ ಉದ್ಯಾನವನದ ಸುತ್ತ ಮುತ್ತ ವಾಸಿಸುವ ಕೃಷಿಕರದ್ದು ಗೋಳಿನ ಬದುಕು ಆಗಿದೆ. ಏಕೆಂದರೆ ದಕ್ಷಿಣ ಕೊಡಗಿನ ಅನೇಕ ಗ್ರಾಮಗಳಲ್ಲಿ ನಿತ್ಯವೂ ಕಾಡಾನೆಗಳ ಕಾಟ ಅಧಿಕವಾಗಿದೆ. ವರ್ಷವಿಡೀ ಬೆಳೆದ ಬೆಳೆಯನ್ನು ಕಾಡಾನೆಗಳ ಹಿಂಡೊಂದು ಕೇವಲ ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತಿದೆ. ಅರಣ್ಯ ಇಲಾಖೆಗೆ ನಷ್ಟ ಪರಿಹಾರಕ್ಕಾಗಿ ಅರ್ಜಿ ಹಾಕಿದರೆ ಅಲೆದಾಡಿಸಿ ಮೂರು ಕಾಸಿನ ಪರಿಹಾರ ಕೊಡುತ್ತಾರೆ ಎಂದು ರೈತರು ಆರೋಪಿಸುತ್ತಾರೆ. ಕಾಡಾನೆಗಳ ಕಾಟದ ನಡುವೆಯೂ ಹೇಗೋ ಬದುಕೋಣ ಎಂದು ಕೊಂಡರೆ ಈಗ ಹುಲಿಗಳ ಕಾಟದಿಂದಾಗಿ ಗ್ರಾಮಸ್ಥರು ಜಾನುವಾರುಗಳನ್ನೂ ಸಾಕಲಾರದ ಪರಿಸ್ಥಿತಿ ಬಂದೊದಗಿದೆ. ಒಂದೆಡೆ ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿದಿರುವ ಈ ಸಂದರ್ಭದಲ್ಲಿ ಹೈನುಗಾರಿಕೆಯಲ್ಲಿ ತೊಡಗುವುದರಿಂದ ಮತ್ತು ಅದಕ್ಕೆ ಜಿಲ್ಲೆಯಲ್ಲಿ ವಿಫುಲ ಅವಕಾಶವೂ ಇರುವುದರಿಂದ ರೈತರ ಆರ್ಥಿಕ ಗುಣಮಟ್ಟ ಉತ್ತಮಪಡಿಸಿಕೊಳ್ಳಬಹುದಾಗಿದೆ. ಆದರೆ ಈಗ ಹುಲಿ ಕಾಟದಿಂದಾಗಿ ಜಾನುವಾರುಗಳು ಸಾವನ್ನಪ್ಪುತ್ತಿವೆ. ಸಮಸ್ಯೆಯಾಗಿದೆ.
ಆದರೆ ಇದೀಗ ಹುಲಿಯು ರೈತರ ಜೀವವನ್ನೆ ಬಲಿತೆಗೆದುಕೊಂಡಿದೆ. ಕಳೆದ 14 ಘಂಟೆಗಳ ಅವಧಿಯಲ್ಲಿ ಇಬ್ಬರು ಅಮಾಯಕರು ಹುಲಿ ದಾಳಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದ ರೈತರು , ಕಾರ್ಮಿಕರು ತೀವ್ರ ಆತಂಕಗೊಂಡಿದ್ದಾರೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಬಳಿಯ ಕುಮಟೂರು ಗ್ರಾಮದಲ್ಲಿ ಹುಲಿ ದಾಳಿಗೆ 14 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಇದರಿಂದ ದಕ್ಷಿಣ ಕೊಡಗಿನಾದ್ಯಂತ ನಿರಂತರವಾಗಿ ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಹುಲಿ, ಇದೀಗ ನರಬಲಿ ಪಡೆದುಕೊಂಡಿದೆ.
ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಯ್ಯಪ್ಪ, ಕಾಫಿ ತೋಟದಲ್ಲಿ ಸೌದೆಗಾಗಿ ತೆರಳಿದ ಸಂದರ್ಭದಲ್ಲಿ ಸಂಜೆ ತೋಟದಲ್ಲಿ ಎದುರಾದ ಹುಲಿಯು ಬಾಲಕನ ಮೇಲೆರಗಿ ದಾಳಿ ನಡೆಸಿ, ಸ್ಥಳದಲ್ಲೇ ಕೊಂದು ಹಾಕಿರುವ ಎಲ್ಲಾ ಕುರುಹುಗಳು ಲಭ್ಯವಾಗಿದೆ. ಇದೇ ಗ್ರಾಮದಲ್ಲಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಶನಿವಾರ ಗ್ರಾಮ ವಾಸ್ತವ್ಯ ಹೂಡಿದ್ದು, ಈ ಸಂದರ್ಭ ಸ್ಥಳೀಯರು ಹುಲಿ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು. ಸಭೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆ ಹಿಡಿಯುವ ಭರವಸೆ ನೀಡಿದ್ದರು. ಆದರೆ, ಶನಿವಾರ ಸಂಜೆಯೇ ಹುಲಿ ಬಾಲಕನನ್ನು ಬಲಿ ಪಡೆದುಕೊಂಡಿದೆ. ಪುನಃ ಭಾನುವಾರ ಬೆಳಿಗ್ಗೆ ಅದೇ ಹುಲಿ ಟಿ ಶೆಟ್ಟಿಗೇರಿ ಗ್ರಾಮದಲ್ಲಿ ಕಾರ್ಮಿಕ ಮಹಿಳೆ ಚಿಣ್ಣಿ (60) ಎಂಬುವವರನ್ನು ಬಲಿ ಪಡೆದಿದೆ.
14 ಗಂಟೆಗಳ ಒಳಗೆಯೇ ಹುಲಿ ದಾಳಿಗೆ ಇಬ್ಬರು ಬಲಿಯಾಗಿರುವುದು ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈ ಹಿಂದೆ ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದರೂ ಇಲಾಖೆ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದು ನೂರಾರು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಬಂದ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ ಹೀರಾಲಾಲ್ ಅವರು ಪ್ರತಿಭಟನಾನಿರತ ರೈತರನ್ನು ಸಮಾಧಾನ ಪಡಿಸಿದ್ದು ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ತಿಳಿಸಿದರು. ಅಲ್ಲದೆ ಹುಲಿಯು ಸೆರೆ ಸಿಕ್ಕದಿದ್ದರೆ ಕೊಲ್ಲಲೂ ಆದೇಶಿಸುವುದಾಗಿ ತಿಳಿಸಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂತೆಗೆದುಕೊಂಡರು. ಇಂದು ಶ್ರೀಮಂಗಲ ಪಟ್ಟಣದಲ್ಲಿ ಹುಲಿ ಸೆರೆಗೆ ಒತ್ತಾಯಿಸಿ ಕೆಲ ಕಾಲ ಬಂದ್ ಅಚರಿಸಲಾಗಿತ್ತು. ಇತ್ತ ಮತ್ತಿಗೋಡು ಶಿಬಿರದಿಂದ ಸಾಕಾನೆಗಳನ್ನು ಕರೆಸಿಕೊಳ್ಳಲಾಗಿದ್ದು ಅಭಿಮನ್ಯು, ಗೋಪಾಲಸ್ವಾಮಿ ಎಂಬ ಎರಡು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಸುಮಾರು 50 ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.