2ಎ ಮೀಸಲಾತಿಗೆ ಒತ್ತಾಯಿಸಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ

ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ದೊರೆಯುವವರೆಗೂ ಪೀಠಕ್ಕೆ ಮರಳುವುದಿಲ್ಲ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ
2ಎ ಮೀಸಲಾತಿಗೆ ಒತ್ತಾಯಿಸಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ

ವರ್ಗ 2ಎ ಮೀಸಲಾತಿಗೆ ಒತ್ತಾಯಿಸಿ ಬೃಹತ್‌ ಪಾದಯಾತ್ರೆ ನಡೆಸಿದ ಲಿಂಗಾಯತ ಪಂಚಮಸಾಲಿ ಸಮುದಾಯವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಮಹಾರ‍್ಯಾಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಿದೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ 38 ದಿನಗಳ ಪಾದಯಾತ್ರೆ ಶನಿವಾರ ಅಂತಿಮಗೊಂಡಿದ್ದು, ನಗರದ ಅರಮನೆ ಮೈದಾನದಲ್ಲಿ ಭಾನುವಾರದಂದು ಮಹಾರ‍್ಯಾಲಿ ಮೂಲಕ ಮುಕ್ತಾಯಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಮಾವೇಶದ ನೇತೃತ್ವ ವಹಿಸಿದ್ದಾರೆ. ಸಚಿವ ಮುರುಗೇಶ ನಿರಾಣಿ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಅನಿಲ ಬೆನಕೆ, ಶಿವಾನಂದ ಪಾಟೀಲ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿದ್ದಾರೆ.

ಶಾಸಕ‌ ಬಸನಗೌಡ ಪಾಟೀಲ ಯತ್ನಾಳ ಅವರು ಖಡ್ಗ ಝಳಪಿಸುವ ಮೂಲಕ ಪಂಚಮಸಾಲಿ ಸಮಾವೇಶವನ್ನು ಉದ್ಘಾಟಿಸಿದ್ದಾರೆ.

ಈ ವೇಳೆ ಮಾತನಾಡಿದ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ದೊರೆಯುವವರೆಗೂ ಪೀಠಕ್ಕೆ ಮರಳುವುದಿಲ್ಲ ಎಂದು ಹೇಳಿದ್ದಾರೆ.

2ಎ ಮೀಸಲಾತಿಗೆ ಒತ್ತಾಯಿಸಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ
ಸದ್ಯದ ಮೀಸಲಾತಿ ಮೇಲಾಟದ ಹಿಂದಿರುವ ಅಸಲೀ ಹಿತಾಸಕ್ತಿಗಳೇನು?

ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಿ ಮಾತನಾಡಿದ ಅವರು, 'ಪಂಚಮಸಾಲಿ ಸಮುದಾಯಕ್ಕೆ ನಿಗಮ, ಅನುದಾನ ಯಾವುದೂ ಬೇಡ. ಹಿಂದುಳಿದ ವರ್ಗಗಳ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಮಾತ್ರ ಬೇಕು. ಸಮಾವೇಶ ಮುಗಿಯುವುದರೊಳಗೆ ಸರ್ಕಾರದ ಕಡೆಯಿಂದ ಪೂರಕ ಸಂದೇಶ ಬರಲಿದೆ ಎಂಬ ನಿರೀಕ್ಷೆ ಇದೆ. ಅದು ಆಗದಿದ್ದರೆ ವಿಧಾನಸೌಧದ ಎದುರು ಧರಣಿ ಆರಂಭಿಸುತ್ತೇವೆ. ಅದಕ್ಕೂ ಮಣಿಯದಿದ್ದರೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಘೋಷಿಸಿದ್ದಾರೆ.

ಎಚ್.ಡಿ. ‌ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಮುದಾಯಕ್ಕೆ ಮೀಸಲಾತಿ ನೀಡಿದರು. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಹಲವು ಸಮುದಾಯಗಳಿಗೆ ಮೀಸಲಾತಿ ಕೊಟ್ಟರು. ಪಂಚಮಸಾಲಿ ಸಮುದಾಯಕ್ಕೆ ಯಡಿಯೂರಪ್ಪ ಅವರಲ್ಲದೇ ಬೇರೆ ಯಾರು ಮೀಸಲಾತಿ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

2ಎ ಮೀಸಲಾತಿಗೆ ಒತ್ತಾಯಿಸಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ
ಜಾತಿ ರಾಜಕಾರಣದ ಫಲಶೃತಿ: ಅಧಿಕಾರಸ್ಥರಿಗೆ ಉರುಳಾದ ಮೀಸಲಾತಿ!

ಮಾತುಕತೆಗೆ ಸ್ವಾಮೀಜಿಗಳನ್ನು ಆಹ್ವಾನಿಸುತ್ತೇವೆ: ಗೃಹಸಚಿವ ಬಸವರಾಜ್‌ ಬೊಮ್ಮಾಯಿ

2ಎ ಮೀಸಲಾತಿಗೆ ಲಿಂಗಾಯತ ಪಂಚಮಸಾಲಿ ಸಮುದಾಯದ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಜತೆ ಮಾತನಾಡಿದ್ದೇವೆ ಎಂದು ಗೃಹ , ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗ ಸಭೆ ನಡೆಸಿ ಈ ಬಗ್ಗೆ ಸಮಾಲೋಚಿಸಲಿದೆ. ಸಂವಿಧಾನದ ಪ್ರಕಾರ ಆಯೋಗದ ಮೂಲಕವೇ ಶಿಫಾರಸು ಬರಬೇಕು. ಈ ಮಧ್ಯೆ ಇಂದು ಪಂಚಮಸಾಲಿ ಸಮಾವೇಶ ನಡೆಯುತ್ತಿದೆ. ಸ್ವಾಮೀಜಿಗಳ ಜತೆ ಈಗಾಗಲೇ ಮಾತಾಡಿದ್ದೇವೆ. ಸರ್ಕಾರದ ಕ್ರಮಗಳ ಕುರಿತು ಸ್ವಾಮಿಜಿಗಳಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇಂದು ಸಮಾವೇಶದಲ್ಲೂ ಈ ವಿಚಾರ ಹೇಳುತ್ತೇವೆ. ಸರ್ಕಾರ ಇದುವರೆಗೆ ಕೈಗೊಂಡ ಕ್ರಮಗಳ ಬಗ್ಗೆ ಮನವರಿಕೆ ಮಾಡುವ ಮೂಲಕ ಮಾತುಕತೆಗೆ ಬನ್ನಿ ಅಂತ ಸ್ವಾಮೀಜಿಗಳನ್ನು ಆಹ್ವಾನಿಸುತ್ತೇವೆ. ಸಿಎಂ ಯಡಿಯೂರಪ್ಪ ಇದೇ ಮಾತನ್ನು ಹೇಳಿದ್ದಾರೆ. ಮುಂದಿನ‌ ದಿನಗಳಲ್ಲಿ ಮಾತುಕತೆ ಮೂಲಕ ನಡೆಸಬೇಕಾದ ಪ್ರಕ್ರಿಯೆ ಕುರಿತು ಚರ್ಚೆ ಮಾಡೋಣ ಎಂಬುದು ಸಿಎಂ ನಿಲುವು ಎಂದು ಬೊಮ್ಮಾಯಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com