ದೇಶದ ಜನರ ಭಾವನೆಗಳಿಗೆ ಬಿಜೆಪಿ ನಾಯಕರು ಅನ್ಯಾಯ ಮಾಡುತ್ತಿದ್ದಾರೆ, ದೇಶದ ಒಬ್ಬ ಸಾಮಾನ್ಯ ನಾಗರೀಕನಾಗಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹ ಮಾಡಿದ್ದ ಹಣದ ಲೆಕ್ಕ ಕೊಡಿ ಅಂತ ಕೇಳಿದ್ದೇನೆ. ಸಾರ್ವಜನಿಕರ ಹಣದ ಲೆಕ್ಕ ಕೇಳೋದ್ರಲ್ಲಿ ತಪ್ಪೇನಿದೆ? ಲೆಕ್ಕ ಕೊಡೋದು ಹಣ ಸಂಗ್ರಹಿಸಿದವರ ಕರ್ತವ್ಯ ಅಲ್ಲವೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮೂರಿನಲ್ಲಿ ನಾನು ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇನೆ. ದೇವರ ಬಗ್ಗೆ ನಮಗೂ ಭಕ್ತಿ ಇದೆ, ನಮ್ಮ ಶ್ರದ್ಧೆ, ನಂಬಿಕೆಗಳು ವೈಯಕ್ತಿಕ ವಿಚಾರಗಳಾಗಿರಬೇಕೇ ಹೊರತು ರಾಜಕೀಯ ಅಸ್ತ್ರಗಳಾಗಬಾರದು. ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭ ಪಡೆಯಲು ಹೊರಟಿರುವುದು ನಾಚಿಕೆಗೇಡು ಎಂದು ಅವರು ಹೇಳಿದ್ದಾರೆ.
ಕರೋನಾ ಸೋಂಕು ರಾಜ್ಯದಲ್ಲಿ ಮತ್ತೊಮ್ಮೆ ವ್ಯಾಪಕವಾಗಿ ಹರಡುವ ಆತಂಕ ಎದುರಾಗಿದೆ. ಈ ಬಾರಿಯಾದರೂ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸದೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕರೋನಾ ನಿರ್ವಹಣೆ ಭ್ರಷ್ಟಾಚಾರ ನಡೆಸಲು ಸಿಗುವ ಸುವರ್ಣಾವಕಾಶ ಎಂಬ ಬಿಜೆಪಿ ನಾಯಕರ ಮನಸ್ಥಿತಿ ಮೊದಲು ಬದಲಾಗಬೇಕು ಎಂದು ಹೇಳಿದ್ದಾರೆ.
ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ವಾಹನ ಸವಾರರ ಮೇಲಷ್ಟೇ ಅಲ್ಲ ದೇಶದ ಪ್ರತಿ ನಾಗರೀಕನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ದಿನ ಬಳಕೆಯ ವಸ್ತುಗಳು, ಪ್ರಯಾಣ ದರ, ಉತ್ಪಾದನಾ ವೆಚ್ಚ ಹೀಗೆ ಎಲ್ಲಾ ವಿಧದಲ್ಲೂ ಜನಸಾಮಾನ್ಯರ ಮೇಲೆ ಹೊರೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದ ಅಚ್ಚೇ ದಿನ್ ಅಂದ್ರೆ ಇದೇನಾ? ಎಂದು ಅವರು ಪ್ರಶ್ನಿಸಿದ್ದಾರೆ.