ಎರಡು ಗಡಿ ರಾಜ್ಯಗಳಲ್ಲಿ ಹೆಚ್ಚಿದ ಕರೋನಾ -ಕರ್ನಾಟಕದಲ್ಲಿ ಲಾಕ್‌ಡೌನ್‌ ಇಲ್ಲ, ಭದ್ರತೆಗೆ ಮುಂದಾದ ಸರ್ಕಾರ

ಎರಡು ಗಡಿ ರಾಜ್ಯಗಳಲ್ಲಿ ಹೆಚ್ಚಿದ ಕರೋನಾ -ಕರ್ನಾಟಕದಲ್ಲಿ ಲಾಕ್‌ಡೌನ್‌ ಇಲ್ಲ, ಭದ್ರತೆಗೆ ಮುಂದಾದ ಸರ್ಕಾರ

ಕೇರಳ, ಮಹಾರಾಷ್ಟ್ರದಿಂದ ಬರುವ ವಿಮಾನ ಪ್ರಯಾಣಿಕರು ಆರ್‌ಟಿಪಿಸಿಆರ್‌ ನೆಗೆಟಿವ್‌ ಸರ್ಟಿಫಿಕೇಟ್‌ ಕಡ್ಡಾಯವಾಗಿ ಹೊಂದಿರಬೇಕು

ನೆರೆಯ ರಾಜ್ಯ ಕೇರಳ, ಮಹಾರಾಷ್ಟ್ರದಲ್ಲಿ ಕರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ರಾಜ್ಯ ಸರ್ಕಾರ ಸೂಕ್ತ ಭದ್ರತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿರುವುದರಿಂದ ಲಾಕ್‌ ಡೌನ್‌ ಮಾಡುವ ಚಿಂತನೆಯಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್‌ ತಿಳಿಸಿದ್ದಾರೆ. ಆದರೆ ಜನರು ಜಾಗೃತರಾಗಿ ನಿಯಮಗಳನ್ನು ಅನುಸರಿಸುವ ಮುಖೇನ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದಿದ್ದಾರೆ.

ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ಮಾಡಲು ಫೆಬ್ರುವರಿ 20 ರಂದು ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಲಾಗಿದೆ ಎಂದು ಸಚಿವ ಸುಧಾಕರ್‌ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ 4 ಸಾವಿರದಿಂದ 5 ಸಾವಿರ ಪ್ರಕರಣಗಳು, ಮಹಾರಾಷ್ಟ್ರದಲ್ಲಿ 5 ಸಾವಿರದಿಂದ 6 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಈ ಸಂಬಂಧ ರಾಜ್ಯದ ಗಡಿಜಿಲ್ಲೆಗಳಲ್ಲಿ ಎಚ್ಚರವಹಿಸಿ ಸೂಕ್ತ ಭದ್ರತೆಗೆ ಆರೋಗ್ಯ ಇಲಾಖೆ ಮುಂದಾಗಿದೆ ಎಂದಿದ್ದಾರೆ.

ಕೇರಳ ಮಹಾರಾಷ್ಟ್ರದಿಂದ ಬರುವ ವಿಮಾನ ಪ್ರಯಾಣಿಕರು ಆರ್‌ಟಿಪಿಸಿಆರ್‌ ನೆಗೆಟಿವ್‌ ಸರ್ಟಿಫಿಕೇಟ್‌ ಕಡ್ಡಾಯವಾಗಿ ಹೊಂದಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ಮಾಡಿ ಒಳಗಡೆ ಬಿಡಬೇಕು. ಇನ್ನೂ ಹೆಚ್ಚಿನ ಭದ್ರತೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com