ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ – ಹೆಚ್‌ ಡಿ ಕುಮಾರಸ್ವಾಮಿ

ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿಕ್ಕಿದೆ. ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ. ಅದರ ಫಲವನ್ನೂ ಉಣ್ಣಲಿ, ಎಂದು ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ – ಹೆಚ್‌ ಡಿ ಕುಮಾರಸ್ವಾಮಿ

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದ ಮನೆಗಳನ್ನು ಗುರುತಿಟ್ಟುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಬಲ ಪಂಥೀಯ ಸಂಘಟನೆಗಳು ಕಿಡಿ ಕಾರಿದ್ದವು. ಇದೊಂದು ಪ್ರಚಾರದ ಗಿಮಿಕ್‌ ಎಂದು ಟೀಕಿಸಿದ್ದವು. ಈಗ ಕುಮಾರಸ್ವಾಮಿ ಅವರು ಈ ಎಲ್ಲಾ ಟೀಕೆಗಳಿಗೆ ಉತ್ತರ ನೀಡಿದ್ದಾರೆ.

“ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ಇವರಿಗೆ ನೆನಪಿರಲಿ, ದೇವರಿಗಾಗಿ ನಾವು ಮಾಡಿದಷ್ಟು ಪ್ರಾರ್ಥನೆ, ಪೂಜೆಗಳ ಮುಂದೆ, ಈ ನಕಲಿಗಳು ಮಾಡಿದ 'ಅಧಿಕಾರ ರಾಮ ಜಪ' ಕಾಲು ಭಾಗಕ್ಕೂ ಸಾಲದು,” ಎಂದು ಟ್ವೀಟ್‌ ಮಾಡಿದ್ದಾರೆ.

ಇಚ್ಛೆಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುವುದೇ ತಪ್ಪು. ಅಂಥದ್ದರಲ್ಲಿ ದೇವರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ, ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ. ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿಕ್ಕಿದೆ. ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ. ಅದರ ಫಲವನ್ನೂ ಉಣ್ಣಲಿ, ಎಂದಿದ್ದಾರೆ.

“ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ನನ್ನನ್ನು ಹಾಗೂ ನನ್ನ ಕುಟುಂಬವನ್ನು ಟೀಕೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು. ಯಾಕೆಂದರೆ, ನಾನಾಗಲಿ, ನನ್ನ ಕುಟುಂಬವಾಗಲಿ ಈಗ ದೇಶದಲ್ಲಿ ಕೆಲವರಿಂದ ನಡೆಯುತ್ತಿರುವ ಧಾರ್ಮಿಕ ಭ್ರಷ್ಟಾಚಾರದಂಥ ಕೃತ್ಯ ಮಾಡಿಲ್ಲ!” ಎಂದು ಹೆಚ್‌ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಬ್ಬರು ಹೇಳಿದ್ದಾರೆ, ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ. ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ, ಅಧಿಕಾರ, ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ, ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು. ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ, ಎಂದು ಹೆಚ್‌ಡಿಕೆ ಹೇಳಿದ್ದಾರೆ.

“ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶಿರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ. ಇತಿಹಾಸ ಹೇಳುತ್ತಾ ನಿಂತಿರುವ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ. ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಲ್ಲೇಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ.”

ಇಷ್ಟು ಹೇಳಿಯೂ ಅರ್ಥವಾಗದವರಿಗೆ ಹೇಳುವುದು ಇಷ್ಟೆ, ರಾಮಮಂದಿರ ಹಿಂದೂಗಳ ಭಕ್ತಿ, ಭಾವನೆಗಳ ಮೂರ್ತ ರೂಪ ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧವಿದೆ ಎಂದು ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com