ಕರೋನಾ ಸಾವು-ನೋವು ಕೂಡ ಸರ್ಕಾರದ ಕಣ್ಕಟ್ಟು ಆಟದಿಂದ ಹೊರತಾಗಿಲ್ಲ!

ಅಂಕಿಅಂಶಗಳನ್ನು ತಿರುಚುವ, ತಿದ್ದುವ, ಸಬ್ ಚೆಂಗಾಸಿ ಎಂದು ಜನರನ್ನು ನಂಬಿಸುವ ಸರ್ಕಾರದ ವರಸೆ ಕೇವಲ ಜಿಡಿಪಿ ದರ, ಹಣದುಬ್ಬರ ಪ್ರಮಾಣ, ದೇಶದ ಬೆಳವಣಿಗೆ ದರದಂತಹ ಆರ್ಥಿಕ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಕರೋನಾದ ಸಾವು- ನೋವಿನ ವಿಷಯದಲ್ಲಿ ಕೂಡ ಅಂತಹ ಕಣ್ಕಟ್ಟುಗಳು ಬಿರುಸಾಗಿ ನಡೆದಿವೆ
ಕರೋನಾ ಸಾವು-ನೋವು ಕೂಡ ಸರ್ಕಾರದ ಕಣ್ಕಟ್ಟು ಆಟದಿಂದ ಹೊರತಾಗಿಲ್ಲ!

ಕರೋನಾ ದೇಶಕ್ಕೆ ಕಾಲಿಟ್ಟು ಬರೋಬ್ಬರಿ ಒಂದು ವರ್ಷ ಉರುಳಿದೆ. ಈ ಒಂದು ವರ್ಷದಲ್ಲಿ ಕರೋನಾ ವೈರಸ್ ದೇಶದ ಮೇಲೆ ಬೀರಿದ ಪರಿಣಾಮ ಅಪಾರ. ನೇರವಾಗಿ ಸೋಂಕಿಗೆ ಒಳಗಾಗಿ ಸಾವು- ನೋವು ಕಂಡವರು ಒಂದು ಕಡೆಯಾದರೆ, ಕರೋನಾ ವೈರಸ್ ದೇಶದೊಳಗೆ ಬರದಂತೆ ತಡೆಯುವಲ್ಲಿ, ಲಾಕ್ ಡೌನ್ ಹೇರಿಕೆಯಲ್ಲಿ, ಜನಸಾಮಾನ್ಯರ ಜೀವದೊಂದಿಗೆ ದುಡಿಮೆಯನ್ನೂ ರಕ್ಷಿಸುವಲ್ಲಿ ಆಳುವ ಸರ್ಕಾರದ ನಿರಂತರ ಎಡವಟ್ಟುಗಳು ತಂದ ಸಾವು-ನೋವು-ನಷ್ಟಕ್ಕೆ ಲೆಕ್ಕವಿಲ್ಲ.

ಈ ಎಲ್ಲದರ ನಡುವೆ, ಇಂತಹದ್ದೊಂದು ಪರಿಸ್ಥಿತಿಯನ್ನು ಎದುರಿಸುವಲ್ಲಿ ಕೂಡ ಜನರನ್ನು ವಿಶ್ವಾಸಕ್ಕೆ ಪಡೆಯುವ, ವಾಸ್ತವಾಂಶಗಳನ್ನು ಮುಚ್ಚಿಡದೇ ಅರಿವು ಮೂಡಿಸುವ ದಿಸೆಯಲ್ಲಿ ಕೂಡ ಸರ್ಕಾರ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿಲ್ಲ ಎಂಬುದನ್ನು ಕಂಡಿದ್ದೇವೆ. ಅದು ಕರೋನಾ ಸೋಂಕಿತರು ಮತ್ತು ಸಾವು ಕಂಡವರ ಅಂಕಿಅಂಶಗಳಿರಬಹುದು, ನಡೆಸಿದ ಕರೋನಾ ಪರೀಕ್ಷೆಯ ಮಾಹಿತಿ ಇರಬಹುದು, ಲಾಕ್ ಡೌನ್ ಮತ್ತು ಸೀಲ್ ಡೌನ್ ಕುರಿತು ಸರ್ಕಾರದ ನಿರ್ಧಾರಗಳ ಹಿಂದಿನ ತರ್ಕದ ಕುರಿತ ಮಾಹಿತಿ ಇರಬಹುದು, ಇದೀಗ ಲಸಿಕೆ ಅಭಿವೃದ್ಧಿ, ವಿಶ್ವಾಸಾರ್ಹತೆ, ಲಸಿಕೆ ನೀಡಿಕೆಯ ಕುರಿತ ಮಾಹಿತಿಗಳೇ ಇರಬಹುದು,.. ಕರೋನಾ ಸೋಂಕು ಮತ್ತು ಅದರ ನಿರ್ವಹಣೆಯ ಕುರಿತ ಪ್ರತಿ ಹಂತದಲ್ಲಿಯೂ ಸರ್ಕಾರದ ಪಾರದರ್ಶಕತೆಯ ಮಟ್ಟ ಮತ್ತೆ ಮತ್ತೆ ಬಯಲಾಗುತ್ತಲೇ ಇದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನು ಲಾಕ್ ಡೌನ್ ಮತ್ತು ಅದರ ಪರಿಣಾಮದಿಂದಾಗಿ ಆದ ದೇಶದ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಸೇರಿದಂತೆ ಆರ್ಥಿಕ ಕ್ರಮಗಳಂತೂ ಶತಮಾನದ ದೊಡ್ಡ ಸುಳ್ಳಾಗಿ ದಾಖಲಾದವು. ಕಲ್ಪನಾತೀತ ಪ್ಯಾಕೇಜ್ ಘೋಷಣೆಯಾದಾಗಲೇ ದೇಶದ ಜನಸಾಮಾನ್ಯರಿಂದ ಆರ್ಥಿಕ ತಜ್ಞರವರೆಗೆ ಬಹುತೇಕರು ಇದೊಂದು ಹುಸಿ ಭರವಸೆ ಎಂದೇ ಹೇಳಿದ್ದರು. ಇದೀಗ ಪ್ರಧಾನಿ ಮೋದಿಯವರ ಹೆಮ್ಮೆಯ ಆ ಆತ್ಮನಿರ್ಭರ ಪ್ಯಾಕೇಜ್ ಘೋಷಣೆಯಾಗಿ ಎಂಟು ತಿಂಗಳಲ್ಲಿ, ಈವರೆಗೆ ಉದ್ದೇಶಿತ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಪುನಃಶ್ಚೇತನಕ್ಕೆ ಸರ್ಕಾರ ನೀಡಿರುವ ಒಟ್ಟು ನೆರವು ಕೇವಲ 30.84 ಕೋಟಿಯಷ್ಟೇ! ಅದೂ ಕೂಡ ಈ ಮೊತ್ತದ ಪ್ರಯೋಜನ ಪಡೆದಿರುವ ದೇಶದ ಒಟ್ಟು ಉದ್ಯಮಗಳ ಸಂಖ್ಯೆ 272 ಮಾತ್ರ! ಇದು ಸಣ್ಣ ಮತ್ತು ಮದ್ಯಮ ಉದ್ಯಮ ಸಚಿವ ನಿತಿನ್ ಗಡ್ಕರಿ ಅವರೇ ಲೋಕಸಭೆಯಲ್ಲಿ ಎರಡು ವಾರದ ಹಿಂದೆ ಬಹಿರಂಗಪಡಿಸಿದ ವಿವರ!

ಈಗ ಇಂತಹ ಹಸೀಸುಳ್ಳುಗಳ ಸರಣಿಗೆ ಕರೋನಾ ಕುರಿತ ಅಂಕಿಅಂಶಗಳೂ ಸೇರಿವೆ ಎಂಬುದನ್ನು ಸೋಂಕು ಮತ್ತು ಸಾವಿನ ಕುರಿತ ಹೊಸ ವಿವರಗಳು ಹೇಳುತ್ತಿವೆ.

ಐಸಿಎಂಆರ್ ಇತ್ತೀಚೆಗೆ ಬಿಡುಗಡೆ ಮಾಡಿದ ದೇಶದ 21 ರಾಜ್ಯಗಳ 70 ಆಯ್ದೆ ಜಿಲ್ಲೆಗಳ ಸೀರೋ ಸರ್ವೆ ವರದಿಯ ಅಂದಾಜು ಅಂಕಿಅಂಶಗಳು ಮತ್ತು ದೇಶದ ಕರೋನಾ ಸೋಂಕು-ಸಾವು ನೋವಿನ ಕುರಿತು ಪ್ರತಿನಿತ್ಯ ಕೇಂದ್ರ ಆರೋಗ್ಯ ಇಲಾಖೆಯ ಅಂಕಿಅಂಶಗಳನ್ನು ತಾಳೆ ಹಾಕಿದರೆ; ಈ ವಿಷಯದಲ್ಲಿ ಸರ್ಕಾರದ ಪಾದರ್ಶಕತೆ ಎಷ್ಟು ಎಂಬುದು ಜಗಜ್ಜಾಹೀರಾಗುತ್ತದೆ.

ಸೀರೋ ಸರ್ವೆ ಪ್ರಕಾರ, ಈಗಾಗಲೇ ದೇಶದ ಶೇ.21ರಷ್ಟು ಮಂದಿ(ಹತ್ತು ವರ್ಷ ಮೇಲ್ಪಟ್ಟವರು) ಈಗಾಗಲೇ ವಿವಿಧ ಹಂತದಲ್ಲಿ ಕರೋನಾ ಸೋಂಕಿಗೆ ಒಳಗಾಗಿದ್ದಾರೆ. ಅಂದರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 28 ಕೋಟಿ ಮಂದಿ ಕರೋನಾದ ದಾಳಿಗೆ ಒಳಗಾಗಿದ್ದಾರೆ. ವಿಪರ್ಯಾಸವೆಂದರೆ; ಸರ್ಕಾರಿ ಸಂಸ್ಥೆಯೇ ಆದ ಐಸಿಎಂಆರ್ ಸಮೀಕ್ಷೆ ಹೇಳುವ ಈ ಮಾಹಿತಿಗೆ ತದ್ವಿರುದ್ಧವಾಗಿ ಸರ್ಕಾರಿ ಇಲಾಖೆಯಾದ ಆರೋಗ್ಯ ಇಲಾಖೆ ನಿತ್ಯ ನೀಡುವ ಮಾಹಿತಿಯ ಪ್ರಕಾರ, ದೇಶದಲ್ಲಿ ಈವರೆಗೆ ಕರೋನಾ ಸೋಂಕು ದೃಢಪಟ್ಟವರ ಪ್ರಮಾಣ ಕೇವಲ 1 ಕೋಟಿ ಒಂಬತ್ತು ಲಕ್ಷದಷ್ಟು ಮಾತ್ರ! ಅದೂ ಸುಮಾರು 20 ಕೋಟಿಗೂ ಅಧಿಕ ಮಂದಿಗೆ ಈವರೆಗೆ ಕರೋನಾ ಪರೀಕ್ಷೆ ನಡೆಸಿದ ಬಳಿಕ ಪತ್ತೆಯಾಗಿರುವುದು ಕೇವಲ 1 ಕೋಟಿ ಚಿಲ್ಲರೆ ಪ್ರಕರಣ ಎಂಬುದು ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ. ಸೀರೋ ಸರ್ವೆಯ 28 ಕೋಟಿ ಸೋಂಕಿತರ ಪ್ರಮಾಣಕ್ಕೂ, ಆರೋಗ್ಯ ಇಲಾಖೆಯ ಮಾಹಿತಿಗೂ ಇರುವ ಅಜಗಜಾಂತರ ವ್ಯತ್ಯಾಸ ಗಮನಿಸಿ!

ಹಾಗೇ ಕರೋನಾ ಸಾವುಗಳ ವಿಷಯದಲ್ಲಿ ಕೂಡ ಸರ್ಕಾರದ, ಎರಡು ಸಂಸ್ಥೆಗಳ ನಡುವಿನ ಪರಸ್ಪರ ತಾಳೆಯಾಗದ ಇಂತಹ ವೈರುಧ್ಯಗಳು ಬೆಚ್ಚಿಬೀಳಿಸುತ್ತವೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ ಕರೋನಾ ಸೋಂಕಿತರ ಪೈಕಿ ಸಾವಿನ ಪ್ರಮಾಣ ಶೇ.1.52 ಮಾತ್ರ. ಅಂದರೆ, ಸೋಂಕು ದೃಢಪಟ್ಟ ನೂರು ಮಂದಿಯಲ್ಲಿ ಕೇವಲ ಒಂದೂವರೆಯಷ್ಟು ಮಂದಿ ಮಾತ್ರ ಸಾವಿಗೀಡಾಗಿದ್ದಾರೆ. ಅಂದರೆ, ಇನ್ನೂರು ಮಂದಿ ಸೋಂಕಿತರಲ್ಲಿ ಮೂವರು ಸಾವು ಕಂಡಿದ್ದಾರೆ. ಆ ಪ್ರಕಾರ, ಇಲಾಖೆಯ ಒಟ್ಟು ಸೋಂಕಿತರ ಪ್ರಮಾಣದೊಂದಿಗೆ ಈ ಸಾವಿನ ಶೇಕಡವಾರು ಪ್ರಮಾಣವನ್ನು ಲೆಕ್ಕ ಹಾಕಿ ಇಲಾಖೆ ಅಧಿಕೃತವಾಗಿ ಹೇಳುತ್ತಿರುವುದು ದೇಶದದಲ್ಲಿ ಈವರೆಗೆ ಒಟ್ಟು 1,55,900 ಮಂದಿ ಸಾವು ಕಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಹೇಳುತ್ತದೆ.

ಆದರೆ, ಸೀರೋ ಸರ್ವೆ ಅಂದಾಜಿಸಿರುವಂತೆ ದೇಶದ ಶೇ.21ರಷ್ಟು ಮಂದಿಗೆ, ಅಂದರೆ, ಸುಮಾರು 28 ಕೋಟಿ ಮಂದಿಗೆ ಸೋಂಕು ತಗುಲಿದೆ, ಅಥವಾ ಈಗಾಗಲೇ ಕರೋನಾ ಬಂದುಹೋಗಿದೆ ಎಂದಾದರೆ; ಆಗ ಹಾಗೆ ಸೋಂಕಿತರ ಪೈಕಿ ಸರ್ಕಾರದ ಮಾಹಿತಿಯಂತೆ ಶೇ.1.52 ಮಂದಿ ಸಾವು ಕಂಡಿದ್ದಾರೆ ಎಂದಾದರೆ; ಈಗಾಗಲೇ ಕರೋನಾಕ್ಕೆ ದೇಶದಲ್ಲಿ ಬಲಿಯಾದವರ ಸಂಖ್ಯೆ 43 ಲಕ್ಷಕ್ಕೂ ಅಧಿಕ! ಇದು ಕನಿಷ್ಟ ಪ್ರಮಾಣ.

ಏಕೆಂದರೆ; ಸರ್ಕಾರ ಹೇಳುತ್ತಿರುವ ಕರೋನಾ ಸಾವಿನ ಶೇಕಡವಾರು ಪ್ರಮಾಣ(ಶೇ.1.52)ದ ಬಗ್ಗೆಯೇ ಭಿನ್ನಾಭಿಪ್ರಾಯಗಳು ತಜ್ಞರ ವಲಯದಲ್ಲಿವೆ. ಜನಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆ ಪ್ರಮಾಣದ ಪರೀಕ್ಷೆ, ಅಸಮರ್ಪಕ ಮತ್ತು ದೋಷಪೂರಿತ ಪರೀಕ್ಷೆ, ಉದ್ದೇಶಪೂರ್ವಕವಾಗಿ ದೃಢ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ತೋರಿಸುವ ಮೂಲಕ ಎಲ್ಲವೂ ಚೆಂದವಿದೆ ಎಂಬ ಸರ್ಕಾರಗಳ ಧೋರಣೆ ಮುಂತಾದ ಕಾರಣಗಳಿಂದಾಗಿ ದೇಶದ ಕರೋನಾ ಪ್ರಕರಣಗಳ ಸಂಖ್ಯೆಯನ್ನು ಸರ್ಕಾರಗಳು ಅನುಕೂಲಕ್ಕೆ ತಕ್ಕಂತೆ ಬಿಂಬಿಸಿವೆ. ಅದೇ ರೀತಿ ಕರೋನಾ ಸಾವುಗಳನ್ನೂ ಕೂಡ ವಾಸ್ತವಾಂಶಗಳನ್ನು ಮುಚ್ಚಿಟ್ಟು ವರದಿ ಮಾಡಲಾಗುತ್ತಿದೆ. ಅದರಲ್ಲೂ ಕರೋನಾ ವ್ಯಾಪಕವಾಗಿದ್ದ ಅವಧಿಯಲ್ಲಿ ಆಸ್ಪತ್ರೆ ಮತ್ತು ಸ್ಥಳೀಯ ಸಂಸ್ಥೆಗಳಿಂದ ಹೊರಬರುತ್ತಿದ್ದ ಸಾವಿನ ಕುರಿತ ಅಂಕಿಅಂಶಗಳಿಗೂ, ಅದೇ ಹೊತ್ತಿಗೆ ಸ್ಮಶಾನಗಳಲ್ಲಿ ಆಗುತ್ತಿದ್ದ ಶವಸಂಸ್ಕಾರಗಳ ಲೆಕ್ಕಕ್ಕೂ ಯಾವುದೇ ತಾಳೆಯಾಗುತ್ತಿರಲಿಲ್ಲ. ಜೊತೆಗೆ ಕರೋನಾ ಪರೀಕ್ಷೆಗೇ ಒಳಗಾಗದೆ ಸಾವು ಕಂಡ ಪ್ರಕರಣಗಳು ಕೂಡ ಸಾಕಷ್ಟಿವೆ. ದೇಶದ ಶೇ.60 ರಷ್ಟು ಜನ ವಾಸ ಮಾಡುವ ಹಳ್ಳಿಗಳಲ್ಲಿ ಕರೋನಾ ತೀವ್ರವಾಗಿದ್ದ ಅವಧಿಯಲ್ಲಿ ಸಂಭವಿಸಿದ ಸಾವುಗಳ ಲೆಕ್ಕವಂತೂ ಬಹುತೇಕ ವರದಿಯಾಗಿದ್ದೇ ವಿರಳ.

ಹಾಗಾಗಿ, ಅಂಕಿಅಂಶಗಳನ್ನು ತಿರುಚುವ, ತಿದ್ದುವ, ಸಬ್ ಚೆಂಗಾಸಿ ಎಂದು ಜನರನ್ನು ನಂಬಿಸುವ ಸರ್ಕಾರದ ವರಸೆ ಕೇವಲ ಜಿಡಿಪಿ ದರ, ಹಣದುಬ್ಬರ ಪ್ರಮಾಣ, ದೇಶದ ಬೆಳವಣಿಗೆ ದರದಂತಹ ಆರ್ಥಿಕ ವಿಷಯಗಳಿಗೆ ಮಾತ್ರ ಸೀಮಿತವಾಗಿಲ್ಲ; ಬದಲಾಗಿ ಕರೋನಾದ ಸಾವು- ನೋವಿನ ವಿಷಯದಲ್ಲಿ ಕೂಡ ಅಂತಹ ಕಣ್ಕಟ್ಟುಗಳು ಬಿರುಸಾಗಿ ನಡೆದಿವೆ ಎಂಬುದನ್ನು ಸೀರೋ ಸರ್ವೆ ಮತ್ತು ಆರೋಗ್ಯ ಇಲಾಖೆಗಳ ಮಾಹಿತಿಯ ಈ ಹೋಲಿಕೆ ಬೆತ್ತಲು ಮಾಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com