ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ದತೆ

ಒಂದು ವೇಳೆ ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಒತ್ತಡ ಹೇರಿದರೆ ಕೇಂದ್ರಕ್ಕೆ ಸೆಡ್ಡು ಹೊಡೆಯಲು ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲೂ ರಾಜ್ಯ ಸರ್ಕಾರ ನಿರ್ಧರಿಸಿದೆ
ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ರಾಜ್ಯ ಸರ್ಕಾರ ಸಿದ್ದತೆ

ಕೇಂದ್ರ ಸರ್ಕಾರವು ಪರಿಸರ ಸಂರಕ್ಷಣೆಗಾಗಿ ನೇಮಿಸಿದ್ದ ಕೆ ಕಸ್ತೂರಿರಂಗನ್ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಲು ನಿರಾಕರಿಸಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದೆ. ವರದಿಯು ದೇಶದ ಪಶ್ಚಿಮ ಘಟ್ಟದಾದ್ಯಂತ ಸುಮಾರು 1,500 ಸ್ಥಳಗಳನ್ನು ಪರಿಸರ ಸೂಕ್ಷ್ಮವೆಂದು ಘೋಷಿಸಿದೆ.

ರಾಜ್ಯ ಸರ್ಕಾರದ ಉನ್ನತ ಮೂಲಗಳ ಪ್ರಕಾರ ಈಗಾಗಲೇ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಒಂದು ವೇಳೆ ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಒತ್ತಡ ಹೇರಿದರೆ ಕೇಂದ್ರಕ್ಕೆ ಸಡ್ಡು ಹೊಡೆಯಲು ಮತ್ತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್) ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲೂ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಕುರಿತು ರಾಜ್ಯ ಅರಣ್ಯ ಸಚಿವ ಅರವಿಂದ್ ಲಿಂಬಾವಳಿ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಸಂಪರ್ಕ ಸಾಧ್ಯವಾಗಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ರಾಜ್ಯ ಪರಿಸರ ವಿಜ್ಞಾನ ಸಚಿವ ಸಿ ಪಿ ಯೋಗೇಶ್ವರ ಅವರು ಈ ವಿಷಯದ ಬಗ್ಗೆ ಇನ್ನೂ ಮಾಹಿತಿ ಪಡೆಯುತಿದ್ದೇನೆ ಎಂದು ಹೇಳಿದರು. ಕಸ್ತೂರಿರಂಗನ್ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಲು ಗೋವಾ ಫೌಂಡೇಶನ್ ಎಂಬ ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಡೆಸುತ್ತಿರುವುದರಿಂದ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ನಂತರ ಫೌಂಡೇಷನ್ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ಗೆ ಕೊಂಡೊಯ್ದಿದೆ. ಸುಪ್ರೀಂ ಕೋರ್ಟು ಸಂಬಂದಿತ ರಾಜ್ಯ ಸರ್ಕಾರಗಳಿಗೆ ಈ ಕುರಿತು ನೋಟೀಸ್ ನೀಡಿದೆ.

ಈ ನಡುವೆ ಪಶ್ಚಿಮ ಘಟ್ಟದ ಅರಣ್ಯವನ್ನು ಉಳಿಸಲು ಶ್ರಮಿಸುತ್ತಿರುವ ಪರಿಸರವಾದಿಗಳು ಸರ್ಕಾರವು ಈ ರೀತಿಯ ನಿರ್ಧಾರವನ್ನು ತೆಗೆದುಕೊಂಡರೆ ಅದು ಪರಿಸರಕ್ಕೆ ವಿನಾಶಕಾರಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಮುಖ ಪರಿಸರವಾದಿ ಜೋಸೆಫ್ ಹೂವರ್, ಅವರು ಮಾತನಾಡಿ ಪೂರ್ಣ ವರದಿಯ ಅನುಷ್ಠಾನದಿಂದ ರೈತರಿಗೆ ಸ್ವಲ್ಪ ಮಟ್ಟಿನ ರಿಯಾಯ್ತಿ ನೀಡುವುದು ಸಮಂಜಸವೇ ಆದರೆ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವುದು ಮಾನವ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದರು. ರಾಜ್ಯ ಸರ್ಕಾರ ವರದಿಯನ್ನು ಅನುಷ್ಠಾನಗೊಳಿಸಲು ನಿರಾಕರಿಸುವ ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸುವುದಿಲ್ಲ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದರು. ಈಗಾಗಲೇ ದುರ್ಬಲವಾಗಿರುವ ಪರಿಸರವನ್ನು ಉಳಿಸಲು ಅಭಿವೃದ್ದಿಯು ಅಡ್ಡ ಬರಬಾರದು. ಕಸ್ತೂರಿ ರಂಗನ್ ವರದಿಯು ಈಗಾಗಲೇ ಗಾಡ್ಗೀಳ್ ವರದಿಯ ದುರ್ಬಲಗೊಳಿಸಿದ ಆವೃತ್ತಿಯಾಗಿದೆ. ವರದಿಯ ಅನುಷ್ಠಾನದ ಸಂಪೂರ್ಣ ನಿರಾಕರಣೆ ಜನರಿಗೆ ಅನ್ಯಾಯವಾಗುತ್ತದೆ ಎಂದು ಅವರು ಹೇಳಿದರು.

ದೇಶದಲ್ಲಿ ಪಶ್ಚಿಮ ಘಟ್ಟಗಳು ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ವ್ಯಾಪಿಸಿವೆ. ಕೇಂದ್ರ ಸರ್ಕಾರವು ಪರಿಸರ ವಿಜ್ಞಾನಿ ಮಾಧವ್ ಗಾಡ್ಗಿಲ್ ಅವರ ನೇತೃತ್ವದಲ್ಲಿ ಪಶ್ಚಿಮ ಘಟ್ಟದ ಪರಿಸರ ತಜ್ಞರ ಸಮಿತಿ (ಡಬ್ಲ್ಯುಜಿಇಇಪಿ) ಯನ್ನು ರಚಿಸಿತ್ತು. ಆ ಸಮಿತಿಯು 2011 ರಲ್ಲಿ ಮೊದಲ ಬಾರಿಗೆ ತನ್ನ ವರದಿಯನ್ನು ಸಲ್ಲಿಸಿತು. ವರದಿಯಲ್ಲಿ ಇಡೀ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸದಿದ್ದರೆ ಸಂಭವನೀಯ ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ವರದಿ ಎಚ್ಚರಿಕೆ ನೀಡಿತು. ಸೂಕ್ಷ್ಮ ವಲಯವನ್ನು (ಇಎಸ್ಎ) ಅನ್ನು ಸಂವೇದನಾಶೀಲತೆಯ ಮಟ್ಟವನ್ನು ಆಧರಿಸಿ ESZ1, ESZ2, ESZ3 ಎಂದು ವಿಂಗಡಿಸಲಾಗಿದೆ, ಇದರಲ್ಲಿ ESZ1 ಅತ್ಯಂತ ಸೂಕ್ಷ್ಮವಾಗಿರುತ್ತದೆ. ಪರಿಸರ ಮತ್ತು ಅರಣ್ಯ ಸಚಿವಾಲಯದ ಅಡಿಯಲ್ಲಿ ಕಾನೂನು ಪ್ರಾಧಿಕಾರವಾಗಿ ಪಶ್ಚಿಮ ಘಟ್ಟದ ಪರಿಸರ ಪ್ರಾಧಿಕಾರವನ್ನು (ಡಬ್ಲ್ಯುಜಿಇಎ) ರಚಿಸುವಂತೆ ಗಾಡ್ಗೀಲ್ ವರದಿಯು ಸೂಚಿಸಿತ್ತು.

ಆದರೆ ಗಾಡ್ಗೀಲ್ ವರದಿಯು 'ತುಂಬಾ ಪರಿಸರ ಸ್ನೇಹಿ' ಆಗಿದ್ದು ಘಟ್ಟಗಳ ವ್ಯಾಪ್ತಿಯಲ್ಲಿ ಚಹಾ ಮತ್ತು ಕಾಫಿಯಂತಹ ಎಲ್ಲಾ ವಾಣಿಜ್ಯ ಬೆಳೆಗಳನ್ನು ಬೆಳೆಯುವುದನ್ನು ನಿಷೇಧಿಸುವುದು, ಅಣೆಕಟ್ಟುಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳನ್ನು ರದ್ದು ಪಡಿಸುವುದಕ್ಕೆ ಶಿಫಾರಸು ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಯಿತು. ಅಲ್ಲದೆ ಇದು ಅನುಷ್ಠಾನಕ್ಕೆ ಯೋಗ್ಯವಲ್ಲದ ಶಿಫಾರಸುಗಳನ್ನು ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಆದರೆ 2019 ರ ಕೇರಳ ಮತ್ತು ಕರ್ನಾಟಕ ಭೂ ಕುಸಿತ ಪ್ರವಾಹದ ನಂತರ ವರದಿಯು ಚರ್ಚೆಗೆ ಗ್ರಾಸವಾಯಿತು.

ನಂತರ 2013 ರಲ್ಲಿ ವಿಜ್ಞಾನಿ ಡಾ ಕೆ ಕಸ್ತೂರಿ ರಂಗನ್ ನೇತೃತ್ವದ ಮತ್ತೊಂದು ಸಮಿತಿಯು ಪಶ್ಚಿಮ ಘಟ್ಟಗಳ ಸಂರಕ್ಷಣೆಯ ಬಗ್ಗೆ ಪರಿಷ್ಕೃತ ವರದಿಯನ್ನು ಸಲ್ಲಿಸಿತು. ಪಶ್ಚಿಮ ಘಟ್ಟದ ಸುಮಾರು 70% ನಷ್ಟು ಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಶಿಫಾರಸು ಮಾಡಿದ ಗಾಡ್ಗಿಲ್ ಸಮಿತಿಯ ವರದಿಗೆ ಹೋಲಿಸಿದರೆ, ಕಸ್ತೂರಿರಂಗನ್ ಸಮಿತಿಯ ವರದಿಯು ಪಶ್ಚಿಮ ಘಟ್ಟದ 37% ನಷ್ಟು ಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವ ಶಿಫಾರಸನ್ನು ಮಾಡಿದೆ.

ಇಸ್ರೋ ಮಾಜಿ ಮುಖ್ಯಸ್ಥ ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದಲ್ಲಿ, ಪಶ್ಚಿಮ ಘಟ್ಟದ 11 ಜಿಲ್ಲೆಗಳಲ್ಲಿ ,1592 ಗ್ರಾಮಗಳಲ್ಲಿ ಹರಡಿಕೊಂಡಿರುವ 20,668 ಚದರ ಕಿ.ಮೀ ವಿಸ್ತೀರ್ಣದ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಸಮಿತಿ ಶಿಫಾರಸು ಮಾಡಿದೆ. ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ಇತರ ವಾಣಿಜ್ಯ ಚಟುವಟಿಕೆಗಳ ಮೇಲೆ ಅದು ಸಂಪೂರ್ಣ ನಿಷೇದ ಹೇರಿತ್ತು. ಪರಿಸರ-ಸೂಕ್ಷ್ಮ ಎಂದು ವರ್ಗೀಕರಿಸುವುದರಿಂದ ಜನವಸತಿ ಪ್ರದೇಶಗಳು ಮತ್ತು ತೋಟಗಳಿಗೆ ವಿನಾಯಿತಿ ನೀಡುವುದು ಸೇರಿದಂತೆ ಹಲವಾರು ರೈತ ಪರ ಶಿಫಾರಸುಗಳನ್ನು ಅದು ಮಾಡಿದೆ.

ಆದರೆ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಈ ವರದಿಯನ್ನು ತಿರಸ್ಕರಿಸಿದೆ. ಕರ್ನಾಟಕ ಸರ್ಕಾರವು ಗಾಡ್ಗೀಲ್ ಅಥವಾ ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಒಪ್ಪಿರಲಿಲ್ಲ. ಈ ಮಧ್ಯೆ, ಕೇಂದ್ರ ಸರ್ಕಾರವು 2014 ರಲ್ಲಿ ಸಮಿತಿಯು ಶಿಫಾರಸು ಮಾಡಿದ ಪ್ರದೇಶದ ಸಂರಕ್ಷಣೆಗಾಗಿ ಕಸ್ತೂರಿರಂಗನ್ ವರದಿಯನ್ನು ಜಾರಿಗೆ ತರಲು ಕರಡು ಅಧಿಸೂಚನೆಯನ್ನು ಹೊರಡಿಸಿತು. ಇದರ ನಂತರ, ಈ ಕುರಿತು ಇತರ ಎರಡು ಅಧಿಸೂಚನೆಗಳನ್ನು ಕೇಂದ್ರ ಸರ್ಕಾರ 2015 ಮತ್ತು 2017 ರಲ್ಲಿ ಹೊರಡಿಸಿತು. ಆದರೆ ಕರ್ನಾಟಕ ಸರ್ಕಾರವು ಇದನ್ನು ಕಾರ್ಯಗತಗೊಳಿಸಲು ನಿರಾಕರಿಸಿತು ಮತ್ತು ಸಮಿತಿಯ ವರದಿಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಪ್ರತಿಕ್ರಿಯೆಯನ್ನು ಸಲ್ಲಿಸಿತು. ಅದರಲ್ಲಿ ವರದಿಯ ಅನುಷ್ಠಾನ ಆ ಪ್ರದೇಶದ ಅಭಿವೃದ್ಧಿಯನ್ನು ನಿಲ್ಲಿಸುತ್ತದೆ ಎಂದು ಹೇಳಿತು.

ಅದರೆ ಈ ಪ್ರಕರಣವೊಂದರ ವಿಚಾರಣೆ ನಡೆಸುತಿದ್ದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಡಿಸೆಂಬರ್ 31, 2020 ರೊಳಗೆ ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಕುರಿತು ಅಂತಿಮ ಅಧಿಸೂಚನೆಯನ್ನು ಹೊರಡಿಸಬೇಕೆಂದು ಕೇಂದ್ರಕ್ಕೆ ಸೂಚಿಸಿತ್ತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com