ಬಡತನ ರೇಖೆಗಿಂತ ಕೆಳಗಿನ ಬಡ ಕುಟುಂಬಗಳಿಗೆ(ಬಿಪಿಎಲ್) ಪಡಿತರ ವ್ಯವಸ್ಥೆಯಲ್ಲಿ ನೀಡುವ ಬಿಪಿಎಲ್ ಕಾರ್ಡ್ ಮಾನದಂಡಗಳ ಕುರಿತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಸೇರಿದಂತೆ ಸದಾ ಒಂದಿಲ್ಲೊಂದು ಪ್ರಚೋದನಕಾರಿ ಹೇಳಿಕೆಗಳ ಮೂಲಕವೇ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಅಸ್ತಿತ್ವ ಕಾಯ್ದುಕೊಂಡಿರುವ ಕತ್ತಿಯವರ ವಿವಾದಗಳಿಗೆ ಬಿಪಿಎಲ್ ಪಡಿತರ ಚೀಟಿ ಕುರಿತ ಈ ಹೇಳಿಕೆ ಹೊಸ ಸೇರ್ಪಡೆ. ಬೈಕ್, ಟಿವಿ ಮತ್ತು ಪ್ರಿಜ್ ಇರುವವರು ಬಿಪಿಎಲ್ ಪಡಿತರ ಚೀಟಿ ಹಿಂತಿರುಗಿಸಬೇಕು. ಇಲ್ಲವಾದಲ್ಲಿ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂಬ ಸಚಿವರ ಹೇಳಿಕೆ ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ; ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅವರ ಸಚಿವ ಸಹೋದ್ಯೋಗಿಗಳೇ ಕತ್ತಿ ಹೇಳಿಕೆಗೆ ಕೆಂಡಾಮಂಡಲವಾಗಿದ್ದಾರೆ.
ಒಂದು ಕಡೆ ಬಿಜೆಪಿಯ ಕೇಂದ್ರ ಸರ್ಕಾರ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರಗಳನ್ನು ಜನವಿರೋಧವನ್ನು ಕಡೆಗಣಿಸಿ ನಿರಂತರ ಏರಿಸುತ್ತಿರುವ ಹೊತ್ತಿಗೇ, ಬಿಜೆಪಿಯ ಬಹು ಪ್ರಚಾರಿತ ಅಚ್ಛೇದಿನದ ಭಾಗವಾಗಿ ರಾಜ್ಯ ಆರೋಗ್ಯ ಸಚಿವರ ಹೊಸ ಹೇಳಿಕೆ ಕೂಡ ಹೊರಬಿದ್ದಿತ್ತು. ಕರೋನಾ ಮತ್ತು ವಿವೇಚನಾಹೀನ ಲಾಕ್ ಡೌನ್ ನಿಂದಾಗಿ ಸಾವು-ನೋವು ಕಂಡಿರುವ ಜನ, ಈಗಲೂ ಹೊತ್ತಿನ ಅನ್ನಕ್ಕೂ ಹರಸಾಹಸ ಪಡುವ ಸ್ಥಿತಿಯಲ್ಲಿದ್ದಾರೆ. ಇಂತಹ ಹೊತ್ತಲ್ಲಿ, ಸಂಕಷ್ಟದಲ್ಲಿರುವ ಜನರಿಗೆ ಭಾರೀ ಹಣಕಾಸು, ಉದ್ಯೋಗಾವಕಾಶಗಳ ನೆರವಿರಲಿ, ಕನಿಷ್ಟ ಹೊತ್ತಿನ ಊಟಕ್ಕಾದರೂ ಆಹಾರ ಖಾತರಿಪಡಿಸಿ, ಯಾವ ನಾಗರಿಕರೂ ಹಸಿವಿನಿಂದ ಸಾಯದಂತೆ ಕನಿಷ್ಟ ಕಾಳಜಿ ವಹಿಸಬೇಕಾದದ್ದು ನಾಗರಿಕ ಸರ್ಕಾರಗಳ ಹೊಣೆ. ಆದರೆ, ಸರ್ಕಾರದ ಸಚಿವರು, ಅಂತಹ ಮಾನವೀಯತೆಗೆ ಬದಲಾಗಿ, ಇಂತಹ ಹೊತ್ತಲ್ಲಿ ಗಾಯದ ಮೇಲೆ ಬರೆ ಎಳೆಯುವ ಕಿಡಿಗೇಡಿತನ ಪ್ರದರ್ಶಿಸುವ ಮೂಲಕ ಬಿಜೆಪಿಯ ಜನಪರತೆಯನ್ನು ಪ್ರದರ್ಶನಕ್ಕಿಟ್ಟರು.
ಸಹಜವಾಗೇ ಅದು ರಾಜ್ಯದ ಬಡವರಷ್ಟೇ ಅಲ್ಲದೆ, ಎಲ್ಲಾ ಜನವರ್ಗದ ರೊಚ್ಚಿಗೆ ಕಾರಣವಾಯಿತು. ವ್ಯಾಪಕ ಟೀಕೆ ಮತ್ತು ಆಕ್ರೋಶ ವ್ಯಕ್ತವಾಯಿತು. ಕತ್ತಿಯ ಕಿಡಿಗೇಡಿತನ ಸರ್ಕಾರಕ್ಕೆ ದುಬಾರಿಯಾಗಬಹುದು ಎಂಬ ಸುಳಿವರಿತ ಸಿಎಂ ಯಡಿಯೂರಪ್ಪ ಮತ್ತು ಕೆಲವು ಸಂಪುಟ ಸಹೋದ್ಯೋಗಿಗಳು ಕೂಡಲೇ ಡ್ಯಾಮೇಜ್ ಕಂಟ್ರೋಲ್ ಯತ್ನ ಮಾಡಿ, ಸಚಿವರಿಂದ ಸ್ಪಷ್ಟನೆ ಕೊಡಿಸಿದರು. ಸಿಎಂ ಯಡಿಯೂರಪ್ಪ ಅವರಂತೂ ಸಚಿವರ ಹೇಳಿಕೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುವ ಮುನ್ನ ಸಚಿವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿ, ಈ ಮೊದಲು ಸರ್ಕಾರದ ಹೊರಗಿದ್ದು ಹತ್ತಾರು ವಿವಾದಗಳನ್ನು ಸೃಷ್ಟಿಸಿದಂತೆ ಈಗಲೂ ಮಾಡಬೇಡಿ. ನೀವೀಗ ಸರ್ಕಾರದ ಭಾಗ. ಸರ್ಕಾರ ನಡೆಸುವುದಕ್ಕೆ ಒಂದು ರೀತಿ ರಿವಾಜು, ಕಾನೂನು-ಕಟ್ಟಳೆಗಳಿವೆ. ಇಂತಹ ಹೇಳಿಕೆ ನೀಡುವ ಮುನ್ನ ನೀವು ಸಿಎಂ ಆದ ನನ್ನ ಬಳಿಯಾಗಲೀ, ಇತರೆ ಹಿರಿಯ ಸಚಿವರ ಬಳಿಯಾಗಲೀ ಚರ್ಚಿಸಿದ್ದೀರೇನ್ರಿ.. ಇಂತಹ ತರಲೆಗಳನ್ನು ಬಿಡಿ.. “ ಎಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಹಾಗಾಗಿ ಕೂಡಲೇ ಬಾಗಿದ, ಕತ್ತಿ, ತಾವಾಗಲೀ, ತಮ್ಮ ಸರ್ಕಾರವಾಗಲೀ ಹೊಸ ನಿಯಮ ರೂಪಿಸಿಲ್ಲ, ಹಿಂದಿನ ಸರ್ಕಾರಗಳು ರೂಪಿಸಿರುವ ನಿಯಮಗಳ ಪ್ರಕಾರವೇ ಅಕ್ರಮ ಪಡಿತರ ಚೀಟಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿ ಸ್ಪಷ್ಟನೆ ನೀಡಿ ಜಾರಿಕೊಂಡಿದ್ದಾರೆ.
ಆದರೆ, ಸದ್ಯ ಜಾರಿಯಲ್ಲಿರುವ ನಿಯಮಾವಳಿಗಳ ಪ್ರಕಾರ ಕೂಡ ಟಿವಿ, ಫ್ರಿಜ್, ಬೈಕ್ ಇರುವವರು ಬಿಪಿಎಲ್ ಪಡಿತರ ಚೀಟಿಗೆ ಅನರ್ಹರು ಎಂಬ ಯಾವ ನಿಬಂಧನೆಗಳೂ ಇಲ್ಲ. ವಾಸ್ತವವಾಗಿ ನಿಯಮಗಳ ಪ್ರಕಾರ, “ವೇತನವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು; ಅಂದರೆ ಸರ್ಕಾರದ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ ಮಂಡಳಿಗಳು/ ನಿಗಮಗಳು/ ಸ್ವಾಯತ್ತ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ/ ಸೇವಾ ತೆರಿಗೆ/ ವ್ಯಾಟ್/ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು. ಗ್ರಾಮೀಣ ಪ್ರದೇಶಗಳಲ್ಲಿ ಮೂರು ಹೆಕ್ಟೇರ್(ಏಳೂವರೆ ಎಕರೆ) ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ ನಗರ ಪ್ರದೇಶಗಳಲ್ಲಿ ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು. ಕುಟುಂಬದ ವಾರ್ಷಿಕ ಆದಾಯವು ರೂ. 1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು” ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರು(ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ).
ಅಂದರೆ, ದ್ವಿಚಕ್ರ ವಾಹನ, ಟಿವಿ, ಫ್ರಿಜ್ ನಂತಹ ಅಗತ್ಯ ವಸ್ತುಗಳನ್ನು ಹೊಂದಿರುವರನ್ನು ಬಡತನ ರೇಖೆಗಿಂತ ಕೆಳಗಿರುವವರು ಎಂದೇ ಪರಿಗಣಿಸಿ ಅವರಿಗೆ ಬಿಪಿಎಲ್ ಪಡಿತರ ಚೀಟಿ ಪಡೆಯುವ ಅರ್ಹತೆ ಹೊಂದಿದ್ದಾರೆ ಎಂಬುದು ಈ ಮೇಲಿನ ನಿಯಮಾವಳಿಗಳ ಪರೋಕ್ಷ ಅಭಿಪ್ರಾಯ. ಆದರೆ, ಇಂತಹ ನಿಯಮಗಳನ್ನೇ ತಿರುಚಿ, ಬಾಯಿಗೆ ಬಂದಂತೆ ಹೇಳಿಕೆ ಕೊಡುವ ಉಮೇಶ್ ಕತ್ತಿ, ತಮ್ಮದೇ ಇಲಾಖೆಯ, ಅದರಲ್ಲೂ ಕೋಟ್ಯಂತರ ಜನರ ಅನ್ನಕ್ಕೆ ಸಂಬಂಧಿಸಿದ ವಿಷಯದಲ್ಲಿ ಮಾತನಾಡುವಾಗ ಕನಿಷ್ಟ ಮಾಹಿತಿ ಹೊಂದಿರಬೇಕು ಮತ್ತು ಹೊಣೆಗಾರಿಕೆಯ ಮಾತನಾಡಬೇಕು ಎಂಬ ವಿವೇಚನೆಯನ್ನೇ ಕಳೆದುಕೊಂಡಿದ್ದು ವಿಪರ್ಯಾಸ.
ಜಮೀನು ವಿಷಯದಲ್ಲಿ ಕೂಡ ನಿಯಮಾವಳಿಯಲ್ಲಿ ಮೂರು ಹೆಕ್ಟೇರ್ ಒಣಭೂಮಿ ಎಂದು ಸ್ಪಷ್ಟವಾಗಿ ಹೇಳಿದ್ದರೂ, ಸಚಿವರು ಮಾತನಾಡುತ್ತಾ ಐದು ಎಕರೆಗಿಂತ ಹೆಚ್ಚಿನ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡು ಹೊಂದಿದ್ದರೆ ಅಪರಾಧ ಎಂದಿದ್ದಾರೆ. ಮೂರು ಹೆಕ್ಟೇರ್ ಎಂದರೆ, ಎಕರೆ ಲೆಕ್ಕದಲ್ಲಿ ಅದು ಏಳೂವರೆ ಎಕರೆ ಭೂಮಿಯಾಗುತ್ತದೆ ಎಂಬ ಕನಿಷ್ಟ ತಿಳಿವಳಿಕೆ ಕೂಡ ಸಚಿವರಿಗೆ ಇಲ್ಲದಾಯಿತೆ ? ಎಂಬ ಪ್ರಶ್ನೆ ಕೂಡ ಇದೆ.
ಹಾಗೆ ನೋಡಿದರೆ, ಈ ನಿಯಮಾವಳಿಗಳು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಅವೈಜ್ಞಾನಿಕವೇ. ಸರ್ಕಾರದ ಕನಿಷ್ಟ ಕೂಲಿ ಮತ್ತು ಮಹಾತ್ಮ ಗಾಂಧೀ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೇಗಾ) ಯೋಜನೆಯ ಕನಿಷ್ಟ ಕೂಲಿಯ ಪ್ರಕಾರ ಒಂದು ಕುಟುಂಬದ ವಾರ್ಷಿಕ ಆದಾಯ ಹೇಗೇ ಲೆಕ್ಕ ಹಾಕಿದರೂ 1.20 ಲಕ್ಷ ರೂ.ಗಿಂತ ಕನಿಷ್ಟ ಇರಲು ಸಾಧ್ಯವಿಲ್ಲ. ಸರ್ಕಾರದ ಅಧಿಕೃತ ಕನಿಷ್ಟ ಕೂಲಿ ದರ ನಿಗದಿ ಮಾನದಂಡದ ಪ್ರಕಾರವೇ ಕೃಷಿ ಕಾರ್ಮಿಕರ ಕನಿಷ್ಟ ಕೂಲಿ ದಿನಕ್ಕೆ 424 ರೂ. ಇದೆ. ಕೃಷಿ ಕಾರ್ಮಿಕನೊಬ್ಬ ತಿಂಗಳಿಗೆ 24 ದಿನವಷ್ಟೇ ಕೆಲಸ ಮಾಡಿದರೂ ಆತನ ಒಬ್ಬನ ಆದಾಯ ವಾರ್ಷಿಕ 1,22,112 ರೂ. ಆಗುತ್ತದೆ! ಕುಟುಂಬವೆಂದರೆ ಕನಿಷ್ಟ ಇಬ್ಬರು ದುಡಿಯುವ ಮಂದಿ ಇರುತ್ತಾರೆ ಎಂದರೆ; ಒಟ್ಟು ವಾರ್ಷಿಕ ದುಡಿಮೆ 2.40 ಲಕ್ಷ ದಾಟುತ್ತದೆ!
ಇನ್ನು ಸರ್ಕಾರದ ನರೇಗಾ ಯೋಜನೆಯಡಿ ಸದ್ಯ ಕನಿಷ್ಟ ಕೂಲಿ 275 ರೂ. ಇದೆ. ಕನಿಷ್ಟ ನೂರು ದಿನ ಕೆಲಸ ಕೊಡುವುದು ಕಡ್ಡಾಯ. ಆ ಪ್ರಕಾರ ಹೋದರೂ ಕುಟುಂಬವೊಂದರ ಇಬ್ಬರ ದುಡಿಮೆ ಕೇವಲ ನೂರು ದಿನದಲ್ಲಿ 55 ಸಾವಿರ ರೂ. ಆದಾಯಕ್ಕೆ ದಾರಿಯಾಗುತ್ತದೆ. ವರ್ಷದ ಇನ್ನುಳಿದ 265 ದಿನದಲ್ಲಿ ಆ ಕುಟುಂಬ ಕನಿಷ್ಟ 150 ದಿನ ಕೂಲಿ ಸಂಪಾದಿಸುತ್ತದೆ ಎಂದರೂ, ಒಟ್ಟಾರೆ ಅವರ ಆದಾಯ ಕನಿಷ್ಟ 1.40 ಲಕ್ಷ ರೂ. ಆಗುತ್ತದೆ!
ಸರ್ಕಾರದ ಅಧಿಕೃತ ಮಾನದಂಡದ ಪ್ರಕಾರವೇ ಕೂಲಿ ಕುಟುಂಬವೊಂದು ವಾರ್ಷಿಕ ಗಳಿಸಬಹುದಾದ ಆದಾಯಕ್ಕಿಂತ ಕನಿಷ್ಟ ಆದಾಯ(1.20 ಲಕ್ಷ) ಮಿತಿಯನ್ನು ಬಿಪಿಎಲ್ ಕುಟುಂಬ ಗುರುತಿಸುವ ಮಾನದಂಡವಾಗಿ ನಿಗದಿ ಮಾಡಿರುವುದೇ ತೀರಾ ಅವೈಜ್ಞಾನಿಕ. ಅದೂ ಹಾಲಿ ಜಾರಿಯಲ್ಲಿರುವ ಈ ಮಾನದಂಡ ಕೂಡ 2015ರಲ್ಲಿ, ಅಂದರೆ ಬರೋಬ್ಬರಿ ಆರು ವರ್ಷಗಳ ಹಿಂದೆ ನಿಗದಿ ಮಾಡಿರುವುದು. ಈ ಆರು ವರ್ಷಗಳಲ್ಲಿ ನರೇಗಾ ಮತ್ತು ಕನಿಷ್ಟ ಕೂಲಿ ದರದಲ್ಲಿ ಎಷ್ಟು ಬಾರಿ ಪರಿಷ್ಕರಣೆಯಾಗಿದೆ? ಆಹಾರ ಮತ್ತು ಅಗತ್ಯ ವಸ್ತು ಬೆಲೆಗಳಲ್ಲಿ ಎಷ್ಟು ಏರಿಕೆಯಾಗಿದೆ? ಹಣದುಬ್ಬರ ಎಷ್ಟು ಹೆಚ್ಚಿದೆ? ಆ ಎಲ್ಲಾ ಅಂಶಗಳ ಆಧಾರದ ಮೇಲೆ ಬಡತನ ರೇಖೆಯ, ಬಿಪಿಎಲ್ ಕುಟುಂಬದ ಮಾನದಂಡಗಳೂ ಕೂಡ ಕಾಲಕಾಲಕ್ಕೆ ಬದಲಾಗಬೇಕಲ್ಲವೆ?
ಸಚಿವ ಉಮೇಶ್ ಕತ್ತಿ ಆಡಿರುವ ಬಿಪಿಎಲ್ ಪಡಿತರ ಚೀಟಿ ರದ್ದತಿಯ ಮಾನದಂಡ ಕುರಿತ ಹೇಳಿಕೆ, ನಿಜವಾಗಿಯೂ ಅವರ ಬಾಯಿಚಪಲದ ಹೇಳಿಕೆಯೇ? ಅಥವಾ ದುಬಾರಿ ದಿನಗಳಲ್ಲಿ ನಲುಗುತ್ತಿರುವ ಜನರನ್ನು ಇನ್ನಷ್ಟು ಸುಲಿಗೆ ಮಾಡಿ, ಹೈರಾಣು ಮಾಡುವ ಬಿಜೆಪಿಯ ಕೇಂದ್ರ ಸರ್ಕಾರದ ಆಣತಿಯಂತೆ ರಾಜ್ಯ ಸರ್ಕಾರ ರೂಪಿಸಿರುವ ಹೊಸ ಮಾನದಂಡಗಳ ಸೂಚನೆಯೇ? ಎಂಬುದು ಕುತೂಹಲ ಹುಟ್ಟಿಸಿದೆ. ಇಂತಹದ್ದೊಂದು ಬೀಸು ಹೇಳಿಕೆ ನೀಡುವ ಮೂಲಕ ರಾಜ್ಯದ ಜನರ ಪ್ರತಿಕ್ರಿಯೆಯನ್ನು ಪರೀಕ್ಷಿಸಿ, ಮುಂದಿನ ದಿನಗಳಲ್ಲಿ ಬಡವರ ಅನ್ನ ಕಸಿಯುವ ಹೊಸ ಮಾನದಂಡಗಳನ್ನು ಹೇರುವ ತಂತ್ರಗಾರಿಕೆಯ ಭಾಗವಾಗಿ ಈ ಹೇಳಿಕೆ ಹೊರಬಿದ್ದಿರಲೂಬಹುದು.
ಎಲ್ಲಾ ಕಾನೂನು ಮತ್ತು ವಾಸ್ತವಾಂಶಗಳ ಹೊರತಾಗಿಯೂ, ಕರೋನಾ ಸಂಕಷ್ಟದ ಹೊತ್ತಲ್ಲಿ ಸರ್ಕಾರಗಳು ಹೆಚ್ಚು ಮಾನವೀಯವಾಗಿ, ಬಡವರ ಸಂಕಷ್ಟಕ್ಕೆ ಸ್ಪಂದಿಸಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಮತ್ತು ಸಚಿವ ಉಮೇಶ್ ಕತ್ತಿ ಅದಕ್ಕೆ ತದ್ವಿರುದ್ಧ ಹಾದಿಯಲ್ಲಿದ್ದಾರೆ. ಬಡವರ ಹಸಿದ ಹೊಟ್ಟೆಯ ಮೇಲೆ ಹೊಡೆದು, ಗಾಯದ ಮೇಲೆ ಬರೆ ಎಳೆದು ವಿಕೃತ ಆನಂದ ಅನುಭವಿಸುವ ಜೀವ ವಿರೋಧಿ ಮನಸ್ಥಿತಿ ಇದು. ಹಾಗಾಗೇ ಬಡವ- ಬಲ್ಲಿದ ಎನ್ನದೆ ಇಡೀ ರಾಜ್ಯದ ಜನ ಸಚಿವರ ಹೇಳಿಕೆಯ ವಿರುದ್ಧ ರೊಚ್ಚಿಗೆದ್ದರು ಮತ್ತು ಪರಿಣಾಮವಾಗಿ ಹೇಳಿಕೆಯನ್ನು ನೀಡಿದಷ್ಟೇ ವೇಗವಾಗಿ ತಮ್ಮ ಮಾತನ್ನು ವಾಪಸು ಪಡೆದು ಸಚಿವರು ತಿಪ್ಪೆಸಾರಿಸುವ ಯತ್ನ ಮಾಡಿದರು!