ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಹಿಂದಿ: ಬಿಜೆಪಿಯ ʼದ್ವಿʼಮುಖ ನೀತಿ

ಸಿನಿಮಾ ವಿಚಾರಗಳಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಎಂದು ಬಡಿದಾಡಿಕೊಳ್ಳುವ ನಾವು, ಏಕೆ ಕನ್ನಡವನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲು ಹಿಂಜರಿಯುತ್ತೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹೆಸರಿಗೆ ಮಾತ್ರ ಕನ್ನಡಾಂಬೆಯ ಮಕ್ಕಳು ಎಂದು ಬೊಬ್ಬಿರಿಯುವ ರಾಜಕಾರಣಿಗಳು ಕನ್ನಡ ಭಾಷೆಯ ಅಭ್ಯುದಯಕ್ಕೆ ನಾವೆಷ್ಟು ಕಾಣಿಕೆ ನೀಡಿದ್ದೇವೆ ಎಂಬುದನ್ನು ಸ್ವವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ.
ತಮಿಳುನಾಡಿನಲ್ಲಿ ತಮಿಳು, ಕರ್ನಾಟಕದಲ್ಲಿ ಹಿಂದಿ: ಬಿಜೆಪಿಯ ʼದ್ವಿʼಮುಖ ನೀತಿ

ಕೇಂದ್ರ ಸರ್ಕಾರದ ಭಾಷಾ ನೀತಿ ಹಾಗೂ ಕರ್ನಾಟಕದ ರಾಜಕಾರಣಿಗಳ ಪುಕ್ಕಲುತನದ ಕುರಿತು ಈಗ ಸಾಮಾಜಿಕ ತಾಲತಾಣಗಳಲ್ಲಿ ಚರ್ಚೆ ನಡೆಯುತ್ತಾ ಇದೆ. ಇದಕ್ಕೆ ಬಲವಾದ ಕಾರಣವೂ ಇದೆ. ʼಹೈಕಮಾಂಡ್‌ʼ ಭಿಕ್ಷೆಯಿಂದಲೇ ನಾವು ರಾಜ್ಯಾಭಾರ ನಡೆಸುತ್ತಿರುವುದು ಎಂದು ʼಜೀ ಹುಜೂರ್‌ʼ ನೀತಿಯನ್ನು ಪಾಲಿಸುತ್ತಿರುವ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಕನ್ನಡ ನಾಡು-ನುಡಿಯನ್ನು ಉಳಿಸುವ ಪರಿವೆಯೇ ಇಲ್ಲವೆಂಬಂತೆ ಭಾಸವಾಗುತ್ತಿದೆ.

ಕರ್ನಾಟಕದ ಆಡಳಿತ ನೀತಿಗೆ ವಿರುದ್ದವಾಗಿ, ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಕಾರ್ಯಕ್ರಮದ ಫಲಕದಲ್ಲಿ ತಮಿಳು ಭಾಷೆ ಬಿಟ್ಟರೆ ಒಂದೇ ಒಂದು ಕಡೆ ಆಂಗ್ಲ ಅಥವಾ ಹಿಂದಿ ಕಾಣಿಸಿಕೊಂಡಿಲ್ಲ. ಇದು ತಮಿಳುನಾಡಿಗೆ ಮಾತ್ರ ಏಕೆ ಸಾಧ್ಯವಾಯಿತು?

ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮಗಳನ್ನು ಗಮನಿಸುವುದಾದರೆ, ಜನವರಿ ಮತ್ತು ಫೆಬ್ರುವರಿಯಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ಕನ್ನಡವೇ ಮಾಯ. ಕರ್ನಾಟಕದಲ್ಲಿ ಕನ್ನಡವನ್ನು ದುರ್ಬೀನು ಹಾಕಿ ಹುಡುಕುವ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿಸಿಕೊಂಡಿದೆ. ಕೇಂದ್ರವು ಕನ್ನಡವನ್ನು ಬಳಸುವುದೇ ಇಲ್ಲ ಎಂದು ಅಹಂಕಾರಯುತವಾಗಿ ನಡೆದುಕೊಂಡರೆ, ಅದನ್ನು ಪ್ರಶ್ನಿಸುವ ಅಲ್ಪ ಧೈರ್ಯ ಕೂಡಾ ಇಲ್ಲದೇ ಇರುವಂತಹ ಪುಕ್ಕಲ ರಾಜಕಾರಣಿಗಳು ಅವೇ ವೇದಿಕೆಗಳಲ್ಲಿ ಕರ್ನಾಟಕದ ಅಭಿವೃದ್ದಿಯ ಕುರಿತು ಭಾಷಣ ಬಿಗಿದಿದ್ದಾರೆ.

ಕೇಂದ್ರ ಸಶಸ್ತ್ರ ಮೀಸಲು ಪಡೆಯ ಕ್ಷಿಪ್ರ ಕಾರ್ಯಾಚರಣ ಘಟಕದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶಿವಮೊಗ್ಗಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮದ ಫಲಕದಲ್ಲಿ ಹಿಂದಿ ಹೊರತಾಗಿ ಬೇರೆ ಯಾವ ಭಾಷೆಯೂ ಕಾಣಿಸಲಿಲ್ಲ.

ರಾಜ್ಯದಲ್ಲಿ ಪ್ರತೀ ವರ್ಷವೂ ನಡೆಯುವ ಏರೋ ಇಂಡಿಯಾ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಪಾಲ್ಗೊಂಡಿದ್ದರು. ಇಲ್ಲಿಯೂ ಕೇಂದ್ರದ ಹಿಂದಿ ಹೇರಿಕೆಯ ಮುಂದುವರೆದ ಭಾಗವಾಗಿ ಕನ್ನಡವನ್ನು ಮುಖ್ಯ ಫಲಕದಿಂದ ಕೈಬಿಡಲಾಗಿತ್ತು. ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯನ್ನೇ ಬಳಸಲಾಗಿತ್ತು.

ಇಷ್ಟಕ್ಕೇ ಕರ್ನಾಟಕದ ನಾಯಕರ ಕನ್ನಡದ ಮೇಲಿನ ಅಸಡ್ಡೆ ಮುಗಿಯಲಿಲ್ಲ. ರಾಷ್ಟ್ರ ಮಟ್ಟದ ಅಟಿಕೆ ಹಾಗೂ ಕರಕುಶಲ ವಸ್ತು ಪ್ರದರ್ಶನ ʼಹುನರ್‌ ಹಾಟ್‌ʼ ಮೈಸೂರಿನಲ್ಲಿ ನಡೆಯಿತು. ಇಲ್ಲಿಯೂ ಕನ್ನಡ ಸಂಪೂರ್ಣ ಮಾಯ. ಕರ್ನಾಟಕದಿಂದ ಮತ್ತೆ ಮತ್ತೆ ಸಂಸತ್ತಿಗೆ ಆಯ್ಕೆಯಾಗುತ್ತಿರುವ, ಸಚಿವರಾಗಿಯೂ ಅಯ್ಕೆಯಾಗಿರುವ ಡಿ ವಿ ಸದಾನಂದ ಗೌಡ ಅವರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇವು ಇತ್ತೀಚಿನ ಕೆಲ ನಿದರ್ಶನಗಳಷ್ಟೇ, ಈ ಹಿಂದೆಯೂ ಕೇಂದ್ರ ಸರ್ಕಾರವು ಕನ್ನಡವನ್ನು ನಿರ್ಲಕ್ಷ್ಯತನದಿಂದ ಕಾಣುತ್ತಾ ಬಂದಿದೆ. ಆಗಲೂ, ಕೇಂದ್ರದ ಭಾಷಾ ನೀತಿಯ ವಿರುದ್ದ ಧೈರ್ಯವಾಗಿ ಒಂದು ಹೇಳಿಕೆ ಕೊಡಲೂ ಬಿಜೆಪಿಯ ನಾಯಕರು ಮುಂದಾಗಿರಲಿಲ್ಲ. ಕನ್ನಡಿಗರ ಮತ, ಕನ್ನಡ ನೆಲದ ಅನ್ನ ಉಣ್ಣುವ ರಾಜಕಾರಣಿಗಳ ಅಧಿಕಾರದ ಆಸೆ ಕನ್ನಡವನ್ನು ಬಡವಾಗಿಸುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಂತಹ ರಾಜಕಾರಣಿಗಳು ತಮಿಳರ ಭಾಷಾಭಿಮಾನದಿಂದ ಕಲಿಯುವುದು ಬಹಳ ಇದೆ. ಕೇವಲ ಸಿನಿಮಾ ವಿಚಾರಗಳಲ್ಲಿ ಕನ್ನಡ, ತಮಿಳು ಮತ್ತು ತೆಲುಗು ಎಂದು ಬಡಿದಾಡಿಕೊಳ್ಳುವ ನಾವು, ಏಕೆ ಕನ್ನಡವನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲು ಹಿಂಜರಿಯುತ್ತೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಹೆಸರಿಗೆ ಮಾತ್ರ ಕನ್ನಡಾಂಬೆಯ ಮಕ್ಕಳು ಎಂದು ಬೊಬ್ಬಿರಿಯುವ ರಾಜಕಾರಣಿಗಳು ಕನ್ನಡ ಭಾಷೆಯ ಅಭ್ಯುದಯಕ್ಕೆ ನಾವೆಷ್ಟು ಕಾಣಿಕೆ ನೀಡಿದ್ದೇವೆ ಎಂಬುದನ್ನು ಸ್ವವಿಮರ್ಶೆ ಮಾಡಿಕೊಳ್ಳುವ ಕಾಲ ಬಂದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com