ರೈತರ ಪ್ರತಿಭಟನೆಗೆ ಬೇಕಾದಂತಹ ಟೂಲ್ಕಿಟ್ ಎಡಿಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರು ಮೂಲದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಗಿದೆ.
ಪ್ರತಿಭಟನೆಯಲ್ಲಿ ವಕೀಲರು, ಸಾಮಾಜಿಕ ಹೋರಾಟಗಾರರು, ರೈತಮುಖಂಡರು, ವಿದ್ಯಾರ್ಥಿ ಸಂಘಟನೆಗಳು ಭಾಗಿಯಾಗಿ ದಿಶಾ ಬಂಧನವನ್ನು ತೀವ್ರವಾಗಿ ಖಂಡಿಸುವುದರ ಜೊತೆಗೆ ಮೋದಿ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.
ಈ ವೇಳೆ ಮಾತನಾಡಿದ ವಕೀಲ ವಿನಯ್ ಶ್ರೀನಿವಾಸ್ ಅವರು, ʼದಿಶಾ ಬಂಧನ ಕ್ರಮವೇ ಕಾನೂನು ಬಾಹಿರ. ಕರ್ನಾಟಕದ ಪೊಲೀಸರಿಗೆ ಮಾಹಿತಿಯಿಲ್ಲದೆ ಏಕಾಏಕಿ ದೆಹಲಿ ಪೊಲೀಸರು ಕರ್ನಾಟಕದ ಹೆಣ್ಣುಮಗಳೊಬ್ಬಳನ್ನು ಬಂಧಿಸಿರುವುದು ಆತಂಕಕಾರಿ. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಕರ್ನಾಟಕ ರಾಜ್ಯ ಸರ್ಕಾರ ಏನು ಮಾಡುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
"ಅನ್ನದಾತ ರೈತರ ಹೋರಾಟಕ್ಕೆ ಬೆಂಬಲ ನೀಡಿದ ದಿಶಾ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿ ಬಂಧಿಸಿರುವುದು ಖಂಡನೀಯ. ದಿಶಾ ರವಿ ಅವರ ವಕೀಲರನ್ನು ಬಿಟ್ಟು ಬೇರೆಯೇ ವಕೀಲರನ್ನು ಆಯೋಜಿಸಿ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿರುವುದು ಸರಿಯಾದ ಕ್ರಮವಲ್ಲ" ಎಂದು ಅವರು ಹೇಳಿದ್ದಾರೆ.
ಬಳಿಕ ಮಾತನಾಡಿದ ಲೊಯೋ ಸಲ್ದಾನ ಅವರು, ಹರಿಯಾಣದ ಬಿಜೆಪಿ ಸಚಿವರೊಬ್ಬರು ದಿಶಾ ರವಿಯವರನ್ನು ಕೊಲ್ಲಬೇಕೆಂದು ಹೇಳುತ್ತಾರೆ. ಕರ್ನಾಟಕದ ಹೆಣ್ಣುಮಗಳೊಬ್ಬಳನ್ನು ಕೊಲ್ಲಲು ಹರಿಯಾಣದ ಬಿಜೆಪಿ ನಾಯಕ ಕರೆ ಕೊಡುವಾಗ ರಾಜ್ಯ ಬಿಜಪಿ ನಾಯಕರೇಕೆ ಸುಮ್ಮನಿದ್ದಾರೆ. ಇವತ್ತು ದಿಶಾ ಮೇಲೆ ನಡೆದ ಅನ್ಯಾಯ, ನಾಳೆ ನಮ್ಮ-ನಿಮ್ಮ ಮಕ್ಕಳ ಮೇಲೂ ನಡೆಯಬಹುದೆಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ ಸೇರಿದಂತೆ ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿ ಸಂಘಟನೆಗಳು ದಿಶಾ ಅವರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದ್ದಾರೆ. ಇದು ಸರ್ಕಾರದ ಫ್ಯಾಸಿಸಂ ಮುಖವನ್ನು ಅನಾವರಣ ಮಾಡಿದೆಯೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.