ಬಿ ವೈ ವಿಜಯೇಂದ್ರ ವಿರುದ್ಧ ಸರಣಿ ಆರೋಪ ಮಾಡಿದ ಬಸನಗೌಡ ಪಾಟೀಲ ಯತ್ನಾಳ

ವಿರೋಧ ಪಕ್ಷಗಳು ಸತ್ತಿದೆ. ಅವರೂ ಇವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಯತ್ನಾಳ್, ವಿಜಯೇಂದ್ರ 8 ದಿನ ದೆಹಲಿಯಲ್ಲಿ ಯಾಕಿದ್ದರು? ಯಾವ ತನಿಖಾ ಸಂಸ್ಥೆ ಇವರನ್ನು ವಿಚಾರಣೆ ನಡೆಸುತ್ತಿದೆ ಎಂದು ನನಗೆ ಗೊತ್ತು ಎಂದು ಹೊಸ ತಿರುವು ನೀಡಿದ್ದಾರೆ
ಬಿ ವೈ ವಿಜಯೇಂದ್ರ ವಿರುದ್ಧ ಸರಣಿ ಆರೋಪ ಮಾಡಿದ ಬಸನಗೌಡ ಪಾಟೀಲ ಯತ್ನಾಳ

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿರುವುದರ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಶಿಸ್ತು ಸಮಿತಿ ಕಳಿಸಿದ ನೋಟಿಸ್‌ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿ ಮುಖಂಡರು ನೋಟಿಸ್ ಕೊಟ್ಟಿರುವುದಾಗಿ ಹೇಳುತ್ತಿದ್ದಾರೆ. ಆದರೆ ಈವರೆಗೂ ನನಗೆ ನೋಟಿಸ್ ಬಂದಿಲ್ಲ. ನನಗೆ ನೋಟಿಸ್ ಬಂದಿರುವುದು ವಿಜಯೇಂದ್ರ ಅವರಿಗೆ ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿದ್ದಾರೆ. ಯಾರ ಬಳಿಯೂ ನೋಟಿಸ್ ಪತ್ರ ಇಲ್ಲ. ನೋಟಿಸ್ ನೀಡಿರುವುದಾಗಿ ಹೇಳಿಕೆ ನೀಡಿ ಮೂರು ದಿನವಾದರೂ, ಎಲ್ಲಿಯೂ ನೋಟಿಸ್ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

‘ಹೆದರಿಸುವ ಸಲುವಾಗಿ ನೋಟಿಸ್ ಕೊಡಲಾಗಿದೆ. ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಚಿವರೊಬ್ಬರು ದೂರವಾಣಿ ಕರೆಮಾಡಿ ನನಗೆ ಹೇಳಿದ್ದಾರೆ. ಫೆ. 21ರ ನಂತರ ಕೇಂದ್ರ ನಾಯಕರು ನೋಟಿಸ್ ವಾಪಸ್ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ಯಾರ ಬೆದರಿಕೆಗೂ ಅಂಜುವುದಿಲ್ಲ’ ಎಂದಿದ್ದಾರೆ.

ನನಗೆ ನೋಟಿಸ್ ತಲುಪಿಲ್ಲ. ನೋಟಿಸ್ ಬಂದ ಬಳಿಕ ವಿವರವಾಗಿ ಉತ್ತರ ನೀಡುತ್ತೇನೆ. ನಾನು ಸತ್ಯದ ಪರ ಮಾತನಾಡುತ್ತಿದ್ದೇನೆಯೇ ಹೊರತು, ಯಾರ ವಿರುದ್ಧವೂ ಮಾತನಾಡುತ್ತಿಲ್ಲ. ಯಾವುದಕ್ಕೂ ಅಂಜುವುದಿಲ್ಲ. ಯಾರ ಮುಲಾಜಿನಲ್ಲೂ ಇಲ್ಲ ಎಂದು ಒಂದು ದಿನದ ಹಿಂದೆ ಯತ್ನಾಳ್‌ ಹೇಳಿದ್ದರು. ಇದೀಗ ಮತ್ತೆ, ನೋಟಿಸಿನ ಕುರಿತು ಯಾವುದೇ ಭಯವಿಲ್ಲ ಎಂದು ತಿಳಿಸಿದ್ದಾರೆ.

ವಿಜಯೇಂದ್ರ ಹಾಗೂ ನಿರಾಣಿಯಿಂದ ಪಂಚಮಸಾಲಿ ಸಮಾವೇಶ ವಿಫಲಗೊಳಿಸುವ ಯತ್ನ

‘ವೀರಶೈವ ಲಿಂಗಾಯತ ಸ್ವಾಮೀಜಿಗಳು ಬೆಂಗಳೂರಿನಲ್ಲಿ ಸಭೆ ನಡೆಸಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಯಾರೋ ಒಬ್ಬರು ವೀರಶೈವ ಲಿಂಗಾಯತ ಸಮುದಾಯವನ್ನು ಹೈಜಾಕ್ ಮಾಡುವ ಉದ್ದೇಶವನ್ನು ಸ್ವಾಮೀಜಿಗಳು ಮನಗಂಡಿದ್ದಾರೆ. ಸಮುದಾಯವನ್ನು ತಮ್ಮ ಮಗನ ರಾಜಕೀಯ ಬೆಳವಣಿಗೆಗಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರ ಮೇಲೆ ಹರಿಹಾಯ್ದಿದ್ದಾರೆ.

ಸಚಿವ ಮುರುಗೇಶ ನಿರಾಣಿ, ವಿಜಯೇಂದ್ರ ಸೇರಿ ಪಂಚಮಸಾಲಿ ಸಮುದಾಯ ಒಡೆಯುವ ಪ್ರಯತ್ನ ನಡೆಸಿದ್ದಾರೆ. ಫೆ. 21ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶ ಹಾಳುಮಾಡಿ, ವಿಫಲಗೊಳಿಸುವ ಷಡ್ಯಂತ್ರ ನಡೆದಿದೆ. ಆದರೆ ರಾಜ್ಯದ ಮೂಲೆ ಮೂಲೆಯಿಂದ ಪಂಚಮಸಾಲಿಗರು ಬರಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿಗಳ ಹೋಲ್‌ ಸೇಲ್ ವ್ಯಾಪಾರ

ರಾಜ್ಯದಲ್ಲಿ ಯಾರು ರಾಜಾಹುಲಿ ಆಗುತ್ತಾರೆ; ಯಾರು ಬೆಟ್ಟದ ಇಲಿ ಆಗುತ್ತಾರೆ ಎಂದು ಜನರೇ ತೀ‌ರ್ಮಾನ ಮಾಡುತ್ತಾರೆ. ಲೂಟಿ ಹೊಡೆದ ಹಣದಿಂದ ಕುತಂತ್ರಗಳು ನಡೆಯುತ್ತಿವೆ. ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಹಣದ ಆಟ ಇದೆ. ಹೋಲ್ಸೇಲ್ ವ್ಯಾಪಾರದಂತೆ ವರ್ಗಾವಣೆ ಮಾಡಲಾಗಿದೆ. ವಿರೋಧ ಪಕ್ಷಗಳು ಸತ್ತಿದೆ. ಅವರೂ ಇವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಯತ್ನಾಳ್, ವಿಜಯೇಂದ್ರ 8 ದಿನ ದೆಹಲಿಯಲ್ಲಿ ಯಾಕಿದ್ದರು? ಯಾವ ತನಿಖಾ ಸಂಸ್ಥೆ ಇವರನ್ನು ವಿಚಾರಣೆ ನಡೆಸುತ್ತಿದೆ ಎಂದು ನನಗೆ ಗೊತ್ತು ಎಂದು ಹೊಸ ತಿರುವು ನೀಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com