ಸದ್ಯದ ಮೀಸಲಾತಿ ಮೇಲಾಟದ ಹಿಂದಿರುವ ಅಸಲೀ ಹಿತಾಸಕ್ತಿಗಳೇನು?

ಸದ್ಯ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟ ಮತ್ತು ಅದೇ ಸಮುದಾಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜಾತಿ ರಾಜಕಾರಣ ಒಂದು ರೀತಿಯಲ್ಲಿ ಹಾವು ಏಣಿ ಆಟದಂತೆ ಕಾಣಿಸುತ್ತಿದೆ.
ಸದ್ಯದ ಮೀಸಲಾತಿ ಮೇಲಾಟದ ಹಿಂದಿರುವ ಅಸಲೀ ಹಿತಾಸಕ್ತಿಗಳೇನು?

ರಾಜ್ಯ ರಾಜಕಾರಣದಲ್ಲಿ ಸದ್ಯ ರಾಜಕಾರಣಿಗಳಿಗಿಂತ ಮಠಾಧೀಶರು ಸದ್ದು ಮಾಡತೊಡಗಿದ್ದಾರೆ. ಮೀಸಲಾತಿ, ಧರ್ಮ ಮತ್ತು ಜಾತಿಯ ಹಕ್ಕೊತ್ತಾಯಗಳ ಮೂಲಕ ಅರ್ಧ ಡಜನ್ ಗೂ ಅಧಿಕ ಮಠಾಧೀಶರು ಬೀದಿ ಹೋರಾಟಕ್ಕಿಳಿದಿದ್ದರೆ, ಅದರ ದುಪ್ಪಟ್ಟು ಮಂದಿ ತಮ್ಮ ತಮ್ಮ ಜಾತಿ-ಸಮುದಾಯಗಳ ಪರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಕೆಲವೇ ದಿನಗಳಲ್ಲಿ ಬೀದಿಗಿಳಿಯುವ ಎಚ್ಚರಿಕೆ ರವಾನಿಸಿದ್ದಾರೆ.

ಹಾಗಾಗಿ, ರಾಜ್ಯದ ಮಟ್ಟಿಗೆ ಸರ್ಕಾರವನ್ನು ನಿರ್ದೇಶಿಸಬೇಕಾಗಿದ್ದ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯ ಸ್ಥಾನದಲ್ಲಿ ಧರ್ಮ ಮತ್ತು ಜಾತಿ ಮಠಗಳು ದಿಕ್ಸೂಚಿಗಳಂತೆ ಕೆಲಸ ಮಾಡತೊಡಗಿವೆ. ಸಂವಿಧಾನ ಖಾತರಿಪಡಿಸಿರುವ ಮೀಸಲಾತಿ ಮತ್ತಿತರ ಹಕ್ಕುಗಳನ್ನು, ಅವಕಾಶಗಳನ್ನು ಪಡೆದುಕೊಳ್ಳಲು ಜನಸಮುದಾಯಗಳು ನೇರವಾಗಿ ರಾಜಕೀಯ ಮತ್ತು ಸಾಮಾಜಿಕ ಹೋರಾಟಗಳ ಹಕ್ಕು ಮಂಡಿಸುವುದು, ಹಕ್ಕೊತ್ತಾಯ ಮಾಡುವುದು ಸಹಜ. ಆದರೆ, ಈಗ ಕರ್ನಾಟಕದಲ್ಲಿ ಏಕಾಏಕಿ ಭುಗಿಲೆದ್ದಿರುವ ಮೀಸಲಾತಿ ಹೋರಾಟಗಳನ್ನು ನಿರ್ದೇಶಿಸುತ್ತಿರುವುದು ಆಯಾ ಜಾತಿ-ಸಮುದಾಯಗಳ ಧಾರ್ಮಿಕ ಪೀಠಗಳು ಎಂಬುದು ಗಮನಾರ್ಹ.

ಆ ಹಿನ್ನೆಲೆಯಲ್ಲಿಯೇ, ಬಲಾಢ್ಯ ಸಮುದಾಯಗಳೇ ಮೀಸಲಾತಿಯ ಹುಯಿಲೆಬ್ಬಿಸುತ್ತಿರುವ ಈ ಬೆಳವಣಿಗೆಯ ಹಿಂದೆ ಸಹಜ ಸಾಮಾಜಿಕ ನ್ಯಾಯದ ಪ್ರಶ್ನೆಗಿಂತ ಬೇರೇನೋ ರಾಜಕೀಯ ಹಿತಾಸಕ್ತಿಗಳು, ಲೆಕ್ಕಾಚಾರಗಳು ಕೆಲಸ ಮಾಡುತ್ತಿರಬಹುದು ಎಂಬ ಅನುಮಾನಗಳು ದಟ್ಟವಾಗಿವೆ. ಅದರಲ್ಲೂ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತು ಕುರುಬ ಮೀಸಲಾತಿ ಹೋರಾಟಗಳ ಹಿಂದೆ ಇಂತಹ ರಾಜಕೀಯ ನೆರಳಿದೆ, ಸಂಘಪರಿವಾರದ ತಂತ್ರಗಾರಿಕೆಯ ಕರಿನೆರಳಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮೀಸಲಾತಿ ವ್ಯವಸ್ಥೆಯ ವಿರುದ್ದ ದಶಕಗಳಿಂದ ರಾಜಕೀಯ ಅಭಿಯಾನವನ್ನೇ ನಡೆಸುತ್ತಿದ್ದ ಬಿಜೆಪಿ ಮತ್ತು ಸಂಘಪರಿವಾರದ ಸರ್ಕಾರಗಳೇ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ, ಅಂತಹ ಸರ್ಕಾರಗಳ ಭಾಗವಾಗಿರುವವರೇ ಮೀಸಲಾತಿ ಹೋರಾಟಗಳ ನೇತೃತ್ವ ವಹಿಸಿ ತಮ್ಮದೇ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವ ವಿಲಕ್ಷಣ ವಿದ್ಯಮಾನವನ್ನು ಗಮನಿಸಿದರೆ ಅಂತಹ ತಂತ್ರಗಾರಿಕೆಯ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ಸಿಗದೇ ಇರದು. ಅದೇ ಹೊತ್ತಿಗೆ, ಇದೇ ಬಿಜೆಪಿ ಮತ್ತು ಸಂಘಪರಿವಾರ, ಬಾಬಾ ಸಾಹೇಬ್ ಅಂಬೇಡ್ಕರರ ಆಶಯದಂತೆ ಜಾರಿಗೆ ಬಂದ ಮೀಸಲಾತಿ ಮತ್ತು ಅದನ್ನು ಖಾತರಿಪಡಿಸುವ ಸಂವಿಧಾನದ ವಿರುದ್ಧವೇ ಇದ್ದವರು. ಸಂವಿಧಾನ ಬದಲಾವಣೆಯ ಮೂಲಕ ಮೀಸಲಾತಿ ವ್ಯವಸ್ಥೆಯನ್ನು ಬದಲಾಯಿಸುವ ಪ್ರಯತ್ನವನ್ನೂ ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೇ ಅಧಿಕಾರ ಸಿಕ್ಕಾಗೆಲ್ಲಾ ಪ್ರಯತ್ನಿಸುತ್ತಲೇ ಇದ್ದವರು.

ತೀರಾ ಇತ್ತೀಚೆಗೆ, ಬಿಜೆಪಿಯ ಕೇಂದ್ರ ಸಚಿವರಿಂದ ಹಿಡಿದು ರಾಜ್ಯಮಟ್ಟದ ನಾಯಕರವರೆಗೆ ತಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಸಾರ್ವಜನಿಕವಾಗೇ ಹೇಳುತ್ತಿದ್ದಾರೆ. ಇಂತಹ ಸಂವಿಧಾನ ಮತ್ತು ಮೀಸಲಾತಿ ವಿರೋಧಿ ನಿಲುವಿನ ಪಕ್ಷವೊಂದು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಅದೇ ಪಕ್ಷದ ನಾಯಕರ ಪ್ರತ್ಯಕ್ಷ- ಪರೋಕ್ಷ ನೇತೃತ್ವದಲ್ಲೇ ಮೀಸಲಾತಿಗಾಗಿ ಏಕ ಕಾಲಕ್ಕೆ ಹಲವು ಸಮುದಾಯಗಳು ಎದ್ದು ಕೂತಿವೆ ಎಂದರೆ; ಆ ವಿದ್ಯಮಾನವನ್ನು ರಾಜಕೀಯ ತಂತ್ರಗಾರಿಕೆ, ಷಢ್ಯಂತ್ರವಲ್ಲದೆ ಬೇರೆ ಹೇಗೆ ಅರ್ಥೈಸಿಕೊಳ್ಳಲು ಸಾಧ್ಯ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಲಿಂಗಾಯತ ಮೀಸಲಾತಿ ಹೋರಾಟದ ವಿಷಯದಲ್ಲಂತೂ ರಾಜ್ಯದ ಮಠಾಧೀಶರು ತಮ್ಮದೇ ಸಮುದಾಯದ ಬಿ ಎಸ್ ಯಡಿಯೂರಪ್ಪ ಅವರನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿ, ಸಂವಿಧಾನಬದ್ಧವಾಗಿ ಆಡಳಿತ ನಡೆಸಬೇಕಾದ ಒಬ್ಬ ಮುಖ್ಯಮಂತ್ರಿಯಾಗಿ ನೋಡುವುದಕ್ಕಿಂತ, ಲಿಂಗಾಯತ ಸಮುದಾಯದ ಅರಸೊತ್ತಿಗೆಯ ದೊರೆ ಎಂಬಂತೆ ನೋಡುತ್ತಿರುವಂತಿದೆ. ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಶತಮಾನಗಳಿಂದ ಇತರೆ ಎಲ್ಲಾ ಸಮುದಾಯಗಳಿಗಿಂತ ಗಾವುದ ದೂರು ಮುಂದಿರುವ ಮತ್ತು ಆ ಕಾರಣಕ್ಕಾಗಿ ಎಲ್ಲಾ ರೀತಿಯ ಅಧಿಕಾರ, ಸಂಪತ್ತು ಅನುಭವಿಸಿರುವ ಸಮುದಾಯಕ್ಕೆ ಸಾರಾಸಗಟಾಗಿ ಮೀಸಲಾತಿ ನೀಡಬೇಕು ಎಂದು ಸಮುದಾಯದ ಮಠಾಧೀಶರು ಸಭೆಗಳ ಮೇಲೆ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ಒತ್ತಾಯ ತರುತ್ತಿರುವುದು ವಿಪರ್ಯಾಸಕರ.

ಹೀಗೆ ಬಲಾಢ್ಯ ಸಮುದಾಯಗಳೇ ಮೀಸಲಾತಿಗಾಗಿ ಹೋರಾಟ ನಡೆಸುವ ಮೂಲಕ, ಇಡೀ ಮೀಸಲಾತಿ ವ್ಯವಸ್ಥೆಯನ್ನೇ ನಗೆಪಾಟಲಿಗೆ ಈಡುಮಾಡಿ, ಅದನ್ನು ಅಪ್ರಸ್ತುತಗೊಳಿಸಿ, ಪರೋಕ್ಷವಾಗಿ ಮೀಸಲಾತಿಯನ್ನು ತೆಗೆದುಹಾಕುವ ಸಂಘಪರಿವಾರದ ಅಜೆಂಡಾವನ್ನು ಜಾರಿಗೆ ತರಲಾಗುತ್ತಿದೆಯೇ? ಸಂವಿಧಾನ ಬದಲಾವಣೆಯ ಮೂಲಕ ಏನನ್ನು ಸಾಧಿಸಲು ಸಂಘಪರಿವಾರ ಯತ್ನಿಸಿತ್ತೋ, ಅದೇ ಕೆಲಸವನ್ನು ಮೀಸಲಾತಿಗಾಗಿನ ಸಾಮೂಹಿಕ ಹೋರಾಟದ ಮೂಲಕ ಸಾಧಿಸಲಾಗುತ್ತಿದೆಯೇ? ಎಂಬ ಗಂಭೀರ ಅನುಮಾನಗಳಿಗೆ ಈ ಹೋರಾಟ ಇಂಬು ನೀಡಿದೆ.

ಒಂದು ಕಡೆ, ಹೀಗೆ ಸಂವಿಧಾನ ಮತ್ತು ಸಂವಿಧಾನದ ಆಶಯಗಳನ್ನೇ ಅಪ್ರಸ್ತುತಗೊಳಿಸುವ ಮೂಲಕ ಶತಮಾನಗಳ ಶೋಷಿತ, ಅವಕಾಶವಂಚಿತ ಜನರ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರವಾಗಿ ಈ ದಿಢೀರ್ ಮೀಸಲಾತಿ ಆಂದೋಲನ ಗೋಚರಿಸುತ್ತಿದ್ದರೆ, ಮತ್ತೊಂದು ಕಡೆ ತತಕ್ಷಣಕ್ಕೆ ರಾಜ್ಯ ರಾಜಕಾರಣ ಮತ್ತು ಅಧಿಕಾರದ ಮೇಲೆ ಒಂದು ಪ್ರಬಲ ಸಮುದಾಯದ ಧರ್ಮಗುರುಗಳು ಸಂಪೂರ್ಣ ಹಿಡಿತ ಸಾಧಿಸಿ ಪರೋಕ್ಷ ಅಧಿಕಾರ ಹಿಡಿಯವ ಅಪಾಯಕಾರಿ ಹಪಾಹಪಿಯಂತೆಯೂ ಕಾಣಿಸುತ್ತಿದೆ.

ಪ್ರಜಾಸತ್ತೆಯ, ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರಣದಿಂದ ಕಳೆದ ಹತ್ತಾರು ದಶಕಗಳಿಂದ ಕೇವಲ ಮಠ- ಧಾರ್ಮಿಕ ಆಚರಣೆಗೆ ಸೀಮಿತವಾಗಿದ್ದು, ಸಮುದಾಯದೊಳಗಿನ ಸಾಮಾಜಿಕ ಮಾನ್ಯತೆಗೆ ಕುಸಿದಿದ್ದ ಮಠಗಳು, ಕಳೆದ ಒಂದೂವರೆ ದಶಕದಲ್ಲಿ ರಾಜ್ಯದಲ್ಲಿ ಲಿಂಗಾಯತ ಜಾತಿ ರಾಜಕಾರಣ ಪ್ರವರ್ಧಮಾನಕ್ಕೆ ಬಂದ ಬಳಿಕ ಕ್ರಮೇಣ ರಾಜಕೀಯವಾಗಿಯೂ ಪ್ರಬಲವಾಗತೊಡಗಿದ್ದವು. ಆ ಮೊದಲು ತಮ್ಮ ತಮ್ಮ ಸಮುದಾಯ, ಸಂಸ್ಥೆಗಳಿಗೆ ಬೇಕಾದ ಆದೇಶ, ಸರ್ಕಾರಿ ನೀತಿಗಳ ಮಟ್ಟಿಗೆ ಮಾತ್ರ ಸರ್ಕಾರದಲ್ಲಿ ಕೈಯಾಡಿಸುತ್ತಿದ್ದ ಮಠಗಳು, ಕ್ರಮೇಣ ಸರ್ಕಾರದ ಸಾರ್ವಜನಿಕ ನೀತಿ-ನಿಲುವುಗಳಲ್ಲೂ ಪರೋಕ್ಷವಾಗಿ ಮೂಗು ತೂರಿಸತೊಡಗಿದ್ದವು. ಪ್ರಮುಖ ನಾಯಕರೊಬ್ಬರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯಾಗಿ ಮಠಗಳನ್ನು ಬಳಸಿಕೊಂಡು, ಸಮುದಾಯವನ್ನು ಬೆನ್ನಿಗಿಟ್ಟುಕೊಂಡು ಶಕ್ತಿಪ್ರದರ್ಶನ ಮಾಡಿದರು. ಅದಕ್ಕೆ ಪ್ರತಿಯಾಗಿ ಮಠಗಳಿಗೆ ಬಜೆಟ್ ಅನುದಾನ ಘೋಷಿಸಿದರು. ಒಂದೂವರೆ ದಶಕದ ಹಿಂದೆ ಆರಂಭವಾದ ಈ ಹೊಸ ಸಂಪ್ರದಾಯ, ಈಗ ಮಠಗಳೇ ಸರ್ಕಾರದ ಮೇಲೆ ಸವಾರಿ ಮಾಡುವ ಹಂತಕ್ಕೆ ತಲುಪಿದೆ.

ಹಾಗೇ, ತನ್ನ ಜನಪರ ಕೆಲಸ, ರಾಜಕೀಯ ಆದರ್ಶಗಳ ಬದಲಾಗಿ, ಜಾತಿ ಮತ್ತು ಸಮುದಾಯವನ್ನು, ಆ ಸಮುದಾಯದ ಮಠಗಳನ್ನು ಬೆನ್ನಿಗೆ ಕಟ್ಟಿಕೊಂಡ ನಾಯಕ, ತನ್ನ ರಾಜಕೀಯ ಏಳು ಬೀಳುಗಳ ಸಂದರ್ಭದಲ್ಲಿ ಇದೇ ಜಾತಿ ಮತ್ತು ಮಠವನ್ನೇ ಗುರಾಣಿಯಾಗಿಸಿಕೊಂಡಿದ್ದನ್ನೂ ತೀರಾ ಇತ್ತೀಚೆಗೂ ಕಂಡಿದ್ದೇವೆ. ಅದೇ ಮೀಸಲಾತಿ ವಿಷಯವನ್ನೇ ಮುಂದಿಟ್ಟುಕೊಂಡು, ತಮ್ಮ ವಿರುದ್ಧದ ಕೇಂದ್ರದ ನಾಯಕರ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವರಸೆ ಕೆಲವೇ ದಿನಗಳ ಹಿಂದಷ್ಟೇ ಸಾಕಷ್ಟು ಚರ್ಚೆಯಾಗಿತ್ತು.

ಹಾಗಾಗಿ, ಸದ್ಯ ರಾಜ್ಯದಲ್ಲಿ ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟ ಮತ್ತು ಅದೇ ಸಮುದಾಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜಾತಿ ರಾಜಕಾರಣ ಒಂದು ರೀತಿಯಲ್ಲಿ ಹಾವು ಏಣಿ ಆಟದಂತೆ ಕಾಣಿಸುತ್ತಿದೆ. ಆದರೆ, ಈ ಹಾವುಏಣಿ ಆಟದಲ್ಲಿ ನಿಜವಾಗಿಯೂ ಬಲಿಪಶುವಾಗುವುದು ಇಡೀ ಮೀಸಲಾತಿ ವ್ಯವಸ್ಥೆಯೇ? ಅಥವಾ ಈಗಾಗಲೇ ಮೀಸಲಾತಿ ಪಡೆಯುತ್ತಿರುವ ಶೋಷಿತ ಜನವರ್ಗಗಳೇ? ಅಥವಾ ರಾಜ್ಯದ ಆಡಳಿತ ವ್ಯವಸ್ಥೆಯೇ? ಎಂಬುದನ್ನು ಕಾದುನೋಡಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com