ಸ್ಫೋಟ ಪ್ರಕರಣ: ಒಳಗೆ ಹೆಗ್ಗಣ ಬಿಟ್ಟು ಮೇಲೆ ತೇಪೆ ಹಾಕಿದರೇ ಶಿವಮೊಗ್ಗ ಪೊಲೀಸರು?

ಘಟನೆಯ ಬೆನ್ನಲ್ಲೇ ಕ್ರಷರ್ ಗುತ್ತಿಗೆದಾರ, ಮ್ಯಾನೇಜರ್ ಜೊತೆ ಸ್ಫೋಟಕ ದಂಧೆಕೋರ ಅಣ್ಣಪ್ಪ ಹುಣಸೋಡು ಎಂಬಾತನ್ನು ಬಂಧಿಸಿದ್ದ, ಪೊಲೀಸರು ಮೂರೇ ದಿನಕ್ಕೆ ಆತನನ್ನು ಮಾತ್ರ ಬಿಟ್ಟು ಮನೆಗೆ ಕಳಿಸಿದ್ದು ಯಾಕೆ? ತನಿಖೆ ಪೂರ್ಣಗೊಳ್ಳುವ ಮುನ್ನವೇ ಇಡೀ ಘಟನೆಯ ಸೂತ್ರಧಾರ ಎನ್ನಲಾಗುತ್ತಿರುವ ಆತನ ಬಿಟ್ಟು ಕಳಿಸಲು ಜಿಲ್ಲಾ ಪೊಲೀಸರ ಮೇಲೆ ಇದ್ದ ಒತ್ತಡವೇನು?
ಸ್ಫೋಟ ಪ್ರಕರಣ: ಒಳಗೆ ಹೆಗ್ಗಣ ಬಿಟ್ಟು ಮೇಲೆ ತೇಪೆ ಹಾಕಿದರೇ ಶಿವಮೊಗ್ಗ ಪೊಲೀಸರು?

ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದ, ಶಿವಮೊಗ್ಗ ನಗರದ ಜನತೆ ಸಜೀವ ಸಮಾಧಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಭೀಕರ ಸ್ಫೋಟ ಸಂಭವಿಸಿದ 23 ದಿನಗಳು ಉರುಳಿವೆ. ಘಟನೆ ನಡೆದ ಆರಂಭದ ಎರಡು ಮೂರು ದಿನ ಘಟನೆಗೆ ಕಾರಣವಾದ ಕಲ್ಲುಗಣಿಗಾರಿಕೆ ಮತ್ತು ಕ್ರಷರ್ ಮಾಫಿಯಾ ವಿರುದ್ಧ ಸ್ವತಃ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು ಸೇರಿದಂತೆ ಘಟಾನುಘಟಿ ನಾಯಕರು ಗುಡುಗಿದ್ದರು. ತಪ್ಪಿಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಮಾತನ್ನಾಡಿದ್ದರು.

ಆದರೆ, ಈವರೆಗೆ ಆ ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಯಾವುದೇ ತನಿಖೆಯನ್ನು ಕೈಗೆತ್ತಿಕೊಂಡಿಲ್ಲ! ಪೊಲೀಸ್ ತನಿಖೆ ಹೊರತುಪಡಿಸಿ ಸರ್ಕಾರದ ಮಟ್ಟದಲ್ಲಿ ಯಾವುದೇ ತನಿಖೆಯ, ವಿಚಾರಣೆಯ ಪ್ರಯತ್ನವೇ ಇನ್ನೂ ಆರಂಭವಾಗಿಲ್ಲ. ಇಡೀ ಘಟನೆಯಲ್ಲಿ ಜಿಲ್ಲಾಧಿಕಾರಿಯಿಂದ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಯವರೆಗೆ, ಪೊಲೀಸ್, ಗಣಿ, ಪರಿಸರ, ಮಹಾನಗರಪಾಲಿಕೆ ಮತ್ತು ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳಿಂದ ತಳಮಟ್ಟದ ಸಿಬ್ಬಂದಿಯವರೆಗೆ ಎಲ್ಲರ ಲೋಪ, ಹೊಣೆಗೇಡಿತನ ಎದ್ದು ಕಾಣುತ್ತಿದ್ದರೂ, ಯಾವೊಬ್ಬ ಚಪರಾಸಿಯನ್ನೂ ಘಟನೆಗೆ ಹೊಣೆ ಮಾಡಿ ಕ್ರಮ ಜರುಗಿಸಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪೊಲೀಸರು ಘಟನೆಯ ಕುರಿತ ಅಪರಾಧ ತನಿಖೆಯನ್ನು ಮುಂದುವರಿಸಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ದಂಧೆಕೋರರ ಪೈಕಿ ಈವರೆಗೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕ್ರಷರ್ ಮಾಲೀಕ, ಜಾಗದ ಮಾಲೀಕ, ಕ್ರಷರ್ ನಿರ್ವಾಹಕ, ಸ್ಫೋಟಕ ಸಾಗಣೆದಾರ, ವಹಿವಾಟುದಾರರು ಬಂಧಿತರಲ್ಲಿ ಸೇರಿದ್ದಾರೆ. ಆರು ತಂಡಗಳಾಗಿ ಈ ಅಪರಾಧ ಕೃತ್ಯದ ಬೆನ್ನು ಬಿದ್ದು ಶಿವಮೊಗ್ಗ ಪೊಲೀಸರು ಆಂಧ್ರ, ಮುಂಬೈವರೆಗೆ ತನಿಖೆಯ ಜಾಲ ವಿಸ್ತರಿಸಿ ಈ ಬಂಧನಗಳನ್ನು ಮಾಡಿದ್ದು ಶ್ಲಾಘನೀಯವೇ. ಆದರೆ, ಪೊಲೀಸರ ತನಿಖೆಯಲ್ಲೂ ನಿಜವಾದ ದಂಧೆಕೋರರು ಸಿಕ್ಕಿಬಿದ್ದಿಲ್ಲ; ಬದಲಾಗಿ ಕಿಂಗ್ ಪಿನ್ ಬಿಟ್ಟು ಆತನ ಸಹಚರರನ್ನು, ದಂಧೆಯ ಮತ್ತೊಂದು ತುದಿಯಲ್ಲಿದ್ದವರನ್ನೇ ಮುಖ್ಯ ಅಪರಾಧಿಗಳೆಂದು ಬಿಂಬಿಸಲಾಗಿದೆ ಎಂಬ ಮಾತೂ ಕೇಳಿಬಂದಿದೆ.

ಅಣ್ಣಪ್ಪನ ವಿರುದ್ಧ ದಾಖಲಾಗಿದ್ದ ಹಳೆಯ ಸ್ಫೋಟಕ ಬಳಕೆ ಪ್ರಕರಣ
ಅಣ್ಣಪ್ಪನ ವಿರುದ್ಧ ದಾಖಲಾಗಿದ್ದ ಹಳೆಯ ಸ್ಫೋಟಕ ಬಳಕೆ ಪ್ರಕರಣ

ಸುಮಾರು 1,350 ಕೆಜಿ ಸ್ಫೋಟಕಗಳನ್ನು ಆಂಧ್ರದಿಂದ ಕಳಿಸಿದವರು, ಘಟನೆ ಸಂಭವಿಸಿದ ಎಸ್ ಎಸ್ ಸ್ಟೋನ್ ಕ್ರಷರ್ಸ್ ಗುತ್ತಿಗೆದಾರ, ಜಮೀನು ಮಾಲೀಕರ ವಿರುದ್ಧದ ಪೊಲೀಸರ ದಿಟ್ಟ ಕ್ರಮ ಸರಿ. ಆದರೆ, ನೂರಾರು ಬಂಡೆ ಸ್ಫೋಟಕ್ಕೆ ಬಳಕೆಯಾಗುವ ಅಷ್ಟೊಂದು ಅಪಾರ ಪ್ರಮಾಣದ ಸ್ಫೋಟಕವನ್ನು ಇಲ್ಲಿಗೆ ತರಿಸಿಕೊಂಡವರು ಯಾರು?, ಹುಣಸೋಡಿನ ಆ ಕ್ರಷರ್ ಮಗ್ಗುಗಲ್ಲೇ 250 ಅಡಿ ಆಳದ ಬೃಹತ್ ಕ್ವಾರಿ ನಿರ್ಮಿಸಿ ಅದರ ಆಳದಲ್ಲಿ ಬೃಹತ್ ಐಸ್ ಬ್ಲಾಕ್ ಬಳಸಿ, ತಾಪಮಾನ ನಿಯಂತ್ರಿಸಿ, ಅಲ್ಲಿ ಭಾರೀ ಸ್ಫೋಟಕಗಳ ದಾಸ್ತಾನು ಮಾಡಿ, ಅಲ್ಲಿಂದ ಜಿಲ್ಲೆಯಷ್ಟೇ ಅಲ್ಲದೆ, ಬಹುತೇಕ ಮಧ್ಯಕರ್ನಾಟಕ ಮತ್ತು ಕರಾವಳಿಯ ಕ್ವಾರಿಗಳಿಗೆ ಹೋಲ್ ಸೇಲ್ ಸ್ಫೋಟಕ ಸರಬರಾಜು ಮಾಡುತ್ತಿದ್ದರು. ನಿಜವಾಗಿಯೂ ಕೇವಲ ಸುತ್ತಮುತ್ತಲ ಕ್ವಾರಿ ಬಳಕೆಯ ಸ್ಫೋಟಕವಷ್ಟೇ ಅಲ್ಲ; ಅಲ್ಲಿ ಅರ್ಧ ರಾಜ್ಯದ ಬೇಡಿಕೆಯ ಸ್ಫೋಟಕಗಳ ಬೃಹತ್ ಸಂಗ್ರಹಾಗಾರವೇ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಸ್ಥಳೀಯರ ಮಾಹಿತಿ. ಹಾಗಿದ್ದರೆ, ಬೃಹತ್ ಸ್ಫೋಟಕ ವಹಿವಾಟುದಾರ ಪ್ರಭಾವಿ ವ್ಯಕ್ತಿ ಯಾರು? ಎಂಬ ಬಗ್ಗೆ ಪೊಲೀಸರ ತನಿಖೆಯ ದಿಕ್ಕು ತಿರುಗಲೇ ಇಲ್ಲ ಏಕೆ? ಎಂಬ ಪ್ರಶ್ನೆಗಳು ಎದ್ದಿವೆ.

ಹಾಗೇ ಘಟನೆಯಲ್ಲಿ ಸಾವು ಕಂಡವರಲ್ಲಿ ಪ್ರಮುಖರಾದ ಸ್ಫೋಟಕ ವಿತರಣೆಗಾರರಲ್ಲಿ ಒಬ್ಬನಾದ ಭದ್ರಾವತಿಯ ಪ್ರವೀಣ್ ಮತ್ತು ತಲೆಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿರುವ ಶಶಿಯ ಬಗ್ಗೆ ಪೊಲೀಸ್ ತನಿಖೆ ಏನು ಹೇಳುತ್ತಿದೆ? ಯಾಕೆ ಅವರಿಬ್ಬರ ಮೊಬೈಲ್ ಕಾಲ್ ರೆಕಾರ್ಡ್ (ಸಿಡಿಆರ್) ಜಾಲಾಡಿ, ಸ್ಫೋಟಕಗಳ ಅಸಲೀ ದಂಧೆಕೋರನನ್ನು ಹೆಡೆಮುರಿಕಟ್ಟಲಿಲ್ಲ? ಘಟನೆಯ ಬೆನ್ನಲ್ಲೇ ಕ್ರಷರ್ ಗುತ್ತಿಗೆದಾರ, ಮ್ಯಾನೇಜರ್ ಜೊತೆ ಸ್ಫೋಟಕ ದಂಧೆಕೋರ ಅಣ್ಣಪ್ಪ ಹುಣಸೋಡು ಎಂಬಾತನ್ನು ಬಂಧಿಸಿದ್ದ, ಪೊಲೀಸರು ಮೂರೇ ದಿನಕ್ಕೆ ಆತನನ್ನು ಮಾತ್ರ ಬಿಟ್ಟು ಮನೆಗೆ ಕಳಿಸಿದ್ದು ಯಾಕೆ? ತನಿಖೆ ಪೂರ್ಣಗೊಳ್ಳುವ ಮುನ್ನವೇ ಇಡೀ ಘಟನೆಯ ಸೂತ್ರಧಾರ ಎನ್ನಲಾಗುತ್ತಿರುವ ಆತನ ಬಿಟ್ಟು ಕಳಿಸಲು ಜಿಲ್ಲಾ ಪೊಲೀಸರ ಮೇಲೆ ಇದ್ದ ಒತ್ತಡವೇನು? ಆಡಳಿತರೂಢ ಬಿಜೆಪಿ ಮತ್ತು ಅದರ ಶಾಸಕರಾದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಶೋಕ ನಾಯ್ಕ ಮತ್ತು ಅಣ್ಣಪ್ಪ ನಡುವಿನ ನಂಟು ಪೊಲೀಸರಿಗೆ ನುಂಗಲಾರದ ತುತ್ತಾಯಿತೆ?

ಸ್ಫೋಟ ಪ್ರಕರಣ: ಒಳಗೆ ಹೆಗ್ಗಣ ಬಿಟ್ಟು ಮೇಲೆ ತೇಪೆ ಹಾಕಿದರೇ ಶಿವಮೊಗ್ಗ ಪೊಲೀಸರು?
ಶಿವಮೊಗ್ಗ ಸ್ಫೋಟ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ ಸಚಿವರ ಸನ್ಮಾನ!

ಇಡೀ ಘಟನೆಯೊಂದಿಗೆ ಆಡಳಿತ ಪಕ್ಷ ಹೊಂದಿರುವ ಇಂತಹ ನೂರಾರು ನಂಟುಗಳೇ ಘಟನೆಯ ಪೊಲೀಸ್ ತನಿಖೆ ಒಂದು ರೀತಿಯಲ್ಲಿ ಹೆಗ್ಗಣವನ್ನು ಒಳಗೆ ಬಿಟ್ಟು ಮೇಲೆ ತೇಪೆ ಹಾಕುವ ಸರ್ಕಸ್ಸು ಆಗಲು ಕಾರಣವಾಯಿತೆ ಎಂಬ ಪ್ರಶ್ನೆಗಳೂ ಎದ್ದಿವೆ.

ಬಿಜೆಪಿ ಪ್ರಭಾವಿ ನಾಯಕರ ಕುಟುಂಬಗಳು ಶಿವಮೊಗ್ಗ ನಗರದ ಅಂಚಿನಲ್ಲಿ ನಡೆಯುತ್ತಿರುವ ಈ ಭೀಕರ ಗಣಿಗಾರಿಕೆ ಮತ್ತು ಕ್ರಷರ್ ಉದ್ಯಮದಲ್ಲಿ ಭಾಗಿಯಾಗಿವೆ ಎಂಬುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಾಹಿತಿಗಳೇ ಸಾರುತ್ತಿವೆ. ಜೊತೆಗೆ ಮಧ್ಯ ಕರ್ನಾಟಕ ಮತ್ತು ಕರಾವಳಿಯ ಸ್ಫೋಟಕ ಸರಬರಾಜುದಾರ ಎನ್ನಲಾಗುತ್ತಿರುವ ಹುಣಸೋಡು ಅಣ್ಣಪ್ಪ ಎಂಬಾತ ಬಿಜೆಪಿ ಗ್ರಾಮಾಂತರ ಶಾಸಕ ಅಶೋಕ ನಾಯ್ಕ ಅವರ ಬಲಗೈ ಬಂಟ ಎಂಬುದು ಕೂಡ ಸ್ಥಳೀಯವಾಗಿ ಜಗಜ್ಜಾಹೀರು. ಒಟ್ಟಾರೆ ಅಕ್ರಮ ಗಣಿ ಮತ್ತು ಕ್ರಷರ್ ದಂಧೆಯ ಹಿಂದೆ ಆಡಳಿತರೂಢ ಪಕ್ಷದ ಘಟಾನುಘಟಿಗಳ ಕೃಪಾಶೀರ್ವಾದವೇ ಹೀಗೆ ಇಂತಹದ್ದೊಂದು ಭೀಕರ ಘಟನೆ ನಡೆದರೂ ಆ ಬಗ್ಗೆ ಯಾವುದೇ ತನಿಖೆಯಾಗಲೀ, ಕ್ರಮವಾಗಲೀ ಜರುಗದಂತಹ ಹೀನಾಯ ಸ್ಥಿತಿ ನಿರ್ಮಾಣ ಮಾಡಿದೆ ಎಂಬುದು ಈ ದಂಧೆಯ ವಿರುದ್ಧ ಹೋರಾಡುತ್ತಿರುವ ಸಾಮಾಜಿಕ ಹೋರಾಟಗಾರರ ಹತಾಶೆ.

ಸ್ಫೋಟ ಪ್ರಕರಣ: ಒಳಗೆ ಹೆಗ್ಗಣ ಬಿಟ್ಟು ಮೇಲೆ ತೇಪೆ ಹಾಕಿದರೇ ಶಿವಮೊಗ್ಗ ಪೊಲೀಸರು?
ಶಿವಮೊಗ್ಗ ಸ್ಫೋಟ ಸಂತ್ರಸ್ತೆ ಪೂಜಾ ನೋವಿಗೆ ಕುರುಡಾದ ಜಿಲ್ಲಾಡಳಿತ!

ಘಟನೆಯ ಕುರಿತು ಪ್ರಧಾನಿ ಮೋದಿಯವರಿಗೂ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ದೂರು ನೀಡಿದೆ. ಬಿಜೆಪಿ ನಾಯಕ ಹಾಗೂ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ಕುಮ್ಮಕ್ಕೇ ಈ ವಿಧ್ವಂಸಕ ಕೃತ್ಯಕ್ಕೆ ಕಾರಣ, ನಿಮ್ಮದೇ ಪಕ್ಷದವರಾದ ಅವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಒಕ್ಕೂಟ ನೇರ ಆರೋಪ ಮಾಡಿದೆ. ಆದರೆ, ಪತ್ರ ಬರೆದು ಹದಿನೈದು ದಿನವಾದರೂ ಪ್ರಧಾನಿ ಕಾರ್ಯಾಲಯದಿಂದ ಯಾವ ಸ್ಪಂದನೆಯೂ ಸಿಕ್ಕಿಲ್ಲ!

ಈ ನಡುವೆ, ರಾಜ್ಯ ಹೈಕೋರ್ಟ್ ಮತ್ತು ಲೋಕಾಯುಕ್ತಕ್ಕೂ ದೂರು ಸಲ್ಲಿಕೆಯಾಗಿವೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ನಗರ ಆಸುಪಾಸಿನ ಎಲ್ಲಾ ಕ್ವಾರಿ ಮತ್ತು ಕ್ರಷರ್ ಬಂದ್ ಮಾಡುವ ಕುರಿತು ಜಿಲ್ಲಾಧಿಕಾರಿಯ ವರದಿ ಕೇಳಿ, ವಿಚಾರಣೆಯನ್ನು ಮಾರ್ಚಿ ಮೊದಲ ವಾರಕ್ಕೆ ಮುಂದೂಡಿದೆ. ಘಟನೆಯ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಾಲಯ ಕೂಡ ಜಿಲ್ಲಾಧಿಕಾರಿಗೆ ನೋಟೀಸ್ ಜಾರಿ ಮಾಡಿ ವಿವರಣೆ ಕೇಳಿದೆ.

ಸ್ಫೋಟ ಪ್ರಕರಣ: ಒಳಗೆ ಹೆಗ್ಗಣ ಬಿಟ್ಟು ಮೇಲೆ ತೇಪೆ ಹಾಕಿದರೇ ಶಿವಮೊಗ್ಗ ಪೊಲೀಸರು?
ಶಿವಮೊಗ್ಗ ಮಹಾಸ್ಫೋಟ: ಮೂರು ದಿನಗಳ ಬಳಿಕವೂ ಉತ್ತರ ಸಿಗದ ಪ್ರಶ್ನೆಗಳು

ಮತ್ತೊಂದು ಕಡೆ, ಭೀಕರ ಸ್ಫೋಟ ಮತ್ತು ಕಂಪನದಿಂದ ಬೆಚ್ಚಿಬಿದ್ದಿದ್ದ ಶಿವಮೊಗ್ಗ ಜನರ ಕಣ್ಣೊರೆಸಲು ಸಿಎಂ ಯಡಿಯೂರಪ್ಪ ಕ್ವಾರಿ ಭೇಟಿ ವೇಳೆ ಘೋಷಿಸಿದ್ದ ಜಿಲ್ಲಾಧಿಕಾರಿ ನೇತೃತ್ವದ ತನಿಖೆಗೆ, ಸ್ವತಃ ಜಿಲ್ಲಾಧಿಕಾರಿಯೇ ಪ್ರಕರಣದಲ್ಲಿ ತಪ್ಪಿತಸ್ಥರು, ಅವರಿಂದ ಆಗಿರುವ ಹಲವು ಹಂತದ ಲೋಪಗಳೇ ಇಂತಹದ್ದೊಂದು ಭಯೋತ್ಪಾದನಾ ಕೃತ್ಯಕ್ಕೆ ಸರಿಸಮನಾದ ವಿದ್ವಂಸಕ ಕೃತ್ಯ ನಡೆಯಲು ಕಾರಣ. ಹಾಗಿರುವಾಗ ಅವರದೇ ನೇತೃತ್ವದಲ್ಲಿ ತನಿಖೆ ನಡೆಸುವುದು ಹಾಸ್ಯಾಸ್ಪದ ಎಂಬ ಟೀಕೆಗಳು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದಲೂ, ಸಾರ್ವಜನಿಕರಿಂದಲೂ ಕೇಳಿಬಂದ ಹಿನ್ನೆಲೆಯಲ್ಲಿ ಆ ತನಿಖೆಯನ್ನು ಕೈಬಿಡಲಾಗಿದೆ.

ವಿಧಾನಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಯ ವೇಳೆ, ಪ್ರತಿಪಕ್ಷ ನಾಯಕರ ಒತ್ತಾಯಕ್ಕೆ ಮಣಿದು, ಘಟನೆಯ ಕುರಿತು ಕಂದಾಯ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಸಿಎಂ ಘೋಷಿಸಿ ಹದಿನೈದು ದಿನಗಳೇ ಉರುಳಿದರೂ ಈವರೆಗೆ ಯಾವುದೇ ತಂಡ ಶಿವಮೊಗ್ಗ ಭೇಟಿ ನೀಡಿಲ್ಲ! ತನಿಖೆ ಆರಂಭವೇ ಆಗಿಲ್ಲ!!

ಒಟ್ಟಾರೆ, ಹುಣಸೋಡು ಕ್ವಾರಿಯ ಆಳದಲ್ಲಿ ಸಂಭವಿಸಿದ ಭೀಕರ ಸ್ಫೋಟದ ಹಿಂದಿನ ಸತ್ಯಗಳೂ, ಅಕ್ರಮ ದಂಧೆಯ ಹಿಂದಿನ ಪ್ರಭಾವಿಗಳ ಕೃಪಾಶೀರ್ವಾದ ಕೂಡ ಸ್ಫೋಟ ಘಟನೆಯಲ್ಲಿ ಬೂದಿಯಾದ ಶವಗಳಂತೆಯೇ ಮುಚ್ಚಿ ಮಾಯವಾಗುವ ದಿಕ್ಕಿನಲ್ಲೇ ಘಟನೆಯ ಪೊಲೀಸ್ ತನಿಖೆ ಕೂಡ ಸಾಗುತ್ತಿದೆ. ಸರ್ಕಾರದ ತನಿಖೆಯಂತೂ ಆರಂಭಕ್ಕೆ ಮುನ್ನವೇ ಕ್ವಾರಿ ಲಾಬಿಯಲ್ಲಿ ಹೂತುಹೋಗುವ ಹಂತದಲ್ಲಿದೆ!

ಸ್ಫೋಟ ಪ್ರಕರಣ: ಒಳಗೆ ಹೆಗ್ಗಣ ಬಿಟ್ಟು ಮೇಲೆ ತೇಪೆ ಹಾಕಿದರೇ ಶಿವಮೊಗ್ಗ ಪೊಲೀಸರು?
ಮಲೆನಾಡನ್ನು ಬೆಚ್ಚಿಬೀಳಿಸಿದ ಸ್ಫೋಟ: ಅಕ್ರಮ ಕ್ವಾರಿ ದಂಧೆಗೆ ಹಲವರ ಬಲಿ

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com