ಶೃಂಗೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತೆ ಐವರ ಬಂಧನ

ಶೃಂಗೇರಿಯ ಕ್ರಷರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸತತ ಐದು ತಿಂಗಳ ಕಾಲ 30ಕ್ಕೂ ಹೆಚ್ಚು ಜನ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣದಲ್ಲಿ ಸಂಘಪರಿವಾರದ ಮಂದಿಯ ಸರಣಿ ಬಂಧನ!
ಶೃಂಗೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತೆ ಐವರ ಬಂಧನ

ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜನವರಿ ಅಂತ್ಯದ ಹೊತ್ತಿಗೆ ಬೆಳಕಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 17 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ಆರಂಭದಲ್ಲಿ ಭಜರಂಗ ದಳ ಕಾರ್ಯಕರ್ತನಾಗಿದ್ದ ಪ್ರಮುಖ ಆರೋಪಿ ಸ್ಮಾಲ್ ಅಭಿ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಪ್ರಸನ್ನ, ಅಭಿಷೇಕ್, ಸಾಗರ್, ಸುಗಮ್, ವೆಂಕಟೇಶ್ ಎಂಬುವರನ್ನು ಬಂಧಿಸಲಾಗಿದೆ. ಹಾಗಾಗಿ, ಇದುವರೆಗೂ 13 ಆರೋಪಿಗಳನ್ನು ಬಂಧಿಸಿದಂತಾಗಿದೆ.

ಸ್ಮಾಲ್ ಅಭಿ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿ ಹೇಯ ಕೃತ್ಯವನ್ನು ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡು, ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಕಳೆದ ಸೆಪ್ಟೆಂಬರಿನಿಂದ ಜನವರಿ 27ರವರೆಗೆ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿಯ ಹೇಳಿಕೆ ಆಧರಿಸಿ ಚಿಕ್ಕಮಗಳೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಅವರು ಶೃಂಗೇರಿ ಠಾಣೆಗೆ ದೂರು ನೀಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ, ಆಘಾತಕಾರಿ ಪ್ರಕರಣದ ವಿಷಯದಲ್ಲಿ ಪೊಲೀಸರು ಲೋಪ ಎಸಗಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣ ಮತ್ತು ಪೊಲೀಸರ ಲೋಪದ ಕುರಿತು ವಿಧಾನಸಭೆಯಲ್ಲಿಯೂ ವಿಷಯ ಪ್ರಸ್ತಾಪವಾಗಿತ್ತು. ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಪ್ರಕರಣದ ಕುರಿತು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, "ಪ್ರಕರಣದ ಬಹುತೇಕ ಆರೋಪಿಗಳು ರಾಜಕೀಯ ಪಕ್ಷದಲ್ಲಿ, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಕುರಿತು ನಿಷ್ಪಕ್ಷಪಾತ ತನಿಖೆಯಾಗಬೇಕು" ಎಂದು ಒತ್ತಾಯಿಸಿದ್ದರು.

ಭಜರಂಗದಳ, ಶ್ರೀರಾಮಸೇನೆಯಂತಹ ಹಿಂದುತ್ವ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದವರೇ ಬಹುತೇಕರು ಈ ಪೈಶಾಚಿಕ ಕೃತ್ಯ ಎಸಗಿರುವ ಮತ್ತು ರಾಜ್ಯದಲ್ಲಿ ಸಂಘಪರಿವಾರದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯ ಕುರಿತು ಸಾಕಷ್ಟು ಅನುಮಾನಗಳು ಎದ್ದಿದ್ದವು. ಪ್ರಕರಣ ದಾಖಲಿಸಿಕೊಳ್ಳುವಲ್ಲಿ ಆಗಿರುವ ವಿಳಂಬ ಮತ್ತು ಆರೋಪಿಗಳ ಬಂಧನಕ್ಕೆ ಮೀನಾಮೇಷ ಎಣಿಸುತ್ತಿರುವ ಪೊಲೀಸರ ವಿರುದ್ಧವೂ ಆರೋಪಗಳು ಕೇಳಿಬಂದಿದ್ದವು. ಕೆಲವು ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ದವು.

ಶೃಂಗೇರಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಮತ್ತೆ ಐವರ ಬಂಧನ
ಮಲೆನಾಡಿಗರನ್ನು ಬೆಚ್ಚಿಬೀಳಿಸಿದ ಶೃಂಗೇರಿಯ ಸಾಮೂಹಿಕ ಅತ್ಯಾಚಾರ ಪ್ರಕರಣ!

ಆ ಹಿನ್ನೆಲೆಯಲ್ಲಿ ಕಳೆದ ವಾರ ಸಿಪಿಐ ಸಿದ್ದರಾಮಯ್ಯ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿತ್ತು. ಬಳಿಕ ಶೃಂಗೇರಿ ಠಾಣೆ ಪಿಎಸ್ಐ ಕೀರ್ತಿ ಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಸದ್ಯ ಎಎಸ್ಪಿ ಶೃತಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರೆದಿದೆ.

ಶೃಂಗೇರಿ ತಾಲೂಕಿನ ಹಳ್ಳಿಯೊಂದರ ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಳೆದ ಐದು ತಿಂಗಳಿನಿಂದ 30ಕ್ಕೂ ಹೆಚ್ಚು ಜನ ನಿರಂತರ ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ಇದಾಗಿದೆ. ಮೂಲತಃ ಬಯಲುಸೀಮೆಯೆ ಆ ಬಾಲಕಿ, ತಾಯಿಯನ್ನು ಕಳೆದುಕೊಂಡಿದ್ದಳು. ಬಳಿಕ ಆಕೆಯ ತಂದೆ ಬೇರೊಬ್ಬರನ್ನು ಮದುವೆಯಾಗಿದ್ದರಿಂದ, ಅಸಹಾಯಕಳಾದ ಆಕೆ ಮಲೆನಾಡಿನ ಹಳ್ಳಿಯ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದಳು. ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಮುಚ್ಚಿದ್ದರಿಂದ ಹೈಸ್ಕೂಲಿನಲ್ಲಿ ಓದುತ್ತಿದ್ದ ಬಾಲಕಿ, ತನ್ನ ಚಿಕ್ಕಮ್ಮನೊಂದಿಗೆ ಕ್ರಷರ್ ಕೆಲಸಕ್ಕೆ ಹೋಗುತ್ತಿದ್ದಳು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com