ಫೆಬ್ರವರಿ 9 ಮಂಗಳವಾರದ ಕಲಾಪ ಆರಂಭವಾಗುತ್ತಿದಂತೆ ಕಾಂಗ್ರೆಸ್ ನಾಯಕರು ಧರಣಿ ಆರಂಭಿಸಿದ್ದು, ಇದರ ಮದ್ಯೆಯೇ ನೂತನ ವಿಧಾನ ಪರಿಷತ್ನ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಫೆಬ್ರವರಿ 8 ರಂದು ಸದನದಲ್ಲಿ ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನ ಪರಿಷತ್ನಲ್ಲಿ ಅಂಗೀಕರಿಸಿದಕ್ಕೆ ಕಾಂಗ್ರೆಸ್ ನಾಯಕರು ಧರಣಿ ನಡೆಸಿ ಆಕ್ರೋಶ ಹೊರಹಾಕಿದ್ದರು.
ಧರಣಿಯನ್ನು ನಿಲ್ಲಿಸಿ ಸಭಾಪತಿ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಉಪಸಭಾಪತಿ ಎಂ.ಕೆ ಪ್ರಾಣೇಶ್ ಮನವಿ ಮಾಡಿಕೊಂಡರೂ ಕಾಂಗ್ರೆಸ್ ನಾಯಕರು ಧರಣಿ ನಿಲ್ಲಿಸಲು ನಿರಾಕರಿಸಿದ್ದಾರೆ.
ಧರಣಿಯ ಮಧ್ಯೆಯೆ ಚುನಾವಣಾ ಪ್ರಕ್ರಿಯೆಗಳು ಆರಂಭಗೊಂಡು ಹೊರಟ್ಟಿ ಅವರನ್ನು ಸಭಾಪತಿ ಹುದ್ದೆಗೆ ಆಯ್ಕೆ ಮಾಡುವಂತೆ ಕೆ.ವಿ ನಾರಾಯಣಾ ಸ್ವಾಮಿ ಮತ್ತು ಎನ್ ಅಪ್ಪಾಜಿ ಗೌಡ ಪ್ರಸ್ತಾವನೆ ಮಂಡಿಸಿದ್ದಾರೆ. ಇದಕ್ಕೆ ಜೆಡಿಎಸ್ ನಾಯಕ ಕೆ.ಟಿ ಶ್ರೀಕಂಠೇಗೌಡ ಮತ್ತು ಕೆ. ಎ ತಿಪ್ಪೇಸ್ವಾಮಿ ಅವರು ಅನುಮೋದಿಸಿದ ನಂತರ ಉಪಸಭಾಪತಿ ಅವರು ಬಸವರಾಜ್ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದ್ದಾರೆ.
ಕಾಂಗ್ರೆಸ್ ನಾಯಕರು ಧರಣಿ ಕೈಗೊಂಡಿದ್ದರಿಂದ ಸಭಾಪತಿ ಆಯ್ಕೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನಜೀರ್ ಅಹಮ್ಮದ್ ಸೇರಿದಂತೆ ಕಾಂಗ್ರೆಸ್ ನಾಯಕರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.
ನೂತನ ಸಭಾಪತಿಯಾದ ಬಸವರಾಜ್ ಹೊರಟ್ಟಿ ಅವರಿಗೆ ಕೋಟಾ ಶ್ರೀನಿವಾಸ್ ಪೂಜಾರಿ, ಬಸವರಾಜ್ ಬೊಮ್ಮಾಯಿ, ಸೇರಿದಂತೆ ಇತರೆ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಹೊರಟ್ಟಿ ಅವರು ಕಳೆದ ನಾಲ್ಕು ದಶಕಗಳಿಂದ ಮೇಲ್ಮನೆಯ ಸದಸ್ಯರಾಗಿದ್ದು, 7 ನೇ ಬಾರಿಗೆ ವಿಧಾನಾಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇತ್ತ ಧರಣಿ ನಿರತ ಕಾಂಗ್ರೆಸ್ ನಾಯಕರು ಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ಉಪಸಭಾಪತಿಯ ನಡೆಯನ್ನು ಖಂಡಿಸಿದ್ದಾರೆ.