ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹುಣಸೋಡು ಕಲ್ಲುಕ್ವಾರಿ ದುರಂತ ದೇಶದಲ್ಲಿಯೇ ದೊಡ್ಡಮಟ್ಟದ ಸುದ್ದಿಯಾಗಿತ್ತು. ಜನವರಿ 21 ರ ಮಧ್ಯ ರಾತ್ರಿ ಹುಣಸೋಡು ಕಲ್ಲುಕ್ವಾರೆಯಲ್ಲಿ 1350 ಕೆಜಿ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ 6 ಜನ ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದ ದೊಡ್ಡಮಟ್ಟದ ಶಬ್ದ ಮತ್ತು ಭೂಮಿ ಕಂಪಿಸಿದ ಅನುಭವವಾಗಿ ಮಧ್ಯ ರಾತ್ರಿ ಮಲೆನಾಡಿಗರು ಬೆಚ್ಚಿಬಿದ್ದಿದ್ದರು. ಕ್ವಾರೆ ದುರಂತಕ್ಕೆ ಕಾರಣರಾದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಹಾಗು ಅಕ್ರಮ ಗಣಿಗಾರಿಕೆ ಕ್ವಾರೆಗಳನ್ನು ನಿಲ್ಲಿಸುವಂತೆ ಅಲ್ಲಿನ ಜನತೆ ಆಗ್ರಹಿಸಿದ್ದರು.
ಇದೀಗ ಹುಣಸೋಡು ಕಲ್ಲುಕ್ವಾರಿ ದುರಂತಕ್ಕೆ ಸಂಬಂಧಿಸಿದಂತೆ ಜಮೀನಿನ ಮಾಲೀಕ ಶಂಕರೇ ಗೌಡ ಟಿ ಕುಲಕರ್ಣಿ, ಅವಿನಾಶ್ ಕುಲಕರ್ಣಿ ಮತ್ತು ಆಂಧ್ರಪ್ರದೇಶ ಮೂಲದ ಪಿ ಶ್ರೀ ರಾಮುಲು ಮತ್ತು ಪಿ ಮಂಜುನಾಥ್ ಸಾಯಿ ಅನ್ನು ಬಂಧಿಸಲಾಗಿದೆ ಎಂದು ಶಿವಮೊಗ್ಗ ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 5 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಪಿ. ಶ್ರೀ ರಾಮುಲು ಅವರ ಮಾಲೀಕತ್ವದಲ್ಲಿರುವ ಆಂಧ್ರಪ್ರದೇಶದ ಅನಂತಪುರಂನ ಗಣೇಶ್ ಟ್ರೇಡರ್ಸ್ ನಿಂದ ಸ್ಫೋಟಕ ವಸ್ತಗಳನ್ನು ತರಲಾಗುತ್ತಿತ್ತು ಎಂದು ತನಿಖೆಯ ವೇಳೆ ಬಯಲಿಗೆ ಬಂದಿದೆ ಎಂದಿದ್ದಾರೆ.
ಈ ಸಂಬಂಧ ಪೊಲೀಸರ ತಂಡವೊಂದು ಆಂಧ್ರಪ್ರದೇಶದ ಅನಂತಪುರ ರಾಯದುರ್ಗ, ಹೈದರಾಬಾದ್ ನಂತರ ಖಚಿತ ಮಾಹಿತಿಯ ಮೇರೆಗೆ ಮುಂಬೈಗೆ ತೆರಳಿ ಆರೋಪಿಗಳಾದ ಶ್ರೀ ರಾಮುಲು ಮತ್ತು ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಫೆಬ್ರವರಿ 4 ರಂದು ಅಕ್ರಮ ಗಣಿಗಾರಿಕೆ ನಡೆಸಲು ಜಾಗಕೊಟ್ಟ ಶಂಕರೇ ಗೌಡ ಮತ್ತು ಅವಿನಾಶ್ ಅವರನ್ನು ದಾವಣಗೆರೆಯಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ