ರೈತರ ಹೆದ್ದಾರಿ ತಡೆ ಪ್ರತಿಭಟನೆಗೆ ಬೆಂಬಲ ಘೋಷಿಸಿದ ಕರವೇ

ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಕರಾಳವಾಗಿದ್ದು, ಇಡೀ ರೈತ ಸಂಕುಲವನ್ನು ಕಾರ್ಪೊರೇಟ್ ಶಕ್ತಿಗಳ ಗುಲಾಮರನ್ನಾಗಿಸುತ್ತವೆ. ಹೀಗಾಗಿ ಇವುಗಳನ್ನು ಒಪ್ಪುವ ಪ್ರಶ್ನೆಯೇ ಇಲ್ಲ, ಎಂದು ನಾರಾಯಣ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೈತರ ಹೆದ್ದಾರಿ ತಡೆ ಪ್ರತಿಭಟನೆಗೆ ಬೆಂಬಲ ಘೋಷಿಸಿದ ಕರವೇ

ಕೃಷಿ ಕಾಯಿದೆಗಳ ವಿರುದ್ದದ ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ. ಶನಿವಾರ ನಡೆಯಲಿರುವ ರೈತರ ಹೆದ್ದಾರಿ ತಡೆ ಪ್ರತಿಭಟನೆಗೆ ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲವನ್ನು ಸೂಚಿಸಿದೆ. ಇದರೊಂದಿಗೆ ಶನಿವಾರ ಸಂಜೆ ಐದು ಗಂಟಿಯಿಂದ #ರೈತಹೋರಾಟದೊಂದಿಗೆಕರ್ನಾಟಕ #KarnatakaWithFarmersProtest ಎಂಬ ಟ್ವಿಟರ್ ಅಭಿಯಾನವನ್ನೂ ಹಮ್ಮಿಕೊಂಡಿದೆ.

“ಒಕ್ಕೂಟ ಸರ್ಕಾರ ರೈತರ ಹೋರಾಟವನ್ನು ದಮನ ಮಾಡಲು, ಪ್ರತಿಭಟನಾ ಸ್ಥಳಕ್ಕೆ ವಿದ್ಯುತ್, ನೀರು ಸರಬರಾಜು ನಿಲ್ಲಿಸಿದೆ. ಹಲವುಹಂತಗಳ ಬ್ಯಾರಿಕೇಡು, ಮುಳ್ಳುಬೇಲಿಗಳ ಕೋಟೆಯನ್ನೇ ಕಟ್ಟಿ ರೈತರನ್ನು ಉಸಿರುಗಟ್ಟಿಸುವ ಕಾರ್ಯ ಮಾಡುತ್ತಿದೆ. ರೈತ ಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹೂಡಿ ಬಂಧಿಸಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಿ, ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದನ್ನು ನಾವು ಪ್ರತಿಭಟಿಸಬೇಕಿದೆ. ದೆಹಲಿಯಲ್ಲಿ ನಡೆಯುತ್ತಿರುವ ದೇಶದ ರೈತರ ಐತಿಹಾಸಿಕ ಹೋರಾಟಕ್ಕೆ ಈಗ ಜಗತ್ತಿನಾದ್ಯಂತ ಬೆಂಬಲ ಲಭ್ಯವಾಗಿದೆ,” ಎಂದು ನಾರಾಯಣ ಗೌಡ ಅವರು ಹೇಳಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೆಹಲಿಯಲ್ಲಿ ಕೊರೆಯುವ ಚಳಿಯಲ್ಲಿ ತಿಂಗಳುಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವ ಅನ್ನದಾತರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಬೇಕಾದ ಅಗತ್ಯವಿದೆ. ಪ್ರತಿಭಟನಾ ನಿರತ ರೈತರ ಪರವಾಗಿ ಕರವೇ ಈ ಹಿಂದೆಯೂ ದನಿ ಎತ್ತಿತ್ತು, ಇನ್ನು ಮುಂದೆಯೂ ಅವರ ಪರವಾಗಿ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

“ಒಕ್ಕೂಟ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಕೃಷಿ ಕಾಯ್ದೆಗಳ ಪರವಾಗಿ ಇವೆಯೆಂದೂ, ಈ ರಾಜ್ಯಗಳಲ್ಲಿ ಕೃಷಿ ಮಸೂದೆಗಳ ವಿರುದ್ಧ ಚಳವಳಿಯೇ ನಡೆದಿಲ್ಲವೆಂದು ಸುಳ್ಳು ಹೇಳಿದ್ದರು. ದಕ್ಷಿಣದ ರಾಜ್ಯಗಳೂ ಸಹ ಪ್ರತಿಭಟನೆ ನಡೆಸುತ್ತಿವೆ. ದೆಹಲಿ ನಮಗೆ ಹತ್ತಿರವಿದ್ದಿದ್ದರೆ ದಕ್ಷಿಣ ಭಾರತದ ಲಕ್ಷಾಂತರ ರೈತರೂ ದೆಹಲಿ ಗಡಿಯಲ್ಲಿ ನಿಂತಿರುತ್ತಿದ್ದರು,” ಎಂದು ಹೇಳಿದ್ದಾರೆ.

“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿವೆ. ಭಾರತ ಸಂವಿಧಾನದ ಪ್ರಕಾರ ಕೃಷಿ ವಿಷಯ ರಾಜ್ಯಪಟ್ಟಿಯಲ್ಲಿರುವ ವಿಷಯ. ಇದರ ಕುರಿತು ಕಾಯ್ದೆ ರೂಪಿಸುವ ಹಕ್ಕು ಒಕ್ಕೂಟ ಸರ್ಕಾರಕ್ಕೆ ಇಲ್ಲ. ಅದರ ಜತೆಗೆ ಜಾರಿಗೆ ತಂದಿರುವ ಕಾಯ್ದೆಗಳು ಕರಾಳವಾಗಿದ್ದು, ಇಡೀ ರೈತಸಂಕುಲವನ್ನು ಕಾರ್ಪೊರೇಟ್ ಶಕ್ತಿಗಳ ಗುಲಾಮರನ್ನಾಗಿಸುತ್ತವೆ. ಹೀಗಾಗಿ ಇವುಗಳನ್ನು ಒಪ್ಪುವ ಪ್ರಶ್ನೆಯೇ ಇಲ್ಲ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೈತ ವಿರೋಧಿಯೂ ಜನವಿರೋಧಿಯೂ ಆಗಿರುವ ಮೂರು ಕೃಷಿ ಮಸೂದೆಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಬಲ ನೀಡಬೇಕು ಎಂಬ ಎರಡು ಬೇಡಿಕೆಗಳು ನ್ಯಾಯಪರವಾಗಿವೆ. ಒಕ್ಕೂಟ ಸರ್ಕಾರ ಹಠಮಾರಿತನ ಮುಂದುವರೆಸದೆ ಕೂಡಲೇ ಎರಡೂ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಪ್ರತಿಭಟನೆಯಿಂದ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿ ಶಮನವಾಗಲು ಇದೊಂದೇ ದಾರಿ, ಎಂದು ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com