ರಾಜ್ಯ ನಾಯಕರಿಗೆ ಕನ್ನಡಕ್ಕಾದ ಅಪಮಾನ ಕಾಣುವುದಿಲ್ಲವೇ? – ಹೆಚ್‌ಡಿಕೆ ಪ್ರಶ್ನೆ

ಯಲಹಂಕದ‌ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಆಯೋಜಿಸಿರುವ ಏರೋ ಇಂಡಿಯಾ ಕಾರ್ಯಕ್ರಮ‌ದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರೂ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದರು. ರಾಜ್ಯದ ಹಲವು ನಾಯಕರೂ ಅಲ್ಲಿದ್ದರು. ಯಾರಿಗೂ ಕನ್ನಡಕ್ಕಾದ ಅಪಮಾನ ಕಾಣಲಿಲ್ಲವೇ? ಎಂದು ಹೆಚ್‌ಡಿಕೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯ ನಾಯಕರಿಗೆ ಕನ್ನಡಕ್ಕಾದ ಅಪಮಾನ ಕಾಣುವುದಿಲ್ಲವೇ? – ಹೆಚ್‌ಡಿಕೆ ಪ್ರಶ್ನೆ

ಕರ್ನಾಟಕದಲ್ಲಿ ಮತ್ತೆ ಕನ್ನಡ ಮಾಯವಾಗಿದೆ. ಕರ್ನಾಟಕ ಸರ್ಕಾರವೇ ಕನ್ನಡದ ಅವಗಣನೆ ಮಾಡುತ್ತಿರುವುದು ಕನ್ನಡಿಗರ ಪಾಲಿಗೆ ನಿಜಕ್ಕೂ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಹಿಂದಿ ಹೇರಿಕೆಯನ್ನೇ ಧ್ಯೇಯವನ್ನಾಗಿ ಇಟ್ಟುಕೊಂಡಿರುವ ಕೇಂದ್ರವು ಪದೇ ಪದೇ ತ್ರೀಭಾಷಾ ಸೂತ್ರದ ಉಲ್ಲಂಘನೆಯನ್ನು ಮಾಡಿ, ಉಡಾಫೆ ಮನೋಭಾವವನ್ನು ತೋರುತ್ತಿದೆ.

ಬುಧವಾರ ನಡೆದ ಏರೋ ಇಂಡಿಯಾ – 2021ರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಕನ್ನಡ ಕಣ್ಮರೆಯಾಗಿದೆ. ಈ ಕುರಿತಾಗಿ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು, ಕಾರ್ಯಕ್ರಮದಲ್ಲಿ ತ್ರಿಭಾಷಾ ಸೂತ್ರ ಮರೆಯಲಾಗಿದೆ. ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಫಲಕ ಮಾತ್ರ ವೇದಿಕೆಯಲ್ಲಿ ರಾರಾಜಿಸುತ್ತಿದೆ. ಈ ಮೂಲಕ ಕನ್ನಡಕ್ಕೆ ಕನ್ನಡ ನೆಲದಲ್ಲೇ ಅಪಚಾರ ಮಾಡಲಾಗಿದೆ. ಇದನ್ನು ಖಂಡಿಸುತ್ತೇನೆ, ಎಂದು ಹೇಳಿದ್ದಾರೆ.

“ಕೇಂದ್ರ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿತ್ತು. ಈ ಕುರಿತ ಆಕ್ಷೇಪಗಳಿಗೆ ಉತ್ತರಿಸಿದ್ದ ಕೇಂದ್ರ, ಕನ್ನಡ ಕಡ್ಡಾಯವಲ್ಲ ಎಂದಿತ್ತು. ಇದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕಹಿ ನೆನಪು ಮರೆಯುವ ಮೊದಲೇ ಬೆಂಗಳೂರಿನಲ್ಲಿ ಕನ್ನಡಕ್ಕೆ ಅಪಚಾರ ಮಾಡಲಾಗಿದೆ. ಇದು ಅತ್ಯಂತ ನೋವಿನ ಸಂಗತಿ,” ಎಂದಿದ್ದಾರೆ.

ರಕ್ಷಣಾ‌‌‌ ಸಚಿವ ರಾಜನಾಥ್‌ಸಿಂಗ್ ಯಲಹಂಕದ‌ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಆಯೋಜಿಸಿರುವ ಏರೋ ಇಂಡಿಯಾ ಕಾರ್ಯಕ್ರಮ‌ ಉದ್ಘಾಟಿಸಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರೂ ಪಾಲ್ಗೊಂಡು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದರು. ರಾಜ್ಯದ ಹಲವು ನಾಯಕರೂ ಅಲ್ಲಿದ್ದರು. ಯಾರಿಗೂ ಕನ್ನಡಕ್ಕಾದ ಅಪಮಾನ ಕಾಣಲಿಲ್ಲವೇ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com