ನಿಯಮ ಗಾಳಿಗೆ ತೂರಿ ಕ್ವಾರಿ-ಕ್ರಷರ್ ಅಕ್ರಮಕ್ಕೆ ಜಿಲ್ಲಾಡಳಿತದ ಕುಮ್ಮಕ್ಕು!

ಅದು ಜನವಸತಿ ಪ್ರದೇಶವಿರಬಹುದು, ನಗರಪಾಲಿಕೆ ಪರಿಮಿತಿ ಇರಬಹುದು, ಕೆರೆ-ಕಟ್ಟೆಗಳ ವ್ಯಾಪ್ತಿ ಇರಬಹುದು, ಕೃಷಿ ಜಮೀನು, ಸ್ಮಶಾನಗಳ ಗಡಿ ಇರಬಹುದು, ಕೊನೆಗೇ ಸೂಕ್ಷ್ಮ ಪರಿಸರ ಮತ್ತು ವನ್ಯಜೀವಿ ಆವಾಸದ ಅಭಯಾರಣ್ಯಗಳಿರಬಹುದು, ಕ್ರಷರ್, ಕ್ವಾರಿ ಮತ್ತು ಸ್ಫೋಟಕ ಬಳಕೆಯ ಅನುಮತಿ ನೀಡುವಾಗ ಶಿವಮೊಗ್ಗ ಜಿಲ್ಲಾಡಳಿತ ಕನಿಷ್ಟ ಕಾನೂನು ಪ್ರಜ್ಞೆ ಬಳಸಿದ ನಿದರ್ಶನವಿಲ್ಲ.
ನಿಯಮ ಗಾಳಿಗೆ ತೂರಿ ಕ್ವಾರಿ-ಕ್ರಷರ್ ಅಕ್ರಮಕ್ಕೆ ಜಿಲ್ಲಾಡಳಿತದ ಕುಮ್ಮಕ್ಕು!

ಶಿವಮೊಗ್ಗ ಸ್ಫೋಟ ಪ್ರಕರಣ ವಿಧಾನಸಭೆಯಲ್ಲಿ ಸೋಮವಾರ ಸಾಕಷ್ಟು ಸದ್ದು ಮಾಡಿದೆ. ಪ್ರಕರಣದ ಕುರಿತು ಚರ್ಚಗೆ ಅವಕಾಶ ನೀಡಬೇಕು ಎಂದು ಸದನದಲ್ಲಿ ಹಕ್ಕೊತ್ತಾಯ ಮಂಡಿಸಿದ ಪ್ರತಿಪಕ್ಷಗಳ ಪಟ್ಟಿಗೆ ಅಂತಿಮವಾಗಿ ಸಭಾಧ್ಯಕ್ಷರು ಒಪ್ಪಿಗೆ ಸೂಚಿಸಿದ ಬಳಿಕ ಆ ಕುರಿತು ಸಾಕಷ್ಟು ಚರ್ಚೆ ನಡೆದಿದೆ.

ಹುಣಸೋಡು ಸ್ಫೋಟ ಸ್ಥಳಕ್ಕೆ ಭೇಟಿ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಕರಣದ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು ಎಂದು ಸದನದಲ್ಲಿ ಪಟ್ಟು ಹಿಡಿದ್ದಿದ್ದರು. ಆದರೆ, ಸರ್ಕಾರ, ಕಂದಾಯ ಇಲಾಖೆಯ ಆಯುಕ್ತರಿಂದ ತನಿಖೆ ನಡೆಸುವುದಾಗಿ ಹೇಳಿದೆ. ಪ್ರತಿಪಕ್ಷಗಳು ಸರ್ಕಾರದ ಆ ಹೇಳಿಕೆಯನ್ನು ಒಪ್ಪಿಲ್ಲ.

ಮೊದಲು ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 1,350 ಕೆಜಿ ಜಿಲೆಟಿನ್ ಕಡ್ಡಿ, ಡಿಟೋನೇಟರ್, ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡಿವೆ. ಘಟನೆಯನ್ನು ಆರು ಮಂದಿ ಸಾವು ಕಂಡಿದ್ದಾರೆ. ಇದರಿಂದ 80 ಕಿ.ಮೀ ದೂರದವರೆಗೆ ಭೂಕಂಪನದ ಅನುಭವ ಉಂಟಾಗಿದ್ದು, ಇದು ಪುಲ್ವಾಮಾ ಸ್ಫೋಟಕಕ್ಕಿಂತಲೂ ದೊಡ್ಡ ಸ್ಫೋಟವಾಗಿದೆ. ಪುಲ್ವಾಮಾ ದಾಳಿಯಲ್ಲಿ ಕೇವಲ 250 ಕೆಜಿ ಸ್ಫೋಟಕ ಬಳಸಲಾಗಿತ್ತು. ಇಂತಹ ಭೀಕರ ಕೃತ್ಯಕ್ಕೆ ಕಾರಣವಾಗಿರುವ ತಪ್ಪಿತಸ್ಥರ ಮೇಲೆ ಕೊಲೆ ಆರೋಪದ ಪ್ರಕರಣ ದಾಖಲಿಸಿಕೊಳ್ಳಬೇಕು. ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಅದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಕ್ರಮ ಗಣಿಗಾರಿಕೆ ಪ್ರಕರಣಗಳು ಇದೇ ಮೊದಲಲ್ಲ. 20 ವರ್ಷಗಳಿಂದಲೂ ನಡೆಯುತ್ತಿವೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ಸಹಿಸುವ ಪ್ರಶ್ನೆಯೇ ಇಲ್ಲ. ಘಟನೆ ಬಗ್ಗೆ ಕಂದಾಯ ಇಲಾಖೆ ಆಯುಕ್ತರಿಂದ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆದರೆ, ಪ್ರತಿಪಕ್ಷಗಳು ಸರ್ಕಾರದ ಆ ಹೇಳಿಕೆಯನ್ನು ವಿರೋಧಿಸಿ, ನ್ಯಾಯಾಂಗ ತನಿಖೆಯೇ ಆಗಬೇಕು ಎಂದು ಒತ್ತಾಯಿಸಿ ಸಭಾತ್ಯಾಗ ಮಾಡಿದವು. ವಿಧಾನಪರಿಷತ್ತಿನಲ್ಲಿ ಕೂಡ ಆಡಳಿತ ಪಕ್ಷದ ಹಿರಿಯ ನಾಯಕ ಆಯನೂರು ಮಂಜುನಾಥ್ ಅವರೇ ಅಕ್ರಮ ಚಟುವಟಿಕೆ ಮತ್ತು ಜಿಲ್ಲಾಡಳಿತದ ಹೊಣೆಗೇಡಿತನದ ಬಗ್ಗೆ ಮಾತನಾಡಿದ್ದಾರೆ. ಹಾಗೇ ಈ ಪ್ರಕರಣದಲ್ಲಿ ಮೃತಪಟ್ಟವರಿಗೆ ಪರಿಹಾರ ಘೋಷಿಸಿದ ಸಿಎಂ ಯಡಿಯೂರಪ್ಪ ಕ್ರಮ ಪ್ರಶ್ನಿಸಿದ್ದ ‘ಪ್ರತಿಧ್ವನಿ’ಯ ನಿಲುವಿಗೆ ಪೂರಕವಾಗಿ, ಆಯನೂರು ಅವರೂ ಮೃತರೆಲ್ಲರೂ ದಂಧೆಕೋರರು, ಅವರು ಕಾರ್ಮಿಕರಲ್ಲ ಅವರಿಗೆ ಬಿಡಿಗಾಸಿನ ಪರಿಹಾರವನ್ನೂ ನೀಡಬಾರದು ಎಂದಿದ್ದಾರೆ.

ಆಯನೂರು ಮಂಜುನಾಥ್
ಆಯನೂರು ಮಂಜುನಾಥ್

ಚರ್ಚೆಯ ವೇಳೆ ಪ್ರಮುಖವಾಗಿ ಪ್ರತಿಪಕ್ಷಗಳು ಪ್ರಸ್ತಾಪಿಸಿದ್ದು, ಶಿವಮೊಗ್ಗ ನಗರ ವ್ಯಾಪ್ತಿಯಲ್ಲೇ ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮ ಕ್ರಷರ್, ಕ್ವಾರಿ ಚಟುವಟಿಕೆಗಳ ಹಿಂದೆ ಆಳುವ ಪಕ್ಷದ ಮುಖಂಡರ ಕುಮ್ಮಕ್ಕು ಇರುವುದು ಮತ್ತು ಸ್ಫೋಟ ಘಟನೆಯಲ್ಲಿ ಪ್ರತಿ ಹಂತದಲ್ಲಿಯೂ ಎದ್ದು ಕಾಣುತ್ತಿರುವ ಜಿಲ್ಲಾಡಳಿತದ ಕರ್ತವ್ಯಲೋಪ. ಜಿಲ್ಲಾಡಳಿತದ್ದೇ ಲೋಪವಿರುವಾಗ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಕ್ರಮ ಚಟುವಟಿಕೆಯ ಬಗ್ಗೆ ಪತ್ರ ಬರೆದು ಗಮನ ಸೆಳೆದರೂ ಯಾವ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದ ಜಿಲ್ಲಾಧಿಕಾರಿಗಳೇ ಘಟನೆಯ ತನಿಖೆ ನಡೆಸದಿರುವುದು ಎಷ್ಟು ಸರಿ ಎಂಬುದು ವಿಧಾನಮಂಡಲದ ಉಭಯ ಸದನಗಳಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಚರ್ಚೆಯ ವೇಳೆ ಅಕ್ರಮ ಗಣಿಗಾರಿಕೆ, ಕ್ವಾರಿ, ಕ್ರಷರ್ ಪತ್ತೆಗೆ ಡ್ರೋನ್ ಬಳಕೆಗೂ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದೂ ಸರ್ಕಾರ ಹೇಳಿದೆ. ಆದರೆ, ಸರ್ಕಾರದ ಈ ಹೇಳಿಕೆ ಎಷ್ಟು ಹಾಸ್ಯಾಸ್ಪದ ಎಂಬುದಕ್ಕೆ ಶಿವಮೊಗ್ಗದ ಸ್ಫೋಟ ಸಂಭವಿಸಿದ ಹುಣಸೋಡು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಜನವಸತಿ ಪ್ರದೇಶಗಳ ನಡುವೆಯೇ, ಶಿವಮೊಗ್ಗ ಮಹಾನಗರ ಪಾಲಿಕೆಯ ವಾರ್ಡುಗಳ ವ್ಯಾಪ್ತಿಯಲ್ಲಿಯೇ ಕಳೆದ ಹಲವು ವರ್ಷಗಳಿಂದ ರಾಜಾರೋಷವಾಗಿ ನಡೆಯುತ್ತಿರುವ ಕ್ವಾರಿ, ಕ್ರಷರ್ ಚಟುವಟಿಕೆಯೇ ಉದಾಹರಣೆ. ಹಾಗಾಗಿ ಸರ್ಕಾರದ ಈ ಹೇಳಿಕೆ ಒಂದು ರೀತಿಯಲ್ಲಿ ಅಂಗೈ ಹುಣ್ಣಿಗೆ ಕನ್ನಡಿ ಹುಡುಕಿದಂತೆ!

ಹಾಗೆ ನೋಡಿದರೆ, ಶಿವಮೊಗ್ಗ ನಗರಸಭೆ ವ್ಯಾಪ್ತಿಯ ಜನವಸತಿ ಬಡಾವಣೆಗಳಿಗೆ ತಾಗಿಕೊಂಡಂತೆಯೇ ಇರುವ ಹುಣಸೋಡು, ಕಲ್ಲುಗಂಗೂರು, ಬಸವಗಂಗೂರು, ಜಕಾತಿಕೊಪ್ಪ, ದೇವಕಾತಿಕೊಪ್ಪ, ಗೆಜ್ಜೇನಹಳ್ಳಿ ಮುಂತಾದ ಪ್ರದೇಶಗಳಲ್ಲಿ ಸುತ್ತಮುತ್ತಲ ಪ್ರದೇಶಗಳ ಜನ ಮತ್ತು ವಿವಿಧ ಸಂಘ-ಸಂಘಟನೆಗಳ ದಶಕಗಳ ನಿರಂತರ ವಿರೋಧದ ಹೊರತಾಗಿಯೂ ಜಿಲ್ಲಾಡಳಿತ ಕ್ರಷರ್ ಮತ್ತು ಕ್ವಾರಿ ಚಟುವಟಿಕೆಗೆ ಸುರಕ್ಷಿತ ವಲಯ ಎಂದು ಗುರುತಿಸಿ ಅನಾಹುತಕಾರಿ ದಂಧೆಗೆ ಅವಕಾಶ ನೀಡಿದ್ದೇ ಆಘಾತಕಾರಿ ಕ್ರಮ. ಮೊನ್ನೆ ಸ್ಫೋಟ ನಡೆದ ಸ್ಥಳ ಹುಣಸೋಡು ಗ್ರಾಮದ ಅಂಚಿನಲ್ಲೇ ಇದ್ದು, ಸುತ್ತಮುತ್ತ ಮಾವಿನ ತೋಪು, ತೆಂಗಿನ ತೋಟಗಳಿಂದ ಸುತ್ತುವರಿದಿದೆ. ಅದಲ್ಲದೆ ಹಲವು ಕ್ರಷರ್ ಗಳು ಹಣಸೋಡು ಮತ್ತು ಅಬ್ಬಲಗೆರೆ ಜನವಸತಿ ಪ್ರದೇಶಗಳ ನಡುವೆಯೇ ಇವೆ(ಗೂಗಲ್ ಚಿತ್ರ ನೋಡಿ).

ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಜನವಸತಿ ಪ್ರದೇಶಗಳ ನಡುವೆ ಸರ್ಕಾರದ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಅಕ್ರಮ ದಂಧೆಗೆ ಅನುಕೂಲ ಮಾಡಲೆಂದೇ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಕರೋನಾ ಲಾಕ್ ಡೌನ್ ನಡುವೆ, ಕರ್ನಾಟಕ ಕಲ್ಲು ಕ್ರಷರ್ ನಿಯಂತ್ರಣ ಕಾಯ್ದೆ 2011ಕ್ಕೆ ತಿದ್ದುಪಡಿ ತಂದು, ಜನವಸತಿ ಪ್ರದೇಶ, ಹೆದ್ದಾರಿಗಳಿಂದ ಕ್ರಷರ್ ಘಟಕಗಳಿಗೆ ಇರಬೇಕಿದ್ದ ಕನಿಷ್ಟ ಅಂತರವನ್ನು ಗಣನೀಯವಾಗಿ ತಗ್ಗಿಸಿದೆ. ಈ ಹಿಂದೆ 2013ರಲ್ಲಿಯೂ ಮೂಲ ಕಾಯ್ದೆಗೆ ತಿದ್ದುಪಡಿ ತಂದು, ಜನಹಿತ ಮತ್ತು ಪರಿಸರ ಹಿತದ ಹಲವು ನಿಯಮಗಳನ್ನು ಕ್ವಾರಿ ಮತ್ತು ಕ್ರಷರ್ ಮಾಫಿಯಾ ಹಿತಕ್ಕೆ ತಕ್ಕಂತೆ ಬದಲಾಯಿಸಲಾಗಿತ್ತು.

ಯಾವುದೇ ಜನವಸತಿ ಪ್ರದೇಶದಿಂದ ಕನಿಷ್ಟ ಐದು ನೂರು ಮೀಟರ್ ದೂರದಲ್ಲಿ ಕ್ರಷರ್ ಗಳಿಗೆ ಸುರಕ್ಷಿತ ವಲಯ ಗುರುತಿಸಬೇಕು. ಒಂದು ಕ್ರಷರ್ ಘಟಕಕ್ಕೆ ಕನಿಷ್ಟ ಒಂದು ಎಕರೆ ಪ್ರದೇಶ ನಿಗದಿ ಮಾಡಬೇಕು ಮತ್ತು ಒಂದು ಕ್ರಷರ್ ನಿಂದ ಮತ್ತೊಂದು ಕ್ರಷರ್ ಗೆ ಕನಿಷ್ಟ ಅಂತರ ಕಾಯ್ದುಕೊಳ್ಳಬೇಕು, ಸೇಫರ್ ಜೋನ್ ಸುತ್ತ ಗಿಡಮರ ಬೆಳೆಸಿ ಪರಿಸರ ಹಾನಿ ತಡೆಯಬೇಕು, ಕ್ರಷರ್ ಮತ್ತು ಕ್ರಷರ್ ಸುರಕ್ಷಿತ ವಲಯದಲ್ಲಿ ಕ್ವಾರಿ ಇರುವಂತಿಲ್ಲ. ಇವು ಸುರಕ್ಷಿತ ವಲಯ ಗುರುತಿಸಲು ಇರುವ ಮಾನದಂಡಗಳು. ಆದರೆ, ಶಿವಮೊಗ್ಗ ಜಿಲ್ಲಾಡಳಿತ ಈ ಮಾನದಂಡಗಳಲ್ಲಿ ಯಾವುದನ್ನೂ ಪಾಲನೆ ಮಾಡಿಲ್ಲ ಎಂಬುದಕ್ಕೆ ಗೂಗಲ್ ಚಿತ್ರಗಳನ್ನು ನೋಡಿದರೂ ಅಂಗೈ ಹುಣ್ಣಿನಷ್ಟೇ ಸ್ಟಷ್ಟವಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗಣಿ, ಪರಿಸರ, ಅರಣ್ಯ, ಕಂದಾಯ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮಿತಿ ನಿರ್ದಿಷ ಜಾಗ ಗುರುತಿಸಿ, ನಿಯಮಾನುಸಾರ ಅದನ್ನು ಸುರಕ್ಷಿತ ವಲಯ ಎಂದು ಘೋಷಿಸಿ, ಅಲ್ಲಿ ನಿಯಮದಂತೆ ಮರಗಿಡ ಬೆಳೆಸುವುದು, ಶೀಟ್ ಬಳಸಿ ಎತ್ತರದ ಗೋಡೆ ಕಟ್ಟುವುದು ಮುಂತಾದ ವಾಯುಮಾಲಿನ್ಯ ಮತ್ತು ಶಬ್ದ ಮಾಲೀನ್ಯ ತಡೆ ಕ್ರಮಗಳನ್ನು ಕೈಗೊಂಡು, ಅಲ್ಲಿ ಕ್ರಷರ್ ಕಾರ್ಯನಿರ್ವಹಣೆಗೆ ಅವಕಾಶ ನೀಡಬೇಕಿತ್ತು. ಆದರೆ, ಅದರ ಬದಲಾಗಿ ಜಿಲ್ಲಾಡಳಿತ, ಕ್ರಷರ್ ಮಾಲೀಕರು ತೋರಿಸಿದ ಜಾಗವನ್ನೆಲ್ಲಾ ಸುರಕ್ಷಿತ ವಲಯ ಎಂದು ಘೋಷಿಸಿದೆ. ಹಾಗಾಗಿ ಹೊಲ, ಮನೆ, ಕೆರೆ ಕಟ್ಟೆ, ಸ್ಮಶಾನಗಳ ನಡುವೆ ಎಲ್ಲಿಲ್ಲಿ ಕ್ರಷರ್ ಇವೆಯೋ, ಅದೇ ಜಾಗಗಳನ್ನು ಸುರಕ್ಷಿತ ವಲಯ ಎಂದು ಘೋಷಿಸಲಾಗಿದೆ! ಇದು ರಂಗೋಲಿ ಕೆಳಗೆ ನುಸುಳುವ ಜಿಲ್ಲಾಡಳಿತದ ಬುದ್ದಿವಂತಿಕೆ!

ಜೊತೆಗೆ ಕ್ರಷರ್ ಗಾಗಿ ಸುರಕ್ಷಿತ ವಲಯ ಗುರುತಿಸಿದ ಮೇಲೆ ಅಲ್ಲಿ ಕ್ವಾರಿ, ಸ್ಫೋಟ ಚಟುವಟಿಕೆಗೆ ಅವಕಾಶ ನೀಡಬಾರದು. ಸ್ಫೋಟಕ ಮತ್ತು ಕ್ವಾರಿ ಚಟುವಟಿಕೆಗೆ ನಿಯಮದ ಪ್ರಕಾರ, ಅಂತಹ ಸ್ಥಳಗಳು ನಗರಪಾಲಿಕೆಯ ಗಡಿಯಿಂದ ಕನಿಷ್ಟ ಹತ್ತು ಕಿ.ಮೀ ದೂರದಲ್ಲಿರಬೇಕು. ಆದರೆ, ಈಗ ಸ್ಫೋಟ ಸಂಭವಿಸಿರುವ ಹುಣಸೋಡು ಸೇರಿದಂತೆ ನಗರಸಭೆಯ ಗಡಿಯಲ್ಲೇ, ಕೆಲವು ಕಡೆ ವಾರ್ಡು ವ್ಯಾಪ್ತಿಯಲ್ಲೇ ನೂರಾರು ಕ್ವಾರಿಗಳಿವೆ. ಅಲ್ಲಿ ನಿರಂತರ ಸ್ಫೋಟಕ ಬಳಕೆ ನಡೆದಿದೆ (ಕ್ವಾರಿ ಮತ್ತು ಜನವಸತಿ ಪ್ರದೇಶಗಳ ನಡುವಿನ ಅಂತರ ಕೇವಲ 400 ಮೀಟರ್ ಇರುವ ಗೂಗಲ್ ಚಿತ್ರ ಗಮನಿಸಿ).

ಹಾಗೇ, ಹುಣಸೋಡು, ಕಲ್ಲುಗಂಗೂರು, ಬಸವನಗಂಗೂರು, ದೇವಕಾತಿ ಕೊಪ್ಪದಂತಹ ಹಳ್ಳಿಗಳ ವಿಷಯದಲ್ಲಂತೂ, ಯಾವ ಸುರಕ್ಷಿತ ಅಂತರದ ಮಾತೇ ಇಲ್ಲ. ಅಲ್ಲಿನ ಮನೆಗಳ ಬಾಗಿಲವರೆಗೂ ಕ್ವಾರಿಗಳು ಚಾಚಿವೆ. ಸ್ಮಶಾನ, ಕೆರೆ-ಕಟ್ಟೆಗಳನ್ನೂ ಬಿಡಗೆ ಕ್ವಾರಿ ಮತ್ತು ಕ್ರಷರ್ ಗಳು ಎಲ್ಲವನ್ನೂ ನುಂಗಿ ನೊಣೆದಿವೆ.

ಇದೆಲ್ಲಾ ದಂಧೆಕೋರರ ದವಡೆಗೆ ಸಿಕ್ಕ ಜನರ ಪಾಡಾಯಿತು. ಜಿಲ್ಲಾಡಳಿತ ಮತ್ತು ದಂಧೆಕೋರರ ವಿಷವರ್ತುಲದ ಈ ಬಕಾಸುರ ಬಾಯಿಯಿಂದ ಶಿವಮೊಗ್ಗ ಸುತ್ತಮುತ್ತಲ ಪರಿಸರ ಮತ್ತು ವನ್ಯಜೀವಿಗಳು ಕೂಡ ಪಾರಾಗಿಲ್ಲ. ರಾಜ್ಯದ ಅತ್ಯುತ್ತಮ ಮುಕ್ತ ಮೃಗಾಲಯಗಳಲ್ಲಿ(ಓಪನ್ ಝೂ) ಒಂದಾಗಿರುವ ತಾವರೆಕೊಪ್ಪದ ಸಿಂಹಧಾಮ ನೂರಾರು ಅಪರೂಪದ ಮತ್ತು ಸೂಕ್ಷ್ಮ ವನ್ಯಜೀವಿಗಳ ಧಾಮ. ಜೊತೆಗೆ ರಾಜ್ಯದ ಅತ್ಯಂತ ಸೂಕ್ಷ್ಮ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿರುವ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲೇ ಸಿಂಹಧಾಮ ಇದೆ. ನಿಯಮಗಳ ಪ್ರಕಾರ ಯಾವುದೇ ಕ್ವಾರಿ ಮತ್ತು ಸ್ಫೋಟಕ ಚಟುವಟಿಕೆಗಳಿಗೆ ಇಂತಹ ಪರಿಸರ ಸೂಕ್ಷ್ಮ ಪ್ರದೇಶಗಳಿಂದ ಕನಿಷ್ಟ ಹತ್ತು ಕಿಮೀ ವ್ಯಾಪ್ತಿಯಲ್ಲಿ ಅವಕಾಶವೇ ಇಲ್ಲ. ಆದರೆ, ಸಿಂಹಧಾಮದಿಂದ ಕೇವಲ 4.5 ಕಿ.ಮೀ ವ್ಯಾಪ್ತಿಯ ದೇವಕಾತಿಕೊಪ್ಪದಲ್ಲಿ 20ಕ್ಕೂ ಹೆಚ್ಚು ಕ್ರಷರ್ ಮತ್ತು ಹತ್ತಾರು ಬೃಹತ್ ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ!(ಗೂಗಲ್ ಚಿತ್ರ). ಇಂತಹ ಹಗಲು ದರೋಡೆಯಂತಹ ಅಕ್ರಮಗಳ ವಿಷಯದಲ್ಲಿ ಶಿವಮೊಗ್ಗ ಅರಣ್ಯ ಇಲಾಖೆ ಅಧಿಕಾರಿಗಳು ಯಾಕೆ ಕಣ್ಣುಮುಚ್ಚಿ ಕುಳಿತಿದ್ದಾರೆ? ಜಿಲ್ಲಾಡಳಿತ ಯಾಕೆ ಮುಗುಮ್ಮಾಗಿದೆ ಎಂಬುದಕ್ಕೆ ಉತ್ತರವಿಲ್ಲ!

ಹೀಗೆ, ಅದು ಜನವಸತಿ ಪ್ರದೇಶವಿರಬಹುದು, ನಗರಪಾಲಿಕೆ ಪರಿಮಿತಿ ಇರಬಹುದು, ಕೆರೆ-ಕಟ್ಟೆಗಳ ವ್ಯಾಪ್ತಿ ಇರಬಹುದು, ಕೃಷಿ ಜಮೀನು, ಸ್ಮಶಾನಗಳ ಅಕ್ಕಪಕ್ಕದಲ್ಲಿರಬಹುದು, ಕೊನೆಗೇ ಸೂಕ್ಷ್ಮ ಪರಿಸರ ಮತ್ತು ವನ್ಯಜೀವಿ ಆವಾಸದ ಅಭಯಾರಣ್ಯಗಳ ವಿಷಯದಲ್ಲಿರಬಹುದು, ಕ್ರಷರ್, ಕ್ವಾರಿ ಮತ್ತು ಸ್ಫೋಟಕ ಬಳಕೆಯ ವಿಷಯದಲ್ಲಿ ಅನುಮತಿ ನೀಡುವಾಗ ಯಾವುದೇ ದೃಷ್ಟಿಯಲ್ಲೂ ಶಿವಮೊಗ್ಗ ಜಿಲ್ಲಾಡಳಿತ ಕನಿಷ್ಟ ಕಾನೂನು ಪ್ರಜ್ಞೆಯನ್ನು ಬಳಸಿದ ನಿದರ್ಶನವಿಲ್ಲ. ಹಾಗಾಗಿ ಶಿವಮೊಗ್ಗ ನಗರದ ಅಂಚಿನಲ್ಲಿ ಜನರ ಪಾಲಿನ ಮಹಾ ವಿಪತ್ತಾಗಿ ಪರಿಣಮಿಸಿರುವ ಈ ಇಡೀ ದಂಧೆಯೇ ಅಕ್ರಮ ಮತ್ತು ಅನಾಹುತಕಾರಿ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com