ಟೊಯೋಟಾ vs ಕಾರ್ಮಿಕರು: ಬಿಕ್ಕಟ್ಟು ಶಮನಕ್ಕೆ ಸಿದ್ದರಾಮಯ್ಯ ಆಗ್ರಹ

ಜಪಾನಿನ ಟೊಯೊಟಾ ಕಂಪನಿಗೆ ರಾಜ್ಯದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಭೂಮಿ, ನೀರು, ವಿದ್ಯುತ್ ನೀಡಿರುವುದು ಇಲ್ಲಿನ ಸರ್ಕಾರ. ನಮ್ಮ ರಾಜ್ಯದ ಸೌಲಭ್ಯಗಳನ್ನು ಬಳಸಿಕೊಂಡು ತನ್ನ ಕಾರ್ಮಿಕರ ಮೇಲೆ ಜಪಾನಿನ ಕಾನೂನುಗಳನ್ನು ಅನ್ವಯಿಸೋಕೆ ಹೊರಟರೆ ಅದು ತಪ್ಪಾಗುತ್ತೆ.
ಟೊಯೋಟಾ vs ಕಾರ್ಮಿಕರು: ಬಿಕ್ಕಟ್ಟು ಶಮನಕ್ಕೆ ಸಿದ್ದರಾಮಯ್ಯ ಆಗ್ರಹ

ಟೊಯೋಟಾ ಕಾರ್ಖಾನೆಯ ಬಿಡದಿ ಘಟಕದ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಮುಖ್ಯಮಂತ್ರಿಯವರು ಕೂಡಲೇ ಮಧ್ಯೆಪ್ರವೇಶ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 80 ದಿನಗಳಿಂದ ಮುಷ್ಕರ ನಡೆಸುತ್ತಿರುವ ಟೊಯೊಟ ಕಾರ್ಖಾನೆಯ ಬಿಡದಿ ಘಟಕದ ಕಾರ್ಮಿಕರು ಮತ್ತವರ ಕುಟುಂಬದವರನ್ನು ಇಂದು ಸಿದ್ದರಾಮಯ್ಯ ಅವರು ಭೇಟಿ ಮಾಡಿ ಅಹವಾಲು ಆಲಿಸಿದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು ಬಿಡದಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಬೈಕ್ ರ್ಯಾಲಿ ಮೂಲಕ ಬರ ಮಾಡಿಕೊಂಡರು.

ಇದೇ ವೇಳೆ ದೂರವಾಣಿ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಆಡಳಿತ ಮಂಡಳಿ ಹಾಗೂ ಕಾರ್ಮಿಕ ನಾಯಕರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಜಪಾನಿನ ಟೊಯೊಟಾ ಕಂಪನಿಗೆ ರಾಜ್ಯದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಭೂಮಿ, ನೀರು, ವಿದ್ಯುತ್ ನೀಡಿರುವುದು ಇಲ್ಲಿನ ಸರ್ಕಾರ. ನಮ್ಮ ರಾಜ್ಯದ ಸೌಲಭ್ಯಗಳನ್ನು ಬಳಸಿಕೊಂಡು ತನ್ನ ಕಾರ್ಮಿಕರ ಮೇಲೆ ಜಪಾನಿನ ಕಾನೂನುಗಳನ್ನು ಅನ್ವಯಿಸೋಕೆ ಹೊರಟರೆ ಅದು ತಪ್ಪಾಗುತ್ತೆ.

ವಿದೇಶದ ಯಾವುದೇ ಕಂಪನಿಗಳು ನಮ್ಮಲ್ಲಿ ಬಂಡವಾಳ ಹೂಡಿಕೆ ಮಾಡಲು, ಉತ್ಪಾದನಾ ಘಟಕಗಳನ್ನು ಆರಂಭಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಅವುಗಳು ಈ ನೆಲ ಕಾನೂನಿಗೆ ಅನ್ವಯವಾಗಿ ತನ್ನ ಕಾರ್ಮಿಕರನ್ನು ನಡೆಸಿಕೊಳ್ಳಬೇಕು.

ಕಾರ್ಮಿಕರು ಪ್ರತಿಭಟನೆ ನಡೆಸುತ್ತಾ ಸುಮಾರು 3 ತಿಂಗಳಾಗುತ್ತಾ ಬಂತು, ಇಷ್ಟರೊಳಗೆ ರಾಜ್ಯ ಸರ್ಕಾರ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಕಾರ್ಮಿಕ ಸಚಿವರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಅಂದ್ರೆ ಮುಖ್ಯಮಂತ್ರಿಗಳೇ ಸಭೆ ಕರೆದು ಇತ್ಯರ್ಥಪಡಿಸಬೇಕಿತ್ತು.ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ಥ ನಾರಾಯಣ ಅವರು ಟೊಯೊಟಾ ಕಂಪನಿಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಗಳ ನಡುವೆ ಸಂಧಾನ ಸಭೆ ನಡೆಸಿದ್ದರು. ಕೇವಲ 20 ನಿಮಿಷ ಸಭೆ ನಡೆಸಿ ಸಮಸ್ಯೆ ಬಗೆಹರಿದಿದೆ ಅಂತ ಹೇಳಿದ್ರು. ಸಮಸ್ಯೆ ಬಗೆಹರಿದಿದ್ರೆ ಕಾರ್ಮಿಕರೇಕೆ ಇನ್ನೂ ಮುಷ್ಕರನಿರತರಾಗಿದ್ದಾರೆ?

ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿಗಳು, ಕಾರ್ಮಿಕರ ಸಚಿವರ ಮೇಲೆ ಒತ್ತಡ ಹೇರುತ್ತೇನೆ ಎಂದರು.

ಆಡಳಿತ ಮಂಡಳಿಯವರು ಇತ್ತೀಚೆಗೆ ನನ್ನನ್ನು ಭೇಟಿಯಾದಾಗ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೆ. ಕಾರ್ಖಾನೆಗೆ ನಮ್ಮವರು ನೀರು, ನೆಲ ಕೊಟ್ಟಿದ್ದಾರೆ. ಹೀಗಾಗಿ ನಮ್ಮ ಕಾರ್ಮಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕು.

ಸಂಸದ ಡಿ.ಕೆ. ಸುರೇಶ್ ಅವರೂ ಸಭೆ ನಡೆಸಿದ್ದಾರೆ. ಮಾಜಿ ಶಾಸಕ ಬಾಲಕೃಷ್ಣ ಕಾರ್ಮಿಕರ ಜೊತೆಗೂಡಿ ಪಾದಯಾತ್ರೆ ಮಾಡಿದ್ದಾರೆ. ಆಡಳಿತ ಮಂಡಳಿ ಕಾರ್ಮಿಕ ಇಲಾಖೆಯ ಕಾಯ್ದೆ, ಕಾನೂನು ಗೌರವಿಸಬೇಕು.

ಕಳೆದ ಮೂರು ವೇತನ ಇಲ್ಲದೆ ಕಾರ್ಮಿಕರು, ಅವರ ಕುಟುಂಬದವರು ಪರದಾಡುತ್ತಿದ್ದಾರೆ. ಸರ್ಕಾರ ಕೈ ಕಟ್ಟಿ ಕೂರದೆ ಬಿಕ್ಕಟ್ಟು ನಿವಾರಣೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದರು.

ಶಾಸಕರಾದ ರವಿ, ಸಿ.ಎಂ. ಲಿಂಗಪ್ಪ, ಮಾಜಿ ಶಾಸಕರಾದ ಮಾಗಡಿಯ ಬಾಲಕೃಷ್ಣ ಮತ್ತಿರರು ಹಾಜರಿದ್ದರು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com