ತೆಲುಗು, ತಮಿಳು ಮತ್ತು ಇತರ ಭಾಷೆಗಳ ಸಿನಿಮಾಗಳು ಕರ್ನಾಟಕದಲ್ಲಿ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಬಿಡುಗಡೆಗೊಂಡರೆ, ಟಾಲಿವುಡ್ನಲ್ಲಿ ಕರ್ನಾಟಕದ ಚಿತ್ರಕ್ಕೆ ನಿರ್ಬಂಧ ಹೇರಿರುವುದು ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಮಾರ್ಚ್ 11 ರಂದು ಮಾರ್ಚ್ 11ರಂದು ಬಿಡುಗಡೆಯಾಗಲಿರುವ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ತೆಲುಗು ಆವೃತ್ತಿ ಬಿಡುಗಡೆಗೆ ಟಾಲಿವುಡ್ನಲ್ಲಿ ವಿರೋಧ ವ್ಯಕ್ತವಾಗಿದೆ.
ಅದೇ ದಿನ ಎರಡು ತೆಲುಗು ಚಿತ್ರಗಳು ತೆರೆ ಕಾಣಲಿದ್ದು, ಕನ್ನಡದ ಡಬ್ಬಿಂಗ್ ಸಿನಿಮಾ ʼರಾಬರ್ಟ್ʼ ಬಿಡುಗಡೆಗೆ ಅವಕಾಶ ಮಾಡಿಕೊಡಬಾರದು ಎಂದು ಟಾಲಿವುಡ್ ಮೇಲೆ ಒತ್ತಡ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆಗೆ ನಿರ್ಬಂಧ ಹೇರಲಾಗಿದೆ.
ಇದು ಚಿತ್ರದ ನಿರ್ಮಾಪಕರು ಹಾಗೂ ಇತರ ತಂಡದ ಸದಸ್ಯರಿಗೆ ಆತಂಕಕ್ಕೆ ಈಡು ಮಾಡಿದೆ. ಸಿನಿಮಾದ ತೆಲುಗು ಆವೃತ್ತಿಗೆ ಖುದ್ದು ದರ್ಶನ್ ಅವರೇ ಡಬ್ಬಿಂಗ್ ಮಾಡಿದ್ದು, ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆಯಿತ್ತು. ಟಾಲಿವುಡ್ ಸಿನಿಮಾ ಇಂಡಸ್ಟ್ರಿಯ ಪ್ರಮುಖರ ನಿರ್ಧಾರದ ವಿರುದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಭೆ ನಡೆದಿದೆ.
ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು, ಈ ಸಮಸ್ಯೆ ಶೀಘ್ರವೇ ಬಗೆಹರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
“ಕನ್ನಡ ಚಿತ್ರಗಳಿಗೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲ. ನಮ್ಮ ಚಿತ್ರ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಬಿಡುಗಡೆಯಾಗುತ್ತದೆ ಎಂಬ ವಿಶ್ವಾಸ ನಮಗಿದೆ. ನಿಗದಿಯಂತೆ ಮಾರ್ಚ್ 11ರಂದೇ ಸಿನಿಮಾ ಬಿಡುಗಡೆಯಾಗಲಿದೆ,” ಎಂದು ಹೇಳಿದ್ದಾರೆ.
ಈ ವಿವಾದದ ಕುರಿತಂತೆ ಕನ್ನಡ ಫಿಲ್ಮ್ ಚೇಂಬರ್ಗೆ ದರ್ಶನ್ ದೂರು ನೀಡಲಿದ್ದಾರೆ.