ಶಿವಮೊಗ್ಗ ಸ್ಫೋಟ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ ಸಚಿವರ ಸನ್ಮಾನ!

ಗಣಿ ಸ್ಫೋಟದ ಮಾರನೇ ದಿನ ಶಿವಮೊಗ್ಗಕ್ಕೆ ಬಂದು ಸ್ಥಳಕ್ಕೆ ಭೇಟಿ ನೀಡಿದ ಎರಡೇ ದಿನದಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಶಿವಮೊಗ್ಗ ಜಿಲ್ಲಾ ಕ್ರಷರ್ ಮಾಲೀಕರ ಸಂಘದಿಂದ ಬೆಂಗಳೂರಿನಲ್ಲಿ ಸನ್ಮಾನ ಮಾಡಲಾಗಿದೆ!
ಶಿವಮೊಗ್ಗ ಸ್ಫೋಟ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ ಸಚಿವರ ಸನ್ಮಾನ!

ಶಿವಮೊಗ್ಗ ಹೊರವಲಯದ ಹುಣಸೋಡು ಕಲ್ಲು ಕ್ವಾರಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದಲ್ಲಿ ಹಲವು ಬೆಳವಣಿಗೆಗಳಾಗಿವೆ.

ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು ಮತ್ತು ನಗರ ಸಮೀಪದಲ್ಲಿ ಅಪಾಯಕಾರಿ ಕ್ವಾರಿ ಮತ್ತು ಕ್ರಷರ್ ಅಕ್ರಮ ದಂಧೆಗೆ ಕುಮ್ಮಕ್ಕು ನೀಡುತ್ತಿರುವ ಬಿಜೆಪಿ ನಾಯಕ ಹಾಗೂ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕ್ರಮ ಜರುಗಿಸಬೇಕು ಎಂದು ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. ಅಕ್ರಮ ಕ್ವಾರಿ ಮತ್ತು ಕ್ರಷರ್ ಗಳಿಗೆ ಹಲವು ವರ್ಷಗಳಿಂದ ಸಚಿವ ಈಶ್ವರಪ್ಪ ಕುಮ್ಮಕ್ಕು ನೀಡುತ್ತಲೇ ಬಂದಿದ್ದಾರೆ. ಅಕ್ರಮ ಚಟುವಟಿಕೆಗಳ ವಿರುದ್ಧ ಕೈಗೊಳ್ಳುವ ಅಧಿಕಾರಿಗಳ ಮೇಲೆಯೂ ಸಚಿವರು ಒತ್ತಡ ಹಾಕಿ ಅಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಹಾಗಾಗಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒಕ್ಕೂಟದ ಅಧ್ಯಕ್ಷರಾದ ಕೆ ವಿ ವಸಂತ ಕುಮಾರ್ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮತ್ತೊಂದು ಬೆಳವಣಿಗೆಯಲ್ಲಿ ಸ್ಫೋಟ ಪ್ರಕರಣದ ಕುರಿತು ಪ್ರತ್ಯೇಕವಾಗಿ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಕ್ರಮ ಕ್ವಾರಿ ಮತ್ತು ಕ್ರಷರ್ ವಿರುದ್ಧ ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡುವೆಯೇ ಈ ದುರ್ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ ಅವರು ಈ ಸೂಚನೆ ನೀಡಿದ್ದು, ಕಳೆದ ಅಕ್ಟೋಬರಿನಲ್ಲಿ ತಾವು ನೀಡಿದ್ದ ಸೂಚನೆಯಂತೆ ಅಕ್ರಮ ಚಟುವಟಿಕೆಗಳ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರಮಕೈಗೊಂಡಿದ್ದರೆ ಈ ಸ್ಫೋಟವನ್ನು ತಪ್ಪಿಸಬಹುದಿತ್ತು ಎಂದೂ ಅವರು ಹೇಳಿದ್ದಾರೆ.

ಶಿವಮೊಗ್ಗ ಸ್ಫೋಟ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ ಸಚಿವರ ಸನ್ಮಾನ!
ಶಿವಮೊಗ್ಗ ಮಹಾಸ್ಫೋಟ: ಮೂರು ದಿನಗಳ ಬಳಿಕವೂ ಉತ್ತರ ಸಿಗದ ಪ್ರಶ್ನೆಗಳು

ಈ ನಡುವೆ ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಮತ್ತೊಂದು ದೂರು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದು, ಆ ದೂರಿನಲ್ಲಿ ಸ್ವತಃ ಶಿವಮೊಗ್ಗ ಜಿಲ್ಲಾಧಿಕಾರಿಯನ್ನೇ ಒಂದನೇ ಆರೋಪಿಯನ್ನಾಗಿ ಮಾಡಲಾಗಿದೆ. ಶಿವಮೊಗ್ಗ ಹೊರವಲಯದ ಅಕ್ರಮ ಕಲ್ಲುಕ್ವಾರಿ ಮತ್ತು ಕ್ರಷರ್ ದಂಧೆ ಮತ್ತು ಅದರಿಂದಾಗಿ ಸುತ್ತಮುತ್ತಲ ಜನಜೀವನ, ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಹಿನ್ನೆಲೆಯಲ್ಲಿ 2013ರಲ್ಲಿಯೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದ ಶಿವಮೊಗ್ಗದ ಸಂದೀಪ್ ಗೌಡ ಎಂಬುವರೇ ಇದೀಗ ಹೊಸ ದೂರು ಸಲ್ಲಿಸಿದ್ದು, ಈಗಾಗಲೇ ವಿಚಾರಣೆಯ ಅಂತಿಮ ಹಂತದಲ್ಲಿರುವ ಹಿಂದಿನ ಪ್ರಕರಣಕ್ಕೆ ಜಿಲ್ಲಾಧಿಕಾರಿ ಸೇರಿದಂತೆ ಕರ್ತವ್ಯಲೋಪ ಮತ್ತು ಅಕ್ರಮದಲ್ಲಿ ಶಾಮಾಲಾಗಿರುವ ಆರೋಪದ ಮೇಲೆ ಏಳು ಮಂದಿ ಅಧಿಕಾರಿಗಳನ್ನೂ ಆರೋಪಿಗಳನ್ನಾಗಿ ಪರಿಗಣಿಸಬೇಕು ಎಂದು ಕೋರಿದ್ದಾರೆ.

ಶಿವಮೊಗ್ಗ ಸ್ಫೋಟ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ ಸಚಿವರ ಸನ್ಮಾನ!
ಶಿವಮೊಗ್ಗ ಜಿಲೆಟಿನ್ ಸ್ಪೋಟ: ಸ್ಥಳಕ್ಕೆ ಭೇಟಿ ನೀಡಿದ ಸಿಎಂ: ನಿಷ್ಪಕ್ಷಪಾತ ತನಿಖೆಯ ಭರವಸೆ

ಸ್ಫೋಟ ಪ್ರಕರಣದಲ್ಲಿ ಸ್ಫೋಟಕ ಬಳಕೆ ಮತ್ತು ಸಾಗಣೆಗೆ ಅನುಮತಿ ನೀಡುವ ಮತ್ತು ಆ ಚಟುವಟಿಕೆಗಳ ಮೇಲೆ ಕಣ್ಗಾವಲು ಇಡುವ ಹೊಣೆಗಾರಿಕೆಯ ಜಿಲ್ಲಾಧಿಕಾರಿಗಳೂ ಸೇರಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ಸೇರಿದಂತೆ ಇಡೀ ಜಿಲ್ಲಾಡಳಿತದ ಅಸೀಮ ನಿರ್ಲಕ್ಷ್ಯ, ಹೊಣೆಗೇಡಿತನ ಎದ್ದು ಕಾಣಿಸುತ್ತಿದೆ. ಹೀಗಿರುವಾಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲೇ ತನಿಖೆ ನಡೆಸುವುದು ಎಂದರೆ ಏನರ್ಥ? ಎಂಬ ಪ್ರಶ್ನೆ ಎದ್ದಿತ್ತು. ಸಿಎಂ ಮತ್ತು ಇದೀಗ ಲೋಕಾಯುಕ್ತ ನ್ಯಾಯಮೂರ್ತಿಗಳು ಪ್ರಕರಣದ ತನಿಖೆಯನ್ನು ನಡೆಸುವಂತೆ, ಜಿಲ್ಲಾಧಿಕಾರಿಗಳಿಗೇ ಸೂಚಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಿ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಎರಡನೇ ದೂರು ಮಹತ್ವ ಪಡೆದಿದ್ದು, ಆ ದೂರನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತದ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರ ಆರು ತನಿಖಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸ್ಫೋಟಕದ ಸರಬರಾಜುದಾರರು, ಮಧ್ಯವರ್ತಿಗಳು ಮತ್ತು ಸ್ಫೋಟ ನಡೆಸುತ್ತಿದ್ದವರ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈವರೆಗೆ ಕ್ವಾರಿ ಮಾಲೀಕ, ಗುತ್ತಿಗೆದಾರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದಲ್ಲಿ ಮೃತಪಟ್ಟ ಆರು ಮಂದಿಯಲ್ಲಿ ಕೆಲಸಗಾರರು ಮತ್ತು ಸ್ಫೋಟಕ ಸಾಗಣೆದಾರರ ಜೊತೆಗೆ ಸ್ಫೋಟಕ ವ್ಯಾಪಾರಿಯೂ ಸೇರಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಶಿವಮೊಗ್ಗ ಸ್ಫೋಟ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ ಸಚಿವರ ಸನ್ಮಾನ!
ಶಿವಮೊಗ್ಗ ಕಲ್ಲುಕ್ವಾರೆ ಸ್ಫೋಟ : ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಘೋಷಣೆ: ಮೂವರ ಬಂಧನ

ಸ್ಫೋಟಕ ಸರಬರಾಜುದಾರರು, ಬಳಕೆದಾರ ಕ್ವಾರಿ ಮಾಲೀಕರು, ಸ್ಫೋಟಿಸುವ ಕೆಲಸಗಾರರು ಸೇರಿದಂತೆ ಹುಣಸೋಡು ಸ್ಫೋಟ ಘಟನೆಯ ಹಿಂದಿನ ಅಪರಾಧಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರ ಪ್ರಯತ್ನ ಮುಂದುವರಿದಿದೆ. ಆದರೆ, ಇಡೀ ದುರಂತಕ್ಕೆ ಶಿವಮೊಗ್ಗ ನಗರ ಪಾಲಿಕೆಯ ಸರಹದ್ದಿನ ಕೆಲವೇ ಮೀಟರ್ ದೂರದಿಂದಲೇ ಆರಂಭವಾಗುವ ನೂರಾರು ಕ್ರಷರ್ ಮತ್ತು ಕ್ವಾರಿಗಳ ದಂಧೆಯೇ ಕಾರಣ. ಕ್ವಾರಿ ಮತ್ತು ಕ್ರಷರ್ ಕುರಿತ ಕರ್ನಾಟಕ ಸರ್ಕಾರದ ಅಧಿಸೂಚನೆ, ಸುಪ್ರೀಂಕೋರ್ಟಿನ ಮಾರ್ಗಸೂಚಿ, ಪರಿಸರ ಕಾಯ್ದೆ ಮತ್ತು ನಾಗರಿಕ ಹಕ್ಕುಗಳನ್ನು ಗಾಳಿಗೆ ತೂರಿ ಅಕ್ರಮಗಳಿಗೆ ಪರೋಕ್ಷವಾಗಿ ಇಂಬು ನೀಡಿದ, ಹೊಣೆಗೇಡಿತನ ಮತ್ತು ಕರ್ತವ್ಯಲೋಪ ಎಸಗುವ ಮೂಲಕ ಆರು ಮಂದಿ ಜೀವ ಮತ್ತು ಸಾವಿರಾರು ಜನ- ಜೀವ ಜಾಲದ ನೋವು- ಆತಂಕಕ್ಕೆ ಕಾರಣವಾದ ಜಿಲ್ಲಾಡಳಿತದ ಅಕ್ರಮಗಳ ವಿರುದ್ಧ ತನಿಖೆ ನಡೆಸುವವರು ಯಾರು? ಗಣಿ ಇಲಾಖೆ, ಪಂಚಾಯ್ತಿ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳ ಕರ್ತವ್ಯ ಲೋಪಕ್ಕೆ ಶಿಕ್ಷೆ ಇಲ್ಲವೆ? ಎಂಬುದು ಈಗಿರುವ ಪ್ರಶ್ನೆ.

ಒಂದು ಅಂದಾಜಿನ ಪ್ರಕಾರ, ಈಗ ಸ್ಫೋಟ ಸಂಭವಿಸಿರುವ ಹುಣಸೋಡು ಸೇರಿದಂತೆ ಶಿವಮೊಗ್ಗ ಹೊರವಲಯದ ಕಲ್ಲುಗಂಗೂರು, ಬಸವನಗಂಗೂರು, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಅಬ್ಬಲಗೆರೆ ಮುಂತಾದ ವ್ಯಾಪ್ತಿಯಲ್ಲಿ ಸುಮಾರು ಇನ್ನೂರು ಕ್ವಾರಿ ಮತ್ತು ನೂರಕ್ಕೂ ಹೆಚ್ಚು ಕ್ರಷರ್ ಗಳು ನಡೆಯುತ್ತಿವೆ.

ಶಿವಮೊಗ್ಗ ಸ್ಫೋಟ ತನಿಖೆ ಹಳ್ಳ ಹಿಡಿಯುವ ಸೂಚನೆ ನೀಡಿದ ಸಚಿವರ ಸನ್ಮಾನ!
ಶಿವಮೊಗ್ಗ ಕಲ್ಲು ಕ್ವಾರೆ ಸ್ಫೋಟ: ಸಾವು-ನೋವುಗಳಿಗೆ ಸಂತಾಪ ಸೂಚಿಸಿದ ಗಣ್ಯರು

ಆ ಪೈಕಿ ಬಹುತೇಕ ಅಕ್ರಮ ಕ್ವಾರಿಗಳೇ ಆಗಿದ್ದು, “ಒಟ್ಟಾರೆ ಕ್ವಾರಿ ಮತ್ತು ಕ್ರಷರ್ ಗಳಿಂದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಗೆ ತಿಂಗಳಿಗೆ ಒಂದು ಕೋಟಿ ರೂ.ನಷ್ಟು ಒಟ್ಟಾರೆ ಮಾಮೂಲಿ ಸಲ್ಲಿಕೆಯಾಗುತ್ತಿದೆ. ಪಂಚಾಯ್ತಿ ಮಟ್ಟದಿಂದ ಆರಂಭವಾಗುವ ಈ ಸಂದಾಯ ಸರಣಿ, ಉನ್ನತ ಅಧಿಕಾರಿಗಳವರೆಗೂ ತಲುಪುತ್ತದೆ. ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಕ್ಷೇತ್ರಗಳ ಜನಪ್ರತಿನಿಧಿಗಳಿಗೂ ಇದರಲ್ಲಿ ಪಾಲು ಇದೆ. ಅಂತಹ ದೊಡ್ಡ ಆದಾಯದ ಹಿನ್ನೆಲೆಯಲ್ಲಿ ಇಂತಹ ಭೀಕರ ಘಟನೆ ನಡೆದು ವಾರಗಳು ಉರುಳಿದರೂ ಯಾವೊಬ್ಬ ಚಪರಾಸಿಯನ್ನೂ ಈವರೆಗೆ ಹೊಣೆ ಮಾಡಿ ಕ್ರಮ ಜರುಗಿಸಿಲ್ಲ. ಹಾಗಾಗಿ ಈ ತನಿಖೆ, ವಿಚಾರಣೆ ಎಲ್ಲವೂ ಜನರ ಕಣ್ಣೊರೆಸುವ ತಂತ್ರಗಳಷ್ಟೇ. ಈ ವಿಷಯದಲ್ಲಿ ಇಡೀ ಜಿಲ್ಲಾಡಳಿತದ ವಿರುದ್ಧವೇ ತನಿಖೆಯಾಗಬೇಕಾಗಿದೆ. ಹಾಗಾಗಿ ನ್ಯಾಯಾಂಗ ತನಿಖೆ ಅಥವಾ ಜಿಲ್ಲಾಡಳಿತಕ್ಕೆ ಸಂಬಂಧಪಡದ ಮೂರನೇ ವ್ಯಕ್ತಿಗಳಿಂದ ತನಿಖೆಯಾದರೆ ಮಾತ್ರ ಒಂದಿಷ್ಟು ಭರವಸೆ ಇಡಬಹುದು” ಎಂಬುದು ಕ್ವಾರಿ ಮತ್ತು ಕ್ರಷರ್ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರರೊಬ್ಬರ ಅಭಿಪ್ರಾಯ.

ಇಂತಹ ಶಂಕೆಗೆ ಇಂಬು ನೀಡುವಂತೆ, ಗಣಿ ಸ್ಫೋಟದ ಮಾರನೇ ದಿನ ಶಿವಮೊಗ್ಗಕ್ಕೆ ಬಂದು ಸ್ಥಳಕ್ಕೆ ಭೇಟಿ ನೀಡಿದ ಎರಡೇ ದಿನದಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಶಿವಮೊಗ್ಗ ಜಿಲ್ಲಾ ಕ್ರಷರ್ ಮಾಲೀಕರ ಸಂಘದಿಂದ ಬೆಂಗಳೂರಿನಲ್ಲಿ ಸನ್ಮಾನ ಮಾಡಲಾಗಿದೆ. ಈ ವಿಷಯವನ್ನು ಜಿಲ್ಲಾ ಕ್ರಷರ್ ಮಾಲೀಕರ ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಪ್ರಮುಖ ಎಸ್ ದತ್ತಾತ್ರಿ ಅವರೇ ಫೇಸ್ ಬುಕ್ ನಲ್ಲಿ ಫೋಟೋ ಸಹಿತ ಹಂಚಿಕೊಂಡಿದ್ದಾರೆ. ಅಕ್ರಮ ಕ್ವಾರಿ ಮತ್ತು ಕ್ರಷರ್ ದಂಧೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರು ಮತ್ತು ಅವರ ಹಿಂಬಾಲಕರೇ ಪಾಲುದಾರರಾಗಿರುವುದು ಕೂಡ ಗುಟ್ಟೇನಲ್ಲ. ಹಾಗಾಗಿ ತನಿಖೆ ಹಳ್ಳಹಿಡಿಯಲಿದೆ. ಸದ್ಯಕ್ಕೆ ಜನರ ಕಣ್ಣೊರೆಸಲು ತನಿಖೆ ನಡೆಸುವ ತಿಪ್ಪೇಸಾರಿಸುವ ವರಸೆ ಪ್ರದರ್ಶಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಎಸ್‌ ದತ್ತಾತ್ರಿ ಅವರು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ . ಇದು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟ ಕಾರಣಕ್ಕೆ ನಂತರದಲ್ಲಿ ಈ ಪೋಸ್ಟ್‌ಅನ್ನು ಅಳಿಸಿದ್ದಾರೆ
ಎಸ್‌ ದತ್ತಾತ್ರಿ ಅವರು ಫೇಸ್‌ಬುಕ್‌ನಲ್ಲಿ ಹಾಕಿದ್ದ ಪೋಸ್ಟ್‌ . ಇದು ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟ ಕಾರಣಕ್ಕೆ ನಂತರದಲ್ಲಿ ಈ ಪೋಸ್ಟ್‌ಅನ್ನು ಅಳಿಸಿದ್ದಾರೆ

ಈ ಎಲ್ಲಾ ಹಿನ್ನೆಲೆಯಲ್ಲಿ ಪೊಲೀಸರು ತಂಡೋಪತಂಡವಾಗಿ ನಡೆಸುತ್ತಿರುವ ತನಿಖೆ ಮತ್ತು ಸಿಎಂ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸುವುದಾಗಿ ಹೇಳಿರುವ ಮಾತುಗಳು ಎಷ್ಟರಮಟ್ಟಿಗೆ ನಿಜವಾದ ದಂಧೆಕೋರರನ್ನು ಕಟಕಟೆಗೆ ತರುತ್ತವೆ ಎಂಬುದು ಅನುಮಾನಾಸ್ಪದವಾಗಿದೆ. ಹಾಗಾಗಿ ಸದ್ಯ ಲೋಕಾಯುಕ್ತ ನ್ಯಾಯಮೂರ್ತಿಗಳ ಸ್ವಯಂಪ್ರೇರಿತ ದೂರು ಮತ್ತು ತನಿಖೆಯ ಅವರ ಕಾಳಜಿಯೊಂದೇ ಉಳಿದಿರುವ ಭರವಸೆ ಎಂಬುದು ಇಲ್ಲಿನ ನಾಗರಿಕರ ಅಭಿಪ್ರಾಯ!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com