ಬಿಜೆಪಿಯಿಂದ ಇಡೀ ದೇಶವೇ ನಿರುದ್ಯೋಗಿಯಾಗಿದೆ : ಡಿ.ಕೆ. ಶಿವಕುಮಾರ್

ಬಿಜೆಪಿ ಆಡಳಿತದಲ್ಲಿ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದ್ದು, ನಾವು ಕೂಡ ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶಕ್ಕೆ ಕೊಟ್ಟ ಬಹುದೊಡ್ಡ ಬಳುವಳಿ ನಿರುದ್ಯೋಗ ಸಮಸ್ಯೆ ಎಂದಿದ್ದಾರೆ.
ಬಿಜೆಪಿಯಿಂದ ಇಡೀ ದೇಶವೇ ನಿರುದ್ಯೋಗಿಯಾಗಿದೆ : ಡಿ.ಕೆ. ಶಿವಕುಮಾರ್

'ನಾವು ರಾಜ್ಯ ಹಾಗೂ ದೇಶದ ರೈತರ ಪರ ಧ್ವನಿ ಎತ್ತಿದ್ದೇವೆ. ಕೆಲವು ಸಚಿವರು ನಾವು ಅಸ್ತಿತ್ವ ಉಳಿಸಿಕೊಳ್ಳಲು ಮಾಡಿದ್ದೇವೆ, ನಾವು ನಿರುದ್ಯೋಗಿಗಳು ಎಂದಿದ್ದಾರೆ. ನಿಜ, ಬಿಜೆಪಿ ಆಡಳಿತದಲ್ಲಿ ಇಡೀ ದೇಶವೇ ನಿರುದ್ಯೋಗಿಯಾಗಿದ್ದು, ವಿರೋಧ ಪಕ್ಷವಾದ ನಾವೂ ನಿರುದ್ಯೋಗಿಗಳೇ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟಾಂಗ್ ಕೊಟ್ಟಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಶನಿವಾರ ಮಾತನಾಡಿದ ಅವರು ಹೇಳಿದ್ದಿಷ್ಟು

'ನಾವು ಮುಖ್ಯಮಂತ್ರಿಗಳಿಗೆ, ಅವರ ಪದವಿಗೆ, ಹಿರಿತನಕ್ಕೆ ಗೌರವ ನೀಡುತ್ತೇವೆ. ಇವತ್ತೂ ಗೌರವಿಸುತ್ತೇವೆ, ನಾಳೆಯೂ ಗೌರವಿಸುತ್ತೇವೆ. ಆದರೆ ಬಿಜೆಪಿ ಆಡಳಿತದಲ್ಲಿ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದ್ದು, ನಾವು ಕೂಡ ನಿರುದ್ಯೋಗಿಗಳಾಗಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶಕ್ಕೆ ಕೊಟ್ಟ ಬಹುದೊಡ್ಡ ಬಳುವಳಿ ನಿರುದ್ಯೋಗ ಸಮಸ್ಯೆ. ಗೃಹ ಸಚಿವರು ಟ್ರಾಫಿಕ್ ಜಾಮ್ ಅಂತಾರೆ. ನಾವು ಪ್ರತಿಭಟನೆ ಮಾಡಿದ್ದು ಅಸ್ತಿತ್ವಕ್ಕೆ ಅಲ್ಲ, ರಾಜ್ಯ ಹಾಗೂ ದೇಶದ ರೈತರ ಧ್ವನಿ ಪ್ರತಿಬಿಂಬಿಸಲು ಎಂದಿದ್ದಾರೆ.

ರಾಜಕಾರಣದಲ್ಲಿ ಏನು ಬೇಕಾದರೂ ಸಾಧ್ಯ. ಸಾಧ್ಯತೆಗಳ ಕಲೆ ರಾಜಕಾರಣ. ವಿಧಾನ ಪರಿಷತ್ ನಲ್ಲಿ ಸಭಾಪತಿಗಳು ಬರುವ ಮುನ್ನ ಬಾಗಿಲು ಹಾಕಿಕೊಂಡು ಕಲಾಪ ನಡೆಸುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವೆಂದು ತಿಳಿಸಿದ್ದಾರೆ.

ಪೊಲೀಸರ ದೌರ್ಜನ್ಯ ವ್ಯವಸ್ಥಿತ ಸಂಚು

ಶಾಸಕಿ ಸೌಮ್ಯ ರೆಡ್ಡಿ ಅವರು ತಮ್ಮ ವೈಯಕ್ತಿಕ ರಕ್ಷಣೆಗಾಗಿ ತಮ್ಮನ್ನು ಎಳೆದಾಡುತ್ತಿದ್ದ ಪೊಲೀಸರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸರು ಎಲ್ಲ ಮಹಿಳಾ ನಾಯಕಿಯರನ್ನು ಎಳೆದಾಡುತ್ತಿದ್ದನ್ನು ನಾವೇ ನೋಡಿದ್ದೇವೆ. ಇನ್ನು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಅವರ ಬಟ್ಟೆ ಬಿಚ್ಚಿಸಿ ದೌರ್ಜನ್ಯ ಎಸಗಿದ್ದಾರೆ. ನಾವು ಎಷ್ಟೇ ಸಹಕಾರ ಕೊಟ್ಟರೂ ವ್ಯವಸ್ಥಿತ ಸಂಚಿನಿಂದಾಗಿ ಪೊಲೀಸರು ನಮ್ಮ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿದ್ದಾರೆ.

ಸೌಮ್ಯ ರೆಡ್ಡಿ ಮೇಲೆ ಎಫ್ ಐಆರ್ ದಾಖಲಿಸುವ ಪೊಲೀಸರು, ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ಕೊಟ್ಟು ಗಲಭೆಗೆ ಕಾರಣವಾದಾಗ ಸುಮೋಟೋ ಪ್ರಕರಣ ಯಾಕೆ ದಾಖಲಿಸಲಿಲ್ಲ? ಅವರ ವಿಚಾರದಲ್ಲಿ ಪೊಲೀಸರು ಹೇಡಿಗಳಂತೆ ವರ್ತಿಸಿದ್ದಾರೆಂದು ಪೊಲೀಸರು ನಡೆದದುಕೊಂಡ ರೀತಿಯನ್ನು ಖಂಡಿಸಿದ್ದಾರೆ.

ಆರ್.ಆರ್. ನಗರ ಚುನಾವಣೆ ಸಮಯದಲ್ಲಿ ನನ್ನ ಮೇಲೆ ಸಿದ್ದರಾಮಯ್ಯ ಅವರ ಮೇಲೆ ಯಾಕೆ ಪ್ರಕರಣ ಹಾಕಲಿಲ್ಲ. ಕೇವಲ ಆ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದರು? ನೀವು ಬೇಕಾದರೆ ಸಂಪೂರ್ಣ ವಿಡಿಯೋ ನೋಡಿ ಎಂದಿದ್ದಾರೆ

ಸೌಮ್ಯಾ ರೆಡ್ಡಿ ಅವರನ್ನು ಬಂಧಿಸಿದರೂ ನಾವು ಅವರ ಪರ ನಿಲ್ಲುತ್ತೇವೆ. ನಮ್ಮ ಬಳಿಯೂ ಸಾಕ್ಷ್ಯಗಳಿವೆ. ನಾವು ಅದನ್ನು ಮುಂದಿಡುತ್ತೇವೆ. ಆಕೆ ಕೆಳಗೆ ಬಿದ್ದಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ, ನನಗೆ ಬೇರೆ ಯಾರ ಸಾಕ್ಷಿಯೂ ಬೇಡ ಎಂದರು.

ಈ ಕೃತ್ಯದ ಹಿಂದೆ ಸರ್ಕಾರದ ಕೈವಾಡ ಇದೆ. ಸರ್ಕಾರ ಹೇಳದೆ ಯಾವ ಎಫ್ ಐಆರ್ ಹಾಕಲು ಸಾಧ್ಯವಿಲ್ಲ. ಪೊಲೀಸರ ದಬ್ಬಾಳಿಕೆ ವೇಳೆ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಆಕೆಯ ಹಕ್ಕು. ಈ ಕೇಸ್ ಬರಲಿ ನಾವು ಎದುರಿಸಲು ಸಿದ್ಧ ಎಂದಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com