ಬಿಬಿಎಂಪಿ ನೌಕರನ ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ದಾವಣೆಗೆರೆಯಲ್ಲಿ, ಬಿಬಿಎಂಪಿ ಬೊಮ್ಮನಹಳ್ಳಿ ಉಪ ವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿರುವ ಸಿ. ಟಿ. ಆಂಜಿನಪ್ಪ ಎಂಬವರಿಗೆ ಸೇರಿದ ನಾಲ್ಕು ಸ್ಥಳಗಳಿಗೆ ದಾವಣಗೆರೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ವಿವಿಧ ತಂಡಗಳಿಂದ ದಾಳಿ ನಡೆಸಲಾಗಿದೆ.
ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳಲ್ಲಿ ಲೋಕಿಕೆರೆ ಗ್ರಾಮದಲ್ಲಿ 1 ವಾಸದ ಮನೆ, 21 ಗುಂಟೆ ಜಮೀನು, ಒಟ್ಟು 8 ಎಕರೆ ಕೃಷಿ ಜಮೀನು, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಒಟ್ಟು 15 ಎಕರೆ 30 ಗುಂಟೆ ಕೃಷಿ ಜಮೀನು, 3 ವಿವಿಧ ಕಂಪನಿಗಳ ಕಾರುಗಳು, 5 ವಿವಿಧ ಕಂಪನಿಗಳ ದ್ವಿಚಕ್ರ ವಾಹನಗಳು, ಒಂದು ಟ್ರಾಕ್ಟರ್, 1 ಅಡಕೆ ಒಣಗಿಸುವ ಯಂತ್ರ, 1 ಅಡಕೆ ಸುಲಿಯುವ ಯಂತ್ರ, 1 ಕೆಜಿ 250 ಗ್ರಾಂ ಚಿನ್ನಾಭರಣಗಳು, 8 ಕೆಜಿ ಬೆಳ್ಳಿ ಸಾಮಾನುಗಳು, 50 ಲಕ್ಷ ನಗದು ಹಣ, ಒಟ್ಟು 13 ಲಕ್ಷ 70 ಸಾವಿರ ಗೃಹೋಪಯೋಗಿ ವಸ್ತುಗಳು ಕಂಡು ಬಂದಿದೆ.
ಆರೋಪಿತ ಸರ್ಕಾರಿ ನೌಕರ ಹೊಂದಿರುವ ಆಸ್ತಿ-ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಮಾಹಿತಿ ಸಂಗ್ರಹಣೆ ಮುಂದುವರೆದಿದೆ. ಇದುವರೆಗಿನ ತನಿಖೆಯಿಂದ ಆರೋಪಿತ ಸರ್ಕಾರಿ ನೌಕರನ ಅಸಮತೋಲನ ಆಸ್ತಿ ಮೌಲ್ಯ ಶೇ 428.59 ರಷ್ಟು ಕಂಡುಬಂದಿದೆ ಎಂದು ಎಸಿಬಿ ತಿಳಿಸಿದೆ.