ಮೋದಿ ಸರ್ಕಾರದ ವಿಮರ್ಶೆ: ನಾಡೋಜ ಹಂಪನಾರನ್ನು ಪೊಲೀಸ್‌ ಠಾಣೆಗೆ ಕರೆಸಿ ಅಪಮಾನ: ವ್ಯಾಪಕ ಖಂಡನೆ

ಬಿಜೆಪಿ ಸರ್ಕಾರ ಜಾರಿಗೆ ತಂದ "ಕೃಷಿ ಕಾಯ್ದೆಗಳ ತಿದ್ದುಪಡಿ" ಮತ್ತು "ರೈತರ ಹೋರಾಟ" ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದರು.
ಮೋದಿ ಸರ್ಕಾರದ ವಿಮರ್ಶೆ: ನಾಡೋಜ ಹಂಪನಾರನ್ನು ಪೊಲೀಸ್‌ ಠಾಣೆಗೆ ಕರೆಸಿ ಅಪಮಾನ: ವ್ಯಾಪಕ ಖಂಡನೆ

ಸಾಹಿತಿ, ಚಿಂತಕ ಹಂಪ ನಾಗರಾಜಯ್ಯ (ಹಂಪನಾ) ರವರು ಕೇಂದ್ರ ಸರ್ಕಾರವನ್ನು ಅಪಹಾಸ್ಯ ಮಾಡಿದ್ದಾರೆಂದು ಬಿಜೆಪಿ ಕಾರ್ಯಕರ್ತರು ಠಾಣೆಗೆ ದೂರುಕೊಟ್ಟ ಹಿನ್ನಲೆಯಲ್ಲಿ ಪೊಲೀಸರು ಹಂಪನಾರನ್ನು ಠಾಣೆಗೆ ಕರಿಸಿ ವಿಚಾರಣೆ ನಡೆಸಿದ್ದಾರೆ. ಇದು ಸಾಹಿತ್ಯಿಕ ವಲಯದಲ್ಲಿ ವಿವಾದವನ್ನು ಸೃಷ್ಟಿಸಿದೆ. ನಾಡಿನ ಖ್ಯಾತ ಚಿಂತಕರು, ಸಾಹಿತಿಗಳು ಪೊಲೀಸರ ಈ ಕ್ರಮವನ್ನು ಕಠಿಣವಾಗಿ ಖಂಡಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಂತಹ ಕಾನೂನುಗಳ ಕುರಿತು ಟೀಕಿಸಿದರೆ ದೇಶದ್ರೋಹದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಅನ್ಯಾಯದ ವಿರುದ್ಧದ ದ್ವನಿಯನ್ನು ಅಡಗಿಸುವ ಕೆಲಸ ಈಗಿನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂಬುವುದು ಹಲವು ಲೇಖಕರು, ಚಿಂತಕರು ಆರೋಪಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಂಡ್ಯದಲ್ಲಿ ಜನವರಿ 17 ರಂದು ನಡೆದ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಿ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಹಂಪನಾ, ʼದೇಶದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದ "ಕೃಷಿ ಕಾಯ್ದೆಗಳ ತಿದ್ದುಪಡಿ" ಮತ್ತು "ರೈತ ಹೋರಾಟ" ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ.


ಕೃಷಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತರ ಹೋರಾಟದ ವಿಚಾರದಲ್ಲಿ ಸರ್ಕಾರ ದುರ್ಯೋಧನಂತೆ ವರ್ತಿಸುತ್ತಿದೆ. ರೈತರು ಮಳೆ ಚಳಿ ಎನ್ನದೆ ಪ್ರತಿಭಟನೆಯಿಂದ ಹಿಂದೆ ಸರಿಯದೆ ಅನ್ಯಾಯದ ವಿರುದ್ಧ ಹೋರಾಡುತ್ತಿರುವುದು ಕೇಂದ್ರ ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ, ಈ ವಿಚಾರದಲ್ಲಿ ಸ್ವಲ್ಪವು ಮಾನವೀಯತೆ ತೋರುತ್ತಿಲ್ಲ. ಪ್ರಧಾನಿ ಮೋದಿಯವರು ರೈತರನ್ನು ಭೇಟಿ ಮಾಡಿ ಮಾತನಾಡಿಯೂ ಇಲ್ಲ, ಸರ್ಕಾರ ದುರ್ಯೋಧನನಂತೆ ವರ್ತಿಸಿದೆ ಎಂದು ಸಮ್ಮೇಳನದಲ್ಲಿ ಟೀಕಿಸಿ ಮಾತನಾಡಿದ್ದರು.

ಬಿಜೆಪಿ ಕಾರ್ಯಕರ್ತರಿಂದ ದೂರು

ಸಮ್ಮೇಳನದಲ್ಲಿ ಹಂಪನಾರವರು ಕೇಂದ್ರ ಸರ್ಕಾರವನ್ನು ಅಪಹಾಸ್ಯ ಮಾಡಿದ್ದಾರೆಂದು ಇಬ್ಬರು ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತಕ್ಷಣ ಎಚ್ಚೆತ್ತುಕೊಂಡ ಪೊಲೀಸ್‌ರು ಏಕಾಏಕಿ ಹಂಪನಾರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇತ್ತ ದೂರು ನೀಡಿದ ವ್ಯಕ್ತಿಗಳು ಲಿಖಿತ ರೂಪದ ದಾಖಲೆಗಳನ್ನು ಒದಗಿಸಿಲ್ಲ, ಅಲ್ಲದೆ ಪೊಲೀಸರು ಎಫ್‌ಐಆರ್‌ ಕೂಡ ದಾಖಲು ಮಾಡದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಹಾಗು ಕನ್ನಡ ನಾಡು ನುಡಿ ಸಾಹಿತ್ಯ ಕ್ಷೇತ್ರದಲ್ಲಿ ಶ್ರಮಿಸಿದ ವಿದ್ವಾಂಸರನ್ನು ಠಾಣೆಗೆ ಕರೆಸಿ ವಿಚಾರಿಸಿರುವುದು ನಾಡಿನ ಅನೇಕ ಲೇಖಕರ ಸಾಹಿತಿಗಳ ಹಾಗು ಪ್ರಜ್ಞಾವಂತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ.

ಪೊಲೀಸರ, ಬಿಜೆಪಿ ಕಾರ್ಯಕರ್ತರ ನಡೆಗೆ ನಾಡಿನ ಸಾಹಿತಿ, ಲೇಖಕರಿಂದ ಖಂಡನೆ:


ಈ ವಿಚಾರ ಕುರಿತು ʼಪ್ರತಿಧ್ವನಿʼಯೊಂದಿಗೆ ಮಾತನಾಡಿದ ದೆಹಲಿಯ ಜೆಎನ್‌ಯು ನ ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ಲೇಖಕರಾದ ಪುರುಷೋತ್ತಮ ಬಿಳಿಮಲೆ ಅವರು "ನಾಡಿನ ಹಿರಿಯ ವಿದ್ವಾಂಸರಾದ ಪ್ರೊ. ಹಂಪ ನಾಗರಾಜಯ್ಯನವರು ಸರಕಾರದ ರೈತ ವಿರೋಧಿ ನಡೆಯನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್‌‌ ಠಾಣೆಗೆ ಹೋಗಬೇಕಾಯಿತೆಂಬ ವರದಿಯನ್ನು ಓದಿದೆ. ಸರಕಾರವು ಲೇಖಕರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದ್ದಾಗ ಪೊಲೀಸರು ಈ ಬಗೆಯ ಕ್ರಮ ಕೈಗೊಳ್ಳುವುದರಲ್ಲಿ ಅಚ್ಚರಿಯೇನೂ ಇಲ್ಲ, ಎಂದಿದ್ದಾರೆ.


“ಆಳುವ ಅರಸರ ಜನವಿರೋಧಿ ಧೋರಣೆಗಳನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಲೇಖಕನ ಕರ್ತವ್ಯ. ಕನ್ನಡದಲ್ಲಿ ಪಂಪ, ಬಸವ, ಕುವೆಂಪು ಮತ್ತಿತರ ಬರಹಗಾರರು ಈ ಕೆಲಸಗಳನ್ನು ಮಾಡಿ ನಮಗೊಂದು ಪ್ರತಿಭಟನೆಯ ಪರಂಪರೆಯನ್ನೇ ನಿರ್ಮಿಸಿಕೊಟ್ಟಿದ್ದಾರೆ. ಆದರೆ ಇವತ್ತಿನ ಸರಕಾರ, ಅದು ಕೇಂದ್ರವಾಗಲೀ, ರಾಜ್ಯವಾಗಲೀ, ಜನರ ತಿಳುವಳಿಕೆಗಳನ್ನು ಹೆಚ್ಚಿಸದೆ, ಮುಕ್ತ ಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಅಪರಾಧವೆಂದು ಭಾವಿಸಿದೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣಗೊಳಿಸಲು ಸರಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಅದರ ಬದಲು ಈ ಸರ್ಕಾರಗಳು ಬೌದ್ದಿಕತೆಗೆ ವಿರೋಧವಾಗಿ ನಡೆದುಕೊಳ್ಳುತ್ತಿವೆ. ಜನರು ಎಚ್ಚೆತ್ತುಕೊಂಡಿಲ್ಲ ಎಂದರೆ ಈ ಧೋರಣೆಗಳು ಬದಲಾಗಲಾರವು,” ಎಂದು ಹೇಳಿದ್ದಾರೆ.

ಹಂಪನಾ ರವರು ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ದುಡಿದವರು. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸ ನೀಡಿದ ಹಿರಿಮೆ ಅವರಿಗಿದೆ. ಅಲ್ಲದೆ, ಟೊರೆಂಟೊ, ಬುಡಾಪೆಸ್ಟ್, ಮಾಂಟ್ರಿಯಲ್, ಲಂಡನ್, ಮತ್ತಿತರ ಕಡೆಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಪ್ರಬಂಧ ಮಂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಜೈನ, ಪಾಲಿ ಮತ್ತು ಪ್ರಾಕೃತ ಭಾಷೆಗಳ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ಭಾರತದ ಕೆಲವೇ ಕೆಲವು ವಿದ್ವಾಂಸರಲ್ಲಿ ಅವರೊಬ್ಬರು. ಅವರು ಬರೆದ ನೂರಾರು ಸಂಶೋಧನಾ ಕೃತಿಗಳು ಕರ್ನಾಟಕದ ಬೌದ್ಧಿಕತೆಯನ್ನು ಬಹಳ ಎತ್ತರಕ್ಕೆ ಏರಿಸಿವೆ. ಅವರು ಕನ್ನಡ ನಾಡು ನುಡಿಗೆ ನೀಡಿದ ಕೊಡುಗೆಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಾಯಕರಿಗೆ ಎಚ್ಚರಿಸುವ ಮುಖೇನ ಇಂಥ ಮಹಾ ಲೇಖಕರನ್ನು ಅವಮಾನಿಸಿದ ಕೃತ್ಯವನ್ನು ಖಂಡಿಸುತ್ತೇನೆ. ಸರ್ಕಾರ ಅವರ ಕ್ಷಮೆ ಯಾಚಿಸಬೇಕೆಂದು ಪುರುಷೋತ್ತಮ ಬಿಳಿಮಲೆ ಅವರು ಆಗ್ರಹಿಸಿದ್ದಾರೆ.

ಮತ್ತೊಬ್ಬ ಕನ್ನಡದ ಹಿರಿಯ ವಿಮರ್ಶಕರಾದ ರಾಜೇಂದ್ರ ಚೆನ್ನಿ ಅವರು "ಪ್ರತಿಧ್ವನಿ" ಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಂಪನಾ ಅವರು ಕನ್ನಡದ ಹಿರಿಯ ಮತ್ತು ಗೌರವಾನ್ವಿತ ಬರಹಗಾರರು. ಜೈನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಭಾರತದಲ್ಲಿ ಮಾತ್ರವಲ್ಲದೆ ವಿಶ್ವವೇ ಅವರನ್ನು ಗುರುತಿಸಿ ಅನೇಕ ಸನ್ಮಾನಗಳನ್ನು ಮಾಡಲಾಗಿದೆ. ಆ ಮಟ್ಟದ ಸಂಶೋಧಕರು ಬಹಳ ಜನರ ಅಭಿಪ್ರಾಯದ ಪ್ರಕಾರ ಕನ್ನಡ ಸಾಹಿತ್ಯದ ಶ್ರೇಷ್ಠ ಸಾಹಿತಿಗಳಲ್ಲಿ ಹಂಪನಾ ಕೂಡ ಒಬ್ಬರು, ಎಂದು ಹೇಳಿದ್ದಾರೆ.

ಬರಹಗಾರರಾಗಿ ಒಬ್ಬ ಪ್ರಜ್ಞಾವಂತ ವ್ಯಕ್ತಿಯಾಗಿ ನಾಡು ನುಡಿಗೆ ಸಂಬಂಧಿಸಿದಂತೆ ಬಹಳ ಜವಾಬ್ದಾರಿಯುತ ಕೆಲಸ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ಕೇಂದ್ರ ಸರ್ಕಾರದ ಆಡಳಿತದ ತಪ್ಪುಗಳನ್ನು ವಿಮರ್ಶಿಸಿದ್ದಕ್ಕೆ ಪೊಲೀಸರು ಅವರನ್ನು ಅವಮಾನಿಸಿರುವುದು ಸರಿಯಲ್ಲ ಎಂದು ನಡೆದಿರುವ ಘಟನೆಯನ್ನು ಖಂಡಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಂತಹ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಕರ್ನಾಟಕ ಮತ್ತು ದೇಶದ ಸಾಹಿತಿಗಳು, ಪ್ರಜ್ಞಾವಂತರು ರೈತ ಕಾನೂನುಗಳನ್ನು ವಿರೋಧಿಸಿ ಬರಹಗಳನ್ನು ಬರೆಯುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಇವರ ಹೇಳಿಕೆ ಅಪರಾಧ ಅನ್ನೋದು ತಪ್ಪು, ಬೆದರಿಸುವುದು, ವಿಚಾರಿಸುವುದು ಸರಿಯಲ್ಲ ಎಂದಿದ್ದಾರೆ.

60 ವರ್ಷದಿಂದ ಕನ್ನಡ ಸೇವೆ ಮಾಡುತ್ತಿದ್ದು, ಇದೀಗ ಕನ್ನಡ ನಾಡಿನಲ್ಲಿಯೇ ಈ ರೀತಿ ನಡೆಸಿಕೊಂಡಿರುವುದು ಬೇಸರದ ಸಂಗತಿ. ಈ ಕುರಿತು ಪೊಲೀಸರು ಸಾಮಾನ್ಯಪ್ರಜ್ಞೆ ಉಪಯೋಗಿಸದೆ ಕರ್ತವ್ಯ ನಿರ್ವಹಿಸಿದ್ದಾರೆ. ಈಗಿನ ಕಾಲದಲ್ಲಿ ಬಲಪಂಥೀಯರು ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಠಾಣೆಗೆ ದೂರು, ಅಥವಾ ಬಾಯಿಮಾತಿನ ಹೇಳಿಕೆ ನೀಡಿದರೆ ಸಾಕು ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿ ಕಿರುಕುಳ ನೀಡುತ್ತಿದ್ದಾರೆ.

ಉತ್ತರಪ್ರದೇಶ ಸೇರಿದಂತೆ ದೇಶದ ಕೆಲವೆಡೆ ಇಂತಹ ಘಟನೆ ನಡೆಯುತಿತ್ತು. ಆದರೆ ಈಗ ಕರ್ನಾಟಕದಲ್ಲಿಯೇ ನಡೆದಿದ್ದು ದುರಂತ ಸಂಗತಿ, ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಕುಗ್ಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಹಿರಿಯ ಚಿಂತಕ ಪ್ರೊ. ರಹಮತ್ ತರೀಕೆರೆ ಅವರು, ʼಹಂಪನಾ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಿಸಿದ ಪ್ರಕರಣವನ್ನು ಒಂಟಿಯಾಗಿ ನೋಡಲಾಗದು. ಅನಂತಮೂರ್ತಿಯವರಿಗೆ ಪಾಕಿಸ್ತಾನಕ್ಕೆ ಟಿಕೆಟ್ ಬುಕ್ ಮಾಡಿದ್ದು, ಎಂ ಎಂ ಕಲಬುರ್ಗಿ- ಗೌರಿ ಹತ್ಯೆಗಳು, ನಾಟಕದ ಸಂಭಾಷಣೆಯೊಂದಕ್ಕಾಗಿ ಶಾಲೆಯ ಮೇಲೆ ದೇಶದ್ರೋಹದ ಪ್ರಕರಣಗಳಿಂದ ಹಿಡಿದು ಹಂಪನಾ ಪ್ರಕರಣದ ತನಕ ಸರಣಿ ವಿದ್ಯಮಾನಗಳಿವೆ. ತಿನ್ನುವ ಉಡುವ ಪ್ರೇಮಿಸುವ ಬರೆವ ಪಶುಸಾಕುವ ಮಾರುವ ಮಾತಾಡುವ- ಅನೇಕ ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತಿರುವ ಚಿಂತನೆ ಮತ್ತು ರಾಜಕೀಯ ವ್ಯವಸ್ಥೆಯ ಭಾಗವಾಗಿ ಇವನ್ನು ಗಮನಿಸಬೇಕು. ಕರ್ನಾಟಕವು ನಾಗರಿಕ ಸ್ವಾತಂತ್ರ್ಯ ಕಸಿಯುವ ರಾಜ್ಯವಾಗುತ್ತಿರುವುದು ದಿಟ. ಕೌಶಲ್ಯ ನಾವೀನ್ಯತೆ ವಿಷಯದಲ್ಲಿ ದೇಶಕ್ಕೆ ಪ್ರಥಮಸ್ಥಾನ ಪಡೆಯಬಲ್ಲ ಕರ್ನಾಟಕಕ್ಕೆ ಇಂತಹ ವಿದ್ಯಮಾನಗಳು ಘಾತಕವಾದವು.ʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಹಂಪನಾ ವಿಚಾರಣೆ ರಾಜ್ಯಕ್ಕೆ ಮಾಡಿದ ಅಪಮಾನ – ಡಿಕೆ ಶಿವಕುಮಾರ್‌

'ಬಿಜೆಪಿ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತಿದವರನ್ನು ಜೈಲಿಗೆ ಕಳುಹಿಸಿ ಬೆದರಿಸುವ ಪ್ರಯತ್ನ ಮಾಡುತ್ತಿದೆ. ಮಂಡ್ಯದಲ್ಲಿ ಹಂ.ಪ ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿರುವುದು ಕನ್ನಡ ಸಾಹಿತ್ಯ ಲೋಕ ಹಾಗೂ ರಾಜ್ಯಕ್ಕೆ ಮಾಡಿದ ಅಪಮಾನ' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಕ್ಷಮೆಯಾಚಿಸಲಿ ಕಾರ್ಯಕರ್ತರನ್ನು ಅಮಾನತುಗೊಳಿಸಲಿ - ಕರವೇ ನಾರಾಯಣಗೌಡ

ಆಳುವ ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಕನ್ನಡದ ಹೆಸರಾಂತ ಸಾಹಿತಿ, ಸಂಶೋಧಕ ನಾಡೋಜ ಹಂಪನಾ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಅಪಮಾನಿಸಲಾಗಿದೆ.‌‌ ಇದು ಕನ್ನಡಿಗರ ಪರಂಪರೆಯ ಮೇಲೆ ಮಾಡಿದ ಹಲ್ಲೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪೊಲೀಸರು ಮಾಡಿರುವ ದುಷ್ಕೃತ್ಯಕ್ಕಾಗಿ ಕೂಡಲೇ ಹಂಪನಾ ಅವರಲ್ಲಿ ಕ್ಷಮೆ ಯಾಚಿಸಬೇಕು. ಸುಳ್ಳು ಕೇಸುಗಳನ್ನು ದಾಖಲಿಸಿಕೊಳ್ಳುವ ದಾರ್ಷ್ಟ್ಯ ಪ್ರದರ್ಶಿಸುತ್ತಿರುವ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಬೇಕು.‌ ಈ ಘಟನೆಗೆ ಕಾರಣಕರ್ತರಾದವರನ್ನು ಕೂಡಲೇ ಅಮಾನತು‌ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕರವೇ ನಾರಾಯಣ ಗೌಡ ಹೇಳಿದ್ದಾರೆ.

ಶ್ರೀನಿವಾಸ ಕಾರ್ಕಳ, ಸನತ್‌ ಕುಮಾರ್‌ ಬೆಳಗಲಿ, ಬಂಜಗೆರೆ ಜಯಪ್ರಕಾಶ್‌ ಸೇರಿದಂತೆ ಹಲವು ಹಿರಿಯ ಚಿಂತಕರು, ಲೇಖಕರು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಖಂಡಿಸಿದ್ದಾರೆ.

ಜನತಂತ್ರ ಪರ ಹೋರಾಟದಲ್ಲಿ ನಾಡಿನ ಅನೇಕ ಸಾಹಿತಿಗಳು, ಕವಿ, ಲೇಖಕರು, ಬರಹಗಾರರು, ವಿಮರ್ಶಕರು ಸಾಕಷ್ಟು ಶ್ರಮಿಸಿ ನಾಡುನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇದೀಗ ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಲೇಖಕರನ್ನು, ವಿಮರ್ಶಕರನ್ನು, ಸಾಮಾಜಿಕ ಹೋರಾಟಗಾರರನ್ನು ದೇಶದ್ರೋಹಿಗಳಂತೆ ಬಿಂಬಿಸಿ ಅವಮಾನ ಮಾಡುತ್ತಿರುವುದು ಪ್ರಸಕ್ತ ಕಾಲಘಟ್ಟದಲ್ಲಿ ನಿಜಕ್ಕೂ ದುರಂತದ ಸಂಗತಿ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com