ಮಲೆನಾಡನ್ನು ಬೆಚ್ಚಿಬೀಳಿಸಿದ ಸ್ಫೋಟ: ಅಕ್ರಮ ಕ್ವಾರಿ ದಂಧೆಗೆ ಹಲವರ ಬಲಿ

ಇದೀಗ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಲಜ್ಜೆಗೇಡಿ ಸ್ವಾರ್ಥ, ಹೊಣೆಗೇಡಿತನಕ್ಕೆ ಹತ್ತಾರು ಜೀವಹಾನಿಯೊಂದಿಗೆ ನೂರಾರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ಹಾನಿಯಾಗಿದೆ.
ಮಲೆನಾಡನ್ನು ಬೆಚ್ಚಿಬೀಳಿಸಿದ ಸ್ಫೋಟ: ಅಕ್ರಮ ಕ್ವಾರಿ ದಂಧೆಗೆ ಹಲವರ ಬಲಿ

ಗುರುವಾರ ರಾತ್ರಿ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಇಡೀ ಮಲೆನಾಡನ್ನು ಬೆಚ್ಚಿಬೀಳಿಸಿದ್ದ ತಡರಾತ್ರಿಯ ಭೀಕರ ಸ್ಫೋಟಕ್ಕೆ ಶಿವಮೊಗ್ಗ ನಗರದ ಕೂಗಳತೆ ದೂರದಲ್ಲಿ ನಡೆಯುತ್ತಿರುವ ವ್ಯಾಪಕ ಅಕ್ರಮ ಗಣಿಗಾರಿಕೆಯೇ ಕಾರಣ ಎಂಬುದು ಬಯಲಾಗಿದೆ.

ಶಿವಮೊಗ್ಗ ನಗರ ಹೊರವಲಯದ ಹುಣಸೋಡು ಕಲ್ಲು ಕ್ರಷರ್ ಗೆ ಸರಬರಾಜಾಗಿದ್ದ ಒಂದಿಡೀ ಲಾರಿ ಲೋಡ್ ಜಿಲೆಟಿನ್ ಏಕಾಏಕಿ ಸ್ಫೋಟಿಸಿರುವುದೇ ಜನರನ್ನು ಆತಂಕಕ್ಕೆ ತಳ್ಳಿದ ಭಾರೀ ಸ್ಫೋಟಕ್ಕೆ ಕಾರಣ ಎಂಬುದು ತಡರಾತ್ರಿ ಪತ್ತೆಯಾಗಿದೆ.

ಘಟನೆಯಲ್ಲಿ ಕ್ವಾರಿ ಕೆಲಸಗಾರರು ಎನ್ನಲಾಗಿರುವ 10ಕ್ಕೂ ಹೆಚ್ಚು ಮಂದಿ ಸಾವು ಕಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತರ ದೇಹಗಳು ಸುಟ್ಟು, ಛಿದ್ರಛಿದ್ರವಾಗಿ ದೂರ ದೂರಕ್ಕೆ ಚೆದುರಿ ಬಿದ್ದಿದ್ದು, ಘಟನೆ ನಡೆದ ತಾಸುಗಳ ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಇಡೀ ಪ್ರದೇಶದಲ್ಲಿ ಕಿಮೀ ಗಟ್ಟಲೆ ಹೊಗೆ, ಧೂಳು ತುಂಬಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಡೀ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ಕೂಡ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕತ್ತಲಿನಲ್ಲೇ ಜಿಲಾಡಳಿತ ಮತ್ತು ಪೊಲೀಸ್ ರಕ್ಷಣಾ ಮತ್ತು ಶೋಧನಾ ಕಾರ್ಯ ಮುಂದುವರಿಸಿತ್ತು.

ರಾತ್ರಿ 10.22ರ ಸುಮಾರಿಗೆ ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ಸೊರಬ, ಹೊಸನಗರ, ಕುಂದಾಪುರ, ಶೃಂಗೇರಿ, ಎನ್ ಆರ್ ಪುರ, ತರೀಕೆರೆ, ಕೊಪ್ಪ ಸೇರಿದಂತೆ ಮಲೆನಾಡಿನ ಬಹುತೇಕ ಕಡೆ ಕೆಲವು ಸೆಕೆಂಡುಗಳ ಅಂತರದಲ್ಲಿ ನಿರಂತರ ಎರಡು ಸ್ಫೋಟ ಕೇಳಿಸಿತ್ತು. ಎರಡನೇ ಸ್ಫೋಟದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಶಿವಮೊಗ್ಗ ನಗರದ ಸಿಮ್ಸ್ ಆಸ್ಪತ್ರೆ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳಿಗೆ ಭಾಗಶಃ ಹಾನಿಯಾದ ವರದಿಗಳಿವೆ. ಶಿವಮೊಗ್ಹ ನಗರದಲ್ಲಿ ಸ್ಫೋಟದ ಬಳಿಕ ತಾಸುಗಟ್ಟಲೆ ಜನ ರಸ್ತೆಯಲ್ಲೇ ಆತಂಕದಿಂದ ಕಾಲ ಕಳೆದರು.

ಇಡೀ ಜಿಲ್ಲೆಯ ಜನ ಆತಂಕಗೊಂಡಿದ್ದರೂ ಸಂಬಂಧಪಟ್ಟ ಇಲಾಖೆಗಳಾಗಲೀ, ಜಿಲ್ಲಾಡಳಿತವಾಗಲೀ ಘಟನೆಯ ಕುರಿತು ಜನರ ಭೀತಿ ಹೋಗಲಾಡಿಸುವ ಯಾವ ಯತ್ನವನ್ನೂ ಮಾಡಲಿಲ್ಲ ಎಂಬ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಕಾರಣ ಮತ್ತು ವಿವರಗಳು ಬಹಿರಂಗಗೊಂಡವು.

ಶಿವಮೊಗ್ಗ ನಗರದ ಜನವಸತಿ ಪ್ರದೇಶಗಳಿಗೆ ತಾಕಿಕೊಂಡಂತೆ ಇರುವ ಹುಣಸೋಡು, ಕಲ್ಲುಗಂಗೂರು, ಬಸವನಗಂಗೂರು, ಗೆಜ್ಜೇನಹಳ್ಳಿ, ಸೋಮಿನಕೊಪ್ಪ ಮುಂತಾದ ಪ್ರದೇಶದಲ್ಲಿ ಕಳೆದ ಒಂದು ದಶಕದಿಂದ ಡೈನಾಮೈಟ್, ಜಿಲೆಟಿನ್ ಬಳಸಿ ಭಾರೀ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಈ ಬಗ್ಗೆ ಕ್ವಾರಿ ಅಂಚಿನ ಪ್ರದೇಶದ ನಿವಾಸಿಗಳು ಮತ್ತು ಪರಿಸರಾಸಕ್ತರು ಹಲವು ವರ್ಷಗಳಿಂದ ಜಿಲ್ಲಾಡಳಿತದ ಗಮನ ಸೆಳೆದು, ಅಕ್ರಮ ಗಣಿಗಾರಿಕೆ, ಸ್ಫೋಟ ಜನಜೀವನ, ಪರಿಸರಕ್ಕೆ ಅಪಾಯವೊಡ್ಡಿದ್ದು ಸಂಪೂರ್ಣ ಆ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಿಸಲು ಆಗ್ರಹಿಸಿದ್ದರು. ಮಾಧ್ಯಮಗಳು ಕೂಡ ವರ್ಷಗಳಿಂದ ಅಪಾಯದ ಬಗ್ಗೆ ನಿರಂತರ ವರದಿಗಳ ಮೂಲಕ ಗಮನ ಸೆಳೆದಿದ್ದವು.

ಆದರೆ, ಜಿಲ್ಲೆಯ ಎರಡು ಪ್ರಭಾವಿ ರಾಜಕಾರಣಿಗಳ ಕುಟುಂಬಸ್ಥರೇ ಅಕ್ರಮ ಗಣಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳ ಮೇಲೆ ಒತ್ತಡ ತಂದು ಅವರು ಯಾವುದೇ ಕ್ರಮಕ್ಕೆ ಮುಂದಾದರೂ ಕಟ್ಟಿಹಾಕಲಾಗುತ್ತಿತ್ತು.

ಅದರಲ್ಲೂ ಸಚಿವ ಕೆ ಎಸ್ ಈಶ್ವರಪ್ಪ ಅವರು ಜಿಲ್ಲಾಧಿಕಾರಿ ಸೇರಿದಂತೆ ಹಲವು ಉನ್ನತ ಅಧಿಕಾರಿಗಳ ಸಭೆಗಳಲ್ಲೇ ಪದೇಪದೆ ಅಕ್ರಮ ಗಣಿಗಾರಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಜನರ ಒತ್ತಡದಿಂದಾಗಿ ಆಗಾಗ ಅಧಿಕಾರಿಗಳು ಅಕ್ರಮ ಗಣಿ ಮತ್ತು ಕ್ರಷರ್ ಮೇಲೆ ದಾಳಿ ಮಾಡಿದರೂ, ಮರುಕ್ಷಣವೇ ಅಕ್ರಮ ದಂಧೆಕೋರರ ಪರ ಪ್ರಭಾವಿಗಳ ಶಿಫಾರಸುಗಳು ಕಾನೂನು ಕ್ರಮಕ್ಕೆ ಅಡ್ಡಗಾಲಾಗುತ್ತಿದ್ದವು. ನೀವು ಹೀಗೆ ಇರುವ ಕ್ವಾರಿ, ಕ್ರಷರ್, ಮುಚ್ಚಿಸಿದರೆ ಜಿಲ್ಲೆಯಲ್ಲಿ ರಸ್ತೆ, ಸೇತುವೆ, ಕಟ್ಟಡ ಕಟ್ಟೋದು ಹೇಗೆ ಎಂದು ಸ್ವತಃ ಸಚಿವರೇ ಅಧಿಕಾರಿಗಳ ಅಧಿಕೃತ ಸಭೆಗಳಲ್ಲಿ ದಬಾಯಿಸಿದ ನಿದರ್ಶನಗಳೂ ಇವೆ.

ಇದೀಗ ರಾಜಕೀಯ ನಾಯಕರು ಮತ್ತು ಅಧಿಕಾರಿಗಳ ಲಜ್ಜೆಗೇಡಿ ಸ್ವಾರ್ಥ, ಹೊಣೆಗೇಡಿತನಕ್ಕೆ ಹತ್ತಾರು ಜೀವಹಾನಿಯೊಂದಿಗೆ ನೂರಾರು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿ ಹಾನಿಯಾಗಿದೆ.

ಭೀಕರ ಸ್ಫೋಟದಿಂದಾಗಿ ನಗರದ ಮನೆಗಳ ಕಿಟಕಿ ಗಾಜು, ಟೆರೇಸು ಕಿತ್ತುಹೋದ ಘಟನೆಗಳೂ ವರದಿಯಾಗಿವೆ. ಇನ್ನು ಸ್ಫೋಟ ಸ್ಥಳದಿಂದ 15-20 ಕಿಮೀ ದೂರದಲ್ಲಿರುವ ತುಂಗಾ ಮತ್ತು ಭದ್ರಾ ಅಣೆಕಟ್ಟುಗಳ ಸುರಕ್ಷತೆಯ ಬಗ್ಗೆ ಕೂಡ ಜನ ಆತಂಕಗೊಂಡಿದ್ದಾರೆ.

ಸ್ಫೋಟದ ಭೀಕರತೆಗೆ ಆಗಿರುವ ನಿಖರ ನಷ್ಟ ಇನ್ನಷ್ಟೇ ಗೊತ್ತಾಗಬೇಕಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com