ರಾಜಭವನ ಮುತ್ತಿಗೆ ಯತ್ನ: ಡಿಕೆಶಿ, ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ

ರೈತರು ಸಿಡಿದೆದ್ದಿದ್ದಾರೆ, ಅವರು ದಂಗೆ ಏಳಲು ಅವಕಾಶ ನೀಡಬೇಡಿ. ಈಗ ಕೇಂದ್ರ ಸರ್ಕಾರದ ವಿರುದ್ದ ಎರಡನೇ ಸ್ವಾತಂತ್ರ್ಯ ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ
ರಾಜಭವನ ಮುತ್ತಿಗೆ ಯತ್ನ: ಡಿಕೆಶಿ, ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಪೊಲೀಸ್ ವಶಕ್ಕೆ

ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆ ತಿದ್ದುಪಡಿ ಹಾಗೂ ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಕಾಂಗ್ರೆಸ್‌ ರಾಜಭವನ ಚಲೋ ಹಮ್ಮಿಕೊಂಡಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್‌ ಮೈದಾನದಲ್ಲಿ ಆರಂಭವಾದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಧ್ಯಕ್ಷ ಡಿಕೆ ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಹಾಲಿ ಮತ್ತು ಮಾಜಿ ಶಾಸಕರು, ಸಂಸದರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಭೆಯ ಉದ್ಘಾಟನಾ ಭಾಷಣವನ್ನು ಮಾಡಿದ ಡಿಕೆ ಶಿವಕುಮಾರ್‌, ಕಳೆದ ವರ್ಷ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ವೇಳೆ 2021 ವರಷ್‌ ಕಾಂಗ್ರೆಸ್‌ ಪಾಲಿಗೆ ಸಂಘಟನಾ ಹಾಗೂ ಸಂಘರ್ಷದ ವರ್ಷವಾಗಿರುತ್ತದೆ ಎಂದು ಹೇಳಿದ್ದೆ. ಈಗ ಸಂಘರ್ಷ ಶುರುವಾಗಿದೆ ಎಂದು ಹೇಳಿದ್ದಾರೆ. ಈ ಕಾಯ್ದೆಗಳ ವಿರುದ್ಧ ಒಂದು ವರ್ಷಗಳ ಕಾಲ ಸತತ ಪ್ರತಿಭಟನೆ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆ ಬಳಸಿ ಪ್ರತಿಭಟನಾಕಾರರನ್ನು ಹತ್ತಿಕ್ಕಲು ನೋಡುತ್ತಿದೆ. ಆದರೆ ನಾವು ರೈತರ ಜೊತೆಗೆ ನಿಂತು ಈ ರೈತ ವಿರೋಧಿ ಕಾನೂನು ಹಿಂಪಡೆಯುವವರೆಗೆ ಹೋರಾಡುತ್ತೇವೆ. ಕರೋನಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಆದ ಅನ್ಯಾಯ, ಆ ನಂತರ ರೈತರಿಗಾದ ಅನ್ಯಾಯದ ವಿರುದ್ದ ಹೋರಾಟ ಮಾಡಬೇಕಾಗಿದೆ. ಈ ಹೋರಾಟವನ್ನು ಪ್ರತೀ ತಾಲೂಕು ಮಟ್ಟದಲ್ಲಿ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ. ʼರೈತರು ಸಿಡಿದೆದ್ದಿದ್ದಾರೆ, ಅವರು ದಂಗೆ ಏಳಲು ಅವಕಾಶ ನೀಡಬೇಡಿ. ಈಗ ಕೇಂದ್ರ ಸರ್ಕಾರದ ವಿರುದ್ದ ಎರಡನೇ ಸ್ವಾತಂತ್ರ್ಯ ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರವು ಬಂಡವಾಳ ಶಾಹಿಗಳ ಗುಲಾಮರಾಗಿ ಇಡೀ ದೇಶದ ರೈತರ ಕಸುಬನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ 58 ದಿನಗಳಿಂದ ದೆಹಲಿಯಲ್ಲಿ ರೈತರ ಹೋರಾಟ ನಡೆಯುತ್ತಿದೆ. ಅವರಿಗೆ ಬೆಂಬಲಿಸಿ ಕಾಂಗ್ರೆಸ್ ಈ ಹೋರಾಟ ನಡೆಸುತ್ತಿದೆ. ರಾಜ್ಯದ ವಿವಿಧ ಮೂಲೆಗಳಿಂದ ಬರುತ್ತಿದ್ದ ರೈತರ ವಾಹನಗಳನ್ನು ಪೊಲೀಸರು ಬೆಂಗಳೂರು ಪ್ರವೇಶಿಸಲು ಬಿಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ. ರಾಜ್ಯದ ರೈತರು ಮನಸು ಮಾಡಿದರೆ ಯಡಿಯೂರಪ್ಪ ಅವರ ಸರಕಾರವನ್ನು ಕಿತ್ತೊಗೆಯುವುದು ಅಸಾಧ್ಯವಲ್ಲ. ನರೇಂದ್ರ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ಸರಕಾರವನ್ನು ಕಿತ್ತೊಗೆಯಲು ರಾಜ್ಯದ ಜನರು ನಿರ್ಧಾರ ಮಾಡಿದ್ದಾರೆ. ಜನ ಯಾವತ್ತೂ ಅನುಭವಿಸದ ಕಷ್ಟಗಳನ್ನು ಇದೀಗ ಅನುಭವಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಭವನ ಮುತ್ತಿಗೆ ಯತ್ನ: ಕಾಂಗ್ರೆಸ್‌ ನಾಯಕರ ಬಂಧನ

ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ಸಭೆ ಮುಗಿದ ಬಳಿಕ ಕಾಂಗ್ರೆಸ್‌ ನಾಯಕರು ಅಸಂಖ್ಯಾತ ಕಾರ್ಯಕರ್ತರೊಂದಿಗೆ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಕಾಂಗ್ರೆಸ್‌ ನಾಯಕರನ್ನು ತಡೆದಿದ್ದು, ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಮಾತಿನ ಚಕಮಕಿಯೂ ನಡೆದಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com