ಕೃಷಿ ಕ್ಷೇತ್ರಕ್ಕೆ ಮಾರಕವಾದ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ರೈತರು ದಂಗೆ ಏಳುವುದು ಖಚಿತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೈತ ವಿರೋಧ ಕಾಯಿದೆಗಳನ್ನು ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಜನತೆ ಮುಂಬರುವ ಚುನಾವಣೆಯಲ್ಲಿ ಜನತೆ ಮನೆಗೆ ಕಳಹಿಸುವುದು ಖಚಿತ ಎಂದಿದ್ದಾರೆ.
ದೇಶದ ಜನತೆ ಎಂದೂ ಅನುಭವಿಸದ ಕಷ್ಟಗಳನ್ನು ಇದೀಗ ಅನುಭವಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯಿದೆಗಳು ನಮಗೆ ಬೇಡ. ಅದರಿಂದ ನಮಗೆ ಅನುಕೂಲ ಇಲ್ಲ ಎಂದು ಜನತೆ ಒಕ್ಕೊರಲಿನಿಂದ ಹೇಳುತ್ತಿದ್ದಾರೆ.
ಕಳೆದ 58 ದಿನಗಳಿಂದ ರೈತರು ದೆಹಲಿಯಲ್ಲಿ ಹಗಲು, ರಾತ್ರಿ ಎನ್ನದೆ, ಚಳಿ, ಗಾಳಿ, ಮಳೆ, ಬಿಸಿಲು ಲೆಕ್ಕಿಸದೆ ಚಳವಳಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮನುಷ್ಯತ್ವ ಇದ್ದಿದ್ದರೆ ಅವರ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದಿತ್ತು. ಹತ್ತು ಬಾರಿ ರೈತರ ಜೊತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ. ಆದರೆ, ಈ ವರೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿಲ್ಲ. ಕೇಂದ್ರದ ಹಠಮಾರಿ ಧೋರಣೆ ಇದಕ್ಕೆ ಕಾರಣ.
ರೈತರು ತಮ್ಮ ಒತ್ತಾಯಕ್ಕೆ ಬದ್ಧರಾಗಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದೆ. ಹೀಗಾಗಿಯೇ ಸುಪ್ರೀಂಕೋರ್ಟ್ ಮೂರು ಕಾಯಿದೆಗಳಿಗೆ ತಡೆ ಆದೇಶ ನೀಡಿದೆ. ಕಾಯಿದೆಗಳು ಸಂವಿಧಾನಬದ್ಧವಾಗಿ ಇದ್ದಿದ್ದರೆ ನ್ಯಾಯಾಲಯ ತಡೆಯಾಜ್ಞೆ ನೀಡುತ್ತಿರಲಿಲ್ಲ. ರೈತರು ದಂಗೆ ಏಳಲು ಅವಕಾಶ ಮಾಡಿಕೊಡಬೇಡಿ ಎಂದು ನಾನು ಸೂಚ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ. ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಈ ಹಿಂದೆ ದೇಶದ ಜನತೆ ದಂಗೆ ಎದ್ದಿದ್ದರು. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.
ರೈತರು ಅನ್ನದಾತರು. ಈ ಕಾನೂನುಗಳಿಂದ ಎಂಎಸ್ಪಿ ನಿಂತು ಹೋಗಲಿದೆ. ಕೃಷಿ ಮಾರುಕಟ್ಟೆಗಳು ನಾಶವಾಗಲಿವೆ. ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಮಣಿದು, ಅವರಿಗೆ ಗುಲಾಮರಾಗಿ ಕೇಂದ್ರ ಸರ್ಕಾರ ನಡೆಸುವವರು ಈ ಕಾಯಿದೆಗಳನ್ನು ಜಾರಿಗೆ ತಂದಿದ್ದಾರೆ. ಇದನ್ನು ವಿರೋಧಿಸಬೇಕಿದೆ.
ನಮ್ಮ ಹೋರಾಟ ಕೇವಲ ಭಾಷಣ ಮಾಡಿ ಮುಗಿಸುವುದಲ್ಲ. ಕಾಯಿದೆಗಳನ್ನು ವಾಪಸ್ ಪಡೆಯುವ ವರೆಗೆ ನಿರಂತರವಾಗಿ ಹೋರಾಟ ನಡೆಸುವ ಅಗತ್ಯವಿದೆ. ಪೊಲೀಸರು ನಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ಅದಕ್ಕೂ ನಾವು ತಯಾರಾಗಿ ಇರಬೇಕು ಎಂದು ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ.
ಇದು ಹೋರಾಟದ ಆರಂಭ. ಇದು ಮುಂಬರುವ ವಿಧಾನಸಭೆ ಚುನಾವಣೆ ವರೆಗೆ ನಡೆಯಲಿದೆ. ರೈತರನ್ನು ಉಳಿಸಬೇಕಾದರೆ, ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರೆಯಬೇಕಾದರೆ ಈ ಕಾಯಿದೆಗಳನ್ನು ವಾಪಸ್ ಪಡೆಯಲೇಬೇಕು. ರೈತರಿಗೆ ಮಾರುಕಟ್ಟೆ ಒದಗಿಸುತ್ತೇವೆ. ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಬೆಲೆ ನೀಡುತ್ತೇವೆ ಎಂದು ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಹೇಳಿತ್ತು. ಆದರೆ, ಈಗ ಅದಕ್ಕೆ ತದ್ವಿರುದ್ದವಾಗಿ ನಡೆದುಕೊಳ್ಳುತ್ತಿದೆ.
ಎಂಎಸ್ಪಿ ನಿಲ್ಲಿಸುವುದಿಲ್ಲ ಎಂದಾದರೆ ಕಾನೂನು ರೀತ್ಯ ಭರವಸೆ ನೀಡಿ ಎಂದು ಚಳವಳಿ ನಿರತ ರೈತರು ಕೇಳುತ್ತಿದ್ದಾರೆ. ಅದರಂತೆ ಕಾನೂನು ಪ್ರಕಾರ ಭರವಸೆ ನೀಡಲು ಇರುವ ಅಡ್ಡಿಯಾದರೂ ಏನು ? ಕೇಂದ್ರ ಸರ್ಕಾರ ರೈತರ ಪರವಾಗಿ ಇದ್ದರೆ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಮೂರು ಕಾಯಿದೆಗಳನ್ನು ವಾಪಸ್ ಪಡೆಯದ ಹೊರತು ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಸಿಗುವುದಿಲ್ಲ. ಅಲ್ಲಿಯವರೆಗೆ ರೈತರೂ ಚಳವಳಿ ವಾಪಸ್ ಪಡೆಯುವುದಿಲ್ಲ ಎಂದು ಹೇಳಿದರು. ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರುವುದಾಗಿಯೂ ಕೇಂದ್ರ ಸರ್ಕಾರ ಕೂಡಲೇ ಭರವಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ನಾನಾ ಜಿಲ್ಲೆಗಳಿಂದ ರೈತರು ಚಳವಳಿಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೊರಟಿದ್ದರು. ಆದರೆ, ಪೊಲೀಸರು ಅವಕಾಶ ಕೊಟ್ಟಿಲ್ಲ. ಕೊಟ್ಟಿದ್ದರೆ 20 ಸಾವಿರಕ್ಕೂ ಹೆಚ್ಚು ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು. ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರದ ಕಡೆಯಿಂದ ನಡೆದಿದೆ. ಮುಂದಿನ ದಿನಗಳಲ್ಲಿ ಇದು ಬಿಜೆಪಿಗೇ ತಿರುಗುಬಾಣವಾಗಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.