ಪುಟ್ಟ ಜಿಲ್ಲೆ ಕೊಡಗು ಎರಡು ರಂಗಗಳಲ್ಲಿ ದೇಶದಲ್ಲೆ ಪ್ರಖ್ಯಾತವಾಗಿದೆ. ಮೊದಲನೇಯದು ರಕ್ಷಣಾ ಕ್ಷೇತ್ರವಾಗಿದ್ದರೆ ಎರಡನೇಯದು ಕ್ರೀಡಾ ಕ್ಷೇತ್ರ. ಈ ಎರಡೂ ರಂಗಗಳಲ್ಲೂ ಸಾವಿರಾರು ಕೊಡವರು ಹತ್ತಾರು ದಶಕಗಳಿಂದಲೂ ಸೇವೆ ಸಲ್ಲಿಸುತಿದ್ದಾರೆ. ಕೊಡಗಿನ ಪ್ರತೀ ಗ್ರಾಮದಲ್ಲೂ ಓರ್ವ ಮಾಜಿ ಸೈನಿಕ ಇಲ್ಲವೇ ಕ್ರೀಡಾಪಟು ಇದ್ದೇ ಇರುತ್ತಾರೆ. ಇದು ಜಿಲ್ಲೆಯ ಹೆಗ್ಗಳಿಕೆ.
ಕ್ರೀಡಾ ಕ್ಷೇತ್ರದಲ್ಲಿ ಸಾವಿರಾರು ಪಟುಗಳು ರಾಷ್ಟ್ರಮಟ್ಟದ ಸ್ಪರ್ದೆಗಳಲ್ಲಿ ಪಾಲ್ಗೊಂಡು ಜಿಲ್ಲೆಯ ಹಿರಿಮೆ ಎತ್ತರಕ್ಕೆ ಏರಿಸಿದ್ದಾರೆ. ಇಲ್ಲಿ ನ ಹೆಚ್ಚಿನ ಯುವಕರ ನೆಚ್ಚಿನ ಕ್ರೀಡೆ ಹಾಕಿ ಆಗಿದ್ದು, ದೇಶದ ಪ್ರತಿಷ್ಠಿತ ಹಾಕಿ ತಂಡಗಳಲ್ಲಿ ಕೊಡಗಿನವರು ಒಬ್ಬರಾದರೂ ಇದ್ದೇ ಇರುತ್ತಾರೆ. ಹಾಕಿ ಸೇರಿದಂತೆ ಯುವ ಜನಾಂಗದ ನೆಚ್ಚಿನ ಕ್ರೀಡೆ ಕ್ರಿಕೆಟಿನಲ್ಲೂ ಅದ್ವಿತೀಯ ಸಾಧನೆ ಮಾಡಿರುವ ನೂರಾರು ಪಟುಗಳಿದ್ದಾರೆ.
ಅಂತಹ ಓರ್ವ ಕ್ರಿಕೆಟ್ ಪಟು ಪಟ್ಟಮಾಡ ಕರುಂಬಯ್ಯ ಬೆಳ್ಳಿಯಪ್ಪ. ಇಂದಿಗೂ ಕ್ರಿಕೆಟ್ ಎಂದರೆ ಕೊಡಗಿನ ಜನತೆ ಜ್ಞಾಪಿಸಿಕೊಳ್ಳುವುದು ಬೆಳ್ಳಿಯಪ್ಪ ಅಯ್ಯಪ್ಪ ಮತ್ತು ರಾಬಿನ್ ಉತ್ತಪ್ಪ ಅವರನ್ನು.
1940 ರಲ್ಲಿ ಜನಿಸಿದ ಬೆಳ್ಳಿಯಪ್ಪ ಅವರದ್ದು ನಿಜಕ್ಕೂ ಯಶೋಗಾಥೆ. ಕರ್ನಾಟಕ
ತಂಡದಲ್ಲಿ ಆಡಲು ಅವಕಾಶ ಸಿಗದಿದ್ದಾಗ ನೆರೆಯ ತಮಿಳುನಾಡಿಗೆ ಹೋಗಿ ಅಲ್ಲಿನ ಕ್ರಿಕೆಟ್ ತಂಡದಲ್ಲಿ ಸಾಧನೆ ಮೆರೆದು ಕ್ಯಾಪ್ಟನ್ ಕೂಡ ಆದರು. ಅಂದಿನ ಮದ್ರಾಸ್ ತಂಡದ ನಾಯಕನಾಗಿರುವ ಕೊಡಗಿನ ಬೆಳ್ಳಿಯಪ್ಪ 1959ರಲ್ಲಿ ತಮ್ಮ ಕ್ರಿಕೆಟ್ ಜೀವನ ಆರಂಭಿಸಿದ ಇವರು 1974ರವರೆಗೂ ತಂಡವನ್ನು ಪ್ರತಿನಿಧಿಸಿದ್ದಾರೆ.
ಬೆಳ್ಳಿಯಪ್ಪ ಮದ್ರಾಸ್ ತಂಡದ ಆಸರೆಯಂತೆ ಇದ್ದವರು,ಓಪನಿಂಗ್ ಬ್ಯಾಟ್ಸ್ ಮನ್,ವಿಕೆಟ್ ಕೀಪರ್ ಸ್ಥಾನವನ್ನು ಪಡೆದು ಕಡೆ ತನಕ ತನ್ನ ಸಾಮರ್ಥ್ಯ ಮೆರೆದಿದ್ದಾರೆ. ಒಟ್ಟು 94 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯ ಆಡಿರುವ ಇವರು 4061 ರನ್ ಗಳಿಸಿದ್ದಾರೆ. ಗರಿಷ್ಟ ರನ್ 141,ಕೀಪರ್ ಆಗಿ 93 ಕ್ಯಾಚ್,46 ಸ್ಟಂಪಿಂಗ್ ಮಾಡಿದ್ದಾರೆ.
ಇವರ ಜೊತೆ ಸತತ 20 ವರ್ಷ ತಂಡವನ್ನು ಪ್ರತಿನಿಧಿಸಿಧ್ದ ವಿ.ವಿ ಕುಮಾರ್ ಪ್ರಕಾರ,ಬೆಳ್ಳಿಯಪ್ಪ ತಂಡಕ್ಕೆ ಸ್ಪೂರ್ತಿಯಾಗಿದ್ದರು,ಮೈದಾನದಲ್ಲಿ ಇಲ್ಲದಿದ್ದಾಗಲೂ
ತಂಡಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು,60ನೇ ದಶಕ ಕಂಡ ಮದ್ರಾಸ್ ತಂಡದ ಅತ್ಯುತ್ತಮ ನಾಯಕರಾಗಿದ್ದರು,ಇವರ ಮಾರ್ಗದರ್ಶನದಲ್ಲಿ ಹಲವು ಪಂದ್ಯಗಳನ್ನು ಗೆದ್ದಿದೇವೆ ಎನ್ನುತ್ತಾರೆ.
ಮತ್ತೊಬ್ಬ ವೇಗದ ಬೌಲರ್ ಕಲ್ಯಾಣ ಸುಂದರಂ ಪ್ರಕಾರ ನಾನು ಮೊದಲ ರಣಜಿ ಪಂದ್ಯ ಆಡುವ ಸಂದರ್ಭ,ಆಕ್ರಮಣಕಾರಿ ಬ್ಯಾಟ್ಸ್ ಮನ್ ಗಳಿಗೆ ಆಕ್ರಮಣ ಮಾಡುವುದನ್ನು ಸಲಹೆ ನೀಡುತ್ತಿದ್ದರು,ನಾನು ಅವರ ಸಲಹೆ ಪಡೆದು ಸಫಲವೂ ಆಗುತ್ತಿದ್ದೆ. ಒಂದು ದಿನ ಅಂತರ ಜಿಲ್ಲಾ ಪಂದ್ಯಾವಳಿ ಸಂದರ್ಭ ಅನಾರೋಗ್ಯದಲ್ಲಿದ್ದೆ,ಆದರೂ ನನ್ನನ್ನು ಐದು ಓವರ್ ಬೌಲ್ ಮಾಡಲು ಹೇಳಿ ನನ್ನನ್ನು ರಾಜ್ಯಮಟ್ಟದ ತಂಡಕ್ಕೆ ತಲುಪುವಂತೆ ಮಾಡಿದ್ದರು ಎಂದರು.
ಇನ್ನು ಇವರು ಗಾಲ್ಫ್ ಪ್ರಿಯರೂ ಆಗಿದ್ದರು, ಬಿಡುವಿನ ವೇಳೆಯಲ್ಲಿ ಗಾಲ್ಫ್ ಆಡುತ್ತಿದ್ದರು.ಅಂದಹಾಗೆ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಭರತ್ ರೆಡ್ಡಿ ಇವರ ಖಾಸಾ ಸ್ನೇಹಿತ. ಇದೀಗ ಕೊಡಗಿನ ಉತ್ತಮ ಕ್ರಿಕೆಟ್ ಆಟಗಾರ ಬೆಳ್ಳಿಯಪ್ಪ ತಮ್ಮ 79 ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅವರ
ಕೊನೆ ಆಸೆಯಂತೆ ಕೊಡಗಿನಲ್ಲೇ ಅಂತ್ಯಕ್ರಿಯೆ ನೆರವೇರಿದೆ. ಇಂತಹ ಮಹಾನ್ ಕ್ರೀಡಾಪಟು ಮತ್ತೆ ಹುಟ್ಟಿ ಬರಲಿ ಎನ್ನುವುದೇ ಕೊಡಗಿನ ಸಾವಿರಾರು ಕ್ರೀಡಾ ಪ್ರಿಯರ ಆಶಯ.