ಶಿವಮೊಗ್ಗದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಮಾಯವಾಗಿದ್ದನ್ನು ಖಂಡಿಸಿ ರಾಜ್ಯಾದ್ಯಂತ ತೀವ್ರವಾದ ಪ್ರತಿರೋಧ ವ್ಯಕ್ತವಾಗಿತ್ತು. ಈಗ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ ಎಸ್ ನಾಗಾಭರಣ ಅವರು, ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ವರದಿ ಕೇಳಿದ್ದಾರೆ.
“ಕೇಂದ್ರ ಗೃಹ ಸಚಿವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕೇಂದ್ರ ಮೀಸಲು ಪಡೆಯ ಕ್ಷಿಪ್ರ ಕಾರ್ಯಪಡೆ ಘಟಕದ ಶಂಕು ಸ್ಥಾಪನೆ ನೆರವೇರಿಸಿ ಅಡಿಗಲ್ಲು ಫಲಕವನ್ನು ಅನಾವರಣಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಆದೇಶದ ಅನ್ವಯ ಅಡಿಗಲ್ಲು ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಇರಬೇಕಿತ್ತು. ಆದರೆ, ಕನ್ನಡವನ್ನು ಕಡೆಗಣಿಸಿ ಕೇವಲ ಹಿಂದಿ ಹಾಗೂ ಆಂಗ್ಲಭಾಷೆಯಲ್ಲಿ ಫಲಕ ಅನಾವರಣಗೊಳಿಸಲಾಗಿದೆ. ವೇದಿಕೆಯ ಮಹಾಫಲಕದಲ್ಲಿಯೂ ಕನ್ನಡವನ್ನು ಬಳಸದೇ ರಾಜ್ಯದ ಭಾಷಾ ನೀತಿಯನ್ನೂ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ,” ಎಂದು ನಾಗಾಭರಣ ಅವರು ಪತ್ರದಲ್ಲಿ ಹೇಳಿದ್ದಾರೆ.
ಇನ್ನು ರಾಜ್ಯದಲ್ಲಿ ಈ ಕುರಿತಾಗಿ ಕೇಳಿ ಬಂದಿರುವ ಪ್ರತಿರೋಧವನ್ನೂ ತಮ್ಮ ಪತ್ರದಲ್ಲಿ ನಾಗಾಭರಣ ಅವರು ಉಲ್ಲೇಖಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿ ಕೇವಲ ಹಿಂದಿ ಮತ್ತು ಆಂಗ್ಲಭಾಷೆಯನ್ನು ಬಳಸಲು ಕಾರಣವಾದ ಅಧಿಕಾರಿ ಅಥವಾ ನೌಕರರ ಮೇಲೆ ತ್ರಿಭಾಷಾ ಸೂತ್ರದ ಉಲ್ಲಂಘನೆಗಾಗಿ ಶಿಸ್ತುಕ್ರಮ ಜರುಗಿಸಲು ನಾಗಾಭರಣ ಅವರು ಹೇಳಿದ್ದಾರೆ. ಇದರೊಂದಿಗೆ ಈ ಪ್ರಮಾದದ ಕುರಿತು ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ವರದಿಯನ್ನು ನೀಡಲೂ ಸೂಚಿಸಲಾಗಿದೆ.