#ಹಿಂದಿಗುಲಾಮಗಿರಿಬೇಡ‌: ಕನ್ನಡ ವಿರೋಧಿ ಧೋರಣೆ ವಿರುದ್ಧ ಟ್ವಿಟರ್ ಅಭಿಯಾನ

ಸ್ವಾಭಿಮಾನ ಕಳೆದುಕೊಂಡ ರಾಜಕೀಯ ನಾಯಕರೇ, ದಿಲ್ಲಿ ಹೈಕಮಾಂಡುಗಳ ಮುಂದೆ ಕನ್ನಡಿಗರ ಪರವಾಗಿ ಧ್ವನಿ ಎತ್ತಲು ಸಾಧ್ಯವಿಲ್ಲದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ಎಂದು ಕನ್ನಡಾಭಿಮಾನಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
#ಹಿಂದಿಗುಲಾಮಗಿರಿಬೇಡ‌: ಕನ್ನಡ ವಿರೋಧಿ ಧೋರಣೆ ವಿರುದ್ಧ ಟ್ವಿಟರ್ ಅಭಿಯಾನ

ಶಿವಮೊಗ್ಗದಲ್ಲಿ ಅಮಿತ್ ಶಾ ಉದ್ಘಾಟನೆ ನಡೆಸಿದ ಕಾರ್ಯಕ್ರಮದಲ್ಲಿ ಕನ್ನಡವನ್ನು ಅವಗಣಿಸಿ ಹಿಂದಿ ಭಾಷೆಯನ್ನು ಮಾತ್ರ ಬಳಸಿರುವ ವಿರುದ್ಧ ಕನ್ನಡಿಗರ ಆಕ್ರೋಶ ಬುಗಿಲೆದ್ದಿದೆ. ಹಿಂದಿಯ ಗುಲಾಮಗಿರಿಯನ್ನು ಮಾಡಬೇಡಿ ಎಂದು ಕನ್ನಡಿಗರು ಟ್ವಿಟರ್ ಅಭಿಯಾನ ನಡೆಸಿದ್ದಾರೆ.

#ಹಿಂದಿಗುಲಾಮಗಿರಿಬೇಡ ಎಂಬ ಹ್ಯಾಷ್‌ಟ್ಯಾಗ್ ಭಾರತದ ಅಗ್ರ ಹತ್ತು ಟ್ರೆಂಡ್ ಗಳಲ್ಲಿ ಒಂದಾಗಿದ್ದು, ಇದರೊಂದಿಗೆ #ಹಿಂದಿಗುಲಾಮಬಿಜೆಪಿ ಅನ್ನುವ ಹ್ಯಾಷ್‌ಟ್ಯಾಗ್ ಕೂಡಾ ಟ್ರೆಂಡ್ ಆಗಿತ್ತು.

ಇದೇ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿದ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಅವರು, 'ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ' ಎಂದಿದ್ದರು ರಾಷ್ಟ್ರಕವಿ ಕುವೆಂಪು. ತ್ರಿಭಾಷಾ ಸೂತ್ರ ಜಾರಿಯಾದಾಗ 1968ರಲ್ಲೇ ಅದರ ವಿರುದ್ಧ ಧ್ವನಿ ಎತ್ತಿದ್ದರು. ಆದರೆ ನಾವು ಕನ್ನಡಿಗರು ಪ್ರತಿರೋಧಿಸದೆ ಒಪ್ಪಿಕೊಂಡೆವು. ಅದರ ಪರಿಣಾಮವನ್ನು ಇಂದು ಎದುರಿಸುತ್ತಿದ್ದೇವೆ. ತ್ರಿಭಾಷಾ ಸೂತ್ರ ಕಿತ್ತೊಗೆಯುವರೆಗೆ ನಮಗೆ ಮುಕ್ತಿ ಇಲ್ಲ ಎಂದಿದ್ದಾರೆ.

ನಾವೀಗ ನಿರ್ಣಾಯಕ ಹೋರಾಟಕ್ಕೆ ತಯಾರಾಗಬೇಕಿದೆ. ತಮಿಳುನಾಡಿನ ಜನರಿಂದ ಸಾಧ್ಯವಾಗಿದ್ದು ನಮಗೇಕೆ ಸಾಧ್ಯವಿಲ್ಲ? ಕರ್ನಾಟಕಕ್ಕೆ ದ್ವಿಭಾಷಾ ನೀತಿ ಸಾಕು. ಸ್ವಾಭಿಮಾನವಿರುವ ಎಲ್ಲ ಕರ್ನಾಟಕದ ರಾಜಕಾರಣಿಗಳು ಈ ಕುರಿತು ಧ್ವನಿ ಎತ್ತಬೇಕು. ಇದನ್ನು ಒಪ್ಪದವರನ್ನು ಕನ್ನಡಿಗರು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು.

ಕರ್ನಾಟಕವು ಭಾರತ ಒಕ್ಕೂಟದಲ್ಲಿ ಸೇರಿರುವುದು ಹಿಂದಿಯನ್ನರ, ಹಿಂದಿ‌‌ ನುಡಿಯ ಗುಲಾಮಗಿರಿ ಮಾಡಲು ಅಲ್ಲ. ನಾವು ಅಪ್ಪಟ ಕನ್ನಡಿಗರಾಗಿಯೇ ಒಕ್ಕೂಟದ ಭಾಗವಾಗಿದ್ದೇವೆ, ಮುಂದೆಯೂ ಹಾಗೆಯೇ ಉಳಿಯುತ್ತೇವೆ. ನಮ್ಮ ತಲೆಯ ಮೇಲೆ ಬಂದು ಕೂರಲು ನಾವು ಯಾರಿಗೂ ಅಪ್ಪಣೆ ಕೊಟ್ಟಿಲ್ಲ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ರಾಜಕಾರಣಿಗಳೇ, ನಿಮ್ಮ ಸ್ವಾಭಿಮಾನವನ್ನು ಖುರ್ಚಿಯ ಆಸೆಗಾಗಿ ಮಾರಿಕೊಳ್ಳಬೇಡಿ. ನೂರು ವರ್ಷ ನಿರಭಿಮಾನಿಗಳಾಗಿ ಬದುಕುವುದಕ್ಕಿಂದ ಹತ್ತು ದಿನ ಎದೆಯುಬ್ಬಿಸಿ ಸ್ವಾಭಿಮಾನಿಗಳಾಗಿ ಬದುಕಿ ತೋರಿಸಿ. ಅದೇ ನೀವು ಕನ್ನಡಿಗರಿಗೆ ಮಾಡುವ ಬಹುದೊಡ್ಡ ಉಪಕಾರ. ನೀವು ಹಿಂದಿಯ ಬ್ಯಾನರ್ ತಂದು ಹಾಕಿದ ತಕ್ಷಣ ಕರ್ನಾಟಕವು ಹಿಂದೀ ರಾಜ್ಯವಾಗುವುದಿಲ್ಲ. ಇಂಥ ಕುಚೇಷ್ಟೆಗಳನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡರಲ್ಲ ಕನ್ನಡಿಗರು. ಇಂಥ ಷಡ್ಯಂತ್ರಗಳಿಂದ ನಾವು ಕನ್ನಡಿಗರು ಇನ್ನಷ್ಟು ಗಟ್ಟಿಯಾಗುತ್ತೇವೆ, ಹಿಂದಿ ಸಾಮ್ರಾಜ್ಯಶಾಹಿಯ ವಿರುದ್ಧ ದೃಢವಾಗಿ ಎದ್ದು ನಿಲ್ಲುತ್ತೇವೆ ಎಂದು ಹೇಳಿದ್ದಾರೆ.

ಭಾರತ ಬಹುಭಾಷಿಕರ ದೇಶ. ವಿವಿಧ ಭಾಷಾ‌ಸಮುದಾಯಗಳ ಮೇಲೆ ಹಿಂದಿಯನ್ನು ಹೇರುವುದು ದೇಶ ಒಡೆಯುವ ನೀಚತನ.‌ ಇದಕ್ಕಿಂತ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ದೇಶ ಬಹುತ್ವದೊಂದಿಗೆ ಒಂದಾಗಿರಲು‌ ಬಿಡಿ. ಭಾರತ ಒಕ್ಕೂಟ ಬಲಗೊಳಿಸುವ ಕೆಲಸ ಮಾಡಿ.

ಹಿಂದಿ ಬಾರದೇ ಇರುವವರನ್ನು ಎರಡನೇ ದರ್ಜೆ ನಾಗರಿಕರಂತೆ ನೋಡುವುದನ್ನು ಬಿಟ್ಟುಬಿಡಿ. ದೇಶದ ಶೇ.60ಕ್ಕೂ ಹೆಚ್ಚು ಮಂದಿ ಹಿಂದಿಯೇತರ ತಾಯ್ನುಡಿಗಳನ್ನು ಹೊಂದಿದ್ದಾರೆ. ಒಂದು ಭಾಷೆಯನ್ನು ನಾಶಮಾಡಿ ಇನ್ನೊಂದು ಭಾಷೆ ಬೆಳೆಸುವುದು ಕೊಲೆಗೇಡಿತನ, ರಣಹೇಡಿತನ. ಈ ಹುಚ್ಚಾಟವನ್ನು ಬಿಟ್ಟುಬಿಡಿ.

ಸ್ವಾಭಿಮಾನ ಕಳೆದುಕೊಂಡ ರಾಜಕೀಯ ನಾಯಕರೇ, ದಿಲ್ಲಿ ಹೈಕಮಾಂಡುಗಳ ಮುಂದೆ ಕನ್ನಡಿಗರ ಪರವಾಗಿ ಧ್ವನಿ ಎತ್ತಲು ಸಾಧ್ಯವಿಲ್ಲದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕನ್ನಡಿಗರು ಸಾವಿರಾರು ವರ್ಷಗಳಿಂದ ಸಿಂಹಗಳಂತೆ ಬದುಕಿದವರು. ನಿಮ್ಮಂಥ ರಣಹೇಡಿಗಳ ಅವಶ್ಯಕತೆ ನಮಗಿಲ್ಲ. ನಾವು ಎರಡೂವರೆ ಸಾವಿರ ವರ್ಷಗಳಿಂದ ಕನ್ನಡಿಗರು. ಭಾರತ ಒಕ್ಕೂಟದ ಭಾಗವಾಗಿ 74 ವರ್ಷಗಳಾಗಿವೆಯಷ್ಟೆ. ನಾವು ಮೊದಲೂ, ಈಗಲೂ, ಮುಂದೆಯೂ ಕನ್ನಡಿಗರು.‌ ಇನ್ನೂರು-ಮುನ್ನೂರು ವರ್ಷಗಳ ಭಾಷೆಯನ್ನು ತಂದು ನಮ್ಮ ಮೇಲೆ ಹೇರಬೇಡಿ. ನಿಮ್ಮ ಕುತಂತ್ರವನ್ನು ನಾವು ಬುಡಮೇಲು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com