ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು ಎಬ್ಬಿಸಿದ ಸಿಡಿ- ಸಿಪಿವೈ !

ಸಂಪುಟ ವಿಸ್ತರಣೆ ಮತ್ತು ಆ ಬಳಿಕದ ಸಿಡಿ ಮತ್ತು ಸಿಪಿ ಯೋಗೇಶ್ವರ್ ಸಂಗತಿಗಳು ಅಂತಿಮವಾಗಿ ರಾಜ್ಯ ಬಿಜೆಪಿಗಷ್ಟೇ ಅಲ್ಲದೆ, ರಾಜ್ಯದ ನಾಯಕತ್ವ ಬದಲಾವಣೆಗೂ ನಾಂದಿ ಹಾಡಿದರೂ ಅಚ್ಚರಿ ಇಲ್ಲ ಎಂಬುದು ಸ್ವತಃ ಬಿಜೆಪಿಯ ಆಂತರಿಕ ವಲಯದಲ್ಲೇ ಕೇಳಿಬರುತ್ತಿರುವ ಮಾತು!
ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು ಎಬ್ಬಿಸಿದ ಸಿಡಿ- ಸಿಪಿವೈ !

ರಾಜ್ಯ ಬಿಜೆಪಿಯ ಬಂಡಾಯ ಮತ್ತೊಂದು ಹಂತಕ್ಕೆ ತಲುಪಿದೆ. ಕಳೆದ ಐದಾರು ತಿಂಗಳಿಂದ ನೆನಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆಯ ಸರ್ಕಸ್ ಕೊನೆಗೂ ಮುಗಿದಿದೆ. ಆದರೆ, ಸಿಎಂ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಪಾಲಿಗೆ ಸಕಲ ಸಂಕಷ್ಟ ಪರಿಹರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಸಂಪುಟ ವಿಸ್ತರಣೆಯೇ ಇದೀಗ ತಿರುಗುಬಾಣವಾಗಿದೆ.

ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆದು ಬೀಗಿದವರಿಗಿಂತ ಸ್ಥಾನ ವಂಚಿತರಾಗಿ ಸಿಎಂ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದವರೇ ದುಪ್ಪಟ್ಟಾಗಿದ್ದಾರೆ! ಹಾಗೆ ಸಿಡಿದವರು ರಾಜ್ಯ ರಾಜಕಾರಣದ ಅಂಗಳದಿಂದ ದೆಹಲಿಯ ವರಿಷ್ಠರ ಪಡಸಾಲೆಗೆ ಹೋಗಿ ತಲುಪಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪ ವಿರುದ್ಧ ಕಳೆದ ಒಂದೂವರೆ ವರ್ಷದಿಂದ ಮಡುಗಟ್ಟಿದ್ದ ಬಿಜೆಪಿ ಸಿದ್ಧಾಂತ ನಿಷ್ಠರು ಮತ್ತು ಅಧಿಕಾರಾಕಾಂಕ್ಷಿಗಳ ಆಕ್ರೋಶ ಈಗ ಇಡಿಯಾಗಿ, ಸಂಘಟಿತವಾಗಿ ದೆಹಲಿಗೆ ತಲುಪಿದೆ.

ಅದರಲ್ಲೂ 2008-11ರ ನಡುವಿನ ಯಡಿಯೂರಪ್ಪ ಸಿಎಂ ಗಿರಿ ಅವಧಿಯಲ್ಲಿ ಅವರ ವಿರುದ್ಧ ಬಂಡಾಯ ಪಡೆಯ ನೇತೃತ್ವ ವಹಿಸಿದ್ದ ಮತ್ತು ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕರನ್ನು ಗೋವಾಕ್ಕೆ ಕರೆದೊಯ್ದು ಸರ್ಕಾರ ಉರುಳಿಸುವ ಬೆದರಿಕೆ ಒಡ್ಡಿದ್ದ ಬಂಡಾಯಗಾರರ ನಾಯಕತ್ವ ವಹಿಸಿದ್ದ ಎಂ ಪಿ ರೇಣುಕಾಚಾರ್ಯ ಸ್ವತಃ ಸಿ ಪಿ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಿದ ಸಿಎಂ ಕ್ರಮದ ವಿರುದ್ಧ ದೆಹಲಿ ವರಿಷ್ಠರಿಗೆ ದಾಖಲೆ ಸಹಿತ ಅಧಿಕೃತ ದೂರು ದಾಖಲಿಸಿ ಬಹಿರಂಗ ಬಂಡಾಯದ ಕಹಳೆ ಊದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯಡಿಯೂರಪ್ಪ ಅವರ ಪರಮಾಪ್ತರಾಗಿದ್ದ ರೇಣುಕಾಚಾರ್ಯ 2009-10ರಲ್ಲಿ ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ನಡೆಸಿದ ಬಂಡಾಯದ ಮಾದರಿಯಲ್ಲೇ ಈಗಲೂ ಸಮರ ಸಾರಿದ್ದಾರೆ. ಒಂದು ರೀತಿಯಲ್ಲಿ ಸಿಎಂ ಜೊತೆಗಿದ್ದುಕೊಂಡೇ ಅವರ ಪಾಲಿನ ಮಗ್ಗುಲಮುಳ್ಳಿನಂತೆ ಯಾವಾಗ ಚುಚ್ಚುತ್ತಾರೆ? ಯಾವಾಗ ಹಿತವಾಗಿರುತ್ತಾರೆ ಎಂಬುದನ್ನು ಊಹಿಸಲಾಗದ ಮಟ್ಟಿಗೆ ರೇಣುಕಾಚಾರ್ಯ ಯಾರ ಲೆಕ್ಕಕ್ಕೂ ಸಿಗದ ವರಸೆಗೆ ಹೆಸರಾಗಿದ್ದಾರೆ. ಈಗಲೂ ದಶಕದ ಹಿಂದಿನ ತಮ್ಮ ವರಸೆಯನ್ನು ಪುನರಾರ್ತಿಸಿದ್ದು, ಸಿಪಿ ಯೋಗೇಶ್ವರ್ ವಿರುದ್ಧ ಮೆಗಾಸಿಟಿ ಹಗರಣದಿಂದ ಹಿಡಿದು ಇತ್ತೀಚಿನ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿಪಾಸ್ತಿಯವರೆಗೆ ಎಲ್ಲಾ ಹಗರಣಗಳ ದಾಖಲೆಯನ್ನೂ ಹೈಕಮಾಂಡಿಗೆ ಸಲ್ಲಿಸಿರುವುದಾಗಿ ಸ್ವತಃ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಹಾಗೆ ನೋಡಿದರೆ ಸಿಎಂ ವಿರುದ್ಧ ಕೇಳಿಬರುತ್ತಿರುವ ಸಿಡಿ ವಿಷಯದಲ್ಲಿ ಕೂಡ ಎಂ ಪಿ ರೇಣುಕಾಚಾರ್ಯ ಅವರಿಗೆ ದಶಕದ ಅನುಭವವಿದೆ. ಹತ್ತು ವರ್ಷದ ಹಿಂದೆ ಯಡಿಯೂರಪ್ಪ ಅವರಿಗೆ ಸಿಡಿ ಬಿಕ್ಕಟ್ಟನ್ನು ಮೊದಲ ಬಾರಿ ಪರಿಚಯಿಸಿದ್ದೇ ಈ ಹೊನ್ನಾಳಿ ಹೋರಿ! ಆದರೆ, ಅದು ಆಗ ಈಗಿನಷ್ಟು ತೀವ್ರತೆ ಪಡೆದುಕೊಂಡಿರಲಿಲ್ಲ; ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆಯಾಗಿ ರೇಣುಕಾಚಾರ್ಯ ಸಚಿವರಾಗುತ್ತಲೇ ಬಹುತೇಕ ತಣ್ಣಗಾಗಿತ್ತು.

ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಕೂಗು ಎಬ್ಬಿಸಿದ ಸಿಡಿ- ಸಿಪಿವೈ !
CD ಡಿಕೆ ಶಿವಕುಮಾರ್‌ ಬಳಿಯೂ ಇದೆ; ಬಸನಗೌಡ ಪಾಟೀಲ್‌ ಯತ್ನಾಳ್‌

ಆದರೆ ಈ ಬಾರಿ ಸಿಡಿ ಮತ್ತು ಸಿಪಿ ಯೋಗೇಶ್ವರ್ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿದ್ದು, ಬಿಜೆಪಿಯ ಮಾಜಿ ಕೇಂದ್ರ ಸಚಿವರು, ಮಾಜಿ ರಾಜ್ಯ ಸಚಿವರು, ಹಿರಿಯ ನಾಯಕರು ಮತ್ತು ಆರ್ ಎಸ್ ಎಸ್ ಹಿನ್ನೆಲೆಯ ಪ್ರಭಾವಿಗಳೇ ಈ ಎರಡೂ ವಿಷಯಗಳನ್ನು ಮುಂದಿಟ್ಟುಕೊಂಡು ಸಿಎಂ ವಿರುದ್ಧ ಭ್ರಷ್ಟಾಚಾರ, ವಸೂಲಿಬಾಜಿಯಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣ ಪಡೆದು ಸಚಿವಗಿರಿ ನೀಡಲಾಗಿದೆ. ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವಗಿರಿ ನೀಡಲಾಗಿದೆ. ಸಿಎಂ ಮತ್ತು ಅವರ ಕುಟುಂಬದವರ ದೌರ್ಬಲ್ಯಗಳಲ್ಲೇ ಅಸ್ತ್ರವಾಗಿಸಿಕೊಂಡು ಕೆಲವರು ಆಟವಾಡಿದ್ದಾರೆ ಎಂಬ ಆರೋಪಗಳು, ಇದೀಗ ಕೇವಲ ಆರೋಪಗಳಾಗಿ ಮಾತ್ರವಲ್ಲ; ತನಿಖೆಗೊಳಪಡಬೇಕಾದ ಗಂಭೀರ ಹಗರಣಗಳಾಗಿ ಬದಲಾಗಿದ್ದು, ಸ್ವತಃ ಬಿಜೆಪಿಯವರೇ ಆ ಬಗ್ಗೆ ತಮ್ಮ ದೆಹಲಿ ವರಿಷ್ಠರಿಗೆ ದೂರು ನೀಡಿದ್ದಾರೆ.

ಈ ನಡುವೆ ಸಿಎಂ ಯಡಿಯೂರಪ್ಪ ತಮ್ಮ ವಿರುದ್ಧದ ಬಂಡಾಯದ ವಿಷಯದಲ್ಲಿ ಕಠಿಣ ನಿಲುವಿಗೆ ಬಂದಂತಿದ್ದು, ತಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡುವವರು ನೀಡಬಹುದು. ಸಂಪುಟ ವಿಸ್ತರಣೆ ವರಿಷ್ಠರ ಸೂಚನೆಯಂತೆಯೇ ನಡೆದಿದೆ ಎಂದಿದ್ದಾರೆ. ಜೊತೆಗೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ ಮೂರು ದಿನ ಕಳೆದರೂ ಅವರಿಗೆ ಖಾತೆಗಳ ಹಂಚಿಕೆಯಾಗಿಲ್ಲ. ಆ ಬಗ್ಗೆ ಯಾವ ಸೂಚನೆಯನ್ನೂ ಸಿಎಂ ನೀಡಿಲ್ಲ. ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ನಾಯಕ ಅಮಿತ್ ಶಾ ಭೇಟಿಯ ಬಳಿಕ ನೂತನ ಸಚಿವರ ಖಾತೆ ಹಂಚಿಕೆ ಅಥವಾ ಒಟ್ಟಾರೆ ಸಂಪುಟ ಪುನರ್ ರಚನೆ ನಡೆಯಬಹುದು. ಅದಕ್ಕಾಗಿ ಸಿಎಂ ಕಾದಿದ್ದಾರೆ ಎನ್ನಲಾಗುತ್ತಿದೆ.

ಈ ನಡುವೆ, ಅತೃಪ್ತರ ಆಗ್ರಹ ಅಮಿತ್ ಶಾ ಅವರಿಗೆ ತಲುಪಿದ್ದು, ಪಕ್ಷದ ಪ್ರಮುಖರೊಂದಿಗೆ ಸಭೆ ನಡೆಸಿ ತಾವೇ ಖುದ್ದು ಸಮಸ್ಯೆ ಇತ್ಯರ್ಥಪಡಿಸುವುದಾಗಿ ಅವರು ಹೇಳಿದ್ದಾರೆ. ಹಾಗಾಗಿ ಶಾ ಸಭೆಯ ಬಳಿಕವೇ ಎಲ್ಲವೂ ನಿಚ್ಛಳವಾಗಲಿದೆ. ಅಲ್ಲಿಯವರೆಗೆ ಗೊಂದಲ ಮುಂದುವರಿಯಲಿದೆ ಎನ್ನಲಾಗುತ್ತಿದೆ.

ಈ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಯಡಿಯೂರಪ್ಪ ವಿರುದ್ಧ ಪಕ್ಷದ ಹಿರಿಯ ನಾಯಕರು ಮತ್ತು ಪಕ್ಷನಿಷ್ಠರ ಆಕ್ರೋಶವನ್ನೇ ಬಳಸಿಕೊಂಡು, ಅವರ ವಿರುದ್ಧ ಕೇಳಿಬರುತ್ತಿರುವ ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಅಧಿಕಾರದಲ್ಲಿ ಪುತ್ರ ವಿಜಯೇಂದ್ರ ಹಸ್ತಕ್ಷೇಪ ಹಾಗೂ ಮುಖ್ಯವಾಗಿ ಸಿಡಿ ಕುರಿತ ಆರೋಪಗಳನ್ನೇ ಅಸ್ತ್ರವಾಗಿಸಿಕೊಂಡು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಆರ್ ಎಸ್ ಎಸ್ ಹಿನ್ನೆಲೆಯ ನಾಯಕರು ತಂತ್ರ ಹೂಡಿದ್ದಾರೆ. ಅವರ ಕುಮ್ಮಕ್ಕಿನಿಂದಲೇ ಎಂ ಪಿ ರೇಣುಕಾಚಾರ್ಯ, ಯತ್ನಾಳ್ ಅವರಂಥ ನಾಯಕರು ಪಕ್ಷದ ಚೌಕಟ್ಟು ಮೀರಿ ಮಾಧ್ಯಮಗಳ ಎದುರು ಬಹಿರಂಗ ಸಮರ ಸಾರಿದ್ದಾರೆ.

ಸದ್ಯ ಸಂಪುಟ ವಿಸ್ತರಣೆ, ಸಿಡಿ ಮತ್ತು ಸಿಪಿ ಯೋಗೇಶ್ವರ್ ವಿಷಯ ಬಿಜೆಪಿಯಲ್ಲಿ ಹುಟ್ಟಿಸಿರುವ ಬೇಗುದಿ, ಮುಂದಿನ ಕೆಲವು ದಿನಗಳಲ್ಲೇ ಸ್ಫೋಟಕ ತಿರುವು ಪಡೆಯುವ ಸಾಧ್ಯತೆಗಳು ಗೋಚರಿಸುತ್ತಿವೆ. ಈಗಾಗಲೇ ಎಚ್ ವಿಶ್ವನಾಥ್ ಕೆಲವೇ ದಿನಗಳಲ್ಲಿ ಸಿಡಿ ಬಹಿರಂಗವಾಗಲಿದೆ ಎಂದಿದ್ದಾರೆ. ಹಾಗಾದಲ್ಲಿ ಅದು ಖಂಡಿತವಾಗಿಯೂ ಸಿಎಂ ಯಡಿಯೂರಪ್ಪ ಪಾಲಿಗೆ ಉರುಳಾಗುವ ಸಾಧ್ಯತೆಗಳಿವೆ. ಈಗಾಗಲೇ ಶತಾಯಗತಾಯ ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲೇಬೇಕು ಎಂದು ಮರಳಿ ಯತ್ನ ಮಾಡುತ್ತಿರುವ ಬಣ ಈ ವಿಷಯವನ್ನು ಬಳಸಿಕೊಂಡು ನಾಯಕತ್ವ ಬದಲಾವಣೆಯ ದನಿ ಏರಿಸಲು ಸಜ್ಜಾಗಿದೆ ಎಂಬ ಸುದ್ದಿ ದೆಹಲಿಯ ಕಡೆಯಿಂದ ಬರುತ್ತಿದೆ.

ಹಾಗಾಗಿ, ಸಂಪುಟ ವಿಸ್ತರಣೆ ಮತ್ತು ಆ ಬಳಿಕದ ಸಿಡಿ ಮತ್ತು ಸಿಪಿ ಯೋಗೇಶ್ವರ್ ಸಂಗತಿಗಳು ಅಂತಿಮವಾಗಿ ರಾಜ್ಯ ಬಿಜೆಪಿಗಷ್ಟೇ ಅಲ್ಲದೆ, ರಾಜ್ಯದ ನಾಯಕತ್ವ ಬದಲಾವಣೆಗೂ ನಾಂದಿ ಹಾಡಿದರೂ ಅಚ್ಚರಿ ಇಲ್ಲ ಎಂಬುದು ಸ್ವತಃ ಬಿಜೆಪಿಯ ಆಂತರಿಕ ವಲಯದಲ್ಲೇ ಕೇಳಿಬರುತ್ತಿರುವ ಮಾತು! ಒಂದು ವೇಳೆ ಅಂತಹದ್ದು ಸಂಭವಿಸಿದರೆ, ಎರಡನೇ ಬಾರಿಗೆ ಯಡಿಯೂರಪ್ಪ ಎಂಬ ಜನನಾಯಕ ಪುತ್ರಾಘಾತಕ್ಕೆ(ಸನ್ ಸ್ಟ್ಟೋಕ್) ಅಧಿಕಾರ ಕಳೆದುಕೊಂಡಂತಾದರೂ ಅಚ್ಚರಿ ಇಲ್ಲ!!

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com