ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಸ್ಪೋಟ; CM ವಿರುದ್ದ ಶಾಸಕರು ಗರಂ

ಈ ಆರೋಪದ ಮೂಲಕ ಯತ್ನಾಲ್‌ ಅವರ ʼಬ್ಲಾಕ್‌ಮೇಲ್‌ʼ ಆರೋಪಕ್ಕೆ ಇನ್ನಷ್ಟು ಪುಷ್ಟಿ ಬಂದಿದೆ. ಹಾಗೂ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಸ್ಪೋಟ; CM ವಿರುದ್ದ ಶಾಸಕರು ಗರಂ

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ಮೊದಲೇ ನಿರೀಕ್ಷಿಸಿದ್ದಂತೆ ಆಡಳಿತ ಪಕ್ಷದೊಳಗಿನ ಭಿನ್ನಮತಗಳು ಭುಗಿಲೆದ್ದಿವೆ. ಸಚಿವಾಕಾಂಕ್ಷಿ ಶಾಸಕರು ಹಾಗೂ ಅವರ ಬೆಂಬಲಿಗ ಶಾಸಕರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೆ, ಆಂತರಿಕವಾಗಿಯೂ ನೂತನ ಸಚಿವ ಸಂಪುಟದ ಬಗ್ಗೆ ಅಪಸ್ವರಗಳೆದ್ದಿವೆ ಎನ್ನುತ್ತವೆ ಪಕ್ಷದ ಆಂತರಿಕ ಮೂಲಗಳು.

ಫೈರ್‌ ಬ್ರ್ಯಾಂಡ್‌ ಎಂದೇ ಖ್ಯಾತಿಯಾಗಿರುವ ಬಸನಗೌಡ ಪಾಟೀಲ ಯತ್ನಾಲ್‌ ಅವರು ಸಚಿವ ಸಂಪುಟದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ದುಡ್ಡು ನೀಡಿದವರಿಗೆ, ಬ್ಲಾಕ್‌ಮೇಲ್‌ ತಂತ್ರಗಾರಿಕೆ ಮಾಡಿದವರಿಗೆ ಹೆದರಿ ಸಚಿವ ಸ್ಥಾನ ನೀಡಲಾಗಿದೆ. ಯಡಿಯೂರಪ್ಪ ಅವರು ಸಮಸ್ತ ವೀರಶೈವ ಲಿಂಗಾಯತ ಸಮುದಾಯದ ಮರ್ಯಾದೆ ತೆಗೆದಿದ್ದಾರೆ. ತಕ್ಷಣವೇ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಳ್ಳಿ ಹಕ್ಕಿ ಎಂದೇ ಕರೆಯಲ್ಪಡುವ ಎ ಹೆಚ್‌ ವಿಶ್ವನಾಥ್‌ ಕೂಡಾ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದು, ಸಿಪಿ ಯೋಗೇಶ್ವರ್‌ ಬ್ಲಾಕ್‌ಮೇಲ್‌ ಮೂಲಕ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಯೋಗೇಶ್ವರ್‌ ಮಂತ್ರಿಯಾಗಲು ಸಿಎಂ ಪುತ್ರ ವಿಜಯೇಂದ್ರ ಕಾರಣ ಎಂದು ಆರೋಪಿಸಿದ್ದಾರೆ. ಈ ಆರೋಪದ ಮೂಲಕ ಯತ್ನಾಲ್‌ ಅವರ ʼಬ್ಲಾಕ್‌ಮೇಲ್‌ʼ ಆರೋಪಕ್ಕೆ ಇನ್ನಷ್ಟು ಪುಷ್ಟಿ ಬಂದಿದೆ. ಹಾಗೂ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ.

ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಸ್ಪೋಟ; CM ವಿರುದ್ದ ಶಾಸಕರು ಗರಂ
ಏಳು ಬಿಜೆಪಿ ಶಾಸಕರಿಗೆ ಮಂತ್ರಿ ಭಾಗ್ಯ..! ಅವಕಾಶ ವಂಚಿತ ಮುನಿರತ್ನ

ಸ್ಥಾನ‌ ಮಾನ ಪಡೆಯಲು ಅನ್ಯ ಮಾರ್ಗಗಳನ್ನು ಅನುಸರಿಸದೆ ಪಕ್ಷಕ್ಕೆ ನಿಷ್ಟೆ ಮತ್ತು ವಿಚಾರಕ್ಕೆ ಬದ್ಧತೆ ಇರುವ ಕಾರ್ಯಕರ್ತರಿಗೆ ಇಂದಿನ ದಿನಮಾನಗಳಲ್ಲಿ ಸ್ಥಾನವಿಲ್ಲ ಅನ್ನುವ ತಾತ್ಕಾಲಿಕ ಇಂದಿನ‌ ಈ ನಡೆ ವಿಷಾದಕರ ಸಂಗತಿ. "ವಿಚಾರಕ್ಕೆ ಬದ್ಧತೆ ಮತ್ತು ಪಕ್ಷಕ್ಕೆ ನಿಷ್ಟೆ ಇದು ದೌರ್ಬಲ್ಯ ಅಲ್ಲ" ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಪ್ರತಿಕ್ರಿಯಿಸಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಈ ಪುನರಾಚನೆ ಸಂಪೂರ್ಣ ತೃಪ್ತಿ ತಂದಂತೆ ಕಾಣುತ್ತಿಲ್ಲ. ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು “ನಮ್ಮ ತಂಡದ ಇನ್ನೂ ಐವರಿಗೆ ಸಚಿವ ಸ್ಥಾನ ಸಿಗಬೇಕಿದೆ. ಮುಂದಿನ ದಿನಗಳಲ್ಲಿ ಆ ಕೆಲಸ ಆಗಲಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಸಂಪುಟ ಪುನಾರಚನೆ ಪ್ರಕ್ರಿಯೆಯು ದೊಡ್ಡ ಮಟ್ಟದಲ್ಲಿ ಆಗುತ್ತದೆ. ಈಗ ಸಚಿವ ಸ್ಥಾನ ಕೈತಪ್ಪಿದವರಿಗೆ ಆಗ ಅವಕಾಶ ಸಿಗಲಿದೆ. ಅಡಗೂರು ಎಚ್. ವಿಶ್ವನಾಥ್, ಮಹೇಶ್ ಕುಮಠಳ್ಳಿ, ಮುನಿರತ್ನ ಆಕಾಂಕ್ಷಿಗಳಿದ್ದಾರೆ. ಕಲಬುರ್ಗಿ ಭಾಗದಲ್ಲಿ ಪಕ್ಷ ಕಟ್ಟಿ ದೊಡ್ಡ ವ್ಯಕ್ತಿ ಸೋಲಿಸಿದ ಮಾಲೀಕಯ್ಯ ಗುತ್ತೇದಾರ್ ಅವರಿಗೂ ಸಚಿವ ಸ್ಥಾನ ಸಿಗಬೇಕಿದೆ. ಗುತ್ತೇದಾರ್‌ ನನಗಿಂತಲೂ ಶಕ್ತಿಶಾಲಿ ಇದ್ದಾರೆ. ಅವರಿಗೆ ಸ್ಥಾನಮಾನ ದೊರೆಯಬೇಕು” ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನನಗೆ ಸಚಿವ ಸ್ಥಾನ ಕೊಡದೇ ಅನ್ಯಾಯ ಮಾಡಿದ್ದಾರೆ. ನಿಮ್ಮ ತಂದೆಯವರಿಗೆ ಅನ್ಯಾಯ ಆಗಿದೆ. ನಿಮಗೆ ಸಚಿವ ಸ್ಥಾನ ಕೊಡ್ತೀವಿ ಅಂತ ಸಿಎಂ ಭರವಸೆ ನೀಡಿದ್ರು. 5 MLCಗಳಿಗೆ ಸಚಿವ ಸ್ಥಾನ ಕೊಡುವ ಅಗತ್ಯ ಏನಿದೆ? ಇದನ್ನು ಬಿಜೆಪಿ ಹೈಕಮಾಂಡ್‌ಗೆ ತಿಳಿಸುತ್ತೇನೆ ಎಂದು ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ್‌ ಪ್ರತಿಕ್ರಿಯಿಸಿದ್ದಾರೆ.

ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ ಎಂದು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ ಸತೀಶ್‌ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ನೇರ ಪ್ರಸಾರ: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ

Posted by Pratidhvani.com on Wednesday, January 13, 2021

ಇಷ್ಟು ಮಾತ್ರವಲ್ಲದೆ, ಆಂತರಿಕವಾಗಿ ಹಾಗೂ ಪರೋಕ್ಷವಾಗಿ ಅಸಮಾಧಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. “ಪಕ್ಷ ನಿಷ್ಠೆ, ಕ್ಷೇತ್ರದ ಅಭಿವೃದ್ಧಿ, ಹಿಂದುತ್ವ ನನ್ನ ಅಜೆಂಡಾ. ನನಗೆ ಅನ್ಯ ಮಾರ್ಗ ತಿಳಿದಿಲ್ಲ. ಜಾತಿ ರಾಜಕೀಯದ ವೈಭವೀಕರಣ ಅರಿತಿಲ್ಲ. ಸ್ಥಾನಮಾನಕ್ಕೆ ಬ್ಲಾಕ್ ಮೇಲ್ ಮಾಡಿದವನಲ್ಲ. ಮುಂದೆಯು ಈ ಮಾರ್ಗ ಹಿಡಿಯುವುದಿಲ್ಲ.” ಎಂದು ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ತಾನೂ ಸಚಿವಾಕಾಂಕ್ಷಿ ಎಂದು ಸೂಕ್ಷ್ಮವಾಗಿ ಸಂದೇಶ ರವಾನಿಸಿದ್ದಾರೆ.

ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಕೂಡಾ ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ”ನೇರ, ನಿಷ್ಠುರ ಮಾತುಗಳೇ ನನಗೆ ಮುಳುವಾಯಿತು. ಲಾಬಿ ಮಾಡಿದವರು ಸಚಿವರಾಗುತ್ತಾರೆ. ಯಾರ ಬಳಿಯೂ ಲಾಬಿ ಮಾಡುವ ಹವ್ಯಾಸ ನನಗೆ ಇಲ್ಲ. ಅದು ನನ್ನ ಅಪರಾಧ. ವೈಯಕ್ತಿಕವಾಗಿ ನನಗೆ ಬೇಸರವಾಗಿದೆ. ಮಂತ್ರಿಗಿರಿ ಕೊಡಿ ಎಂದು ಯಾರಿಗೂ ನಾನು ಅರ್ಜಿ ಹಾಕಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಬಳ್ಳಾರಿಯ ರೆಡ್ಡಿ ಸಹೋದರರಾದ ಸೋಮಶೇಖರ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಕೂಡಾ ಸಚಿವ ಸಂಪುಟ ವಿಸ್ತರಣೆ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಹೊಸಪೇಟೆಯಲ್ಲಿ ನಡೆದ ಪಕ್ಷದ ಜನಸೇವಕ ಸಮಾವೇಶ ಬಹಿಷ್ಕರಿಸಿದ್ದಾರೆ.

ಒಟ್ಟಿನಲ್ಲಿ ಯಡಿಯೂರಪ್ಪ ಇವರನ್ನೆಲ್ಲಾ ಹೇಗೆ ನಿಭಾಯಿಸಲಿದ್ದಾರೆ ಎನ್ನುವುದೇ ಸದ್ಯದ ಕುತೂಹಲ!

ಸಂಪುಟ ವಿಸ್ತರಣೆ ಬೆನ್ನಲ್ಲೇ ಭಿನ್ನಮತ ಸ್ಪೋಟ; CM ವಿರುದ್ದ ಶಾಸಕರು ಗರಂ
ಯೋಗೇಶ್ವರ್ ಬ್ಲಾಕ್ಮೇಲ್ ಮಾಡಿ ಸಚಿವರಾಗುತ್ತಿದ್ದಾರೆ; ವಿಶ್ವನಾಥ್ ಗಂಭೀರ ಆರೋಪ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com