ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ದೆಹಲಿಯ ಗಡಿಭಾಗಗಳಲ್ಲಿ 48 ದಿನಗಳಿಂದ ನಡೆಯುತ್ತಿರುವ ರೈತರ ಹೋರಾಟವನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ನಾಟಕೀಯವಾದ ಬೆಳವಣಿಗೆ ತೋರುತ್ತಿದೆ. ರಿಲಯನ್ಸ್ ಕಂಪನಿಯ ಅಂಬಾನಿ ಮತ್ತು ಅದಾನಿಯವರು ಕೇಂದ್ರ ಸರ್ಕಾರವನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿದ್ದಾರೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣ ರೈತರು ಜಿಯೋ ಕಂಪನಿಯ ವಿರುದ್ಧವಾಗಿ ನಡೆಸಿದ ಪ್ರತಿಭಟನೆ ಹಿನ್ನೆಲೆಯಲ್ಲಿ ರಿಲಯನ್ಸ್ ʼ ನಾವು ಕೃಷಿ ಕ್ಷೇತ್ರದ ಭೂಮಿಯನ್ನು ಖರೀದಿ ಮಾಡುವುದಿಲ್ಲ, ಕೃಷಿಕ್ಷೇತ್ರದಲ್ಲಿ ಪಾಲ್ಗೊಳ್ಳುವುದಿಲ್ಲ ನನಗೆ ಸಂಬಂಧವಿಲ್ಲʼ ಎಂದಿದೆ. ಮತ್ತೊಂದೆಡೆ ರಾಯಚೂರಿನಲ್ಲಿ ರಿಲಯನ್ಸ್ ರೈತರ ಅಕ್ಕಿಯನ್ನು ಎಂಎಸ್ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಖರೀದಿಸುತ್ತೇವೆಂದು ಹೇಳಿಕೆ ಕೊಟ್ಟು ರೈತರಲ್ಲಿಯೇ ಗೊಂದಲ ಉಂಟಾಗುವಂತಹ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಸೋನಾ ಮಸುರಿ ಅಥವಾ ಜ್ಯೋತಿ ಅಕ್ಕಿಗಾಗಲಿ ಇದುವರೆಗೂ ಎಂಎಸ್ಪಿ ಬೆಲೆಯನ್ನು ನಿಗದಿ ಮಾಡಿಲ್ಲ ಈ ಕುರಿತು ಬಹಳಷ್ಟು ಹೋರಾಟಗಳಾಗಿವೆ. ಹೋರಾಟವನ್ನು ಮರೆಮಾಚಲು ತಪ್ಪು ಸಂದೇಶವನ್ನು ಕೊಡಲಾಗುತ್ತಿದೆ. ರೈತರು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯ ಬಾರದು. ಹಾಗೂ ಜನಸಾಮಾನ್ಯರು ಕೂಡಾ ಈ ಹೋರಾಟವನ್ನು ಬೆಂಬಲಿಸಬೇಕು. ಮೋದಿ ನೇತೃತ್ವದ ಸರ್ಕಾರ ಮಾರಣಾಂತಿಕ ಕಾನೂನುಗಳನ್ನು ಜಾರಿಗೆ ತಂದಿದೆ.
ಕೆಲವು ದಿನದ ಹಿಂದೆ ಮೈಸೂರಿನಲ್ಲಿಯೂ ಕೂಡ ಜಿಯೋ ಸಿಮ್ ತಿರಸ್ಕರಿಸುವಂತಹ ಚಳುವಳಿ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ನೂರಾರು ಜನ ಜಿಯೋ ಸಿಮ್ ತಿರಸ್ಕರಿಸಿ ಬೇರೆ ಸಂಸ್ಥೆಗಳಿಗೆ ಪೋರ್ಟ್ ಆಗುತ್ತಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಕರ್ನಾಟಕದ ಎಲ್ಲಾ ಜಿಲ್ಲೆಯ ರೈತರು ಬೆಂಬಲಿಸ ಬೇಕು. ಜನವರಿ 26 ರಂದು ದೆಹಲಿಯಲ್ಲಿ ರೈತರು ದೊಡ್ಡ ಮಟ್ಟದಲ್ಲಿ ಟ್ಯಾಕ್ಟರ್ ಪೆರೇಡ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ರೈತ ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ಕರ್ನಾಟಕದ ಉದ್ದಗಲಕ್ಕೂ ಮೋಟರ್ ಬೈಕ್ ಮತ್ತು ಟ್ರ್ಯಾಕ್ಟರ್ ರ್ಯಾಲಿ ಮಾಡಲು ನಿರ್ಧರಿಸಲಾಗಿದೆ.
ರಾಜ್ಯದ ಮೂಲೆ ಮೂಲೆಗಳಿಂದ ರೈತರು ತಮ್ಮ ಟ್ರ್ಯಾಕ್ಟರ್, ವಾಹನಗಳ ಮೂಲಕ ಬೆಂಗಳೂರಿಗೆ ಹೊರಡಲಿದ್ದಾರೆ. ಸುಮಾರು 11 ಗಂಟೆ ವೇಳೆಗೆ ಬೆಂಗಳೂರನ್ನು ತಲುಪಬಹುದು, ದೆಹಲಿ ರೈತರ ಪರೇಡ್ ಗೆ ಬೆಂಬಲವಾಗಿ ಪರ್ಯಾಯ ಪರೇಡ್ ನಡೆಸುತ್ತೇವೆ.ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಧ್ವನಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.