ಸಚಿವ ಸಂಪುಟಕ್ಕೆ ಹಸಿರು ನಿಶಾನೆ ನೀಡಿದ ದೆಹಲಿ ನಾಯಕರು

ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಇದೇ 13 ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ.
ಸಚಿವ ಸಂಪುಟಕ್ಕೆ ಹಸಿರು ನಿಶಾನೆ ನೀಡಿದ ದೆಹಲಿ ನಾಯಕರು

ಬಹಳ ಸಮಯದಿಂದ ಗೊಂದಲದಲ್ಲಿದ್ದ ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ವರಿಷ್ಠರು ಅಂತಿಮವಾಗಿ ಒಪ್ಪಿಗೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಜನವರಿ 13 ರಂದು ನಡೆಯಲಿದೆ. ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲಿದ್ದು, ಅದಕ್ಕೂ ಮುನ್ನ ಹಾಲಿ ಸಚಿವರೊಬ್ಬರನ್ನು ಕೈಬಿಡಲು ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಬಿಜೆಪಿ ವರಿಷ್ಠರ ಸೂಚನೆಯ ಮೇರೆಗೆ ಭಾನುವಾರ ಬೆಳಿಗ್ಗೆ ದೆಹಲಿಗೆ ತೆರಳಿದ ಯಡಿಯೂರಪ್ಪ ಅವರು ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಅಮಿತ್‌ ಶಾ ಮತ್ತು ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಸುಮಾರು ಒಂದು ತಾಸು ಮಾತುಕತೆ ನಡೆಸಿದ್ದಾರೆ. ಜೊತೆಗೆ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಅವರೂ ಕೂಡಾ ಸಾಥ್‌ ನೀಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

‘ನಾಯಕತ್ವ ಬದಲಾವಣೆ ಸೇರಿ ಎಲ್ಲ ರೀತಿಯ ಊಹಾಪೋಹಗಳಿಗೆ ವರಿಷ್ಠರು ತೆರೆ ಎಳೆದಿದ್ದು, ಸಚಿವ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ನೀಡಿರುವ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳ ಲಾಬಿ ತೀವ್ರವಾಗಿ ನಡೆಯುತ್ತಿದೆ. ವಲಸಿಗರಾದ ಎಂಟಿಬಿ ನಾಗರಾಜ್‌, ಮುನಿರತ್ನ ಹಾಗೂ ಆರ್‌ ಶಂಕರ್‌ ಅವರಿಗೆ ಸಚಿವ ಸ್ಥಾನ ಬಹುತೇಕ ಖಚಿತವಾಗಿದೆ ಎನ್ನುತ್ತವೆ ಆಂತರಿಕ ಮೂಲಗಳು. ಉಳಿದಂತೆ ಮೂಲ ಬಿಜೆಪಿಗರಾದ ಉಮೇಶ್ ಕತ್ತಿ, ಸಿ.ಪಿ ಯೋಗೇಶ್ವರ್‌, ಅರವಿಂದ್ ಲಿಂಬಾವಳಿ ಹೆಸರುಗಳು ಕೂಡಾ ಮುಂಚೂಣಿಯಲ್ಲಿದೆ. ಬಿಜೆಪಿ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗ ಟೀಕೆ ನಡೆಸುತ್ತಿರುವ ಬಸನಗೌಡ ಪಾಟೀಲ ಯತ್ನಾಲ್‌ ಕೂಡಾ ಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನಲಾಗುತ್ತಿದೆ. ಇದೇ ವೇಳೆ ಎಲ್ಲ ಹಿರಿಯ ಸಚಿವರನ್ನು ಸಂಪುಟದಲ್ಲಿ ಮುಂದುವರಿಸಲು ಸೂಚಿಸಲಾಗಿದೆ’ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

‘ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಇದೇ 13 ರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ. 14 ರಂದು ಸಂಕ್ರಾಂತಿ ಇರುವ ಕಾರಣ 13 ರ ಮಧ್ಯಾಹ್ನವೇ ಪ್ರಮಾಣ ವಚನ ನಡೆಯಲಿದೆ’ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಆದರೆ, ಅಮಿತ್‌ ಶಾ ಅವರ ರಾಜ್ಯ ಪ್ರವಾಸದ ಬಳಿಕವೇ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನಲಾಗುತ್ತಿದೆ. ಅಂತಿಮವಾಗಿ ಸೋಮವಾರ ಸಂಜೆ ಸ್ಪಷ್ಟ ಚಿತ್ರಣ ಸಿಗಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com