ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಅಸ್ತ್ರವಾಗಿಟ್ಡುಕೊಂಡು ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು. ಜೈಲ್ ಭರೋ ಚಳವಳಿಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯಿದೆಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಹೊರತಂದಿರುವ "ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು" ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಸಿದ್ದರಾಮಯ್ಯ ಅವರು ಮಾತನಾಡಿದರು.
ಇಂದು ನಾವು ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ 5 ಕಾಯ್ದೆಗಳ ಸತ್ಯಾಸತ್ಯತೆಯನ್ನು ತಿಳಿಸುವ ವಿಚಾರಗಳನ್ನು ಒಳಗೊಂಡ ಸಣ್ಣ ಪುಸ್ತಕವನ್ನು ಬಿಡುಗಡೆ ಮಾಡಿದ್ದೇವೆ. ಇದು ಜನರಿಗೆ ಸತ್ಯವನ್ನು ತಿಳಿಸುವ ನಮ್ಮ ಪ್ರಯತ್ನವಾಗಿದೆ. ಆ ಕಾಯ್ದೆಗಳೆಂದರೆ
ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ
ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ
ಜಾನುವಾರ ಹತ್ಯೆ ನಿಷೇಧ
ಕೃಷಿ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಕಾಯ್ದೆ
ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ
ಎ.ಪಿ.ಎಂ.ಸಿ ಕಾಯ್ದೆಗಳ ಬಗ್ಗೆ ಬಿಜೆಪಿಯವರು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ. ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿ ಮಾರುಕಟ್ಟೆಗೆ ಬಂದು ಮಾರಾಟ ಮಾಡುವ ಅಗತ್ಯವಿಲ್ಲ. ಅದನ್ನು ಯಾರಿಗೆ ಬೇಕಾದರೂ ಮಾರಬಹುದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿಯವರ ವಾದ. ವಾಸ್ತವದಲ್ಲಿ ಆರಂಭದ ದಿನಗಳಲ್ಲಿ ಇದು ಲಾಭದಾಯಕವಾದರೂ ನಂತರದ ದಿನಗಳಲ್ಲಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ಎಪಿಎಂಸಿ ಗಳಲ್ಲಿ ಲೈಸನ್ಸ್ ಹೊಂದಿರುವವರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ನಿಯಮವಿದೆ, ಜೊತೆಗೆ ಹರಾಜು ಪ್ರಕ್ರಿಯೆಯಲ್ಲಿ ರೈತನಿಗೆ ತನ್ನ ಬೆಳೆಗೆ ಸೂಕ್ತ ಬೆಲೆ ಸಿಕ್ಕಿಲ್ಲ ಎಂದು ಅನಿಸಿದರೆ ಎಪಿಎಂಸಿ ಗಳಲ್ಲಿರುವ ಗೋಡೋನ್ ಗಳಲ್ಲಿ ಸಂಗ್ರಹಿಸಿಡಲು ಅವಕಾಶವಿದೆ. ರಾಜ್ಯ ಸರ್ಕಾರದ ಹೊಸ ತಿದ್ದುಪಡಿ ತಂದಿರುವುದರಿಂದ ಖರೀದಿದಾರರು ಲೈಸನ್ಸ್ ಪಡೆಯುವ ಅಗತ್ಯವಿರುವುದಿಲ್ಲ, ಖಾಸಗಿ ವ್ಯಕ್ತಿಗಳು ತಮ್ಮದೆ ಆದ ಮಾರುಕಟ್ಟೆಗಳನ್ನು ಸ್ಥಾಪನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಕಾಲಕ್ರಮೇಣ ಎಪಿಎಂಸಿಗಳು ಮುಚ್ಚಲಿದೆ. ಸರ್ಕಾರದ ಉದ್ದೇಶ ಎಪಿಎಂಸಿ ಗಳನ್ನು ನಾಶ ಮಾಡುವುದು ಹಾಗೂ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ನಿಲ್ಲಿಸುವುದಾಗಿದೆ. ಇದಕ್ಕೆ ಪೂರಕವಾಗಿ ನಿರ್ಮಲಾ ಸೀತಾರಾಮನ್ ಅವರು “ ಇದು ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಮುಚ್ಚಲು ಸಕಾಲ” ಎಂದಿದ್ದಾರೆ. ಎಪಿಎಂಸಿ ಗಳು ಬಂದ್ ಆದ ನಂತರ ರೈತರು ಖಾಸಗಿ ವ್ಯಕ್ತಿಗಳ ಮುಲಾಜಿಗೆ ಬೀಳುತ್ತಾರೆ. ಈಗ ಸರ್ಕಾರ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯನ್ನು ನಿಲ್ಲಿಸಲ್ಲ ಎಂದು ಹೇಳಿದೆ, ಹಾಗಾದರೆ ಇದನ್ನು ಕಾನೂನು ಮೂಲಕ ದೃಢಪಡಿಸಿ ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದರೆ ಅದನ್ನು ಒಪ್ಪಲು ಸರ್ಕಾರ ಸಿದ್ಧವಿಲ್ಲ. ಇದು ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ನಿರತವಾಗಿರುವ ಭಾರತೀಯ ರೈತ ಸಂಘದ ಬೇಡಿಕೆಯೂ ಆಗಿದೆ.
ಇನ್ನು ಸರ್ಕಾರ ತಿದ್ದುಪಡಿ ತಂದಿರುವಂತಹ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಕಾಯ್ದೆ ಜಾರಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು, ನಿರುದ್ಯೋಗಿ ಯುವಕ ಯುವತಿಯರಿಗೆ ಕೃಷಿ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತೆ ಎಂದು ಸರ್ಕಾರ ಹೇಳುತ್ತಿದೆ. 1973ರಲ್ಲಿ ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂಮಿಯ ಒಡೆಯ ಎಂದು ಘೋಷಿಸಿದರು. ಆ ಮೂಲಕ ಸಾವಿರಾರು ಕುಟುಂಬಗಳು ಭೂಮಿಯ ಒಡೆತನ ಪಡೆಯಿತು. ಈಗ ಸರ್ಕಾರ 79(ಎ). (ಬಿ), (ಸಿ) ನಿಯಮಗಳನ್ನು ರದ್ದುಮಾಡಿ ಯಾರು ಬೇಕಾದರೂ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಭೂಮಿ ಖರೀದಿಸುವ ಬಂಡವಾಳಶಾಹಿಗಳು ಕೃಷಿಯೇತರ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡುತ್ತಾರೆ. ಸರ್ಕಾರ ತಿದ್ದುಪಡಿ ಮೂಲಕ ಉಳ್ಳವನನ್ನು ಭೂಮಿಯ ಒಡೆಯ ಮಾಡಲು ಹೊರಟಿದೆ. ಮತ್ತೊಂದು ಮುಖ್ಯವಿಚಾರ ಹಿಂದಿನ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಭೂಮಿ ಖರೀದಿಸಿದ್ದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿರುವ 13,814 ಮೊಕದ್ದಮೆಗಳನ್ನು ವಜಾಗೊಳಿಸಲು ಅವಕಾಶ ನೀಡುತ್ತದೆ. ಈ ತಿದ್ದುಪಡಿ ಹಿಂದೆ ಹಣದ ಅವ್ಯವಹಾರ ನಡೆದಿದೆ, ಇದೊಂದು ದೊಡ್ಡ ಹಗರಣ ಎಂಬುದರಲ್ಲಿ ಅನುಮಾನವೇ ಇಲ್ಲ.
ಈ ವಿಚಾರವನ್ನು ಪ್ರಸ್ತಾಪಿಸಿದರೆ ಸಿದ್ದರಾಮಯ್ಯ ಅವರು ಭೂಮಿ ಖರೀದಿಗೆ ಇದ್ದ ಕೃಷಿಯೇತರ ಆದಾಯದ ಮಿತಿಯನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದಾರೆ ಅಂತಾರೆ. ಸತ್ಯ ವಿಚಾರ ಏನೆಂದರೆ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರ ಆದಾಯ ಮಿತಿಯನ್ನು ಮಾತ್ರ ಏರಿಕೆ ಮಾಡಿದ್ದೆವು. ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈ ಬಗ್ಗೆ ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡುತ್ತಿದೆ. ಹಾಗಾಗಿ ಇಂದು ಬಿಡುಗಡೆಗೊಂಡಿರುವ ಪುಸ್ತಕದಲ್ಲಿ ಇಂತಹ ಹಲವು ವಿಚಾರಗಳ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಸುವ ಕೆಲಸ ಮಾಡಿದ್ದೇವೆ.
ಅಗತ್ಯ ವಸ್ತುಗಳ ಕಾಯ್ದೆಯಿಂದ ಕೆಲವು ವಸ್ತುಗಳನ್ನು ತೆಗೆದುಹಾಕಲಾಗಿದೆ. ಕಾಯ್ದೆಯು ಅಕ್ರಮ ದಸ್ತಾನುಗಳ ಮೇಲೆ ದಾಳಿ ಮಾಡಿ, ಅಕ್ರಮ ಬಯಲಿಗೆಳೆಯಲು ಅವಕಾಶವಿಲ್ಲವಾಗಿದೆ, ಇದರಿಂದ ಕೃತಕ ಅಭಾವ ಸೃಷ್ಟಿ ಮಾಡಿ ಮಾರುಕಟ್ಟೆಯಲ್ಲಿ ಆ ವಸ್ತುವಿನ ಬೆಲೆ ಏರಿದ ನಂತರ ಮಾರುಕಟ್ಟೆಗೆ ಬಿಡುತ್ತಾರೆ. ಇಂತಹಾ ಕಾಯ್ದೆ ಜಾರಿಗೆ ತರುವ ಅಗತ್ಯವಿತ್ತೇ? ಅದೂ ಅಲ್ಲದೆ ಇವುಗಳ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ, ತುರ್ತು ಸಂದರ್ಭದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ದತಿ. ಈ ಮೇಲಿನ ತಿದ್ದುಪಡಿಗಳಿಗೆ ಸುಗ್ರೀವಾಜ್ಞೆ ತರುವಂತಹ ತುರ್ತು ಏನಿತ್ತು? ಸರ್ಕಾರ ರೈತರನ್ನು ನಾಶ ಮಾಡಲು ಹೊರಟಿದೆ.
1964ರ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಲ್ಲಿ ಜಾನುವಾರಗಳ ರಕ್ಷಣೆಗಾಗಿ ಹಾಲು ನೀಡುವಂತಹ ಪ್ರಾಣಿಗಳ ವಧೆ ಮಾಡಬಾರದು ಮತ್ತು ಪ್ರಾಯದ ಜಾನುವಾರುಗಳನ್ನು ಹತ್ಯೆ ಮಾಡುವಂತಿಲ್ಲ ಎಂದು ನಿರ್ಬಂಧಿಸಲಾಗಿದೆ. ಒಂದು ಜೊತೆ ಎತ್ತಿಗೆ ಕನಿಷ್ಠ 2 ಲಕ್ಷ ರೂಪಾಯಿಯಿದೆ. ಅವುಗಳಿಗೆ ವಯಸ್ಸಾದ ಮೇಲೆ ಅವನ್ನು ಸಾಕಲು 7 ಕೆ.ಜಿ ಮೇವು ಬೇಕು ಮತ್ತು 100 ರೂಪಾಯಿ ಖರ್ಚಾಗುತ್ತದೆ. ಇದರ ಬಗ್ಗೆ ಬಿಜೆಪಿ ನಾಯಕರಿಗೆ ಅರಿವಿಲ್ಲ. ಬಿಜೆಪಿಯವರು ಯಾರೂ ಸಗಣಿ ಎತ್ತಿಲ್ಲ, ಗಂಜಲ ತೆಗೆದಿಲ್ಲ, ಬೆರಣಿ ತಟ್ಟಿಲ್ಲ, ಹಸುಗಳನ್ನು ಸಾಕಿದ ಅಭ್ಯಾಸವಿಲ್ಲ ಅದಕ್ಕಾಗಿಯೇ ಈ ರೀತಿ ಮಾತನಾಡುತ್ತಾರೆ. ನಾವು ಚಿಕ್ಕವರಿದ್ದಾಗ ಬೆಳಿಗ್ಗೆ ಎದ್ದು ಎತ್ತು, ಹಸುಗಳ ಮುಖ ನೋಡುತ್ತಿದ್ದೆವು, ಅದರಿಂದ ಒಳ್ಳೆಯದಾಗುತ್ತೆ ಎಂದು ನಮ್ಮ ಹಿರಿಯರು ಹೇಳಿಕೊಟ್ಟಿದ್ದರು. ಈಗ ಗೋಹತ್ಯೆ ಬಗ್ಗೆ ಮಾತನಾಡುವವರಾರು ಜಾನುವಾರುಗಳನ್ನು ನಮ್ಮಂತೆ ಪೂಜೆ ಮಾಡಿದವರಲ್ಲ, ಇಂಥವರು ನಮಗೆ ಗೋಮಾತೆ ಬಗ್ಗೆ ಪಾಠ ಮಾಡುತ್ತಾರೆ.
ಮಿಶ್ರ ತಳಿ ಹಸುಗಳು ಗಂಡು ಅಥವಾ ಹೆಣ್ಣು ಕರುಗಳನ್ನು ಹಾಕುತ್ತವೆ. ಹೆಣ್ಣು ಕರುವಾದರೆ ಅದನ್ನು ಹೈನುಗಾರಿಕೆ ಉದ್ದೇಶಕ್ಕಾಗಿ ಸಾಕುತ್ತಾರೆ, ಅದೇ ಗಂಡು ಕರು ಹಾಕಿದರೆ ಅದನ್ನು ಏನು ಮಾಡಬೇಕು? ಸರ್ಕಾರ ಗೋಶಾಲೆಗಳನ್ನು ತೆರೆಯುತ್ತೇವೆ, ಸಾಕಲು ಆಗದವರು ಗೋಶಾಲೆಗೆ ಜಾನುವಾರುಗಳನ್ನು ತಂದು ಬಿಡಿ, ಅವುಗಳನ್ನು ಸಾಕಲು ನೀವೆ ಹಣವನ್ನು ಕೊಡಬೇಕು ಎಂದು ಹೇಳಿದೆ.
ಈ ಕಾಯ್ದೆಯಲ್ಲಿ ಎಮ್ಮೆ ಮತ್ತು ಕೋಣಗಳನ್ನು ಕೊಂದು ತಿನ್ನಲು ಅವಕಾಶ ನೀಡಲಾಗಿದೆ. ಈ ಕಾರಣಕ್ಕಾಗಿ ಇಡೀ ದೇಶದಲ್ಲಿ ಗೋಹತ್ಯೆಯನ್ನು ನಿಷೇಧ ಮಾಡಬೇಕು ಮತ್ತು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ಕೂಡ ನಿಷೇಧ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಆಸ್ಟ್ರೇಲಿಯಾ ಅಥವಾ ನ್ಯೂಜಿಲ್ಯಾಂಡ್ ನಿಂದ ಬರುವ ಹಸುವಿನ ಮಾಂಸ ಗೋಮಾತೆಯಾಗುವುದಿಲ್ಲವೇ?
ಮುದಿ ಎತ್ತು, ಹಸು, ಎಮ್ಮೆ ಕೋಣಗಳನ್ನು ಸಾಕವುದರಿಂದ ರೈತರ ಮೇಲಾಗುವ ಆರ್ಥಿಕ ಹೊರೆಯನ್ನು ಸರ್ಕಾರ ಪರಿಗಣಿಸಬೇಕು, ಗೋಹತ್ಯೆ ನಿಷೇಧ ಕಾಯ್ದೆಯಿಂದ ಚರ್ಮೋದ್ಯಮದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕು. ಮುಖ್ಯವಾಗಿ ದೇಶದಿಂದ ರಫ್ತಾಗುತ್ತಿರುವ ಗೋಮಾಂಸವನ್ನು ಮೊದಲು ನಿಷೇಧಿಸಬೇಕು. ಈ ಉದ್ದೇಶಕ್ಕಾಗಿ ಒಂದು ರಾಷ್ಷ್ರಕ್ಕೆ ಅನುಗುಣವಾಗುವಂತ ಕಾಯ್ದೆಯನ್ನು ಜಾರಿಗೊಳಿಸಬೇಕು.
ಪ್ರಧಾನಿ ಮೋದಿಯವರು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯ ಬಗ್ಗೆ ಮಾತನಾಡುವುದಿಲ್ಲ. ಗ್ಯಾಸ್ ಬೆಲೆ ರೂ.750 ಕ್ಕೆ ಏರಿಕೆಯಾಗಿದೆ, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಗ್ಯಾಸ್ ಬೆಲೆ ರೂ.300 ರಿಂದ ರೂ.350 ಇತ್ತು. 2012-13ರ ಸಂದರ್ಭದಲ್ಲಿ ವಿಶ್ವಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಒಂದಕ್ಕೆ 110 ಡಾಲರ್ ಇತ್ತು. ಆಗ ಯುಪಿಎ ಸರ್ಕಾರ ಪೆಟ್ರೋಲ್ ಅನ್ನು 60-65 ರೂಪಾಯಿಗೆ ಮಾರಾಟ ಮಾಡುತ್ತಿತ್ತು. ಈಗ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 42 ಡಾಲರ್ ಇದೆ, ಅಂದರೆ ಈಗಿನ ತೈಲ ಬೆಲೆಯ ಅರ್ಧ ಕ್ಕೆ ಅಂದರೆ ಪೆಟ್ರೋಲ್ 40 ರೂಪಾಯಿಗೆ, ಡೀಸೆಲ್ ಅನ್ನು 30 ರಾಪಾಯಿಗೆ ಮಾರಾಟ ಮಾಡಬೇಕು. ಮೋದಿಯವರು ಮಾತೆತ್ತಿದರೆ ಸಬ್ ಕ ಸಾಥ್ ಸಬ್ ಕ ವಿಕಾಸ್ ಅನ್ನುತ್ತಾರೆ, ಇವರ ಆಡಳಿತದಿಂದ ಸಾಮಾನ್ಯ ಜನರ ವಿಕಾಸವಂತೂ ಆಗಿಲ್ಲ.
ಗೋಮಾಂಸವನ್ನು ಆಮದು ಮಾಡುವವರು ಬಿಜೆಪಿಯವರೇ, ವಿಧೇಶಗಳಿಗೆ ರಫ್ತು ಮಾಡುತ್ತಿರುವವರು ಬಿಜೆಪಿ ಯವರೇ, ಆದರೆ ಒಂದು ಸಮುದಾಯವನ್ನು ಮಾತ್ರ ಗೋಹತ್ಯೆ ಮಾಡುವವರು ಎಂಬುದಾಗಿ ಬಿಂಬಿಸಲಾಗುತ್ತಿದೆ ಎಂದರು.