ಕರೋನಾ ನಂತರ ಹಕ್ಕಿ ಜ್ವರದ ಭೀತಿ: ಸಂಕಷ್ಟದಲ್ಲಿ ಕುಕ್ಕುಟೋದ್ಯಮ

ಕೋಳಿ ಮಾಂಸ ಸೇವಿಸುವವರು ಶೇಕಡಾ 70 ಡಿಗ್ರಿ ಸೆಲ್ಸಿಯಸ್‌ನಷ್ಟು ಬೇಯಿಸಿ ತಿನ್ನುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ. ಇದರಿಂದ ಉದ್ಯಮ ನಡೆಸುವವರು ಹೆದರುವ ಅವಶ್ಯಕತೆಯಿಲ್ಲ. ಆರೋಗ್ಯದ ಕಾಳಜಿವಹಿಸಿ ಭಯಪಡದೆ ಶುಚಿತ್ವ ಕಾಪಾಡಿಕೊಂಡು ಬಳಕೆ ಮಾಡುವುದರಲ್ಲಿ ಯಾವುದೇ ತೊಂದರೆಯಿಲ್ಲ.
ಕರೋನಾ ನಂತರ ಹಕ್ಕಿ ಜ್ವರದ ಭೀತಿ: ಸಂಕಷ್ಟದಲ್ಲಿ ಕುಕ್ಕುಟೋದ್ಯಮ

ಕರೋನಾ ಸೋಂಕಿನ ಬೆನ್ನಲ್ಲೇ ದೇಶದಲ್ಲಿ ಹಕ್ಕಿಜ್ವರ ಸಾಕಷ್ಟು ಸದ್ದು ಮಾಡುತ್ತಿದೆ. ಒಂದು ಅಪಾಯದಿಂದ ತಪ್ಪಿಸಿಕೊಂಡೆವು ಎಂದು ನಿಟ್ಟುಸಿರು ಬಿಡುವ ಬೆನ್ನಲ್ಲೇ, ಇನ್ನೊಂದು ರೋಗ ಹಬ್ಬುತ್ತಿರುವುದು ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ವಿಜ್ಞಾನಿಗಳು ಈ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಹಕ್ಕಿ ಜ್ವರ ಇದೊಂದು ಸಾಂಕ್ರಾಮಿಕ ರೋಗ ಗಾಳಿಯ ಮೂಲಕ ಹರಡುವಂತಹದ್ದು. ಸಾವನ್ನಪ್ಪಿದ ಹಕ್ಕಿಗಳಲ್ಲಿ ಹೆಚ್5ಎನ್1‌ ವೈರಸ್‌ ಪತ್ತೆಯಾಗುತ್ತದೆ. ಈ ವೈರಸ್‌ ಮಾನವನಿಗೆ ತಗುಲಿ ಒಬ್ಬರಿಂದ ಒಬ್ಬರಿಗೆ ಹರಡುವುದು ತುಂಬಾ ಕಡಿಮೆ. ಹಕ್ಕಿ ಜ್ವರದಿಂದ ಮನುಷ್ಯ ಸಾವನ್ನಪ್ಪಿದ ಪ್ರಕರಣ 1997 ಹಾಂಕಾಂಗ್‌ನಲ್ಲಿ ಪ್ರಥಮ ಬಾರಿಗೆ ಪತ್ತೆಯಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಫೆಬ್ರವರಿ19, 2006 ರಲ್ಲಿ ಭಾರತದಲ್ಲಿ ಹಕ್ಕಿ ಜ್ವರ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಮಹಾರಾಷ್ಟ್ರದ ನಂದೂರ್‌ಬಾದ್‌ ಜಿಲ್ಲೆಯ ನವಪುರದ ಹಳ್ಳಿಯಲ್ಲಿ ಮೊದಲ ಬಾರಿಗೆ ಈ ರೋಗದ ಲಕ್ಷಣಗಳು ವರದಿಯಾಗಿದ್ದವು. ಆಗ ಅಲ್ಲಿನ ಪಶು ವೈದ್ಯಕೀಯ ಇಲಾಖೆ ಮತ್ತು ಸರ್ಕಾರ ಈ ವಿಚಾರ ಗಂಭೀರವಾಗಿ ಪರಿಗಣಿಸಿ ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಉದ್ಯಮದ ಮೇಲೆ ನಿಯಂತ್ರಣ ಸಾಧಿಸಿತ್ತು.

ಈ ವೇಳೇ 2,53,000 ಕೋಳಿಗಳನ್ನು 5,87,000 ಮೊಟ್ಟೆಗಳನ್ನು ಹೂಳಲಾಯಿತು. ಇತ್ತ ಕೋಳಿ ಉದ್ಯಮದಲ್ಲಿ ತೊಡಗಿದ್ದವರನ್ನು ಗೃಹ ಬಂಧನದಲ್ಲಿಡಲಾಗಿತ್ತು. ರೋಗದ ಲಕ್ಷಣ ಕಂಡುಬಂದ ಮಹಾರಾಷ್ಟ್ರದ ನವಪುರದ 150 ಜನರ ರಕ್ತದ ಸ್ಯಾಂಪಲ್‌ನನ್ನು ಪುಣೆಯ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಕಳುಹಿಸಲಾಗಿತ್ತು. ದೇಶಾದ್ಯಂತ ಹೈಅಲರ್ಟ್‌ ಘೋಷಣೆ ಮಾಡಲಾಗಿತ್ತು.

ಮನುಷ್ಯರಲ್ಲಿ ಸೋಂಕು ಹರಡುವಿಕೆಯ ಪ್ರಮಾಣ ಕಡಿಮೆ

ಹಕ್ಕಿ ಜ್ವರ ಒಬ್ಬರಿಂದ ಒಬ್ಬರಿಗೆ ಹರಡುವುದು ಕಡಿಮೆ. ಮುಖ್ಯವಾಗಿ ಕೋಳಿ ಫಾರಂ ನಡೆಸುವವರು, ಚಿಕನ್‌ ಅಂಗಡಿಯಲ್ಲಿ ಕೆಲಸ ಮಾಡುವವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ ಎಂದು ವಿಶ್ವ ಆರೋಗ್ಯ ಇಲಾಖೆಯೆ ಸಲಹೆ ನೀಡಿದೆ.

ಸಾಮಾನ್ಯವಾಗಿ ಸೋಂಕು ತಗುಲಿದ ಪಕ್ಷಿಯಿಂದ ಇನ್ನೊಂದು ಪಕ್ಷಿಗೆ ಹರಡುವುದು ಬೇಗ. ಇದೊಂದು ಸಾಂಕ್ರಾಮಿಕ ರೋಗವಾದರು ಮಾನವನಿಗೆ ತಗುಲುವ ಪ್ರಮಾಣ ಕಡಿಮೆ. ರೋಗದ ಲಕ್ಷಣಗಳೆಂದರೆ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಅತಿಯಾದ ತಲೆ ನೋವು. ಕರೋನಾದಂತೆ ಚಿಕಿತ್ಸೆ ಇಲ್ಲದಿರುವ ರೋಗ ಇದಲ್ಲ. ಹಾಗಾಗಿ, ಸಾರ್ವಜನಿಕರು ಭಯ ಪಡಬೇಕಾದ ಅಗತ್ಯವಿಲ್ಲ. ಎಚ್ಚರ ವಹಿಸಿಕೊಂಡರೆ ಸಾಕು.

ಕರೋನಾ ಮಧ್ಯೆ ಹಕ್ಕಿ ಜ್ವರದ ಭೀತಿ

ಇದೀಗ ದೇಶದಲ್ಲಿ ಕರೋನಾ ಮಧ್ಯೆ ಹಕ್ಕಿಜ್ವರವೂ ಸದ್ದುಮಾಡುತ್ತಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜಲವಾರ್‌ ಪ್ರದೇಶದಲ್ಲಿ ಕಾಗೆಗಳು, ನವಿಲುಗಳು, ಮಿಕ್ಕಿ ಕೋಳಿಗಳು ಸಾವನ್ನಪ್ಪಿವೆ. ಹರಿಯಾಣದಲ್ಲಿ ಕಳೆದ 25 ದಿನಗಳಿಂದ ಬಾರ್‌ವಾಲ ಮತ್ತು ಪಂಚಕುಲದಲ್ಲಿ 4,30,276 ಪಕ್ಷಿಗಳು ಮೃತಪಟ್ಟಿವೆ. ಇತ್ತ ಕರ್ನಾಟಕದ ಗಡಿ ರಾಜ್ಯ ಕೇರಳದಲ್ಲಿಯೂ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಕೊಟ್ಟಾಯಂ ಮತ್ತು ಆಲಪ್ಪುಳ್ಳಂ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇತ್ತ ಕೋಳಿ ಉದ್ಯಮದ ಮೇಲೆಯೂ ನಿಗವಹಿಸಲಾಗಿದೆ.

ಎರಡು ಮೂರು ದಿನದ ಹಿಂದೆ ಕೇರಳದ ಗಡಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕಾಗೆಗಳು ಅನುಮಾನಸ್ಪದ ಸಾವನ್ನಪ್ಪಿದ್ದು, ಕರ್ನಾಟಕ ಸರ್ಕಾರ ಕೂಡ ಈ ಕುರಿತು ಗಂಭೀರವಾಗಿ ಪರಿಗಣಿಸಿದೆ. ಆರೋಗ್ಯ ವೈದ್ಯಕೀಯ ಸಚಿವ ಸುಧಾಕರ್‌ ಪ್ರತಿಕ್ರಿಯಿಸಿ ಕರ್ನಾಟಕದಲ್ಲಿ ಎಲ್ಲಿಯೂ ಕೂಡ ಹಕ್ಕಿ ಜ್ವರ ಅಧಿಕೃತವಾಗಿ ಕಂಡುಬಂದಿಲ್ಲ. ಗಡಿನಾಡ ಜಿಲ್ಲೆಗಳಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚರವಹಿಸಿದ್ದಾರೆಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಕೋಳಿ ಉದ್ಯಮಕ್ಕಿಲ್ಲ ತೊಂದರೆ

ಕರೋನಾ ಬರುವುದಕ್ಕೂ ಮುಂಚೆ ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿ, ಶೇಕಡಾ 40 ರಿಂದ 50 ರಷ್ಟು ಕುಕ್ಕುಟ ಉದ್ಯಮ ನಷ್ಟಕ್ಕೆ ಒಳಗಾಗಿತ್ತು. ಕೋಳಿ ಮರಿ ಸಾಗಾಣಿಕೆದಾರರಿಗೆ ಸಮಸ್ಯೆ ಎದುರಾಗಿತ್ತು. ಲಕ್ಷಾಂತರ ಮರಿಗಳನ್ನು ಗುಂಡಿತೋಡಿ ಹೂಳಲಾಗಿತ್ತು. ಇತ್ತ ಕೋಳಿ ಮಾಂಸ ಪ್ರಿಯರು ಭಯಭೀತರಾಗಿದ್ದರು. ಉದ್ಯಮಕ್ಕೆ ಬಂಡವಾಳ ಹೂಡಿದವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಮತ್ತೊಂದು ಕಡೆ ಚಿಕನ್‌ ಬೆಲೆ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ, ಇದರಿಂದ ಉದ್ಯಮ ಚೇತರಿಸಿಕೊಳ್ಳುವುದು ಕಷ್ಟ, ಎಂಬುವುದು ಕುಕ್ಕುಟ ಉದ್ಯಮಿಗಳ ಮಾತಾಗಿತ್ತು.

ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿರುವ ರಾಜ್ಯ ಕುಕ್ಕುಟೋದ್ಯಮ ರೈತ ಹಾಗು ತಳಿ ಸಾಕಾಣಿಕೆದಾರರ ಅಧ್ಯಕ್ಷ ಸುಶಾಂತ್‌ ರೈ ಅವರು, ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಹಕ್ಕಿ ಜ್ವರ ಅಧಿಕೃತವಾಗಿ ಪತ್ತೆಯಾಗಿಲ್ಲ. ಕುಕ್ಕುಟ ಉದ್ಯಮಕ್ಕೆ ಯಾವುದೇ ತೊಂದರೆಯಿಲ್ಲ. ಪೌಲ್ಟ್ರಿ ಚಿಕನ್‌ ಅಂಗಡಿ ನಡೆಸುವವರು ಭಯಪಡುವ ಅವಶ್ಯಕತೆಯಿಲ್ಲ. ಎಲ್ಲಾ ಪೌಲ್ಟ್ರಿಗಳಲ್ಲಿಯೂ ಬಯೋ ಸೆಕ್ಯೂರಿಟಿಯನ್ನು ಅಳವಡಿಸಲಾಗಿದೆ. ಜೊತೆಗೆ ಮರಿಗಳಿಗೆ ವ್ಯಾಕ್ಸಿನೇಷನ್‌ ಮಾಡಲಾಗುತ್ತದೆ. ಇತ್ತ ಮೊಟ್ಟೆ ಮಾರಾಟಕ್ಕೂ ತೊಂದರೆಯಿಲ್ಲ. ಕೋಳಿ ಮಾಂಸ ಮೊಟ್ಟೆ ತಿನ್ನುವುದರಿಂದ ಹಕ್ಕಿಜ್ವರ ಹರಡುವುದಿಲ್ಲ. ಚೆನ್ನಾಗಿ ಬೇಯಿಸಿ ತಿನ್ನಬೇಕೆಂದು ಹೇಳಿದ್ದಾರೆ.

ಕೋಳಿ ಮಾಂಸ ಸೇವಿಸುವವರು ಶೇಕಡಾ 70 ಡಿಗ್ರಿ ಸೆಲ್ಸಿಯಸ್‌ನಷ್ಟು ಬೇಯಿಸಿ ತಿನ್ನುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಹೇಳಿದೆ. ಇದರಿಂದ ಉದ್ಯಮ ನಡೆಸುವವರು ಹೆದರುವ ಅವಶ್ಯಕತೆಯಿಲ್ಲ. ಆರೋಗ್ಯದ ಕಾಳಜಿವಹಿಸಿ ಭಯಪಡದೆ ಶುಚಿತ್ವ ಕಾಪಾಡಿಕೊಂಡು ಬಳಕೆ ಮಾಡುವುದರಲ್ಲಿ ಯಾವುದೇ ತೊಂದರೆಯಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com