ಮೈಸೂರು–ಕುಶಾಲನಗರ ರೈಲು ಮಾರ್ಗ; ಅಂತಿಮ ಸರ್ವೆಗೆ ಆದೇಶಿಸಿದ ರೈಲ್ವೇ ಮಂಡಳಿ

ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಅಂತಿಮವಾಗಿ ಸ್ಥಳ ವೀಕ್ಷಣೆ ಮಾಡಿ ವರದಿ ನೀಡುವಂತೆ ಮೈಸೂರು ರೈಲ್ವೆ ಅಧಿಕಾರಿಗಳಿಗೆ ದೆಹಲಿಯ ಭಾರತೀಯ ರೈಲ್ವೆಯು ಸೂಚನೆ ನೀಡಿದೆ
ಮೈಸೂರು–ಕುಶಾಲನಗರ ರೈಲು ಮಾರ್ಗ; ಅಂತಿಮ ಸರ್ವೆಗೆ ಆದೇಶಿಸಿದ ರೈಲ್ವೇ ಮಂಡಳಿ

ಪುಟ್ಟ ಜಿಲ್ಲೆ ಕೊಡಗು ಇಂದಿಗೂ ರೈಲ್ವೇ ಸೌಲಭ್ಯದಿಂದ ವಂಚಿತವಾಗಿರುವುದು ನಿಜಕ್ಕೂ ದುಃಖದ ಸಂಗತಿ. ಸ್ವಾತಂತ್ರ ಸಿಕ್ಕಿದಾಗಿನಿಂದಲೂ ಹತ್ತಾರು ಸರ್ಕಾರಗಳು ನಮ್ಮನ್ನು ಆಳಿವೆ. ಅದು ಕಾಂಗ್ರೆಸ್ ಅಥವಾ ಬಿಜೆಪಿಯೇ ಆಗಿರಲಿ ಆದರೆ, ಜಿಲ್ಲೆಯ ರೈಲ್ವೇ ಸಂಪರ್ಕಕ್ಕೆ ಗಂಭೀರ ಪ್ರಯತ್ನವೇ ನಡೆದಿಲ್ಲ.

ಜಿಲ್ಲೆಯಲ್ಲಿ ಕಳೆದ ಒಂದು ದಶಕದಿಂದ ರೈಲ್ವೇ ಸಂಪರ್ಕ ಕಲ್ಪಿಸಬೇಕೆಂದು ಜನ ಒತ್ತಾಯಿಸುತಿದ್ದಾರೆ. ಅಂದು 2009 ರಲ್ಲಿ ಕೇಂದ್ರ ರೈಲ್ವೇ ಸಹಾಯಕ ಸಚಿವರಾಗಿದ್ದ ವಿ ಮುನಿಯಪ್ಪ ಅವರು ಮೈಸೂರಿನಿಂದ ಕುಶಾಲನಗರದ ವರೆಗಿನ 87 ಕಿಲೋಮೀಟರ್ ಉದ್ದದ ರೈಲ್ವೇ ಹಳಿಯನ್ನು ನಿರ್ಮಿಸಲು ಸರ್ವೆ ಕಾರ್ಯಕ್ಕೂ ಆದೇಶಿಸಿದ್ದರು. ಇದು ಅಂದಿನ ಯುಪಿಎ ಸರ್ಕಾರದ ಬಜೆಟ್ ನಲ್ಲೂ ಈ ವಿಷಯವನ್ನು ಒಳಪಡಿಸಿದ್ದು ರಾಜ್ಯದ ಪತ್ರಿಕೆಗಳ ವರದಿಯಲ್ಲೂ ಕರ್ನಾಟಕಕ್ಕೆ ಸಿಕ್ಕಿದ್ದೇನು ಎಂದು ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದವು. ಸ್ವತಃ ಮುನಿಯಪ್ಪ ಅವರೆ ಕೊಡಗಿಗೆ ಭೇಟಿ ನೀಡಿದ್ದಾಗ ಈ ಬಗ್ಗೆ ಭರವಸೆಯನ್ನೂ ನೀಡಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಅಂದು ರಾಜ್ಯದ ಮುಖ್ಯ ಮಂತ್ರಿ ಆಗಿದ್ದ ಬಿ ಎಸ್ ಯಡಿಯೂರಪ್ಪ ಅವರೂ ಕೂಡ ಕೇಂದ್ರದ ನಿರ್ಧಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಉದ್ದೇಶಿತ ರೈಲ್ವೇ ಮಾರ್ಗ ಯೋಜನೆಯ ಪ್ರಕಾರ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ತಲಾ ಶೇಕಡಾ 50 ರಷ್ಟು ವೆಚ್ಚ ಭರಿಸಬೇಕಿದ್ದು ರಾಜ್ಯ ಸರ್ಕಾರ ತನ್ನ ಖರ್ಚಿನಲ್ಲೇ ಭೂಮಿಯನ್ನೂ ಒದಗಿಸಬೇಕಿತ್ತು.

ಈ ಮದ್ಯೆ ಮೈಸೂರಿನಿಂದ ಕೇರಳದ ತಲಚೇರಿಗೆ ರೈಲ್ವೇ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸಲು ಪುನಃ ಕೇರಳ ಸರ್ಕಾರ ಮುಂದಾಗಿದೆ. ಈ ಹಿಂದೆ ಸುಮಾರು 3778 ಕೋಟಿ ರೂಪಯಿಗಳ ಈ ಯೋಜನೆಗೆ ಕೇರಳ ಸರ್ಕಾರ ಮುಂದಾಗಿದ್ದು ಕೊಡಗಿನಲ್ಲಿ ಈ ಅರಣ್ಯ ನಾಶದ ಯೋಜನೆಗೆ ಪುನಃ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಇದನ್ನು ಕೈ ಬಿಡಲಾಗಿತ್ತು. ನಂತರ ಕೇಂದ್ರ ಸರ್ಕಾರ ಕುಶಾಲನಗರ- ಮೈಸೂರು ರೈಲ್ವೇ ಮಾರ್ಗದ ಯೋಜನೆಗೆ ವಿವರವಾದ ಯೋಜನಾ ವರದಿಗೂ ಆದೇಶಿಸಿತ್ತು. ನಂತರ ಕುಂಟುತ್ತಾ ಸಾಗಿದ ಈ ಯೋಜನೆಗೆ ಇದೀಗ ಅಂತಿಮ ಹಂತ ತಲುಪಿದೆ.

ಇದೀಗ ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಅಂತಿಮವಾಗಿ ಸ್ಥಳ ವೀಕ್ಷಣೆ ಮಾಡಿ ವರದಿ ನೀಡುವಂತೆ ಮೈಸೂರು ರೈಲ್ವೆ ಅಧಿಕಾರಿಗಳಿಗೆ ದೆಹಲಿಯ ಭಾರತೀಯ ರೈಲ್ವೆಯು ಮಂಗಳವಾರ ಸೂಚನೆ ನೀಡಿದೆ.

ಈ ಉದ್ದೇಶಿತ ಮೈಸೂರು ಹಾಗೂ ಕುಶಾಲನಗರ ನಡುವಿನ 87 ಕಿ.ಮೀ ಉದ್ದದ ರೈಲು ಮಾರ್ಗಕ್ಕೆ 1854.62 ಕೋಟಿ ರೂಪಾಯಿ ವೆಚ್ಚ ಆಗಲಿರುವುದಾಗಿ ರೈಲ್ವೆ ಇಲಾಖೆ ಅಂದಾಜು ಪಟ್ಟಿಯನ್ನೂ ಸಿದ್ದಪಡಿಸಿದೆ. ಈ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಕಳೆದ ಫೆಬ್ರವರಿ 27, 2019 ರಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ನಂತರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೇ ಅಧಿಕಾರಿಗಳು ಸರ್ವೆಯನ್ನೂ ನಡೆಸಿದರು. ನಂತರ ಈ ಯೋಜನೆಯು ವ್ಯವಹಾರಿಕವಾಗಿ ಲಾಭದಾಯಕವಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದರಿಂದ ಯೋಜನೆಯೇ ನೆನೆಗುದಿಗೆ ಬಿದ್ದಿತ್ತು. ಇದೀಗ ಎರಡು ನಗರಗಳ ನಡುವಿನ ರೈಲು ಸಂಚಾರ ಆರಂಭಕ್ಕೆ ಕೊನೆಯ ಹಂತದ ಸರ್ವೆ ಮಾಡಲು ಕ್ಷಣಗಣನೆ ಆರಂಭವಾಗಿದೆ.


ಈ ಕುರಿತು ಮಾತನಾಡಿದ ಮೈಸೂರಿನ ರೈಲ್ವೇ ವಿಭಾಗೀಯ ಮ್ಯಾನೇಜರ್ ಸತ್ಯನಾರಾಯಣ ಅವರು ಅಂತಿಮ ಸರ್ವೆ ನಡೆಸಲು ರೈಲ್ವೇ ಮಂಡಳಿ ಆದೇಶ ನೀಡಿದ್ದು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ಬಿಡ್ಡುದಾರರು ಟೆಂಡರ್ ಸಲ್ಲಿಸಿದ್ದು ಬಿಡ್ ದಾರರನ್ನು ಅಂತಿಮಗೊಳಿಸಿಲ್ಲ. ಅಂತಿಮ ಸರ್ವೆ ಮಾಡುವ ಪ್ರಕ್ರಿಯೆ ಮುಂದಿನ 6 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ. ನಂತರ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ದ ಪಡಿಸಿ ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸಲಾಗುವುದು. ರೈಲ್ವೇ ಮಂಡಳಿಯು ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಿದ ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಬಗೊಳ್ಳಲಿದೆ ಎಂದು ತಿಳಿಸಿದರು. ಮೈಸೂರಿನಲ್ಲಿ ಈಗಾಗಲೇ ಅನೇಕ ನಗರಗಳಿಗೆ ವಿಮಾನ ಸಂಚಾರ ಆರಂಬಿಸಿದ್ದು ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ಸೋಮವಾರದಿಂದ ನಾಲ್ಕು ಪ್ಯಾಸೆಂಜರ್ ರೈಲುಗಳನ್ನೂ ಬೆಂಗಳೂರಿಗೆ ಆರಂಭಿಸಲಾಗಿದ್ದು ಇದಕ್ಕೆ
ರಿಸರ್ವೇಷನ್ ಇಲ್ಲ.

ಕುಶಾಲನಗರದವರೆಗಾದರೂ ಈ ಯೋಜನೆ ಜಾರಿಯಾದರೆ ಕೊಡಗಿಗೆ ದೇಶಾದ್ಯಂತ ಆಗಮಿಸುವ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ ಆಗಲಿದ್ದು ಬೆಂಗಳೂರು-ಕುಶಾಲನಗರದ ವಾಹನ ದಟ್ಟಣೆ ಗಣನೀಯವಾಗಿ ಕಡಿಮೆ ಆಗಲಿದೆ ಈಗ 250 ಕ್ಕೂ ಅಧಿಕ ಸಾರಿಗೆ ಬಸ್ ಗಳು ಸಂಚರಿಸುತಿದ್ದು ಆರಾಮದಾಯಕ ಮತ್ತು ಮಿತವ್ಯಯದ ಪ್ರಯಾಣಕ್ಕಾಗಿ ಜನರು ರೈಲ್ವೇ ಕಡೆ ಮುಖ ಮಾಡಲಿದ್ದಾರೆ. ವಿವಿದಡೆಗಳಳಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರಿಗೆ ಕುಶಾಲನಗರದಿಂದಲೇ ರೈಲು ಬುಕ್ ಮಾಡಬಹುದಾಗಿದೆ. ಕೊಡಗಿನಲ್ಲಿ ಬೆಳೆಯುವ ಕಾಫಿಯನ್ನು ಬಂದರಿಗೆ ಸಾಗಿಸಲೂ ಇದು ಬಹು ಉಪಯುಕ್ತವಾಗಿದೆ.ಆದರೆ ಈ ಯೋಜನೆ ಬೇಗನೇ ಕಾರ್ಯರೂಪಕ್ಕೆ ಬರಲು ರಾಜಕಾರಣಿಗಳ ಇಚ್ಚಾಶಕ್ತಿ ಬಹು ಮುಖ್ಯವಾಗಿದೆ.

ಕಳೆದ ಎರಡು ವರ್ಷದ ಭೀಕರ ಭೂ ಕುಸಿತ ಮತ್ತು ಮಳೆಯಿಂದಾಗಿ ಕೊಡಗಿನಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದ್ದು ರೈಲ್ವೇ ಯೋಜನೆ ಬಂದರೆ ಕ್ಷಿಪ್ರವಾಗಿ ಚೇತರಿಸಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com