ಬೆಳಗಾವಿ ಕನ್ನಡ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಧ್ವಜವನ್ನು ತೆಗೆಯಬೇಕು ಎಂದು ಹೇಳುವುದು ಅಪರಾಧ. ಪ್ರತಿಯೊಬ್ಬ ಕನ್ನಡಿಗನಿಗೂ ಭಗವಾಧ್ವಜಕ್ಕಿಂತ ಕನ್ನಡ ಧ್ವಜವೇ ಮಿಗಿಲು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವು ಮಾಡದಿದ್ದರೆ ಗಲ್ಲಿಗಳಲ್ಲಿ ಭಗವಾಧ್ವಜ ಹಾರಿಸುವುದಾಗಿ ಎಂಇಎಸ್ ಬೆದರಿಸಿದೆ. ಕನ್ನಡ ಧ್ವಜವನ್ನು ತೆಗೆಯಬೇಕೆಂಬುದೇ ಅಪರಾಧ. ಇನ್ನು ಬೆದರಿಕೆ ಹಾಕುವುದು ಅಕ್ಷಮ್ಯ. ಅಷ್ಟಕ್ಕೂ ಕನ್ನಡ ಧ್ವಜವೆಂಬುದೇನಾದರೂ ಭಗವಾಧ್ವಜಕ್ಕೆ ವಿರುದ್ಧಾರ್ಥಕವೇ? ಕನ್ನಡಿಗನಿಗೆ ಕನ್ನಡ ಧ್ವಜ ಭಗವಾಧ್ವಜಕ್ಕೂ ಮಿಗಿಲು ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಧ್ವಜದ ವಿಚಾರದಲ್ಲಿ ನಡೆಯುತ್ತಿರುವ ಕಿತಾಪತಿಗಳನ್ನು ಸರ್ಕಾರ ನೋಡಿಯೂ ಸುಮ್ಮನಿದೆಯೇ? ಅಥವಾ 'ಕನ್ನಡಿಗರಿಗೆ ಸರ್ಕಾರ ಹೆದರಬಾರದು' ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದ ಮಾತನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ? ಬೆಳಗಾವಿಯ ಕನ್ನಡ ವಿರೋಧಿ ಪುಂಡರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸಸ್ವಾಮಿ ಆಗ್ರಹಿಸಿದ್ದಾರೆ.
ಕುಮಾರಸ್ವಾಮಿಯ ಈ ಪ್ರತಿಕ್ರಿಯೆಗೆ ಕನ್ನಡಿಗರ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕನ್ನಡ ಅಸ್ಮಿತೆಯನ್ನು ರಕ್ಷಿಸುವ ಪ್ರಾದೇಶಿಕ ಪಕ್ಷಕ್ಕಾಗಿ ಕನ್ನಡಿಗರೆಲ್ಲಾ ಒಟ್ಟಾಗಬೇಕೆಂಬ ಕೂಗು ಬಲವಾಗಿ ಕೇಳತೊಡಗಿದೆ.