ಕೊಡವ ಹೆರಿಟೇಜ್ ಸೆಂಟರ್ ಎನ್ನುವ ಅಪೂರ್ಣ ಕಾಮಗಾರಿ ಮುಗಿಯುವದೆಂತು?

ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣಕ್ಕಾಗಿ ಮಡಿಕೇರಿ ನಗರದ ಹೊರವಲಯದ ಕರವಲೆ ಬಾಡಗ ಗ್ರಾಮದ 4 ಎಕರೆ ಪ್ರದೇಶವನ್ನು ಗುರುತಿಸಲಾಯಿತು. ಈ ಜಾಗದಲ್ಲಿ ನೆಲೆಸಿದ್ದ ಬಡ ಕುಟುಂಬಗಳನ್ನು ತೆರವುಗೊಳಿಸಿ 2011ರ ಸೆ.21 ರಂದು ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕೊಡವ ಹೆರಿಟೇಜ್ ಸೆಂಟರ್ ಎನ್ನುವ ಅಪೂರ್ಣ ಕಾಮಗಾರಿ ಮುಗಿಯುವದೆಂತು?


ಪ್ರವಾಸೀ ಜಿಲ್ಲೆ ಕೊಡಗು ಈಗ ಹಿಂದೆಂದಿಗಿಂತಲೂ ಹೆಚ್ಚು ಜನರನ್ನು ತನ್ನತ್ತ ಸೆಳೆಯುತ್ತಿದೆ. ರಾಜ್ಯ ಸರ್ಕಾರವೂ ಕೂಡ ಪ್ರವಾಸೀ ಆಕರ್ಷಣೆ ಹೆಚ್ಚಿಸಲು ಮತ್ತಷ್ಟು ಹಣ ವ್ಯಯ ಮಾಡುತ್ತಿದೆ. ಆದರೆ ಉತ್ತಮ ವಿಶಿಷ್ಟ ಯೋಜನೆಯೊಂದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಳ್ಳ ಹಿಡಿದಿದೆ. ಕೊಡಗಿನ ವಿಶಿಷ್ಟ ಸಂಸ್ಕೃತಿಯನ್ನು ಪ್ರವಾಸಿಗರಿಗೆ ತಿಳಿಸುವ ಸಲುವಾಗಿ 2009-10ರಲ್ಲಿ ಕೊಡವ ಐನ್ಮನೆ ಮಾದರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಯಿತು. ಐನ್ಮನೆ, ಸಭಾಂಗಣ, ಒಳಾಂಗಣದಲ್ಲಿ ಪುಟ್ಟ ಕೊಳ, ತೆರೆದ ಸಭಾಂಗಣ, ಗ್ರಂಥಾಲಯ, ಹಳೇ ವಸ್ತುಗಳ ಸಂಗ್ರಹಾಲಯ, ಕುಡಿಯುವ ನೀರು ಇನ್ನಿತರ ವ್ಯವಸ್ಥೆಗಳೊಂದಿಗೆ ಗ್ರಾಮೀಣ ಸೊಗಡನ್ನು ಪಸರಿಸುವುದು ಕೊಡವ ಹೆರಿಟೇಜ್ನ ಉದ್ದೇಶವಾಗಿತ್ತು.

ಈ ಯೋಜನೆಯ ಮೊದಲ ಹಂತವಾಗಿ 1.45 ಕೋಟಿ ವೆಚ್ಚದ ಯೋಜನೆಯನ್ನು ಸಿದ್ದಪಡಿಸಲಾಯಿತಾದರೂ ಬಳಿಕ ಮರುಪರಿಶೀಲಿಸಿ 2.54 ಕೋಟಿ ರೂ.ಗೆ ಏರಿಸಿ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನ ಮಾಡಲಾಯಿತು. ಈವರೆಗೆ 1.72ಕೋಟಿ ರೂ ಅನುದಾನವೂ ಬಿಡುಗಡೆಯಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ನಬಾರ್ಡ್ ಅನುದಾನದಲ್ಲಿ ಲೋಕೋಪಯೋಗಿ ಇಲಾಖೆಯೇ ಕಾಮಗಾರಿಯ ಮುಂದಾಳತ್ವ ವಹಿಸಿತ್ತು. ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣಕ್ಕಾಗಿ ಮಡಿಕೇರಿ ನಗರದ ಹೊರವಲಯದ ಕರವಲೆ ಬಾಡಗ ಗ್ರಾಮದ 4 ಎಕರೆ ಪ್ರದೇಶವನ್ನು ಗುರುತಿಸಲಾಯಿತು. ಈ ಜಾಗದಲ್ಲಿ ನೆಲೆಸಿದ್ದ ಬಡ ಕುಟುಂಬಗಳನ್ನು ತೆರವುಗೊಳಿಸಿ 2011ರ ಸೆ.21 ರಂದು ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಒಪ್ಪಂದದ ಪ್ರಕಾರ ಗುತ್ತಿಗೆದಾರ ಕಾಮಗಾರಿಯನ್ನು 2012ರ ಸೆ.21ಕ್ಕೆ ಪೂರ್ಣಗೊಳಿಸಿ ಕಟ್ಟಡವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಬೇಕಾಗಿತ್ತು. ಆದರೆ, ಆರಂಭದಲ್ಲಿ ಕಾಮಗಾರಿ ಚುರುಕಾಗಿ ನಡೆಯಿತಾದರೂ ಶೇ.70 ರಷ್ಟು ಕಾಮಗಾರಿ ನಡೆದು ಬಳಿಕ ನೆನೆಗುದಿಗೆ ಬಿದ್ದಿತು. ಪರಿಣಾಮ ಕಳೆದ ಏಳೆಂಟು ವರ್ಷಗಳಿಂದ ಕುರುಚಲು ಕಾಡು ಬೆಳೆದು, ಕಟ್ಟಡ ಶಿಥಿಲಾವಸ್ಥೆಗೆ ತಲುಪುವಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿಈ ಕೊಡವ ಹೆರಿಟೇಜ್ ಯೋಜನೆ ಲೆಕ್ಕಾಚಾರದಂತೆ ಪೂರ್ಣಗೊಂಡಿದ್ದರೆ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿರಲಿಲ್ಲ. ಹಾಗೆ ನೋಡಿದರೆ ಯೋಜನೆಗೆ ಆಯ್ಕೆ ಮಾಡಿಕೊಂಡ ಜಾಗವು ಸುಂದರ ಪರಿಸರದಲ್ಲಿದೆ. ಕರವಲೆ ಬಾಡಗ ಗ್ರಾಮದ ಗುಡ್ಡ ಪ್ರದೇಶದಲ್ಲಿರುವ ಈ ಕೊಡವ ಹೆರಿಟೇಜ್ ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವಿರಲಿಲ್ಲ. ಆದರೆ ಈಗಾಗಲೇ ಶೇ. 70ರಷ್ಟು ಪೂರ್ಣಗೊಂಡಿರುವ ಕಟ್ಟಡ ಯೋಗ್ಯವಾಗಿದೆಯಾ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಕಾರಣ 7 ವರ್ಷಗಳ ಹಿಂದೆ ನಿರ್ಮಿಸಿದ ಗೋಡೆ ಹಾಗೂ ಮೆಟ್ಟಿಲಿನ ಕಾಮಗಾರಿ ಗುಣಮಟ್ಟವಿಲ್ಲದೆ ಕಳಪೆಯಾಗಿದೆ. ಅಷ್ಟೇ ಅಲ್ಲದೆ ಯಾವುದೇ ರೂಪುರೇಷೆಗಳಿಲ್ಲದ ಕಾಮಗಾರಿ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಈ ಹಿಂದೆ ಗುತ್ತಿಗೆ ಪಡೆದ ಗುತ್ತಿಗೆದಾರ ಕಾಮಗಾರಿ ಮುಂದುವರೆಸಲು ಹಿಂದೇಟು ಹಾಕಿದ್ದರಿಂದ ಯೋಜನೆ ನೆನೆಗುದಿಗೆ ಬಿದ್ದಿದ್ದು ಲೋಕೋಪಯೋಗಿ ಇಲಾಖೆ ಮರು ಟೆಂಡರ್ ಪ್ರಕ್ರಿಯೆ ನಡೆಸಲು ಚಿಂತನೆ ನಡೆಸಿತ್ತು. ಸುಮಾರು 5 ಕೋಟಿ ವೆಚ್ಚದಲ್ಲಿ ಕಾಮಗಾರಿ ಮುಂದುವರೆಸಲು ಮುಂದಾಗಿತ್ತು.

ಈ ಹಿಂದಿನ ಕಾಂಗ್ರೆಸ್ ಜೆ.ಡಿ.ಎಸ್ ಮೈತ್ರಿ ಸರ್ಕಾರದ ಸಂದರ್ಭ ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್ ಅವರೇ ಕೊಡಗು ಜಿಲ್ಲಾ ಉಸ್ತುವಾರಿಯಾಗಿದ್ದರು. ಹೀಗಿರುವಾಗ ಅವರ ಆಡಳಿತಾವಧಿಯಲ್ಲಿಯಾದರೂ ಈ ಕಾಮಗಾರಿ ಪೂರ್ಣವಾಗುತ್ತದೆ ಎನ್ನುಕೊಳ್ಳುವಷ್ಟರಲ್ಲಿ ಸರಕಾರವೇ ಬಿದ್ದು ಹೋಗಿ ಕನಸು ಕನಸಾಗೆ ಉಳಿಯಿತು. ಕಳೆದ ಐದಾರು ವರ್ಷಗಳಿಂದ ಕಾಮಗಾರಿ ನೆನೆಗುದಿಗೆ ಬಿದ್ದ ಪರಿಣಾಮ ಇಲ್ಲಿನ ವಸ್ತುಗಳು ಸದ್ದಿಲ್ಲದೆ ಕಣ್ಮರೆಯಾಗಿವೆ. ಇದೀಗ ಗೋಡೆಗಳನ್ನು ನೆಲಕ್ಕುರುಳಿಸಿ ಇಟ್ಟಿಗೆಗಳನ್ನು ಹೊತ್ತೊಯ್ಯುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅದ್ಯಾಕೋ ಗೊತ್ತಿಲ್ಲ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಗಾಢ ನಿದ್ದೆಯಲ್ಲಿದ್ದಂತೆ ಕಂಡು ಬರುತ್ತಿದೆ. ಇನ್ನು ಚಿಕ್ಕಪುಟ್ಟ ಸಮಸ್ಯೆಗಳಿಗೆ ಬೀದಿಗಿಳಿಯುವ ಕೆಲವು ಸಂಘಟನೆಗಳು, ಜನಪ್ರತಿನಿಧಿಗಳು ಕೊಡವ ಹೆರಿಟೇಜ್ ಯೋಜನೆ ಕಳೆದ ಏಳೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದರೂ ಸೊಲ್ಲೆತ್ತದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯನವರು ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸುತ್ತಾ ಬಂದಿದ್ದು ಅವರ ಕೂಗು ಸರಕಾರದವರೆಗೆ ತಲುಪಿ ಕಾಮಗಾರಿ ಪೂರ್ಣಗೊಳ್ಳುತ್ತದೆಯೇ? ಎನ್ನುವ ಪ್ರಶ್ನೆ ಹಲವರಲ್ಲಿ ಉಧ್ಭವಿಸಿದೆ.


ಒಪ್ಪಂದದ ಪ್ರಕಾರದ ಒಂದೂವರೆ-ಎರಡು ವರ್ಷಕ್ಕೆಲ್ಲ ಕಾಮಗಾರಿ ಪೂರ್ಣಗೊಂಡು, ಸರಕಾರಕ್ಕೆ ಸರಕಾರವೇ ಅಲ್ಲಿಗೆ ಅಧಿಕಾರಿಗಳೊಂದಿಗೆ ಧಾವಿಸಿ ಕೊಡಗಿನ ಸಾವಿರಾರು ಜನರ ಉಪಸ್ಥಿತಿಯಲ್ಲಿ ಬೃಹತ್ ಕಾರ್ಯಕ್ರಮದೊಂದಿಗೆ ಉದ್ಘಾಟನೆಯಾಗಬೇಕಿದ್ದ ಕೊಡವ ಹೆರಿಟೇಜ್ ಎಂಬ ಸಾಂಪ್ರದಾಯಿಕ ಕನಸ್ಸಿನ ಕೂಸು ಗುತ್ತಿಗೆದಾರನ ಕಳ್ಳಾಟದಿಂದಾಗಿ, ಸಂಪೂರ್ಣ ಕಳಪೆ ಕಾಮಗಾರಿಯಿಂದಾಗಿ ಕನಸಾಗಿಯೇ ಉಳಿಯಿತು. ಅರೆಬರೆ ಕೆಲಸ ನಿರ್ವಹಿಸಿ ಸುಳ್ಳುಪಳ್ಳು ಲೆಕ್ಕತೋರಿಸಿ ಆತ ಬಿಡುಗಡೆ ಮಾಡಿಸಿಕೊಂಡ ಮೊತ್ತ ಅಷ್ಟಿಷ್ಟಲ್ಲ ಕೋಟಿಗೂ ಹೆಚ್ಚು. ಆತ ಹಣದೊಂದಿಗೆ ಪರಾರಿಯಾಗಿ ವರ್ಷಗಳೇ ಉರುಳಿದೆ ಕಾಮಗಾರಿಯನ್ನು ಇಲಾಖೆ ಬೇರೆ ಗುತ್ತಿಗೆದಾರನಿಗೆ ವಹಿಸುವ ಮನಸ್ಸು ಮಾಡಿತಾದರೂ ಅದು ಕೂಡ ಕಾರ್ಯರೂಪಕ್ಕೆ ಬರುವಲ್ಲಿ ಹಾವು ಏಟಿ ಆಟ ಶುರುವಾಯಿತು. ಕೂರ್ಗ್ ಹೆರಿಟೇಜ್ ಸೆಂಟರ್ನ ಕಟ್ಟಡ ಕರಗತೊಡಗಿತು, ಕಟ್ಟಡದ ಬೆಲೆಬಾಳುವ ಸರಕು ಸಾಮಾಗ್ರಿಗಳು ಕಳ್ಳರಪಾಲಾದರೆ. ಪಾಳು ಬಿದ್ದ ಕಟ್ಟಡವು ಪುಂಡಪೋಕರಿಗಳಿಗೆ ಆವಾಸಸ್ಥಾನವಾಯಿತು. ಇದರೊಂದಿಗೆ 2018-19ರಲ್ಲಿ ಸುರಿದ ಭಾರಿ ಮಳೆ ಹಾಗು 2020ರ ಕೋವಿಡ್ ದುರಂತ ಅಧಿಕಾರಿಗಳ, ಸಂಬಂಧಿಸಿದ ಇಲಾಖೆಯವರಿಗೆ ನೆಪಹೇಳಿ ನುಣುಚಿಕೊಳ್ಳಲು ಅದ್ಧೂರಿ ಕಾರಣವೂ ಆಯ್ತು. ಕೊಡಗಿನ ಪರಂಪರೆ ಹಾಗು ಸಂಸ್ಕೃತಿಯನ್ನು ಪ್ರವಾಸಿಗರಿಗೆ ಪರಿಚಯಿಸಬೇಕಿದ್ದ ಉತ್ತಮ ಯೋಜನೆಯೊಂದು ಈ ರೀತಿ ಹಳ್ಳ ಹಿಡಿದಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಕಾಮಗಾರಿಯ ನಿರ್ವಹಣೆಯಲ್ಲಿ ಇಲಾಖೆ ಹಾಗು ಸರಕಾರ ಸಂಪೂರ್ಣ ವಿಫಲವಾಗಿದೆ. ಇದರೊಂದಿಗೆ ಕೊಡಗಿನ ಸಂಸ್ಕೃತಿಯ ಹೆಸರಲ್ಲಿ ನಡೆದ ಈ ಉಡಾಫೆಗೆ, ನಿರ್ಲಕ್ಷ್ಯಕ್ಕೆ ಜಿಲ್ಲೆ ತಲೆತಗ್ಗಿಸುವಂತಾಗಿದೆ. ವೀಣಾ ಅಚ್ಚಯ್ಯನವರು ಕೊಂಚ ಗಂಭೀರವಾಗಿ ಈ ಕಟ್ಟಡದ ಕುರಿತು ತಲೆಕೆಡಿಸಿಕೊಂಡಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅವರ ಪ್ರಯತ್ನಕ್ಕೆ ಇತರರೂ ಕೈಜೋಡಿಸಿದರೆ ಸುದೀರ್ಘ ಸಮಯದ ನಂತರವಾದರೂ ಕೊಡವ ಹೆರಿಟೇಜ್ ಸೆಂಟರ್ ಅನ್ನುವ ಕನಸು ನನಸಾಗುವ ಸಾಧ್ಯತೆ ಇದೆ. ಈ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸರಕಾರ, ಸ್ಥಳೀಯ ಸಂಘ ಸಂಸ್ಥೆಗಳು ಇನ್ನಷ್ಟು ಗಂಭೀರವಾಗಿ ಯೋಚಿಸಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com