ಕಸ್ತೂರಿರಂಗನ್ ವರದಿಯು ಅವೈಜ್ಞಾನಿಕವಾಗಿದೆ, ಪಶ್ಚಿಮಘಟ್ಟದ ಜನಜೀವನ ಗಮನದಲ್ಲಿಟ್ಟುಕೊಂಡು ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಡಿ31 ರೊಳಗೆ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ವರದಿಯ ಸಿದ್ದತೆಯ ವೇಳೆ ಅನೇಕ ದೋಷಗಳಿವೆ. ಇದರಿಂದ ಪಶ್ಚಿಮಘಟ್ಟದ ಜನರ ಬದುಕು ಅತಂತ್ರ ಸ್ಥಿತಿಗೆ ಬರುತ್ತದೆ ಎಂದು ಸರ್ಕಾರ ವರದಿಯನ್ನು ತಿರಸ್ಕರಿಸಿದೆ.
ಈ ವರದಿ ಕುರಿತು ಡಿ31 ರೊಳಗೆ ಹಸಿರು ನ್ಯಾಯಾಪೀಠ(ಎನ್ಜಿಟಿ)ಯಲ್ಲಿ ಚರ್ಚೆಗೆ ಬರಲಿದೆ. ಈ ಸಂಬಂಧ ಎರಡು ದಿನಗಳೊಳಗೆ ಕೇಂದ್ರಕ್ಕೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಅನುಷ್ಠಾನದ ಕುರಿತು ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಿಸಬೇಕಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯಸರ್ಕಾರ ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣ ವಿರೋಧಿಸುತ್ತದೆ. ಒಂದು ವೇಳೆ ಹಸಿರು ನ್ಯಾಯಾಪೀಠದಲ್ಲಿ ತೀರ್ಪು ವಿರೋಧವಾಗಿ ಬಂದರೆ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ರಾಜ್ಯ ನಾಯಕರು ತೀರ್ಮಾನ ಕೈಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
ವರದಿ ಅನುಷ್ಠಾನಗೊಂಡರೆ ಪಶ್ಚಿಮಘಟ್ಟದ ಜನರು ಬೀದಿಗಿಳಿದು ಹೋರಾಟ ಮಾಡುವ ಸಂಭವ ಎದುರಾಗುತ್ತದೆ. ಈಗಾಗಲೆ ಗ್ರಾಮಪಂಚಾಯಿತಿ ಮಟ್ಟದಿಂದ ವಿಧಾನಸಭೆಯವರೆಗೂ ವಿರೋಧಗಳು ವ್ಯಕ್ತವಾಗುತ್ತಿದೆ. ಜೊತೆಗೆ ಪಶ್ಚಿಮಘಟ್ಟದ ಜನರ ಪರಿಸ್ಥಿತಿ ಅತಂತ್ರಕ್ಕೆ ಬರುವ ಸಾಧ್ಯತೆಯೇ ಹೆಚ್ಚು, ಹಾಗಾಗಿ ರಾಜ್ಯ ಸರ್ಕಾರ ಇನದನ್ನು ವಿರೋಧಿಸುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮತ್ತು ಅರಣ್ಯ ಸಚಿವ ಆನಂದ್ಸಿಂಗ್ ತಿಳಿಸಿದ್ದಾರೆ.
ಈ ವರದಿ ಅನುಷ್ಠಾನಗೊಂಡರೆ ರಾಜ್ಯದಲ್ಲಿ 11 ಜಿಲ್ಲೆಗಳ 1592 ಕ್ಕೂ ಹೆಚ್ಚು ಹಳ್ಳಿಗಳ 20,668 ಪ್ರದೇಶ ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಸೇರಲಿದೆ. ಇನ್ನು ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟ್ರ, ಗುಜರಾತ್, ಗೋವಾ, ತಮಿಳುನಾಡು ರಾಜ್ಯಗಳ ಮೇಲೆ ಪ್ರಭಾವ ಬೀರಲಿದೆ.
ಇದೇ ವೇಳೆ ಆರ್ ಅಶೋಕ್ ಮಾತನಾಡಿ, ಅರಣ್ಯಗಳಿಂದ 10 ಕಿ.ಮೀ ವ್ಯಾಪ್ತಿಯಲ್ಲಿರುವ ಬಫರ್ ಜೋನ್ನನ್ನು 1 ಕಿ.ಮೀ ವ್ಯಾಪ್ತಿಗೆ ಇಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.