ಕೊಡಗಿನ ಅರಣ್ಯ ಒತ್ತುವರಿ ತೆರವು ಯಾವಾಗ?

2018ರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದ ಸರ್ವೆಯಲ್ಲಿ ನೂರಾರು ಎಕರೆ ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಸ್ಥಳೀಯರ ಭಯದಿಂದಾಗಿ ವಲಯ ಅರಣ್ಯಾಧಿಕಾರಿಗಳು ಒತ್ತುವರಿ ತೆರವುಗೊಳಿಸುವ ಸಾಹಸಕ್ಕೆ ಮುಂದಾಗುತ್ತಿಲ್ಲ.
ಕೊಡಗಿನ ಅರಣ್ಯ ಒತ್ತುವರಿ ತೆರವು ಯಾವಾಗ?

ಪುಟ್ಟ ಪ್ರವಾಸೀ ಜಿಲ್ಲೆ ಕೊಡಗು ಅಪೂರ್ವ ಹಚ್ಚ ಹಸಿರಿನ ಸೌಂದರ್ಯದ ಗಣಿಯೂ ಹೌದು. ಒಂದು ಕಾಲದಲ್ಲಿ ಅಗಣಿತ ಹಸಿರ ಸಿರಿಯನ್ನು ಹೊದ್ದಿದ್ದ ಜಿಲ್ಲೆಯ ಬೆಟ್ಟ ಗುಡ್ಡಗಳು ಇಂದು ಹೋಂ ಸ್ಟೇ ಸಂಸ್ಕೃತಿಯ ಕಾರಣದಿಂದ ಬೋಳು ಗುಡ್ಡಗಳಾಗಿವೆ. ಹಸಿರ ಸಿರಿಯ ನಡುವೆ ಕಾಂಕ್ರೀಟ್‌ ಕಟ್ಟಡಗಳೇ ಎದ್ದು ಕಾಣುತ್ತಿವೆ. ಕೊಡಗಿನಲ್ಲಿ ಮರಗಳ ಅವ್ಯಾಹತ ಹನನದಿಂದಾಗಿ ಹಸಿರ ಹೊದಿಕೆ ಕಡಿಮೆ ಆಗುತ್ತಿದೆ. ಮೀಸಲು ಅರಣ್ಯ ಗಳಲ್ಲಿಯೂ ಮರಗಳು ಮೊದಲಿನಷ್ಟು ದಟ್ಟವಾಗಿಲ್ಲ. ಮಾನವನ ಹಸ್ತಕ್ಷೇಪವೇ ಇದಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಇದ್ದ ಪೈಸಾರಿ ಜಾಗಗಳನ್ನೆಲ್ಲ ಶ್ರೀಮಂತ ವರ್ಗದವರು ಆಕ್ರಮಿಸಿಕೊಂಡು ದಾಖಲೆಯನ್ನೂ ಮಾಡಿಕೊಂಡಿದ್ದಾರೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಅರಣ್ಯ ಭೂಮಿ ಒತ್ತುವರಿ ಆಗಿರುವ ಪ್ರಕರಣಗಳು ಕಡಿಮೆಯೇ ಇವೆ. ಆದರೂ ಕೂಡ ಒತ್ತುವರಿ ಆಗಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.

ಜಿಲ್ಲೆಯ ದಟ್ಟಾರಣ್ಯಗಳಲ್ಲಿ ಒಂದಾದ ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನೂರು ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಶ್ರೀಮಂಗಲ ಮತ್ತು ಮಾಕುಟ್ಟ ವನ್ಯಜೀವಿ ವಲಯ ವ್ಯಾಪ್ತಿಯ ಅರಣ್ಯ ಪ್ರದೇಶ ಪ್ರಭಾವಿಗಳ ಸ್ವಾಧೀನದಲ್ಲಿದೆ. ಅನಾದಿ ಕಾಲದಿಂದ ಕಾಡಿನಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಕನಿಷ್ಠ ಮೂಲ ಸವಲತ್ತು ಒದಗಿಸಲು ಅಡ್ಡಿಪಡಿಸುವ ಅರಣ್ಯಾಧಿಕಾರಿಗಳು, ಅರಣ್ಯ ಪ್ರದೇಶದಲ್ಲಿ ನೂರು ಎಕರೆ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಆಸಕ್ತಿ ತೋರುತ್ತಿಲ್ಲ ಎಂಬ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎರಡು ದಶಕದ ಹಿಂದೆ ಲಕ್ಷಾಂತರ ರೂ. ವಿನಿಯೋಗಿಸಿ ಕೂಟಿಯಾಲ ಸೇತುವೆ ನಿರ್ವಿುಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಕೇವಲ 500 ಅಡಿ ರಸ್ತೆ ಹಾದು ಹೋಗಲು ಅರಣ್ಯಾಧಿಕಾರಿಗಳು ನೀತಿ, ನಿಯಮ ಮುಂದಿಡುತ್ತಾರೆ. ಆದರೆ, ನೂರು ಎಕರೆ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಲು ಹೇಗೆ ಅವಕಾಶ ಮಾಡಿಕೊಟ್ಟಿದ್ದಾರೆಂಬ ಪ್ರಶ್ನೆ ಏಳುವಂತೆ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗಿರಿಕಂದರಗಳಲ್ಲಿ ಉನ್ನತಾಧಿಕಾರಿಗಳೊಂದಿಗೆ ಚಾರಣ ಮಾಡುತ್ತಾ ದಿನ ಕಳೆಯುವ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳಿಗೆ, ಅರಣ್ಯ ಪ್ರದೇಶ ಕಾಪಾಡುವ ಆಸಕ್ತಿ ಇಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ. 2018ರಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿ ನಡೆದ ಸರ್ವೆಯಲ್ಲಿ ನೂರಾರು ಎಕರೆ ಒತ್ತುವರಿಯಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಸ್ಥಳೀಯರ ಭಯದಿಂದಾಗಿ ವಲಯ ಅರಣ್ಯಾಧಿಕಾರಿಗಳು ಒತ್ತುವರಿ ತೆರವುಗೊಳಿಸುವ ಸಾಹಸಕ್ಕೆ ಮುಂದಾಗುತ್ತಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಕೂಡ ಆಸಕ್ತಿ ವಹಿಸದಿರುವುದು ವಿಪರ್ಯಾಸ. 2002 ರಲ್ಲಿ ಸರ್ವೆ ಆಫ್ ಇಂಡಿಯಾ ಮೂಲಕ ಅರಣ್ಯ ಪ್ರದೇಶದ ಸರ್ವೆ ನಡೆದಿತ್ತು. ಆ ವೇಳೆ ಅರಣ್ಯ ಗಡಿ ಗುರುತಿಸಲಾಗಿದೆ. ಹೀಗಿದ್ದರೂ, ಒತ್ತುವರಿಯಾಗಿರುವ ಅರಣ್ಯ ಪ್ರದೇಶ ತೆರವುಗೊಳಿಸಿ, ಅರಣ್ಯ ಕಾಪಾಡುವ ಮುತುವರ್ಜಿ ತೋರುತ್ತಿಲ್ಲ. ಇದರಿಂದ ಅರಣ್ಯ ಪ್ರದೇಶ ಮತ್ತಷ್ಟು ಒತ್ತುವರಿಯಾಗುತ್ತಿದೆ.

ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಬೆಟ್ಟ ಪ್ರದೇಶಗಳಲ್ಲಿ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಕಾಫಿ ತೋಟ ಮಾಡಲಾಗಿದೆ. ಹಲವು ವರ್ಷಗಳ ಹಿಂದೆ ಜಾಗ ಒತ್ತುವರಿ ಮಾಡಿಕೊಂಡು ಕಾಫಿ ಬೆಳೆಯಲಾಗಿದೆ. ಬೆಟ್ಟ ಪ್ರದೇಶವಾಗಿರುವುದರಿಂದ ಈ ತೋಟಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಹೆಚ್ಚು ಮಳೆ ಸುರಿಯುವುದು, ದಟ್ಟವಾಗಿ ಆವರಿಸಿರುವ ಹೊಗೆಯಿಂದಾಗಿ ಇಲ್ಲಿ ಕಾಫಿ ಫಸಲು ಕೂಡ ಕಡಿಮೆ. ಹೀಗಿದ್ದರೂ, ಒತ್ತುವರಿದಾರರ ಒತ್ತುವರಿ ವ್ಯಾಮೋಹ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಬೆಟ್ಟ ಪ್ರದೇಶ ಒತ್ತುವರಿ ಮಾಡಿಕೊಂಡು ಕಾಫಿ ತೋಟ ವಿಸ್ತರಿಸುವ ಕಾರ್ಯ ಮಾಡುತ್ತಿದ್ದಾರೆ. ಬ್ರಹ್ಮಗಿರಿ ಅಭಯಾರಣ್ಯ ಸೇರಿದಂತೆ ಜಿಲ್ಲೆಯ ವಿವಿಧೆಡೆ ಅರಣ್ಯ ಪ್ರದೇಶ ಒತ್ತುವರಿಯಾಗಿರುವುದನ್ನು ತಕ್ಷಣ ತೆರವುಗೊಳಿಸುವಂತೆ ಕೊಡಗು ವೃತ್ತದ ಪ್ರಭಾರ ಅರಣ್ಯ ಸಂರಕ್ಷಣಾಧಿಕಾರಿ ಹೀರಲಾಲ್ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೊಡಗು ಅರಣ್ಯ ಭವನದಲ್ಲಿ ಇತ್ತೀಚೆಗೆ ಸ್ಥಳೀಯ ಅರಣ್ಯಾಧಿಕಾರಿಗಳ ಸಭೆ ನಡೆಸಿ, ಅರಣ್ಯ ಪ್ರದೇಶ ಒತ್ತುವರಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿ, ಅರಣ್ಯ ಪ್ರದೇಶ ತೆರವು ಮಾಡಲು ಸೂಚಿಸಬೇಕು. ತದನಂತರ ಒತ್ತುವರಿ ತೆರವುಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಅವರು ಬ್ರಹ್ಮಗಿರಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಕಾಫಿ ಬೆಳೆಗಅರರಿಂದ ಅರಣ್ಯ ಒತ್ತುವರಿ ಆಗಿದೆ ಎಂಬ ದೂರು ಬಂದಿದೆ. ಆದರೆ ಈ ಒತ್ತುವರಿ ಇತ್ತೀಚೆಗೆ ನಡೆದಿರುವಂತಾದ್ದು ಅಲ್ಲ. ಅದರೆ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ ಕೈಗೊಂಡು ತೆರವುಗೊಳಿಸಲಾಗುವುದು. ಇದಕ್ಕೂ ಮೊದಲು ಸರ್ವೆ ಮಾಡಿಸಿ ಒತ್ತುವರಿ ಖಚಿತಪಡಿಸಿಕೊಳ್ಳಲಾಗುವುದು ಎಂದರು. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡರೆ ಗ್ರಾಮಗಳಿಗೆ ಮತ್ತು ಜನವಸತಿ ಪ್ರದೇಶಗಳಿಗೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಆನೆ –ಮಾನವ ಸಂಘರ್ಷ ತಾರಕಕ್ಕೇರಿದ್ದು ಇಬ್ಬರಿಗೂ ಬದುಕಲು ಅರಣ್ಯ ಬೇಕೇ ಬೇಕಾಗಿದೆ. ಜಿಲ್ಲೆಯಲ್ಲಿ ಕಾಡಾನೆಗಳ ಸಂಖ್ಯೆಯೂ ಅತೀ ಹೆಚ್ಚಾಗಿದ್ದು ಅರಣ್ಯ ಮಾತ್ರ ಕಡಿಮೆ ಆಗುತ್ತಿದೆ. ಮೇವಿನ ಕೊರತೆಯಿಂದಾಗಿ ಆನೆಗಳು ನಿತ್ಯ ಊರಿನೊಳಗೆ ದಾಂಗುಡಿ ಇಡುತ್ತಿವೆ. ಅರಣ್ಯ ಇಲಾಖೆ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಿ ತೆರವುಗೊಳಿಸಿ ಆನೆಗಳ ಆವಾಸಸ್ಥಳವನ್ನು ಅವುಗಳಿಗೆ ಒದಗಿಸಿಕೊಡಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com