ಮೋದಿ ಮನ್‌ ಕೀ ಬಾತ್‌ ವಿರೋಧಿಸಿ ರಾಜ್ಯಾದ್ಯಂತ ತಟ್ಟೆ ಬಡಿದು ಪ್ರತಿಭಟನೆ

ಕೇಂದ್ರ ಸರ್ಕಾರ ನೂತನ ಕಾಯ್ದೆಗಳಿಂದ ರೈತರು ಬೀದಿಗೆ ಬರುವ ದಿನಗಳು ದೂರವಿಲ್ಲ. ದೇಶದಲ್ಲಿ ಬಡತನ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಉದ್ಯೋಗ ಸಿಗುತ್ತಿಲ್ಲ, ಇಂತಹ ಸಮಸ್ಯೆಗಳ ಬಗ್ಗೆ ಮಾತಾಡದ ಮೋದಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಬೊಗಳೆ ಬಿಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಮೋದಿ ಮನ್‌ ಕೀ ಬಾತ್‌ ವಿರೋಧಿಸಿ ರಾಜ್ಯಾದ್ಯಂತ ತಟ್ಟೆ ಬಡಿದು ಪ್ರತಿಭಟನೆ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ತೀವ್ರ ಹೋರಾಟ ನಡೆಸುತ್ತಿರುವ ರೈತರ ಬಗ್ಗೆ ತುಟಿ ಬಿಚ್ಚದ ಪ್ರಧಾನಿ ನರೇಂದ್ರ ಮೋದಿಯವರು ಮನ್‌ ಕೀ ಬಾತ್‌ ಕಾರ್ಯಕ್ರಮ ನಡೆಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ದಲಿತ, ಕಾರ್ಮಿಕ, ರೈತ ಹೋರಾಟಗಾರರು ತಟ್ಟೆ ಬಡಿದು ಪ್ರತಿಭಟನೆ ನಡೆಸಿದರು.

ದೇಶದಲ್ಲಿ ಕೊರೋನಾ ತೀವ್ರವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಮೋದಿ ತಟ್ಟೆ ಬಡಿಯುವಂತೆ ಕರೆ ನೀಡಿದ್ದರು. ಈಗ ಅದೇ ಮಾದರಿ ಮೋದಿಯವರ ಮನ್‌ ಕೀ ಬಾತ್‌ ವಿರುದ್ಧ ತಟ್ಟೆ ಬಡಿದು ಪ್ರತಿಭಟನೆ ನಡೆಸುವಂತೆ ರೈತರು ಕರೆ ನೀಡಿದ್ದರು. ರೈತರ ಕರೆಗೆ ಓಗೊಟ್ಟ ಕೂಲಿ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ-ಯುವಜನ ಮತ್ತು ಜನಪರ ಸಂಘಟನೆಗಳ ಮುಖಂಡರು ಪ್ರಧಾನಿ ಮೋದಿಯವರ ಮನ್‌ ಕೀ ಬಾತ್‌ ಭಾಷಣದ ವೇಳೆ ತಟ್ಟೆ ಬಡಿದು ಪ್ರತಿಭಟಿಸಿದರು.ರಾಜ್ಯದ ಪ್ರತಿ ಜಿಲ್ಲೆಯಲ್ಲೂ ನೂರಾರು ಸಂಖ್ಯೆಯಲ್ಲಿ ಜನ ಸೇರಿ ಹೀಗೆ ಪ್ರತಿಭಟನೆ ಮಾಡಿದರು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸಿ ಮೋದಿಯವರ ಮನ್‌ ಕೀ ಬಾತ್‌ ಭಾಷಣ ವಿರೋಧಿಸಿ ತಟ್ಟೆ ಬಡಿಯುವ ಚಳುವಳಿ ನಡೆಸಲಾಗಿದೆ. ಇನ್ನು, ಪ್ರತಿಭಟನೆ ವೇಳೆ ಮಾತಾಡಿರುವ ಸಂಘಟಕರು, "ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಚ್ಯುತಿ ತರುವಂತಹ ಕೆಲಸ ಮಾಡಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧ ನಡೆಯುತ್ತಿದ್ದಾರೆ. ದೇಶದ ಕಾನೂನುಗಳನ್ನು ಧಿಕ್ಕರಿಸುತ್ತಿರುವ ಮೋದಿಗೆ ನಾಚಿಕೆಯಾಗಬೇಕು” ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಕೈಗಾರಿಕಾ ಕ್ಷೇತ್ರವೂ ಹೂಡಿಕೆಯಿಲ್ಲದೇ ಬಡವಾಗಿದೆ. ಅಲ್ಲಿ ಹೂಡಿಕೆ ಮಾಡಬೇಕಾದ ಮುಕೇಶ್‌ ಅಂಬಾನಿ ಮತ್ತು ಗೌತಮ್‌ ಅದಾನಿ ಕಣ್ಣೀಗ ಕೃಷಿ ಕ್ಷೇತ್ರದ ಮೇಲೆ ಬಿದ್ದಿದೆ. ರೈತರಿಗೆ ಅಲ್ಪಸ್ವಲ್ಪ ಲಾಭ ಬರುತ್ತಿರುವ ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಕಾರ್ಪೋರೇಟ್ ಕುಳಗಳಿಗೆ ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ನೂತನ ಕಾಯ್ದೆಗಳಿಂದ ರೈತರು ಬೀದಿಗೆ ಬರುವ ದಿನಗಳು ದೂರವಿಲ್ಲ. ದೇಶದಲ್ಲಿ ಬಡತನ ಹೆಚ್ಚುತ್ತಿದೆ. ನಿರುದ್ಯೋಗ ಸಮಸ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಉದ್ಯೋಗ ಸಿಗುತ್ತಿಲ್ಲ, ಇಂತಹ ಸಮಸ್ಯೆಗಳ ಬಗ್ಗೆ ಮಾತಾಡದ ಮೋದಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಬೊಗಳೆ ಬಿಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಇದುವರೆಗೆ ನಡೆದ 6 ಸುತ್ತಿನ ಸಭೆಗಳು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಅನೌಪಚಾರಿಕ ಮಾತುಕತೆಗಳೆಲ್ಲವೂ ವಿಫಲವಾಗಿವೆ. ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆದಿದ್ದು. ಒಂದು ತಿಂಗಳು ಪೂರೈಸಿದೆ. ಪ್ರತಿಭಟನೆಯನ್ನು ತೀವ್ರಗೊಳಿಸಿರುವ ರೈತರು ಹರಿಯಾಣದ ಎಲ್ಲಾ ಟೋಲ್ ಗಳಲ್ಲಿ ಶುಲ್ಕ ಸಂಗ್ರಹಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯೂ ಆಗದಂತೆ, ಸರ್ಕಾರಕ್ಕೆ ಶುಲ್ಕ ಸಿಗಬಾರದಂತೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶ ಹೊಂದಿದ್ದಾರೆ.ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್, ವಾಣಿಜ್ಯ ವ್ಯವಹಾರಗಳ ಸಂಪುಟ ದರ್ಜೆಯ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆಯ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಪ್ರತಿನಿಧಿಗಳ‌ ನಡುವೆ ಈವರೆಗೆ 5 ಸಭೆಗಳು ನಡೆದಿವೆ. ಅಮಿತ್ ಶಾ ರೈತ ಸಂಘಟನೆಗಳ 13 ಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಆದರೆ ಪ್ರಭಾವಿ ಅಮಿತ್ ಶಾ ಆಗಲಿ, ಇತರೆ ಕೇಂದ್ರ ಸಚಿವರಾಗಲಿ ರೈತರನ್ನು ಮನವೊಲಿಸಲು ಸಫಲರಾಗಿಲ್ಲ.

ಸದ್ಯ ಮಾತುಕತೆಯಿಂದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಕ್ಷೀಣಿಸಿದೆ. ಹೀಗಾಗಿ ರೈತರು ಪ್ರತಿಭಟನೆ ಮುಂದುವರೆಸುತ್ತಿದ್ದಾರೆ. ದೆಹಲಿ ಚಲೋ, ಹೆದ್ದಾರಿ ತಡೆ, ಟೋಲ್ ಫ್ಲಾಜಾಗಳ ಬಂದ್, ಬಿಜೆಪಿ ನಾಯಕರ ಮನೆ ಮುಂದೆ ಮುಷ್ಕರ, ಭಾರತ್ ಬಂದ್, ಉಪವಾಸ ಸತ್ಯಾಗ್ರಹಗಳೆಲ್ಲವನ್ನೂ ಮಾಡಿರುವ ರೈತರು ಮುಂದೆ ಯಾವ ರೀತಿಯ ಪ್ರತಿಭಟನೆ ನಡೆಸುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com