ರೂಪಾ, ನಿಂಬಾಲ್ಕರ್‌ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾದ ಸುರಕ್ಷ ನಗರ ಟೆಂಡರ್

ಸುರಕ್ಷ ನಗರದ ಟೆಂಡರ್ ವಿಚಾರವಾಗಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಮಧ್ಯೆ ಜಟಾಪಟಿ ಈಗ ಬೇರೆಯದ್ದೇ ಮಜಲು ತಲುಪಿದೆ
ರೂಪಾ, ನಿಂಬಾಲ್ಕರ್‌ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾದ ಸುರಕ್ಷ ನಗರ ಟೆಂಡರ್

ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗಾಗಿ ಮೀಸಲಿಟ್ಟಿರುವ ‘ನಿರ್ಭಯಾ ನಿಧಿ’ ಯೋಜನೆಯಡಿ ₹ 612 ಕೋಟಿ ವೆಚ್ಚದಲ್ಲಿ ‘ಸುರಕ್ಷ ನಗರ’ ಕೆಲಸದ ಟೆಂಡರ್ ವಿಚಾರವಾಗಿ ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ ಹೇಮಂತ್ ನಿಂಬಾಳ್ಕರ್ ಹಾಗೂ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ ಮಧ್ಯೆ ಜಟಾಪಟಿ ಈಗ ಬೇರೆಯದ್ದೇ ಮಜಲು ತಲುಪಿದೆ.

ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ಡಿ. ರೂಪಾ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹೇಮಂತ್‌ ನಿಂಬಾಳ್ಕರ್, ಮುಖ್ಯ ಕಾರ್ಯದರ್ಶಿ ಅವರಿಗೆ ಡಿ. 7ರಂದು ಪತ್ರ ಬರೆದಿದ್ದರು. ಈ ಪತ್ರಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಡಿ. ರೂಪಾ, ‘ಸರ್ಕಾರದ ಹಣ ಉಳಿಸಲು ಪ್ರಯತ್ನಿಸಿದ್ದಕ್ಕೆ ದುಷ್ಟರ ಕೂಟ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಜನರ ಹಿತಾಸಕ್ತಿ ಹಾಗೂ ಅವರಿಗಾಗಿ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಾಮಾಜಿಕ ಜಾಲತಾಣದಲ್ಲಿ ರೂಪಾ ಅವರು ಮಾಡಿದ ಆರೋಪಗಳಿಗೆ ಮಾಧ್ಯಮಗೋಷ್ಟಿ ಮೂಲಕ ಪ್ರತಿಕ್ರಿಯಿಸಿದ ನಿಂಬಾಲ್ಕರ್‌, ಬೆಂಗಳೂರಿನಲ್ಲಿ ನಿರ್ಭಯಾ ಹೆಸರಿನ ಸೇಫ್ ಸಿಟಿ ಪ್ರಾಜೆಕ್ಟ್ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಊಹೆಗಳು ಹರಿದಾಡುತ್ತಿವೆ. ಟೆಂಡರ್ ಪ್ರಕ್ರಿಯೆ ಅನ್ ಫೇರ್ ಎಂದು ಟೀಕಿಸುತ್ತಿದ್ದಾರೆ. ಆದರೆ ಸರ್ಕಾರವು ಅಪೆಕ್ಸ್ ಕಮಿಟಿ (ಉನ್ನತ ಸಮಿತಿ), ಟೆಂಡರ್ ಇನ್​ವೈಟಿಂಗ್ (ಟೆಂಡರ್ ಆಹ್ವಾನ), ಟೆಂಡರ್ ಸ್ಕ್ರೂಟನಿಂಗ್ (ಟೆಂಡರ್ ದಾಖಲೆಗಳ ಪರಾಮರ್ಶೆ) ಎಂಬ ಮೂರು ಸಮಿತಿಗಳನ್ನು ರಚಿಸಿತ್ತು.

BEL ಬಿಡ್ಡಿಂಗ್‌ನಲ್ಲಿ ಭಾಗಿಯಾಗಿರಲಿಲ್ಲ. ಕಾಲ್ ಒನ್‌ನಲ್ಲಿ ಬಿಇಎಲ್‌ ಟೆಂಡರ್ ಹಾಕಿರಲಿಲ್ಲ. ಬಿಡ್ಡಿಂಗ್‌ನಲ್ಲಿ ಮೂರು ಕಂಪನಿಗಳು ಭಾಗಿಯಾಗಿದ್ದವು. ಆ ಕಂಪನಿಗಳು ಮೊದಲ ಹಂತದಲ್ಲಿ ಕ್ವಾಲಿಫೈ ಆಗಿರಲಿಲ್ಲ. ಬಳಿಕ ಜೂನ್​ 20ರಂದು 3 ಕಂಪನಿಗಳು ಕ್ವಾಲಿಫೈ ಆಗಿದ್ದವು ಎಂದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಿ.ಸಿ.ಟಿ.ವಿ ಅಳವಡಿಕೆ ಹಾಗೂ ತುರ್ತು ಸಹಾಯವಾಣಿ ನಿಯಂತ್ರಣ ಕೊಠಡಿ ಸ್ಥಾಪಿಸಲು ನಿರ್ಭಯಾ ನಿಧಿಯಡಿ ಹಣ ಮೀಸಲಿಡಲಾಗಿದೆ. ಆ ಪೈಕಿ ₹ 612 ಕೋಟಿ ಮೊತ್ತದ ಕೆಲಸವನ್ನು ಗುತ್ತಿಗೆ ನೀಡುವ ಸಂಬಂಧ ಪ್ರಕ್ರಿಯೆ ಆರಂಭಿಸಲಾಗಿತ್ತು. ಗುತ್ತಿಗೆ ಪ್ರಕ್ರಿಯೆಗೆ ಸಂಬಂಧಿಸಿದ ತಾಂತ್ರಿಕ ದಾಖಲೆಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ‘E&Y’ ಕಂಪನಿಗೆ ಹೆಚ್ಚುವರಿ ಪೊಲೀಸ್ ಕಮಿಷನರ್‌ (ಆಡಳಿತ) ಹೇಮಂತ್ ನಿಂಬಾಳ್ಕರ್ ನೇತೃತ್ವದ ಟೆಂಡರ್ ಆಹ್ವಾನ ಸಮಿತಿ ಹೇಳಿತ್ತು. ಕಂಪನಿಯಿಂದ ತಾಂತ್ರಿಕ ವರದಿ ಪಡೆದಿದ್ದ ಸಮಿತಿ, ನವೆಂಬರ್ 14ರಂದು ಟೆಂಡರ್ ಹರಾಜಿಗೆ ಸಾರ್ವಜನಿಕ ಪ್ರಕಟಣೆ ನೀಡಲು ಮುಂದಾಗಿತ್ತು.

ಆದರೆ, ನವೆಂಬರ್ 9ರಂದೇ ‘E&Y’ ಕಂಪನಿ ಅಧಿಕಾರಿಗಳಿಗೆ ಡಿ. ರೂಪಾ ಅವರು ಕರೆ ಮಾಡಿ ಸಾರ್ವಜನಿಕ ಪ್ರಕಟಣೆಗೂ ಮುನ್ನವೇ ತಾಂತ್ರಿಕ ವರದಿ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು ಎಂಬ ಆರೋಪ ಇದೀಗ ಕೇಳಿಬಂದಿದೆ.

‘ರೂಪಾ ಅವರು ಕರೆ ಮಾಡಿದ್ದ ಸಂಗತಿಯನ್ನು ಕಂಪನಿ ಪ್ರತಿನಿಧಿಗಳು, ಟೆಂಡರ್ ಆಹ್ವಾನ ಸಮಿತಿ ಗಮನಕ್ಕೆ ತಂದಿದ್ದಾರೆ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಟೆಂಡರ್ ಪ್ರಕ್ರಿಯೆಯಲ್ಲಿ ರೂಪಾ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಹೇಮಂತ್ ನಿಂಬಾಳ್ಕರ್, ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com