ಕೆಪಿಸಿಸಿ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ಆನ್‌ಲೈನ್‌ ಚುನಾವಣೆ ಸಾಧ್ಯತೆ!

ಕೆಪಿಸಿಸಿ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ಮಿಥುನ್‌ ರೈ, ಮಹಮ್ಮದ್‌ ನಲಪಾಡ್‌, ರಕ್ಷಾ ರಾಮಯ್ಯ, ಮಂಜುನಾಥ್‌ ಗೌಡ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ.
ಕೆಪಿಸಿಸಿ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ಆನ್‌ಲೈನ್‌ ಚುನಾವಣೆ ಸಾಧ್ಯತೆ!

ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷದ ಕೆಪಿಸಿಸಿ ಯುವ ಘಟಕದ ಪದಾಧಿಕಾರಿಗಳ ಚುನಾವಣೆಯನ್ನು ಆನ್ ಲೈನ್ ನಲ್ಲಿ ನಡೆಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ. ಜನವರಿ ಎರಡನೇ ವಾರದ ಮುಂಚಿತವಾಗಿ ಚುನಾವಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

2017 ರಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಸವನ ಗೌಡ ಬಾದರ್ಲಿ ಅವರ ಅಧಿಕಾರವಧಿ ಮಾರ್ಚ್ 2020 ರಲ್ಲಿ ಪೂರ್ಣಗೊಂಡ ಬಳಿಕ ಈ ಹುದ್ದೆ ಖಾಲಿಯಿದೆ. ಮಾರ್ಚ್ ತಿಂಗಳಲ್ಲಿ ಕೆಪಿಸಿಸಿಯ ಅಧ್ಯಕ್ಷರನ್ನಾಗಿ ಡಿಕೆ ಶಿವಕುಮಾರ್ ಅವರನ್ನು ಎಐಸಿಸಿ ನೇಮಕ ಮಾಡಿತ್ತು. ಆದರೆ, ಇತರ ಪದಾಧಿಕಾರಿಗಳನ್ನು ನೇಮಕ ಮಾಡಿರಲಿಲ್ಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೀಗ, ಈ ಖಾಲಿ ಇರುವ ಹುದ್ದೆಗಳಿಗೆ ಚುನಾವಣೆ ನಡೆಸಬೇಕೆ ಅಥವಾ ನಾಮನಿರ್ದೇಶನಗೊಳಿಸಬೇಕೆ ಎಂಬುವುದು ಕಾಂಗ್ರೆಸ್‌ ಉನ್ನತ ನಾಯಕರು ಚರ್ಚಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೆಲವು ನಾಯಕರು ಕೆಪಿಸಿಸಿ ಯುವ ಅಧ್ಯಕ್ಷರನ್ನು ಚುನಾವಣೆಯ ಬದಲು ನಾಮನಿರ್ದೇಶನ ಮಾಡಲು ಬಯಸಿದರೆ, ರಾಹುಲ್ ಗಾಂಧಿ ಚುನಾವಣೆ ನಡೆಸಿ ಆಯ್ಕೆ ಮಾಡುವಲ್ಲಿ ಒಲವು ತೋರಿದ್ದಾರೆ.

ರಾಜ್ಯದಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು 6.5 ಲಕ್ಷ ಕಾಂಗ್ರೆಸ್‌ ಕಾರ್ಯಕರ್ತ ಮತದಾರರು ಅರ್ಹರಿದ್ದಾರೆ ಎನ್ನಲಾಗಿದೆ. ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಹೆಚ್. ಎಸ್. ಮಂಜುನಾಥ್, ಶಾಸಕ ಎನ್ ಎ ಹಾರಿಸ್ ಪುತ್ರ ಮಹಮ್ಮದ್‌ ನಲಪಾಡ್, ಮಾಜಿ ಸಚಿವ ಎಂಆರ್ ಸೀತಾರಾಮ್ ಅವರ ಪುತ್ರ ರಕ್ಷಾ ರಾಮಯ್ಯ, ದಕ್ಷಿಣ ಕನ್ನಡ‌ ಲೋಕಸಭಾ ಅಭ್ಯರ್ಥಿಯಾಗಿ 2019ರ ಚುನಾವಣೆ ಸ್ಪರ್ಧಿಸಿದ್ದ ಮಿಥುನ್ ರೈ ಮತ್ತಿತರರು ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಗಳಾಗಿದ್ದಾರೆ. ಮಂಜುನಾಥ್ ಗೌಡ ಹಾಗೂ ಮಿಥುನ್‌ ರೈ ಡಿಕೆ ಶಿವಕುಮಾರ್ ಆಪ್ತರಾಗಿದ್ದರೆ, ಮಹಮ್ಮದ್‌ ನಲಪಾಡ್‌ ಹಾರಿಸ್‌ ಹಾಗೂ ರಕ್ಷಾ ರಾಮಯ್ಯರಿಗೆ ಕೌಟುಂಬಿಕ ರಾಜಕಾರಣದ ಹಿನ್ನೆಲೆಯಿದೆ.

ಆಕಾಂಕ್ಷಿಗಳನ್ನು ಡಿಸೆಂಬರ್ 28 ರಂದು ನವದೆಹಲಿಗೆ ಸಂದರ್ಶನಕ್ಕಾಗಿ ಕರೆಯಲಾಗಿದೆ. ಎಐಸಿಸಿ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಅವರನ್ನೊಳಗೊಂಡ ಸಮಿತಿ ಎದುರು ಸಂದರ್ಶವನ್ನು ಎದುರಿಸಬೇಕಾಗಲಿದೆ. ಆಕಾಂಕ್ಷಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಚುನಾವಣೆ ನಡೆಸಬೇಕೆ ಅಥವಾ ನಾಮನಿರ್ದೇಶನ ಮಾಡಬಹುದೇ ಎಂಬುದರ ಬಗ್ಗೆ ನಿರ್ಧಾರವಾಗಲಿದೆ ಎಂದು ಮೂಲಗಳು ಹೇಳಿವೆ.

ಪಕ್ಷದ ಇತರೆ ಮೂಲಗಳ ಪ್ರಕಾರ, ಈಗಾಗಲೇ ಕೆಲವು ಅಭ್ಯರ್ಥಿಗಳ ಸಂದರ್ಶನ ನಡೆದಿದ್ದು ಚುನಾವಣೆ ಇಲ್ಲದೆ ನಾಮ ನಿರ್ದೇಶನಗೊಳ್ಳುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಇನ್ನು ಚುನಾವಣೆಯ ಮುಖಾಂತರವೇ ಆಯ್ಕೆ ನಡೆಯಬೇಕಿದ್ದಲ್ಲಿ, ಎಐಸಿಸಿಯು ಚುನಾವಣೆಗೆ ಆನ್‌ಲೈನ್ ಮೊರೆ ಹೋಗಲಿದೆ.‌ ಇತ್ತೀಚಿಗೆ ತೆಲಂಗಾಣ ಯುವ ಕಾಂಗ್ರೆಸ್ ಗೂ ಆನ್‌ಲೈನ್‌ ಮೂಲಕ ಚುನಾವಣೆ ನಡೆದಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com