ಮಂಜಿನ ನಗರಿಯಲ್ಲಿ ಮತ್ತೊಂದು ಪ್ರವಾಸೀ ಆಕರ್ಷಣೆ ʼಕೂರ್ಗ್ ವಿಲೇಜ್ʼ

ಕೂರ್ಗ್ ವಿಲೇಜ್ ಸುಂದರ ವಾತಾವರಣದ ಜೊತೆಗೆ ಮೂರು ಕಡೆಗಳಲ್ಲಿ ವಿವಿಧ ಇಲಾಖೆಗಳ 15 ಶಾಪಿಂಗ್ ಸ್ಟಾಲ್‍ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮೂರು ಪ್ರತ್ಯೇಕ ಕಟ್ಟಡದಲ್ಲಿ ಮಳಿಗೆಗಳು ಸಿದ್ಧಗೊಂಡಿದೆ.
ಮಂಜಿನ ನಗರಿಯಲ್ಲಿ ಮತ್ತೊಂದು ಪ್ರವಾಸೀ ಆಕರ್ಷಣೆ ʼಕೂರ್ಗ್ ವಿಲೇಜ್ʼ

ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಪುಟ್ಟ ಕೊಡಗು ಜಿಲ್ಲೆಯಲ್ಲಿ ಈಗಿರುವ ಪ್ರವಾಸಿ ಆಕರ್ಷಣೆಗಳ ಜತೆಗೆ ಮತ್ತೊಂದು ತಾಣ ಶೀಘ್ರದಲ್ಲೆ ಸೇರ್ಪಡೆಗೊಳ್ಳಲಿದೆ. ಸ್ವಚ್ಛಂದ ವಾತಾವರಣ ನಡುವೆ, ತಂಪಾದ ಗಾಳಿ ಪ್ರವಾಸಿಗರಿಗೆ ಮುದ ನೀಡಿದರೆ, ಕೊಡಗಿನ ಕೃಷಿ ಉತ್ಪನ್ನಗಳು ಒಂದೆ ಸೂರಿನಡಿ ದೊರಕಲಿದೆ. ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಜನರನ್ನು ಆಕರ್ಷಿಸುವ ಮಂಜಿನ ನಗರಿಯ ಪ್ರಮುಖ ಪ್ರವಾಸಿ ತಾಣ ರಾಜಾಸೀಟ್ ಸಮೀಪದ ಕುಂದುರುಮೊಟ್ಟೆ ದೇವಾಲಯದ ಮುಂಭಾಗ ದಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಹೊಸ ಕೂರ್ಗ್‌ ವಿಲೇಜ್‌ ಎಂಬ ಪ್ರವಾಸಿ ತಾಣ ಶೀಘ್ರದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ. ತೋಟಗಾರಿಕೆ ಇಲಾಖೆಯ ನರ್ಸರಿ ಇದ್ದ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಯೋಜನೆ ರೂಪಿಸಿ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಪೂರ್ಣಗೊಳಿಸಿದೆ. ಒಟ್ಟು 98 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಪ್ರವಾಸಿ ತಾಣ ರೂಪುಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೂರ್ಗ್ ವಿಲೇಜ್ ಸುಂದರ ವಾತಾವರಣದ ಜೊತೆಗೆ ಮೂರು ಕಡೆಗಳಲ್ಲಿ ವಿವಿಧ ಇಲಾಖೆಗಳ 15 ಶಾಪಿಂಗ್ ಸ್ಟಾಲ್‍ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಮೂರು ಪ್ರತ್ಯೇಕ ಕಟ್ಟಡದಲ್ಲಿ ಮಳಿಗೆಗಳು ಸಿದ್ಧಗೊಂಡಿದೆ. ಹಾಪ್ ಕಾಮ್ಸ್, ಪ್ರವಾಸೋದ್ಯಮ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ನೆರೆಸಂತ್ರಸ್ತರು ತಯಾರಿಸಿದ ಮಸಾಲ ಪದಾರ್ಥ ಹಾಗೂ ಕೊಡಗಿನ ಜೇನು, ವೈನ್, ಕರಿಮೆಣಸು, ಏಲಕ್ಕಿ, ಕಾಫಿ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ರಾಜಾಸೀಟ್‍ನಲ್ಲಿರುವ ಗಿಡಗಳಿಗೆ ಹಾಗೂ ಅಲ್ಲಿನ ಬಳಕೆಗೆ ನೀರು ಪೂರೈಸುವ ಕೆರೆ ಕೂರ್ಗ್ ವಿಲೇಜ್‍ನಲ್ಲಿದೆ. ಇದನ್ನು ಕೂಡ ಅಭಿವೃದ್ಧಿಗೊಳಿಸಿದ್ದು, ಕೆರೆ ಶುಚಿಗೊಳಿಸಿ ಸುತ್ತ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ.

ಪ್ರವಾಸಿಗರಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು, ವಿವಿಧ ಜಾತಿಯ ಗಿಡಗಳನ್ನು ನೆಡಲಾಗಿದೆ. ಆಕರ್ಷಕ ದೀಪದ ವ್ಯವಸ್ಥೆ ಮಾಡಿದ್ದು, ಸಂಜೆ ವೇಳೆಯಲ್ಲಿ ವಾಯುವಿಹಾರ ಮಾಡಲು ಸೂಕ್ತ ಜಾಗವಾಗಿದೆ. ಅದಲ್ಲದೆ, ಪಾಳು ಬಿದ್ದ ಜಾಗವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ, ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಬೃಹತ್ ಮರಗಳಿದ್ದು ತಂಪಾದ ಗಾಳಿ ಬೀಸುತ್ತದೆ. ಜೊತೆಗೆ ವಾಹನಕ್ಕೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ‘ಕೂರ್ಗ್ ವಿಲೇಜ್’ ಯೋಜನೆಗೆ ಆರಂಭದಲ್ಲಿ ವಿಘ್ನ ಎದುರಾಗಿತ್ತು. ಇದರ ನಡುವೆ ಸುಂದರ ತಾಣ ತಲೆ ಎತ್ತಿದೆ. ಸಾಮಾಜಿಕ ಕಾರ್ಯಕರ್ತ ಜಿ.ಟಿ ಹರೀಶ್ ಈ ಯೋಜನೆ ಪರಿಸರ ನಾಶ ಮಾಡುತ್ತದೆ ಎಂದು ವಿರೋಧಿಸಿ ನ್ಯಾಯಾಂಗ ಹೋರಾಟ ಮಾಡಿದ್ದರು. ಮಾಜಿ ಸಚಿವ ಎಂ.ಸಿ ನಾಣಯ್ಯ ಕೂಡ ಈ ಯೋಜನೆಗೆ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದರು. ಈ ಯೋಜನೆಯು ಪರಿಸರಕ್ಕೆ ಮಾರಕವಾಗಿದ್ದು ಇದರಿಂದ ಜಲಮೂಲಕ್ಕೆ ಧಕ್ಕೆ ಉಂಟಾಗುತ್ತದೆ. ಟ್ರಾಫಿಕ್, ತ್ಯಾಜ್ಯ ವಿಲೇವಾರಿ ಸಮಸ್ಯೆ ಉಲ್ಭಣವಾಗಿ ಸ್ಥಳೀಯರಿಗೆ ಕಿರಿಕಿರಿ ಸೃಷ್ಠಿಯಾಗುತ್ತದೆ. ಜಿಲ್ಲಾಡಳಿತ ಜನಾಭಿಪ್ರಾಯ ಸಂಗ್ರಹಿಸದೆ ಯೋಜನೆ ರೂಪಿಸಿದೆ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದರು.

ಬಳಿಕ ಜಿಲ್ಲಾಧಿಕಾರಿ ಯೋಜನೆಯನ್ನು ಕೈಬಿಡುವುದಿಲ್ಲ. ಪರಿಸರಕ್ಕೆ ಪೂರಕವಾಗಿ ಯೋಜನೆ ಸಿದ್ಧವಾಗಿದೆ. ಜಾಗದಲ್ಲಿ ಯಾವುದೇ ಮರ ಹನನ ಆಗಿಲ್ಲ, ಭೂಮಿಯನ್ನು ಅಗೆದು ಕೆಲಸ ಮಾಡಿಲ್ಲ, ಪ್ರವಾಸೋದ್ಯಮ ಮತ್ತು ಸೌಂದರ್ಯೀಕರಣಕ್ಕೆ ಆದ್ಯತೆ ನೀಡಿ ಯೋಜನೆ ರೂಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ನ್ಯಾಯಾಲಯದಲ್ಲಿದ್ದ ಪ್ರಕರಣ ಇತ್ಯರ್ಥವಾಗಿದೆ. ಕೊರೊನಾ ಪರಿಸ್ಥಿತಿ ಹಿನ್ನೆಲೆ ಕೂರ್ಗ್ ವಿಲೇಜ್ ಉದ್ಘಾಟನೆ ತಡವಾಯಿತು. ಇದೀಗ ಗ್ರಾಮ ಪಂಚಾಯ್ತಿ ಚುನಾವಣೆಯಿಂದ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಹೊಸ ವರ್ಷಕ್ಕೆ ಪ್ರವಾಸಿ ತಾಣ ಪ್ರವಾಸಿಗರಿಗೆ ಮುಕ್ತವಾಗಲಿದೆ ಎಂದು ಪ್ರವಾಸೋದ್ಯೋಮ ಇಲಾಖೆ ಪ್ರಭಾರ ಉಪನಿರ್ದೇಶಕ ಈಶ್ವರ್ ಕುಮಾರ್ ಖಂಡು ಮಾಹಿತಿ ನೀಡಿದ್ದಾರೆ.

ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದ್ದು, ವಾರಕ್ಕೆ ಮೂರು ಬಾರಿ ಕಾರ್ಮಿಕರು ಸ್ವಚ್ಛ ಕಾರ್ಯ ನಡೆಸುತ್ತಿದ್ದಾರೆ. ವಿವಿಧ ಇಲಾಖೆಗೆ ಮಳಿಗೆಗಳ ಜವಾಬ್ದಾರಿ ನೀಡಲಾಗುತ್ತದೆ. ಆಯಾ ಇಲಾಖೆ ನಿಯಮಾನುಸಾರವಾಗಿ ಮಳಿಗೆಗಳನ್ನು ಬಾಡಿಗೆಗೆ ನೀಡಬಹುದು ಅಥವಾ ಇಲಾಖೆಯೆ ಬಳಸಿಕೊಳ್ಳಬಹುದಾಗಿದೆ. ಯಾವುದೇ ರೀತಿಯ ಹೊಟೇಲ್, ಕ್ಯಾಂಟಿನ್, ಫಾಸ್ಟ್‍ಫುಡ್ ಸೆಂಟರ್ ತೆರೆಯಲು ಅವಕಾಶ ಇರುವುದಿಲ್ಲ. ಕೇವಲ ಕೊಡಗಿನ ಉತ್ಪನ್ನ ಮಾರಾಟ ಮತ್ತು ಪ್ರದರ್ಶನಕ್ಕೆ ಅವಕಾಶ ಇರುತ್ತದೆ. ಕೊರೊನಾ ಪರಿಸ್ಥಿತಿ ಹಾಗೂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಉದ್ಘಾಟನೆ ತಡವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಭೆ ನಡೆಸಲಿದ್ದಾರೆ. ಆ ಬಳಿಕ ದಿನಾಂಕ ನಿಗದಿಪಡಿಸಲಾಗುವುದು. ಜನವರಿ ಅಂತ್ಯದೊಳಗೆ ಕೂರ್ಗ್ ವಿಲೇಜ್ ಪ್ರವಾಸಿಗರಿಗೆ ಮುಕ್ತವಾಗಲಿದೆ. ಪ್ರವಾಸಿ ತಾಣವನ್ನು ಉತ್ತಮವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದೂ ಖಂಡೂ ಅವರು ತಿಳಿಸಿದರು.

ಕೊರೋನ ಕಾರಣದಿಂದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ತೀವ್ರ ಪೆಟ್ಟು ಬಿದ್ದಿದ್ದು ಇದೀಗ ಚೇತರಿಕೆ ಕಾಣುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಉದ್ಯಮಿಗಳು ನಿರೀಕ್ಷಿಸಿದ್ದಾರೆ. ಆದರೆ ಪ್ರವಾಸಿಗರು ಮಾಡುವ ಮಾಲಿನ್ಯ ತಡೆಗಟ್ಟುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ. ಎಷ್ಟೇ ಎಚ್ಚರಿಕೆಯ ಬೋರ್ಡ್‌ ಗಳನ್ನು ಅಳವಡಿಸಿದರೂ ಪ್ರವಾಸಿಗರು ತಮ್ಮ ವೇಸ್ಟ್‌ ನ್ನು ರಸ್ತೆ ಬದಿಯಲ್ಲೆ ಎಸೆದು ಹೋಗುತ್ತಿರುವುದನ್ನು ಸ್ಥಳಿಯರು ಪತ್ತೆ ಹಚ್ಚಿ ಅವರಿಂದಲೇ ವಾಪಾಸ್‌ ಹೆಕ್ಕಿಸಿದ್ದು ತಿಂಗಳ ಹಿಂದೆ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಈ ಪ್ರವಾಸೀ ಜಿಲ್ಲೆಯನ್ನು ಸ್ವಚ್ಚವಾಗಿಯೇ ಉಳಿಸಿಕೊಳ್ಳಲು ಪ್ರವಾಸಿಗರೂ ಸಹಕರಿಸಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com