ಚರಕ ಸಂಸ್ಥೆಯ ಸಾರ್ವಜನಿಕ ಸ್ಪಷ್ಟನೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು

ಇದೀಗ ಸ್ವತಃ ಚರಕ ಸಂಸ್ಥೆ ಮತ್ತೊಮ್ಮೆ ತನ್ನ ಸ್ಪಷ್ಟನೆಯ ಮೂಲಕ, ಫಲಾನುಭವಿಗಳಿಗೆ ಹಣ ನೀಡಲಾಗಿದೆಯೇ ವಿನಃ ಮನೆಯನ್ನು ನೀಡಿಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಹಾಗಾಗಿ ‘ಪ್ರತಿಧ್ವನಿ’ಯ ವರದಿಯನ್ನು ಈ ಸ್ಪಷ್ಟನೆ ಕೂಡ ಪರೋಕ್ಷವಾಗಿ ದೃಢಪಡಿಸಿದೆ!
ಚರಕ ಸಂಸ್ಥೆಯ ಸಾರ್ವಜನಿಕ ಸ್ಪಷ್ಟನೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಚರಕ ವಿವಿಧೋದ್ದೇಶ ಮಹಿಳಾ ಕೈಗಾರಿಕಾ ಸಹಕಾರ ಸಂಘದ ನೇಕಾರರಿಗೆ ಸರ್ಕಾರದ ನೇಕಾರರ ವಸತಿ ಕಾರ್ಯಾಗಾರ ಯೋಜನೆಯಡಿ ನೀಡಲಾಗಿದ್ದ ಮನೆಗಳು ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಬೆಳವಣಿಗೆಗಳು ಆಗಿವೆ.

ಒಂದು ವಾರದ ಹಿಂದೆ ಈ ಮನೆ ಕಾಣೆಯಾದ ಬಗ್ಗೆ ‘ಪ್ರತಿಧ್ವನಿ’, ‘ಹೆಗ್ಗೋಡಿನ ಚರಕ ನೇಕಾರರ ವಸತಿ ಯೋಜನೆ ಮನೆಗಳು ಕಾಣೆಯಾಗಿವೆ!’ ಎಂಬ ಶೀರ್ಷಿಕೆಯಡಿ ತನಿಖಾ ವರದಿ ಪ್ರಕಟಿಸಿತ್ತು. ಮುಖ್ಯವಾಗಿ ಬಡ ನೇಕಾರ ಮಹಿಳೆಯರಿಗೆ ಸೂರಿನ ಆಸರೆಯಾಗಬೇಕಾದ ಯೋಜನೆಯ ಮನೆಗಳನ್ನು, ಆಯಾ ಫಲಾನುಭವಿಗಳಿಗೇ ನೀಡದೆ, ದೇಸಿ ಸಂಸ್ಥೆ ಬಳಸಿಕೊಂಡಿದೆ. ಹಾಗೆ 38 ಮನೆಗಳನ್ನು ನಿರ್ಮಾಣ ಮಾಡಿದ ಜಾಗ ಕೂಡ ಯೋಜನೆಯ ನಿಯಮಾನುಸಾರ ಫಲಾನುಭವಿಗಳ ಮಾಲೀಕತ್ವದಲ್ಲಿಯೂ ಇಲ್ಲ; ಚರಕ ಸಂಸ್ಥೆಯ ಮಾಲೀಕತ್ವದಲ್ಲಿಯೂ ಇಲ್ಲ. ಆ ಜಾಗದ ಮಾಲೀಕತ್ವ ಪ್ರಸನ್ನ ಅವರೇ ಸಂಸ್ಥಾಪಕ ಟ್ರಸ್ಟಿ ಆಗಿರುವ ದೇಸಿ ಸಂಸ್ಥೆಯ ಹೆಸರಿನಲ್ಲಿದೆ ಎಂಬುದನ್ನು ಮಾಹಿತಿ ಹಕ್ಕಿನಡಿ ಪಡೆದ ದಾಖಲೆ ಸಹಿತ ಬಹಿರಂಗಪಡಿಸಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಇದೀಗ ವಾರದ ಬಳಿಕ ಆ ವರದಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಚರಕ ಸೊಸೈಟಿ ಮತ್ತು ಗ್ರಾಮ ಸೇವಾ ಸಂಘ, “ಸಂಸ್ಥೆಯನ್ನು ತೆಜೋವಧೆ ಮಾಡುವ ಉದ್ದೇಶದಿಂದ ಮಾಡುತ್ತಿರುವ ಅಭಿಯಾನದ ಮುಂದುವರೆದ ಭಾಗವೇ ಇತ್ತೀಚೆಗೆ ಬಂದ ತನಿಖಾ ವರದಿ. ಈ ವರದಿಯಲ್ಲಿ ಮಾಡಿರುವ ಗಂಭೀರವಾದ ಆರೋಪ ಸುಳ್ಳಾಗಿದ್ದು, 2009-10ರ ಕೈಮಗ್ಗ ಮತ್ತು ಜವಳಿ ಇಲಾಖೆಯ, ನೇಕಾರರ ವಸತಿ ಯೋಜನೆಯಡಿಯಲ್ಲಿ ಬಿಡಿಗಾಸನ್ನು ಸಂಸ್ಥೆಗಾಗಿ ಬಳಸಿರುವುದಿಲ್ಲ. ಯೋಜನೆಯ ಅಡಿಯಲ್ಲಿ ಬಂದ ಪೂರ್ತಿ ಹಣವು ಫಲಾನುಭಾವಿಗಳಿಗೆ ಬ್ಯಾಂಕಿನ ಮೂಲಕವೇ ಸಂದಾಯವಾಗಿದೆ” ಎಂದು ಸ್ಪಷ್ಟಪಡಿಸಿದೆ.

ಚರಕ ಸಂಸ್ಥೆಯ ಸಾರ್ವಜನಿಕ ಸ್ಪಷ್ಟನೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
ಕೈಮಗ್ಗದ ಹೆಗ್ಗಳಿಕೆ ಹೆಗ್ಗೋಡಿನ ‘ಚರಕ’ ಗತಿ ತಪ್ಪಲು ಅಸಲೀ ಕಾರಣವೇನು?

ಸತೀಶ್ ಬಿನ್ ರಾಮಪ್ಪ ಎಂಬ ಮಾಜಿ ಚರಕದ ನೇಕಾರರ ಹೇಳಿಕೆಯ ಕುರಿತು ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಸ್ಪಷ್ಟನೆಯಲ್ಲಿ ಹೇಳಲಾಗಿದೆ. ಆದರೆ, ‘ಪ್ರತಿಧ್ವನಿ’, ಸತೀಶ್ ಅವರಿಗೆ ಕರೆ ಮಾಡಿ, ವರದಿಯಲ್ಲಿ ಉಲ್ಲೇಖಿಸಿರುವ ಅವರ ಹೇಳಿಕೆಯನ್ನು ಓದಿ ಹೇಳಿದಾಗ, ಸತೀಶ್, ಅದಷ್ಟನ್ನೂ ತಾವು ಮುಖತಃ ಭೇಟಿಯಾದಾಗ ಹೇಳಿರುವುದಾಗಿ ಒಪ್ಪಿಕೊಂಡಿದ್ದಾರೆ. ತಮಗೆ ಮೂರು ಕಂತಿನಲ್ಲಿ ಬಂದ ಹಣವನ್ನು ಬಾಂಡ್ ಮೂಲಕ ನೀಡಲಾಗಿದೆ ಎಂಬುದನ್ನು ಪುನರುಚ್ಛರಿಸಿದ್ದಾರೆ.

‘ಪ್ರತಿಧ್ವನಿ’ ವರದಿ ಕೂಡ, ಫಲಾನುಭವಿಗಳಿಗೆ ಮಂಜೂರಾದ ಮನೆಗಳನ್ನು ಅವರಿಗೆ ನೀಡುವ ಬದಲು, ಕೇವಲ ಹಣ ನೀಡಲಾಗಿದೆ ಎಂಬುದನ್ನೇ ಪ್ರಮುಖವಾಗಿ ಹೇಳಿತ್ತು.

‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ್ದ ಕೆಲವು ಫಲಾನುಭವಿಗಳು ಕೂಡ ತಮಗೆ ಮನೆಗೆ ಸಂಬಂಧಿಸಿದಂತೆ ಹಣ ಬಂದಿದೆ. ಮನೆ ಸಿಕ್ಕಿಲ್ಲ. ಆ ಮನೆಗಳನ್ನು ಸಂಸ್ಥೆಯೇ ಬಳಸಿಕೊಳ್ಳುತ್ತಿದೆ ಎಂದೇ ಹೇಳಿದ್ದನ್ನು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈಗಲೂ ಸತೀಶ್ ತಮ್ಮ ಹೇಳಿಕೆಯಲ್ಲಿ, ಇದೇ ಅಂಶವನ್ನು ಪುನರುಚ್ಛರಿಸಿದ್ದು, ತಮಗೆ ಮನೆ ಸಿಕ್ಕಿಲ್ಲ; ಬದಲಾಗಿ ಹಣ ನೀಡಲಾಗಿದೆ. ಮನೆಯನ್ನು ಸಂಸ್ಥೆಯವರೇ ಬಳಸಿಕೊಂಡಿದ್ದಾರೆ ಎಂದಿದ್ದಾರೆ.

ಜೊತೆಗೆ ಸ್ಪಷ್ಟನೆಯೊಂದಿಗೆ ಲಗತ್ತಿಸಿರುವ ಸತೀಶ್ ಅವರ ಬ್ಯಾಂಕ್ ಖಾತೆಯ ವಹಿವಾಟು ವಿವರಗಳಲ್ಲಿ ಯೋಜನೆಯ ಅನುದಾನದ ಮೊತ್ತ ಅವರ ಖಾತೆಗೆ ಜಮಾ ಆದ ದಿನಾಂಕಕ್ಕೂ ಮತ್ತು ಮಾಹಿತಿ ಹಕ್ಕಿನಡಿ ಇಲಾಖೆ ನೀಡಿದ ಮಾಹಿತಿಯಲ್ಲಿ ನಮೂದಾಗಿರುವ ಚೆಕ್ ನೀಡಿದ ದಿನಾಂಕಕ್ಕೂ ಬಹುತೇಕ ಒಂದು ವರ್ಷದ ಅಂತರವಿದೆ(ಮೂರನೇ ಕಂತಿನ ಹಣ). ಈ ಅಂಶ ಫಲಾನುಭವಿಗಳ ಹಣಕಾಸಿನ ವಿಷಯದಲ್ಲಿ ಕೂಡ ಎಲ್ಲವೂ ಪಾರದರ್ಶಕವಾಗಿ ನಡೆದಿಲ್ಲ ಎಂಬುದಕ್ಕೆ ಒಂದು ನಿದರ್ಶನ.

ಸ್ಥಳ ಪರಿಶೀಲನೆಗೆ ಹೋದಾಗ ಕೂಡ, ಚರಕದ ಕಾರ್ಯದರ್ಶಿ ರಮೇಶ್ ಅವರೂ, ಕಟ್ಟಲಾಗಿದ್ದ ಕೆಲವು ಮನೆಗಳನ್ನು ತೋರಿಸಿ, ವಸತಿ ಕಾರ್ಯಾಗಾರ ಯೋಜನೆಯಡಿ ನಿರ್ಮಿಸಿದ್ದು ಇದೇ ಕಟ್ಟಡ ಎಂದು ತೋರಿಸಿದ್ದರು ಮತ್ತು ಆ ಫಲಾನುಭವಿಗಳಿಗೆ ಮನೆಯ ಬದಲಾಗಿ ಹಣ ನೀಡಿರುವುದಾಗಿಯೂ ಹೇಳಿದ್ದರು. ಇದೀಗ ಸ್ವತಃ ಚರಕ ಮತ್ತೊಮ್ಮೆ ಈ ಸ್ಪಷ್ಟನೆಯ ಮೂಲಕ, ಫಲಾನುಭವಿಗಳಿಗೆ ಹಣ ನೀಡಲಾಗಿದೆಯೇ ವಿನಃ ಮನೆಯನ್ನು ನೀಡಿಲ್ಲ ಎಂಬುದನ್ನು ಒಪ್ಪಿಕೊಂಡಿದೆ. ಹಾಗಾಗಿ ‘ಪ್ರತಿಧ್ವನಿ’ಯ ವರದಿಯನ್ನು ಈ ಸ್ಪಷ್ಟನೆ ಕೂಡ ಪರೋಕ್ಷವಾಗಿ ದೃಢಪಡಿಸಿದೆ!

ಹಾಗಾಗಿ, ಈಗಲೂ ಉಳಿಯುವ ಮೂಲಭೂತ ಪ್ರಶ್ನೆ; ಬಡ ನೇಕಾರರಿಗೆ ಆಸರೆಯಾಗಬೇಕಾಗಿದ್ದ ಆ 38 ಮನೆಗಳು ಯಾಕೆ ಆ ಫಲಾನುಭವಿಗಳ ಸ್ವಾಧೀನಕ್ಕೆ ಹೋಗಿಲ್ಲ? ಆ ಮನೆಗಳು ನಿರ್ಮಾಣವಾದ ನಿವೇಶನವಾಗಲೀ, ಆ ಕಟ್ಟಡಗಳಾಗಲೀ ಯಾಕೆ ಚರಕದ ನೇಕಾರ ಫಲಾನುಭವಿಗಳ ಅನುಭೋಗಕ್ಕೆ ದಕ್ಕಿಲ್ಲ? ಯಾಕೆ ಆ ಮನೆಗಳನ್ನೇ ಸಾಲು ಮನೆಗಳಾಗಿ ನಿರ್ಮಿಸಿ, ‘ಶ್ರಮಜೀವಿ ಆಶ್ರಮ’ವಾಗಿ ಚರಕ ಮತ್ತು ದೇಸಿ ಸಂಸ್ಥೆಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ? ಎಂಬ ಪ್ರಶ್ನೆಗಳಿಗೆ ಸಂಸ್ಥೆಗಳ ಆ ಸ್ಪಷ್ಟನೆಯಲ್ಲಿ ಉತ್ತರವಿಲ್ಲ.

ಮೂಲತಃ ದೇಸಿ ಸಂಸ್ಥೆಗೆ ಸೇರಿದ ಕೃಷಿಭೂಮಿಯಾಗಿದ್ದ ಆ ಜಮೀನನ್ನು 20x30 ಅಳತೆಯ ನಿವೇಶನಗಳಾಗಿ ನೀಡಿದಂತೆ ದೇಸಿಯ ಅಂದಿನ ವ್ಯವಸ್ಥಾಪಕ ಟ್ರಸ್ಟಿಯಾಗಿದ್ದ ಪ್ರಸನ್ನ ಅವರು ದಾಖಲೆ ಸೃಷ್ಟಿಸಿದ್ದಾರೆ.

ಜೊತೆಗೆ ಆ ನಿವೇಶನಗಳಿಗೆ ಸಂಬಂಧಿಸಿದಂತೆ ಸ್ವತಃ ಪ್ರಸನ್ನ ಅವರು ಸಹಿ ಮಾಡಿರುವ ಸ್ವಾಧೀನ ಪತ್ರ ಕೂಡ ‘ಖೊಟ್ಟಿ’ ಎಂಬುದು ಕಾನೂನು ಸಲಹೆಗಾರರಿಂದಲೇ ಖಚಿತವಾಗಿದೆ. ನೋಂದಣಿಯಾಗದೆ ಇರುವ, ಆ ಸ್ವಾಧೀನ ಪತ್ರ ಏಕ ಕಾಲಕ್ಕೆ ಮನೆಗಳನ್ನು ಮಂಜೂರು ಮಾಡಿದ ಕೈಮಗ್ಗ ಮತ್ತು ಜವಳಿ ಇಲಾಖೆಗೂ, ಇತ್ತ ಬಡ ಫಲಾನುಭವಿಗಳಿಗೂ ಕಣ್ಣಿಗೆ ಮಣ್ಣೆರಚುವ ಒಂದು ತಂತ್ರ. ಯೋಜನೆ ನಿಯಮಾವಳಿ ಪ್ರಕಾರ, ಫಲಾನುಭವಿಗಳು ಸ್ವಂತ ಹೆಸರಿನಲ್ಲಿ ಖಾತೆ ಇರುವ ನಿವೇಶನದ ದಾಖಲೆ ಸಲ್ಲಿಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ದೇಸಿ ಸಂಸ್ಥೆಯ ಹೆಸರಿನಲ್ಲಿ ಮಾಲೀಕತ್ವ ಇರುವ ಕೃಷಿ ಭೂಮಿಯನ್ನೇ ನಿವೇಶನವೆಂದು ದಾಖಲೆ ಸೃಷ್ಟಿಸಲಾಗಿದೆ. ಆ ಜಾಗಕ್ಕೆ ಸಂಬಂಧಿಸಿದಂತೆ ಸ್ವತಃ ಪ್ರಸನ್ನ ಅವರೇ ದೇಸಿ ಪರವಾಗಿ ಸಹಿ ಹಾಕಿ, ಫಲಾನುಭವಿಗಳಿಗೆ ನಿವೇಶನದ(30x40 ಅಳತೆ) ಸ್ವಾಧೀನ ಪತ್ರವನ್ನು ನೀಡಿದ್ದಾರೆ. ಆದರೆ, ಆ ಸ್ವಾಧೀನ ಪತ್ರ ನೋಂದಣಿಯಾಗಿಲ್ಲ!

ಚರಕ ಸಂಸ್ಥೆಯ ಸಾರ್ವಜನಿಕ ಸ್ಪಷ್ಟನೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು
ಹೆಗ್ಗೋಡಿನ ಚರಕ ನೇಕಾರರ ವಸತಿ ಯೋಜನೆ ಮನೆಗಳು ಕಾಣೆಯಾಗಿವೆ!

ಹಾಗಾಗಿ ಒಂದು ಕಡೆ ಭೂ ಪರಿವರ್ತನೆಯಾಗದ ಕೃಷಿ ಜಮೀನಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡಲಾಗಿದ್ದರೆ, ಮತ್ತೊಂದು ಕಡೆ ಆ ಜಾಗದ ಮಾಲೀಕತ್ವ ತಮಗೇ ಉಳಿಸಿಕೊಂಡು ಕಾನೂನಿನಡಿ ಯಾವುದೇ ಮಾನ್ಯತೆ ಇಲ್ಲದ ‘ಖೊಟ್ಟಿ’ ಸ್ವಾಧೀನ ಪತ್ರವನ್ನು ಫಲಾನುಭವಿಗಳಿಗೆ ನೀಡಲಾಗಿದೆ!

ದೇಸಿ ಸಂಸ್ಥೆಯ ಪರವಾಗಿ ಪ್ರಸನ್ನ ಅವರೇ ಸಹಿ ಮಾಡಿರುವ ಸ್ವಾಧೀನ ಪತ್ರದ ಪ್ರತಿ
ದೇಸಿ ಸಂಸ್ಥೆಯ ಪರವಾಗಿ ಪ್ರಸನ್ನ ಅವರೇ ಸಹಿ ಮಾಡಿರುವ ಸ್ವಾಧೀನ ಪತ್ರದ ಪ್ರತಿ

ಈ ಸ್ವಾಧೀನಪತ್ರದ ಸಾಚಾತನದ ಬಗ್ಗೆ ಪರಿಶೀಲಿಸಿದ ವಕೀಲರು ಮತ್ತು ನೋಟರಿಯಾದ ವಿ ಪಿ ಪ್ರತಾಪ್ ಅವರು, “ಯಾವುದೇ ಸ್ಥಿರಾಸ್ತಿಗಳ ಸ್ವಾಧೀನ ಪತ್ರಕ್ಕೆ ಕಾನೂನು ಮಾನ್ಯತೆ ಬರುವುದು ಅದು ನೋಂದಣಿಯಾದಲ್ಲಿ ಮಾತ್ರ. ಪ್ರಸ್ತುತ ದೇಸಿ ಸಂಸ್ಥೆ ಮತ್ತು ಚರಕ ವಸತಿ ಕಾರ್ಯಾಗಾರ ಯೋಜನೆ ಫಲಾನುಭವಿಗಳ ನಡುವೆ ಆಗಿರುವ ಸ್ವಾಧೀನ ಪತ್ರ ನೋಂದಣಿಯಾಗಿಲ್ಲ. ನೋಂದಣಿಯಾಗದೆ ಆ ಜಾಗದ ಹಕ್ಕು ಫಲಾನುಭವಿಗಾಗಲೀ, ಆ ಜಾಗವನ್ನು ಪಡೆದವರಿಗಾಗಲೀ ಪ್ರಾಪ್ತವಾಗುವುದಿಲ್ಲ. ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಕೂಡ ಹಕ್ಕು ಖಾತರಿಯ ಖಾತೆ ಬೇಕಾಗುತ್ತದೆ. ಒಟ್ಟಾರೆ ಹೇಳುವುದಾದರೆ, ಯಾವುದೇ ಸ್ಥಿರಾಸ್ತಿಗಳ ಸ್ವಾಧೀನವನ್ನು ನೋಂದಾಯಿತ ಪತ್ರದ ಮೂಲಕವೇ ಹೊರತು ಬೇರೆ ವಿಧಾನಗಳಿಂದ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿ, ಕಾನೂನು ರೀತ್ಯ ಮಾನ್ಯವೇ ಅಲ್ಲದ ರೀತಿಯಲ್ಲಿ ಸ್ವಾಧೀನ ಪತ್ರ ಮಾಡಿರುವ ದೇಸಿ ಸಂಸ್ಥೆ ಮತ್ತು ಸ್ವಾಧೀನ ಪತ್ರಕ್ಕೆ ಸ್ವತಃ ಸಹಿ ಹಾಕಿರುವ ಪ್ರಸನ್ನ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ. ಅಲ್ಲದೆ, ಇಂತಹ ಖೊಟ್ಟಿ ಸ್ವಾಧೀನ ಪತ್ರದ ಆಧಾರದ ಮೇಲೆ 38 ಮನೆಗಳನ್ನು ಮಂಜೂರು ಮಾಡಿ, ಅಂತಿಮವಾಗಿ ಆ ಮನೆಗಳು ಬಡವರಿಗೂ ಉಪಯೋಗಕ್ಕೆ ಇಲ್ಲದೆ, ಚರಕ ಸಂಸ್ಥೆಗೂ ದಕ್ಕದೆ, ಪ್ರಸನ್ನ ಅವರ ದೇಸಿ ಸಂಸ್ಥೆಯ ಪಾಲಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೈಮಗ್ಗ ಮತ್ತು ಜವಳಿ ಇಲಾಖೆ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ.

ಇನ್ನು ವಸತಿ ಯೋಜನೆಯಲ್ಲಿ ನಿರ್ಮಾಣವಾಗಿದೆ ಎಂದು ಬಿಂಬಿಸಿರುವ 38 ಮನೆಗಳಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯ್ತಿಯಲ್ಲಿ ಯಾವುದೇ ದಾಖಲೆ ಇಲ್ಲದಿರುವುದು ಏನನ್ನು ಸೂಚಿಸುತ್ತದೆ? ಹಾಗೇ ಪಂಚಾಯ್ತಿ ಅನುಮೋದನೆ ಪಡೆಯದೇ ಇರುವುದು, ಮನೆ ಕಂದಾಯ ಕಟ್ಟದೇ ಇರುವುದು ಸೇರಿದಂತೆ ಹಲವು ಪ್ರಶ್ನೆಗಳಿಗೆ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ.

ಜೊತೆಗೆ ಮೂಲಭೂತವಾಗಿ ಆ 38 ಮನೆಗಳಿವೆ ಎಂದು ತೋರಿಸಿದ ಜಾಗ ಸಹಿತ ಇಡೀ ಜಾಗ ಸಂಪೂರ್ಣವಾಗಿ ಈಗಲೂ ದೇಸಿ ಒಡೆತನದಲ್ಲಿಯೇ ಇದೆ. 2011-12ನೇ ಸಾಲಿನಲ್ಲಿಯೇ ಅಲ್ಲಿ ಈ 38 ಮನೆಗಳಿಗಾಗಿ 2.20 ಎಕರೆ ಜಮೀನನ್ನು ಫಲಾನುಭವಿಗಳಿಗೆ ತಲಾವಾರು ಸ್ವಾಧೀನ ಪತ್ರ ಮಾಡಿಕೊಟ್ಟಿದ್ದರೂ, ಆ ಬಳಿಕ ಕಟ್ಟಡ ನಿರ್ಮಾಣವಾಗಿ, 2012-13ರಲ್ಲಿ ಸಾಲು ಮನೆಗಳು ನಿರ್ಮಾಣವಾಗಿದ್ದರೂ, ಆ ಭೂಮಿ ಕಳೆದ ವರ್ಷದವರೆಗೂ(2018-19) ಕೃಷಿಭೂಮಿಯಾಗಿಯೇ ಇತ್ತು! 2015-16ರಲ್ಲಿ ದೇಸಿ ಸಂಸ್ಥೆಯ ಹೆಸರಿನಲ್ಲಿರುವ ಹೊನ್ನೆಸರ ಗ್ರಾಮದ ಸರ್ವೆ ನಂಬರ್ 164/1 ರಲ್ಲಿ 3 ಎಕರೆ ಮತ್ತು ಸರ್ವೆನಂಬರ್ 164/2ರಲ್ಲಿ 3 ಎಕರೆ ಮತ್ತು ಸರ್ವೆ ನಂಬರ್ 52ರಲ್ಲಿ 2.23 ಎಕರೆ(ಕೆರೆ ಜಮೀನು) ಸೇರಿದಂತೆ ಒಟ್ಟು 8 ಎಕರೆ 23 ಗುಂಟೆ ಕೃಷಿ ಜಮೀನನ್ನು ‘ನೈಸರ್ಗಿಕ ಬಣ್ಣಗಾರಿಕೆ ಸಂಶೋಧನೆ, ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ’ ಸ್ಥಾಪನೆಗಾಗಿ ಏಕ ನಿವೇಶನವಾಗಿ ಭೂ ಪರಿವರ್ತನೆ ಮಾಡಿಕೊಡಲು ಅರ್ಜಿಸಲ್ಲಿಸಲಾಗಿತ್ತು. 2019ರಲ್ಲಿ ಆ ಭೂಮಿಯ ಭೂ ಪರಿವರ್ತನೆ ಕೂಡ ಆಗಿದೆ. ಭೂ ಪರಿವರ್ತೆನೆಗೆ ಮುನ್ನವೆ ಅಲ್ಲಿ ಕಟ್ಟಡ ಇರುವ ಬಗ್ಗೆ ಸಂಬಂಧಿತ ಅಧಿಕಾರಿಗಳು, ಆಕ್ಷೇಪವೆತ್ತಿದ ಹಿನ್ನೆಲೆಯಲ್ಲಿ, ಆ ಕುರಿತು ಹೆಚ್ಚುವರಿ ದಂಡವನ್ನೂ (ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಶಿಫಾರಸಿನೊಂದಿಗೆ ಕಡಿತ ಮಾಡಿಸಿ) ರಿಯಾಯ್ತಿ ದರದಲ್ಲಿ ತೆತ್ತು ಭೂ ಪರಿವರ್ತನೆ ಮಾಡಿಸಿಕೊಳ್ಳಲಾಗಿದೆ.

ಈಗಿನ ಪ್ರಶ್ನೆ, ಆ ಭೂಮಿಯಲ್ಲಿ ಭೂ ಪರಿವರ್ತನೆಗೆ ಮುನ್ನ ಇದ್ದ ಕಟ್ಟಡಗಳು ಇದೇ ನೇಕಾರರ ವಸತಿ ಯೋಜನೆ ಮನೆಗಳೆ? ಒಂದು ವೇಳೆ ಅದೇ ಮನೆಗಳು ಎಂಬುದಾದರೆ, ಆಗ ಆ ಫಲಾನುಭವಿಗಳಿಗೆ 38 ಮನೆಗಳಿಗೆ ತಲಾ 20x30 ಅಳತೆಯಂತೆ ಒಟ್ಟು 2.20 ಗುಂಟೆ ಭೂಮಿಯನ್ನು ಸ್ವಾಧೀನ ಪತ್ರದ ಮೂಲಕ ನೀಡಲಾಗಿತ್ತಲ್ಲವೆ? ಹಾಗೆ ಸ್ವಾಧೀನ ಕೊಟ್ಟ ಆ ಭೂಮಿಯನ್ನೂ ಸೇರಿಸಿ ಈಗ ದೇಸಿ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿದ್ದು ಹೇಗೆ? ಆ ಸ್ವಾಧೀನ ಪತ್ರ ಕಾನೂನುಬದ್ಧವಾಗಿದ್ದರೆ, ಸ್ವಾಧೀನದಾರರಾದ ನೇಕಾರರ ವಸತಿ ಯೋಜನೆ ಫಲಾನುಭವಿಗಳಿಂದ ಆ ಜಾಗವನ್ನು ದೇಸಿ ಸಂಸ್ಥೆ ತನ್ನ ಹೆಸರಿಗೆ ಪಡೆದದ್ದು ಯಾವಾಗ? ಮತ್ತು ಒಮ್ಮೆ ಅವರ ಸ್ವಾಧೀನಕ್ಕೆ ನೀಡಿದ ಮೇಲೆ ಅದೇ ಜಾಗವನ್ನು ಸೇರಿಸಿ ಏಕ ನಿವೇಶನವಾಗಿ ಭೂ ಪರಿವರ್ತನೆ ಮಾಡುವುದು ಹೇಗೆ? ಎಂಬ ಕಾನೂನು ತೊಡಕಿನ ಪ್ರಶ್ನೆಗಳಿಗೆ ದೇಸಿ ಸಂಸ್ಥೆಯ ಧರ್ಮದರ್ಶಿಗಳಾದ ಮತ್ತು ಈ ಎಲ್ಲಾ ಗೊಂದಲಗಳ ಸೂತ್ರಧಾರರೂ ಆದ ಪ್ರಸನ್ನ ಅವರಲ್ಲಿ ಸ್ಪಷ್ಠೀಕರಣ ಕೇಳಬೇಕಾಗಿದೆ!

ಹಾಗೇ ಪ್ರಸನ್ನ ಅವರ ಪರ ವಕಾಲತ್ತು ವಹಿಸುವ ವ್ಯಕ್ತಿಗಳು ಕೆಳಗಿನ ಪ್ರಶ್ನೆಗಳಿಗೆ ಪ್ರಸನ್ನ ಅವರಿಂದಲೇ ಉತ್ತರ ಪಡೆದು ಸಾರ್ವಜನಿಕಗೊಳಿಸಬೇಕು;

1. ಬಡ ನೇಕಾರರಿಗೆ ಆಸರೆಯಾಗಬೇಕಾದ ಮನೆಗಳು ‘ಶ್ರಮಜೀವಿ ಆಶ್ರಯ’ಮವಾಗಿ ಬದಲಾಗಿದ್ದು ಹೇಗೆ? ಆ ಫಲಾನುಭವಿಗಳಿಗೆ ಮನೆ ನೀಡಿ ಆಸರೆ ಕಲ್ಪಿಸುವುದು ಸರ್ಕಾರದ ಆ ಯೋಜನೆಯ ಉದ್ದೇಶವಾಗಿತ್ತೆ ಅಥವಾ ಚರಕ-ಗ್ರಾಮಸೇವಾ ಸಂಘಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದಂತೆ ಅವರಿಗೆ ನೇರವಾಗಿ ಹಣ ನೀಡುವುದಾಗಿತ್ತೆ?

2. ನೋಂದಣಿಯೇ ಆಗದ ಸ್ವಾಧೀನ ಪತ್ರವನ್ನು ನೀಡಿ, ಒಂದು ಕಡೆ ಮನೆ ಫಲಾನುಭವಿಗಳನ್ನೂ, ಮತ್ತೊಂದು ಕಡೆ ಸರ್ಕಾರವನ್ನೂ ಯಾಮಾರಿಸಿದ್ದು ಯಾಕೆ?

3. ಆ ಬಳಿಕ ಆ ಮನೆಗಳನ್ನೂ ಸೇರಿಸಿ ಇಡೀ ಜಾಗವನ್ನು ದೇಸಿ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿದ್ದರ ಹಿಂದೆ ನೇಕಾರರ ವಸತಿ ಯೋಜನೆ ಮನೆಗಳು ನಿರ್ಮಾಣವೇ ಆಗಿಲ್ಲ ಎಂದು ದಾಖಲೆ ಸೃಷ್ಟಿಸುವ ಉದ್ದೇಶವಿತ್ತೆ?.

ಹೀಗೆ ಸಾಲು ಸಾಲು ಅಕ್ರಮಗಳ ಬಗ್ಗೆ ಆ ಸ್ಪಷ್ಟನೆಯಲ್ಲಿ ಯಾವುದೇ ಉತ್ತರವಿಲ್ಲ. ಹಾಗಾಗಿ, ಸ್ವಾಧೀನ ಪತ್ರ, ಕೃಷಿ ಭೂಮಿಯಲ್ಲಿ ಯೋಜನೆ ಮನೆ ನಿರ್ಮಾಣ, ಭೂ ಪರಿವರ್ತನೆ ಸೇರಿದಂತೆ ಒಂದೇ ಜಾಗಕ್ಕೆ ಸಂಬಂಧಿಸಿದಂತೆ ಆಗಿರುವ ಹಲವು ಸ್ತರದ ಅಕ್ರಮಗಳಿಗೆ ಯಾರು ಬಾಧ್ಯಸ್ಥರು? ಅದರ ಸಂಸ್ಥಾಪಕ ಟ್ರಸ್ಟಿಗಳಾದ ಪ್ರಸನ್ನ ಅವರೇ? ಅಥವಾ ದೇಸಿ ಸಂಸ್ಥೆಯಲ್ಲಿ ಇರುವ ಗಣ್ಯಾತಿಗಣ್ಯ ಟ್ರಸ್ಟಿಗಳಿಗೆ ಗೊತ್ತಿದ್ದೇ ಇದು ನಡೆಯಿತೇ?

ಇಂತಹ ನೈಜ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡುವ ನೈತಿಕ ಹೊಣೆಗಾರಿಕೆ ತೋರುವ ಬದಲು, ಚರಕ ಸಂಸ್ಥೆ ಮತ್ತು ಬಡ ಮಹಿಳೆಯರಿಗೆ ಆಗಿರುವ ಅನ್ಯಾಯದ ಕುರಿತ ದಾಖಲೆ ಮತ್ತು ವಾಸ್ತವಾಂಶ ಆಧಾರಿತ ವರದಿಯನ್ನೇ ‘ತೇಜೋವಧೆಯ ವರದಿ’, ‘ಸುಳ್ಳುವರದಿ’ ಎಂಬ ಹೇಳಿಕೆ ನೀಡುವುದು ಹಾಸ್ಯಾಸ್ಪದ. ಕನಿಷ್ಟ ಈಗಲಾದರೂ ದೇಸಿ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಗಣ್ಯಾತಿಗಣ್ಯರು ಇಂತಹ ಪ್ರಶ್ನೆಗಳಿಗೆ ಉತ್ತರ ಕೊಡುವರೇ ಎಂಬುದನ್ನು ಕಾದುನೋಡಬೇಕಿದೆ.

ಮರೆಯುವ ಮುನ್ನ:

1. ದೇಸಿ ಚರಕಾದ ವಿಸ್ತರಣೆ ಎನ್ನುವ ಪ್ರಸನ್ನ ಅವರು, ಹೊನ್ನೆಸರದ 8 ಎಕರೆ 23 ಗುಂಟೆಯನ್ನು ದೇಸಿ ಸಂಸ್ಥೆಯ ಹೆಸರಿಗೇ ಯಾಕೆ ಭೂ ಪರಿವರ್ತನೆ (ಏಲಿಯನೇಷನ್ ) ಮಾಡಿಸಿದರು?

2. ಈ ಜಮೀನಿನಲ್ಲಿ ಚರಕಾದ ನೇಕಾರರಿಗೆ ನೀಡಿದ್ದ ಜಮೀನೂ ಸೇರಿದೆ ಎಂದು ದೇಸಿ ಸಂಸ್ಥೆಗೆ ಮರೆತು ಹೋಯಿತೇ? ಇದಕ್ಕೆ ಪ್ರಸನ್ನ ಮತ್ತು ದೇಸಿಯ ವ್ಯವಸ್ಥಾಪಕ ಟ್ರಸ್ಟಿ ಆಗಿರುವ ಕೃಷ್ಣ ಹೆಗ್ಗೋಡು ಉತ್ತರ ನೀಡುತ್ತಾರೆಯೇ?

3. ಆ ಭೂಮಿಯನ್ನು ಚರಕಾಕ್ಕೆ ಆಸ್ತಿಯಾಗಿ ಯಾಕೆ ಮಾಡಿಕೊಡಲಿಲ್ಲ? ( ಇದರಿಂದ ಚರಕಾದ ಆಸ್ತಿ ಮೌಲ್ಯ ಹೆಚ್ಚುತ್ತಿತ್ತು ಅಲ್ಲವೇ? ಕನಿಷ್ಟ ನೇಕಾರರ ಮನೆ ನಿರ್ಮಾಣಕ್ಕೆಂದು ನೀಡಿದ 2.20 ಎಕರೆ ಜಮೀನನ್ನು ಕೂಡ ಚರಕದ ಹೆಸರಿಗೆ ಮಾಡಲಿಲ್ಲ ಏಕೆ?

4. ದೇಸಿ ಸಂಸ್ಥೆ ತನ್ನ ಎಲ್ಲಾ ಲಾಭವನ್ನೂ ‍ ಚರಕಾಕ್ಕೆ ವರ್ಗಾಯಿಸುತ್ತೆ ಎಂದು ಪ್ರಸನ್ನ ಅವರು ಹೇಳುತ್ತಿರುತ್ತಾರೆ. ಹಾಗಿದ್ದರೆ, ಈ ಭೂಮಿ ಕೂಡ ನೈತಿಕವಾಗಿ ಚರಕಾಕ್ಕೆ ಸೇರಿದ್ದೇ ಅಲ್ಲವೇ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com