ಬೆಳ್ಳಿತೆರೆ ಮೇಲೆ ಕೃಷಿಕರ ಬದುಕು-ಬವಣೆ

ಕನ್ನಡ ಬೆಳ್ಳಿತೆರೆಯಲ್ಲಿ ಕೃಷಿಕರ ಬದುಕು, ಅಲ್ಲಿನ ಸಮಸ್ಯೆ, ಸರ್ಕಾರದ ಸ್ಪಂದನೆ, ಜಾಗತೀಕರಣದ ಪ್ರಭಾವ... ಹೀಗೆ ಕೃಷಿಯ ಸುತ್ತ ಹಲವಾರು ವಿಚಾರಗಳು ಪ್ರಸ್ತಾಪವಾಗಿವೆ. ‘ಬಂಗಾರದ ಮನುಷ್ಯ’ ಚಿತ್ರದಿಂದ ಇತ್ತೀಚಿನ ‘ಬಂಗಾರ’ ಚಿತ್ರದವರೆಗೆ ಹತ್ತಾರು ಸಿನಿಮಾಗಳಲ್ಲಿ ಕೃಷಿ ದಟ್ಟವಾಗಿ ಪ್ರಸ್ತಾಪವಾಗಿದೆ.
ಬೆಳ್ಳಿತೆರೆ ಮೇಲೆ ಕೃಷಿಕರ ಬದುಕು-ಬವಣೆ

ಬಂಗಾರದ ಮನುಷ್ಯ! ಕೃಷಿ, ಕೃಷಿಕರ ನಾಡಿಮಿಡಿತವನ್ನು ಆಪ್ತವಾಗಿ ಕಟ್ಟಿಕೊಡುವ ಕನ್ನಡದ ಮಹತ್ವದ ಸಿನಿಮಾ. ಅಪಾರ ಜನಮನ್ನಣೆ ಗಳಿಸಿದ ಇದು ಕೃಷಿ ಸಿನಿಮಾಗಳ ಪೈಕಿ ಟ್ರೆಂಡ್ ಸೆಟರ್ ಎನಿಸಿಕೊಂಡಿತು. ವಿದ್ಯಾವಂತ ಯುವಕ ನಗರದಿಂದ ಹಳ್ಳಿಗೆ ಬಂದ ಕೃಷಿಯಲ್ಲಿ ತೊಡಗುವ, ಅಕ್ಕನ ಕುಟುಂಬಕ್ಕೆ ನೆರವಾಗುವ ಕೌಟುಂಬಿಕ ಕತೆಯನ್ನು ಹೊಂದಿದ್ದ ಈ ಸಿನಿಮಾ ಕಲಾವಿದರ ಉತ್ತಮ ನಟನೆ, ಮಧುರ ಹಾಡುಗಳು, ನಿರ್ದೇಶಕ ಸಿದ್ದಲಿಂಗಯ್ಯನವರ ಆಕರ್ಷಕ ನಿರೂಪಣೆಯಿಂದಾಗಿ ಇದು ಇತಿಹಾಸ ಬರೆಯಿತು. ಮುಂದೆ ಹತ್ತಾರು ಕೃಷಿ ಆಧಾರಿತ ಸಿನಿಮಾಗಳಿಗೆ ‘ಬಂಗಾರದ ಮನುಷ್ಯ’ ಚಿತ್ರ ಸ್ಫೂರ್ತಿಯಾಯ್ತು.

ಚಿತ್ರದಲ್ಲಿನ ‘ಆಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಇಂದು...’ ಗೀತೆ ಎದೆಗುಂದಿದವರನ್ನು ಬಡಿದೆಬ್ಬಿಸುವಂತಿದೆ. ಗುಡ್ಡದ ಪ್ರದೇಶದಲ್ಲಿನ ಕಲ್ಲು ಭೂಮಿಯನ್ನು ಉಳುಮೆಗೆ ಸಜ್ಜಾಗಿಸುವ ರಾಜೀವ (ಡಾ.ರಾಜ್ ಪಾತ್ರ) ರೈತ ಯುವಕರಿಗೆ ಸ್ಫೂರ್ತಿಯಾಗಿ ಕಾಣಿಸುವುದು ಹೌದು. ಎಲ್ಲಾ ವಯೋಮಾನದ ಪ್ರೇಕ್ಷಕರಿಗೆ ಇಷ್ಟವಾದ ಈ ಚಿತ್ರ ರಾಜ್ಯದಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಚಿತ್ರ ನೋಡಿ ಪ್ರೇರಿತರಾದ ಯುವಕರನೇಕರು ತಮ್ಮ ಹಳ್ಳಿಗಳಿಗೆ ಮರಳಿ ಕೃಷಿ ಕೈಗೊಂಡ ಉದಾಹರಣೆಗಳೂ ಇವೆ. ಹೀಗೆ, ಚಿತ್ರವೊಂದು ಉತ್ತಮ ಸಾಮಾಜಿಕ ಪರಿಣಾಮ ಬೀರಬಲ್ಲದು ಎನ್ನುವುದಕ್ಕೆ ‘ಬಂಗಾರದ ಮನುಷ್ಯ’ ಒಂದೊಳ್ಳೆಯ ಮಾದರಿಯಾಗಿ ನಿಲ್ಲುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗ್ರಾಮೀಣ ಭಾರತವನ್ನು ಅತ್ಯಂತ ಆಪ್ತವಾಗಿ ಕಟ್ಟಿಕೊಟ್ಟ ಕನ್ನಡ ನಿರ್ದೇಶಕರ ಪೈಕಿ ಸಿದ್ದಲಿಂಗಯ್ಯನವರು ಪ್ರಮುಖರು. ಅವರ ಬಹುತೇಕ ಸಿನಿಮಾಗಳ ಕಥಾವಸ್ತು ಗ್ರಾಮೀಣ ಪರಿಸರ, ಅಲ್ಲಿನ ಸ್ಥಿತಿಗತಿಗಳು, ಕೃಷಿ ಆಧಾರಿತ ಕಸುಬುಗಳನ್ನು ಮಾಡುವ ಗ್ರಾಮೀಣರ ಬಗೆಗೇ ಇದೆ. ಕನ್ನಡ ಚಿತ್ರರಂಗದ ಮತ್ತೊಂದು ಮಹೋನ್ನತ ಚಿತ್ರಗಳಲ್ಲೊಂದಾದ ‘ಬೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಕೃಷಿಕರ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಸಿದ್ದಲಿಂಗಯ್ಯ. ಇಲ್ಲಿ ಗ್ರಾಮವೊಂದರ ರೈತ ಯುವಕರ ವೈಷಮ್ಯವೇ ಪ್ರಮುಖ ವಸ್ತು ಆದರೂ ಹಿನ್ನೆಲೆಯಲ್ಲಿ ಕೃಷಿಕರ ಬದುಕಿನ ಸುಖ-ದುಃಖ ಕಾಣಿಸುತ್ತದೆ. ಚಿತ್ರದ ಛಾಯಾಗ್ರಾಹಕ ಡಿ.ವಿ.ರಾಜಾರಾಂ ಎತ್ತಿನ ಬಂಡಿ ಓಟವನ್ನು ಆಕರ್ಷಕವಾಗಿ ಚಿತ್ರಿಸಿದ್ದಾರೆ.


‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಡಾ.ರಾಜಕುಮಾರ್
‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಡಾ.ರಾಜಕುಮಾರ್

ಸಿದ್ದಲಿಂಗಯ್ಯನವರ ಮತ್ತೊಂದು ಪ್ರಮುಖ ಸಿನಿಮಾ ‘ದೂರದಬೆಟ್ಟ’ದಲ್ಲಿ ನಾಯಕ ಶಿವು (ಡಾ.ರಾಜ್) ಕಮ್ಮಾರಿಕೆ ಮಾಡುವ ಯುವಕ. ಇದು ಕೃಷಿಯನ್ನು ಆಧರಿಸಿದ ಕಸುಬು. ಇದು ಕೌಟುಂಬಿಕ, ಸಾಮಾಜಿಕ ಕಥಾವಸ್ತುವಿನ ಚಿತ್ರವಾದರೂ ಹಿನ್ನೆಲೆಯಲ್ಲಿ ಕೃಷಿಕರ ಜೀವನ, ಗ್ರಾಮಸ್ಥರ ಹೊಂದಾಣಿಕೆಯ ಬದುಕು, ಪರಸ್ಪರರ ಅವಲಂಬನೆಯಿಂದ ಸುಲಲಿತವಾಗಿ ಸಾಗುವ ಗ್ರಾಮೀಣ ಆದರ್ಶಗಳನ್ನು ನಿರ್ದೇಶಕರು ಸೂಚ್ಯವಾಗಿ ಪ್ರಸ್ತಾಪಿಸುತ್ತಾರೆ. ಅವರ ನಿರ್ದೇಶನದ ಮತ್ತೊಂದು ಸಿನಿಮಾ ‘ಬಾ ನನ್ನ ಪ್ರೀತಿಸು’ ಚಿತ್ರದಲ್ಲಿ ಹೀರೋ ಶಶಿಕುಮಾರ್ ರೈತನಾಗಿ ಕಾಣಿಸಿಕೊಂಡಿದ್ದಾರೆ. ಪಟ್ಟಣದಿಂದ ಹಳ್ಳಿಗೆ ಬರುವ ನಾಯಕಿ ಸೌಂದರ್ಯ, ಕಥಾನಾಯಕನಿಗೆ ಪ್ರಗತಿಪರ ಕೃಷಿ ಬಗ್ಗೆ ಮಾಹಿತಿ ನೀಡುತ್ತಾರೆ.

ಕೂಡಿ ಬಾಳೋಣ

ರಾಜ್ಯ ರಾಜಕಾರಣದ ಪ್ರಗತಿಪರ ರಾಜಕಾರಣಿ, ಸಚಿವರಾಗಿದ್ದ ಶಂಕರೇಗೌಡರು ‘ಕೂಡಿ ಬಾಳೋಣ’ ಚಿತ್ರ ನಿರ್ಮಿಸಿ ಅದರಲ್ಲಿ ಪ್ರಗತಿಪರ ಕೃಷಿ ಬಗ್ಗೆ ಕಥೆ ಮಾಡಿದ್ದರು. ಎಂ.ಆರ್.ವಿಠ್ಠಲ್ ನಿರ್ದೇಶನದ ಇದು ಕೃಷಿಗೆ ಸಂಬಂಧಿಸಿದಂತೆ ಕನ್ನಡದ ಪ್ರಮುಖ ಸಿನಿಮಾ. ‘ಸಣ್ಣ ರೈತರು ತಮ್ಮಲ್ಲಿರುವ ಅರ್ಧ ಎಕರೆ, ಮುಕ್ಕಾಲು ಎಕರೆ ಹೊಲಗಳಲ್ಲಿ ಕೃಷಿ ಮಾಡುವುದರ ಬದಲು ಒಟ್ಟಿಗೇ ಉಳಿಮೆ ಮಾಡಬೇಕು. ಬಂದ ಬೆಳೆಯಲ್ಲಿ ಹಂಚಿಕೊಳ್ಳಬೇಕು’ ಎನ್ನುವ ಸಂದೇಶವಿದ್ದ ಚಿತ್ರದ ಬಗ್ಗೆ ವಿಶ್ಲೇಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಶಂಕರೇಗೌಡರ ಆಶಯಗಳು ಚಿತ್ರದಲ್ಲಿ ಅಚ್ಚುಕಟ್ಟಾಗಿ ಪ್ರಸ್ತಾಪವಾಗಿದ್ದವು.

‘ಕೂಡಿ ಬಾಳೋಣ’ ಚಿತ್ರದ ಸೆಟ್ನಲ್ಲಿ ನಿರ್ಮಾಪಕ ಶಂಕರೇಗೌಡರು, ನಿರ್ದೇಶಕ ಎಂ.ಆರ್.ವಿಠ್ಠಲ್ ಮತ್ತು ಚಿತ್ರದ ನಟಿ ಭವಾನಿ
‘ಕೂಡಿ ಬಾಳೋಣ’ ಚಿತ್ರದ ಸೆಟ್ನಲ್ಲಿ ನಿರ್ಮಾಪಕ ಶಂಕರೇಗೌಡರು, ನಿರ್ದೇಶಕ ಎಂ.ಆರ್.ವಿಠ್ಠಲ್ ಮತ್ತು ಚಿತ್ರದ ನಟಿ ಭವಾನಿಚಿತ್ರ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ

ಎಚ್.ಎಲ್.ಎನ್.ಸಿಂಹ ನಿರ್ದೇಶನದ ‘ಅನುಗ್ರಹ’ ಚಿತ್ರದಲ್ಲಿ ಕೃಷಿಕರ ಜೀವನಾಡಿಯಾದ ಎತ್ತುಗಳ ಬಗ್ಗೆ ಆಪ್ತವಾಗಿ ಪ್ರಸ್ತಾಪವಾಗುತ್ತದೆ. ಮಣ್ಣು ಉಳಿಮೆ ಮಾಡುವ ತಮ್ಮ ಸಂಗಾತಿಗಳಾದ ಜೋಡೆತ್ತಿನ ಬಗ್ಗೆ ರೈತರಿಗಿರುವ ಕಾಳಜಿ, ಅವುಗಳೆಡೆಗಿನ ಅವರ ಸೆಂಟಿಮೆಂಟ್ ಚಿತ್ರದ ಕಥಾವಸ್ತು. ನಟ ಅಶ್ವಥ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇದು ಅವರ ವೃತ್ತಿಬದುಕಿನ ಮಹತ್ವದ ಚಿತ್ರಗಳಲ್ಲೊಂದಾಗಿ ನಿಲ್ಲುತ್ತದೆ. ಗೀತಪ್ರಿಯ ನಿರ್ದೇಶನದ ‘ಮಣ್ಣಿನ ಮಗ’ ಮತ್ತು ‘ಬೆಳವಲದ ಮಡಿಲಲ್ಲಿ’ ಕೃಷಿ ಕಥಾವಸ್ತು ಆಧರಿಸಿದ ಮತ್ತೆರೆಡು ಪ್ರಮುಖ ಸಿನಿಮಾಗಳು. ‘ಬೆಳವಲದ ಮಡಿಲಲ್ಲಿ’ ಚಿತ್ರದ ‘ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ಒಂದೊಂದು ಹನಿಯೂ ಮುತ್ತಾಯ್ತದು...’ ಹಾಡು ರೈತರನ್ನು ಹುರಿದುಂಬಿಸುವ ಅತ್ಯುತ್ತಮ ಗೀತೆ.

‘ರೈತನ ಮಕ್ಕಳು’ ಚಿತ್ರದ ದೃಶ್ಯ
‘ರೈತನ ಮಕ್ಕಳು’ ಚಿತ್ರದ ದೃಶ್ಯಚಿತ್ರ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ

ಉಳಿವ ಯೋಗಿಯ ನೋಡಲ್ಲಿ..

ಚಿ.ದತ್ತರಾಜ್ ನಿರ್ದೇಶನದ ‘ಕಾಮನಬಿಲ್ಲು’ ಚಿತ್ರಕ್ಕಾಗಿ ಸಿ.ಅಶ್ವಥ್ ಹಾಡಿರುವ ‘ನೇಗಿಲ ಹಿಡಿದ...’ ಅಪ್ಪಟ ರೈತ ಗೀತೆಯಾಗಿ ಈ ಹೊತ್ತಿಗೂ ಅಚ್ಚಹಸಿರಾಗಿದೆ. ಚಿತ್ರದಲ್ಲಿ ಕೃಷಿಕನಾಗಿ ಡಾ.ರಾಜ್ ಪಾತ್ರ ಗಮನಸೆಳೆಯುತ್ತದೆ. ದೊರೈ-ಭಗವಾನ್ ನಿರ್ದೇಶನದ ‘ಒಡಹುಟ್ಟಿದವರು’ ಚಿತ್ರದಲ್ಲಿನ ‘ನಂಬಿಕೆಟ್ಟವರಿಲ್ಲವೋ ಈ ಮಣ್ಣನ್ನು’ ಗೀತೆಯನ್ನೂ ಇಲ್ಲಿ ಸ್ಮರಿಸಬಹುದಾಗಿದೆ. ಕುಮಾರತ್ರಯರು ಅಭಿನಯಿಸಿದ್ದ ‘ಭೂದಾನ’ ಮತ್ತು ಶಿವರಾಮ ಕಾರಂತರ ಕೃತಿಯನ್ನು ಆಧರಿಸಿ ಬಿ.ವಿ.ಕಾರಂತ ನಿರ್ದೇಶಿಸಿದ್ದ ‘ಚೋಮನ ದುಡಿ’ ಚಿತ್ರದಲ್ಲಿ ತಳಸಮುದಾಯದ ಕೃಷಿಕರ ಬವಣೆಗಳನ್ನು ಮನಮಿಡಿಯುವಂತಹ ಚಿತ್ರಿಸಲಾಗಿದೆ. ಚಿತ್ರಸಾಹಿತಿ ಸಿ.ವಿ.ಶಿವಶಂಕರ್ ತಾವು ನಿರ್ದೇಶಿಸಿದ ‘ನಮ್ಮ ಊರು’ ಚಿತ್ರದಲ್ಲಿ ದೇಶಕ್ಕೆ ಅನ್ನ ನೀಡುವ ರೈತನ ಆತ್ಮವಿಶ್ವಾಸವನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಶಿವಶಂಕರ್ ರಚಿಸಿರುವ ‘ಬನ್ನಿ ನಾಡಸೇವೆ ಮಾಡಬನ್ನಿ ರೈ ಮಕ್ಕಳೇ...’ ಅತ್ಯುತ್ತಮ ರೈತ ಗೀತೆಗಳಲ್ಲೊಂದು.

‘ಅನುಗ್ರಹ’ ಚಿತ್ರದಲ್ಲಿ ಪಂಢರೀಬಾಯಿ
‘ಅನುಗ್ರಹ’ ಚಿತ್ರದಲ್ಲಿ ಪಂಢರೀಬಾಯಿಚಿತ್ರ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ

ಕತೆಗಾರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದಲ್ಲಿ ಜಾಗತೀಕರಣದ ಹಿನ್ನೆಲೆಯಲ್ಲಿ ರೈತರು ಎದುರಿಸುವ ಸಮಸ್ಯೆಗಳನ್ನು ಚರ್ಚಿಸಲು ಯತ್ನಿಸಲಾಗಿದೆ. ರೈತರ ಸಮಸ್ಯೆಗಳು ಹೇಗೆ ನಕ್ಸಲ್ ಹೋರಾಟಕ್ಕೆ ಕಾರಣವಾಗುತ್ತವೆ ಎಂದು ಹೇಳುತ್ತಾ ನಿರ್ದೇಶಕರು ರೈತ ಕಥಾವಸ್ತುವಿಗೆ ಬೇರೆಯದ್ದೇ ಆಯಾಮ ನೀಡುತ್ತಾರೆ. ಶಿವರಾಜ್ ಕುಮಾರ್ ಅಭಿನಯದ ‘ಭೂಮಿತಾಯಿಯ ಚೊಚ್ಚಲ ಮಗ’, ‘ದೊರೆ’, ‘ಚಿಗುರಿದ ಕನಸು’ ಚಿತ್ರಗಳಲ್ಲಿ ಕೃಷಿಯನ್ನು ಆಧರಿಸಿದ ಗ್ರಾಮೀಣ ಬದುಕು, ಜಾಗತೀಕರಣದಿಂದಾಗಿ ಅಲ್ಲಿನ ಸ್ಥಿತಿಗತಿಗಳ ಮೇಲಾಗಿರುವ ಪರಿಣಾಮಗಳು ಪ್ರಸ್ತಾಪವಾಗುತ್ತವೆ. ಎರಡು ವರ್ಷದ ಹಿಂದೆ ತೆರೆಕಂಡ ಶಿವರಾಜ್ ಕುಮಾರ್ ಅಭಿನಯದ ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರಗಳನ್ನೂ ಚರ್ಚಿಸಲಾಗಿತ್ತು. ಕೊಂಚ ಸಿನಿಕತನದಿಂದ ಕೂಡಿದ್ದ ಈ ಕಥಾವಸ್ತು ರೈತರ ನಿಜ ಸಂಕಷ್ಟಗಳನ್ನು ಬಿಚ್ಚಿಡಲು ವಿಫಲವಾಗಿದ್ದು ಹೌದು. ‘ರೈತ ಸಮಸ್ಯೆಗಳು ಅಂದಿಗಿಂತ ಈಗ ಹೆಚ್ಚಾಗಿವೆ. ನಮ್ಮಲ್ಲೀಗ ಅಲ್ಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಪ್ರಯೋಗಗಳು ಹೆಚ್ಚಬೇಕು’ ಎಂದು ಆಶಿಸುತ್ತಾರೆ ಹಿರಿಯ ಚಿತ್ರಸಾಹಿತಿ ಸಿ.ವಿ.ಶಿವಶಂಕರ್.

ಮಾತಾಡ್ ಮಾತಾಡ್ ಮಲ್ಲಿಗೆ
ಮಾತಾಡ್ ಮಾತಾಡ್ ಮಲ್ಲಿಗೆ

ಜೈ ಜವಾನ್ ಜೈ ಕಿಸಾನ್

ಟೀವಿ ಚಾನಲ್ಗಳು ಇಲ್ಲದ ಅಂದಿನ ದಿನಗಳಲ್ಲಿ ಸಿನಿಮಾ, ರಂಗಭೂಮಿಯೇ ಜನರಿಗೆ ಮನರಂಜನಾ ಮಾಧ್ಯಮಗಳು. ಜನರಿಗೆ ಮಾಹಿತಿ ನೀಡಲು ಪತ್ರಿಕೆಗಳೂ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಆಗ ಸಿನಿಮಾ ಜೊತೆಗೆ ವೃತ್ತಿರಂಗಭೂಮಿ ನಾಟಕಗಳಲ್ಲಿಯೂ ಜನರಿಗೆ ಮನರಂಜನೆ, ಸಾಮಾಜಿಕ ಸಂದೇಶಗಳು ರವಾನೆಯಾಗುತ್ತಿದ್ದವು. ಹೀಗೆ ಕನ್ನಡ ವೃತ್ತಿ ರಂಗಭೂಮಿಯಲ್ಲಿ ಕೃಷಿಗೆ ಸಂಬಂಧಿಸಿದ ಕೆಲವು ನಾಟಕಗಳು ಜನರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವು. ಜೈ ಜವಾನ್ ಜೈ ಕಿಸಾನ್, ನೀನು ಸಾಹುಕಾರನಾಗು, ರೈತನ ಮಕ್ಕಳು, ದುಡಿ ಸುಖ ಪಡಿ, ರೈತ ನಗಲಿಲ್ಲ, ಸರ್ಕಾರ ಉಳಿಯಲಿಲ್ಲ... ಇವು ಕೃಷಿ ಮತ್ತು ರೈತರ ಕಷ್ಟ-ಸುಖಗಳನ್ನು ತೆರೆದಿಟ್ಟ ಪ್ರಮುಖ ನಾಟಕಗಳು. ‘ರೈತ ಕುಟುಂಬಗಳ ಹತ್ತಾರು ಕತೆಗಳು ನಾಟಕಗಳಾಗಿವೆ. ಆದರೆ ಇಲ್ಲಿ ರೈತರ ಸಮಸ್ಯೆಗಳಿಗಿಂತ ಕೃಷಿಕರ ಕೌಟುಂಬಿಕ, ಸಾಮಾಜಿಕ ಸಮಸ್ಯೆಗಳು ಹೆಚ್ಚಾಗಿ ಪ್ರಸ್ತಾಪವಾಗಿಲ್ಲ. ಮನರಂಜನೆಯ ಕಂಟೆಂಟ್ನೊಂದಿಗೇ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳನ್ನು ತೋರಿಸುತ್ತಿದ್ದೆವು. ಹಲವಾರು ಬಾರಿ ಮನರಂಜನೆಯೇ ಪ್ರಮುಖ ಆಧ್ಯತೆಯಾದಾಗ ಕೃಷಿಕರ ಪಡಿಪಾಟಲುಗಳನ್ನು ನಾಟಕಗಳಲ್ಲಿ ಪರಿಣಾಮಕಾರಿಯಾಗಿ ತೋರಿಸಲು ಸಾಧ್ಯವಾಗಿಲ್ಲ ಎಂದೇ ಹೇಳಬಹುದು’ ಎನ್ನುತ್ತಾರೆ ರಂಗಕರ್ಮಿ, ಚಿತ್ರನಿರ್ದೇಶಕ ಚಿಂದೋಡಿ ಬಂಗಾರೇಶ್. ಅವರು ‘ರೈತನ ಮಕ್ಕಳು’ ನಾಟಕವನ್ನು ಬೆಳ್ಳಿತೆರೆಗೆ ಅಳವಡಿಸಿ ನಿರ್ದೇಶಿಸಿದ್ದಾರೆ.

‘ಭೂದಾನ’ ಚಿತ್ರದಲ್ಲಿ ಕುಮಾರತ್ರಯರು
‘ಭೂದಾನ’ ಚಿತ್ರದಲ್ಲಿ ಕುಮಾರತ್ರಯರುಚಿತ್ರ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ

ಕೃಷಿ ಪ್ರೀತಿಯ ತಾರೆಯರು

ನಟನೆ ಜೊತೆಗೆ ಕೃಷಿಯೆಡೆಗೆ ಆಸಕ್ತರಾಗಿರುವ ಹತ್ತಾರು ಕಲಾವಿದರು ನಮ್ಮೊಂದಿಗಿದ್ದಾರೆ. ಇವರೆಲ್ಲರೂ ಆಸ್ಥೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು ಸಾಕಷ್ಟು ಯಶಸ್ಸು ಕಂಡಿದ್ದಾರೆ. ಹಿರಿಯ ನಟಿ ಲೀಲಾವತಿ ಮತ್ತು ಅವರ ಪುತ್ರ, ನಟ ವಿನೋದ್ ರಾಜ್ ಹಲವಾರು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನೆಲಮಂಗಲದ ಸಮೀಪ ಅವರ ತೆಂಗಿನ ತೋಟವಿದೆ. ಬೆಂಗಳೂರು ಸಿಟಿಯ ಜಂಜಾಟಗಳಿಂದ ದೂರವುಳಿದು ಅಲ್ಲಿ ಕೃಷಿ ಮಾಡಿಕೊಂಡು ಲೀಲಮ್ಮ ಮತ್ತು ವಿನೋದ್ರಾಜ್ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಅಗಲಿದ ರಂಗಭೂಮಿ ಮತ್ತು ಸಿನಿಮಾ ನಟ ಗಂಗಾಧರಯ್ಯ ಅವರು ತಮ್ಮೂರು ಹುಲಿವಾನದಲ್ಲಿ ಸಮಗ್ರ ಕೃಷಿ ಕಾಯಕ ನಡೆಸಿದ್ದರು. ವಿಶೇಷವಾಗಿ ತೆಂಗು ಬೆಳೆಗಾರರಿಗೆ ಅನುಕೂಲವಾಗುವಂತೆ "ಕೋಕನಟ್ ಪ್ರೊಡ್ಯೂಸರ್ಸ್ ಕಂಪನಿ" ಮಾಡಿ ರೈತರಿಗೆ ನೆರವಾಗಿದ್ದರು.

‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ಶಿವರಾಜಕುಮಾರ್
‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ಶಿವರಾಜಕುಮಾರ್

ರಂಗಭೂಮಿ ಹಿನ್ನೆಲೆಯ ಪ್ರತಿಭಾವಂತ ಯುವನಟ ಅಂಬರೀಶ್ ಸಾರಂಗಿ ಅವರು ತಮ್ಮೂರು ಕೋವೇರಹಟ್ಟಿ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿದ್ದಾರೆ. ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಟ ಕಿಶೋರ್ ಬನ್ನೇರುಘಟ್ಟದ ಸಮೀಪದ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಅವರ ಹೊಲದಲ್ಲಿ ಹಣ್ಣುಗಳ ಮರಗಳಿವೆ. ಸಾವಯವ ಮಾದರಿಯಲ್ಲಿ ಸಿರಿಧಾನ್ಯ ಬೆಳೆಯುತ್ತಿದ್ದು ಇತರೆ ರೈತರಲ್ಲೂ ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ನಟರಾದ ಮುನಿ, ನೀನಾಸಂ ಅಶ್ವಥ್ ಮತ್ತು ಚಿತ್ರನಿರ್ದೇಶಕ ರತ್ನಜ ಹೈನುಗಾರಿಕೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಇವರಲ್ಲದೆ ಸ್ಯಾಂಡಲ್ವುಡ್ನ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಕೃಷಿ ಕಾಯಕ ನಡೆಸಿರುವುದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com